ಜೀರ್ಣೋದ್ಧಾರದ ಬಳಿಕ ಹೊಸ ರೂಪ ಪಡೆದ ಬಸವೇಶ್ವರ ದೇವಸ್ಥಾನ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಪಟ್ಟಣದ ಐತಿಹಾಸಿಕ ಸ್ಮಾರಕವಾದ ಬಸವೇಶ್ವರ ದೇವಸ್ಥಾನವು ಜೀರ್ಣೋದ್ಧಾರದ ಬಳಿಕ ಹೊಸ ರೂಪ ಪಡೆದುಕೊಂಡು ಫೆಬ್ರುವರಿ 15ರಂದು ಮಹಾಶಿವರಾತ್ರಿಯಂದು ಉದ್ಘಾಟನೆ ಆಗಲಿದೆ.

ಹಳೆಯ ವಾಡೆಯಂತಿದ್ದ ಕಟ್ಟಡದ ಗೋಡೆಗಳು ಹಾಳಾಗಿ, ಮೇಲ್ಚಾವಣಿ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಯೋಜನೆ ರೂಪಿಸಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಸತತ ಕಾಮಗಾರಿ ನಡೆಸಿ ಕಟ್ಟಡಕ್ಕೆ ಸಂಪೂರ್ಣ ಶಿಲಾರೂಪ ನೀಡಲಾಗಿದೆ.

ಉತ್ತರಾಭಿಮುಖವಾಗಿರುವ ದೇವಸ್ಥಾನದ ಹಿಂಭಾಗದಲ್ಲಿ ಗರ್ಭಗುಡಿ ನಿರ್ಮಿಸಲ್ಪಟ್ಟಿದ್ದು, ಅದರ ಎದುರು ವಿಶಾಲ ಮಂಟಪವಿದೆ. ನವೀಕರಣದ ನಂತರ ದೇವಾಲಯದ ಸೌಂದರ್ಯವು ಗಮನಾರ್ಹವಾಗಿ ಹೆಚ್ಚಾಗಿದೆ.

ನಗರದಲ್ಲಿರುವ 12ನೇ ಶತಮಾನದ ಅನೇಕ ಶರಣ ಸ್ಮಾರಕಗಳ ಜೀರ್ಣೋದ್ಧಾರವನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೊಂಡಿದೆ. ಇವುಗಳೆಲ್ಲವೂ ಶಿಲೆಯಿಂದ ನಿರ್ಮಿತವಾಗಿದ್ದು, ಅದೇ ಮಾದರಿಯಲ್ಲಿ ಪಂಚ ಸಮಿತಿಯಿಂದ ಬಸವೇಶ್ವರ ದೇವಸ್ಥಾನವನ್ನು ಪುನರ್‌ನಿರ್ಮಿಸಲಾಗಿದೆ.

ಚಾಲುಕ್ಯ ಶೈಲಿಯ ಕೆತ್ತನೆಗಳಿರುವ ಶಿಲೆಗಳಿಂದ ಎತ್ತರದ ಮಹಾದ್ವಾರ ಹಾಗೂ ಮುಂಭಾಗವನ್ನು ಅಲಂಕರಿಸಲಾಗಿದೆ. ದ್ವಾರದ ಮೇಲ್ಭಾಗದಲ್ಲಿ ಆಕರ್ಷಕ ವಿನ್ಯಾಸದ ಸಣ್ಣ ಗೋಪುರವಿದ್ದು, ಗರ್ಭಗುಡಿಯ ಎದುರಿನ ಮಂಟಪದ ಛಾವಣಿ ಮತ್ತು ಸುತ್ತುಗೋಡೆಯಲ್ಲಿ ಸುಂದರ ಚಿತ್ರಾವಳಿಗಳಿರುವ ಕಂಬಗಳನ್ನು ಅಳವಡಿಸಲಾಗಿದೆ.

ಗರ್ಭಗುಡಿಯ ಮೇಲಿರುವ ಮೊದಲಿನ ಎತ್ತರದ ಗೋಪುರವನ್ನು ಹಾಗೆಯೇ ಉಳಿಸಿಕೊಂಡಿರುವುದು ವಿಶೇಷ. ಇದು ಬಸವಾನುಯಾಯಿಗಳ ಮನಸ್ಸಿಗೆ ಮುದ ನೀಡುವಂತಿದೆ. ಬಸವ ಜಯಂತಿ ಸಂದರ್ಭ ಮೂರು ದಿನಗಳ  ಜಾತ್ರೆ ಇಲ್ಲಿ ನಡೆಯಲಿದ್ದು, ಉದ್ಘಾಟನೆಯೊಂದಿಗೆ ಈ ಕ್ಷೇತ್ರ ಮತ್ತಷ್ಟು ಕಳೆಗಟ್ಟುವ ನಿರೀಕ್ಷೆ ವ್ಯಕ್ತವಾಗಿದೆ.

ಬಸವೇಶ್ವರ ದೇವಸ್ಥಾನ ಪಂಚ ಸಮಿತಿಯಿಂದ ನಡೆದಿರುವ ಜೀರ್ಣೋದ್ಧಾರ ಕಾರ್ಯಕ್ಕೆ ಮೂರು ಕೋಟಿ ವೆಚ್ಚವಾಗಿದೆಯೆಂದು ತಿಳಿದು ಬಂದಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *