ಚಿಕ್ಕಮಗಳೂರು
ಶ್ರೀ ಬಸವತತ್ತ್ವ ಪೀಠದ ಪೀಠಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಇಂದಿಗೆ ಐದು ವರ್ಷಗಳು ತುಂಬಿದವು. ಈ ಐದು ವರ್ಷಗಳ ಯಾನದಲ್ಲಿ ನಮ್ಮೊಂದಿಗೆ ಹೆಗಲಿಗೆ ಹೆಗಲಾಗಿ ದುಡಿದ, ದುಡಿಯುತ್ತಿರುವ ಎಲ್ಲ ಆತ್ಮೀಯರಿಗೂ ಕೃತಜ್ಞತೆಗಳು.
ಮನುಷ್ಯನ ಬದುಕಿನಲ್ಲಿ ಐದು ವರ್ಷಗಳು ದೊಡ್ಡ ಕಾಲವೆನಿಸುತ್ತವೆ. ಸಾರ್ವಜನಿಕ ಜೀವನದಲ್ಲಿರುವವರಿಗಂತೂ ಈ ಸಮಯ ಬಹಳ ದೊಡ್ಡದು. ಈ ಹಿನ್ನೆಲೆಯಲ್ಲಿ, ನಾವು ಶ್ರೀ ಬಸವತತ್ತ್ವ ಪೀಠದ ಪೀಠಾಧ್ಯಕ್ಷರಾಗಿ ಬಂದಂದಿನಿಂದಲೂ ನಮಗೆ ಮಾರ್ಗದರ್ಶನ ಮಾಡುತ್ತಾ, ಶ್ರೀ ಪೀಠದ ಬೆಳವಣಿಗೆಗೆ ಹಾರೈಸಿದ ಎಲ್ಲ ಪರಮ ಪೂಜ್ಯರಿಗೆ ಭಕ್ತಿಯ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ.
ಶ್ರೀ ಮಠದ ಭಕ್ತ ಸಮೂಹ ಈ ಐದು ವರ್ಷಗಳಲ್ಲಿ ನಮ್ಮೊಂದಿಗೆ ಬಲವಾಗಿ ನಿಂತು ನಾವು ಮಾಡುವ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ‘ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ ಭಕ್ತನಲ್ಲ’ ಎಂಬ ಚೆನ್ನಬಸವಣ್ಣನವರ ವಚನವಾಣಿಯಂತೆ ನಾವು ಬೇಡುವ ಮುನ್ನವೇ ಅರಿತು ನೀಡಿ, ಕೈಮುಟ್ಟಿ ಮಾಡಿ ಮುಂದಿನ ದಾರಿಗೆ ಭರವಸೆ ನೀಡಿದ್ದಾರೆ.

ಭಕ್ತರೆಲ್ಲರ ಅಭಿಮಾನದ ದ್ಯೋತಕವಾಗಿ ಕೇವಲ ಐದು ವರ್ಷಗಳಲ್ಲೇ ಶ್ರೀ ಪೀಠವು ಸುಸಜ್ಜಿತ ಕಟ್ಟಡ ಹೊಂದಿದ್ದು ಸೋಜಿಗವೇ ಸರಿ. ಆದಾಗ್ಯೂ ಸಾಗುವ ದಾರಿ ಬಹಳ ದೂರವಿದೆ. ಬಸವಾದಿ ಶರಣರ ಮೌಲ್ಯಗಳನ್ನು ಅನುಷ್ಠಾನ ಮಾಡುತ್ತಾ ಸಾಗುವುದು ಸವಾಲಿನ ಸಂಗತಿ. ಬಹಳಷ್ಟು ಎಚ್ಚರಿಕೆ, ನಿರಂತರ ಜಾಗೃತಿಯ ಈ ಪಯಣದಲ್ಲಿ ಬರುವ ಸವಾಲುಗಳನ್ನು ಎದುರಿಸುವುದು ನಮಗೆ ಮೋಜೆನಿಸುತ್ತದೆ.
ನೀವೆಲ್ಲ ನಮ್ಮೊಂದಿಗೆ ಇನ್ನೂ ಬಲವಾಗಿ ನಿಂತು, ಶ್ರೀ ಬಸವತತ್ತ್ವ ಪೀಠದ ಸಂಸ್ಥಾಪಕರಾದ ಶ್ರೀ ಮ. ನಿ. ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳವರ ಬಸವತತ್ತ್ವದ ಮೌಲ್ಯಗಳ ಅನುಷ್ಠಾನದ ಮಹಾಸಂಕಲ್ಪವನ್ನು ಈಡೇರಿಸಲು ಸಹಕರಿಸುವಿರೆಂಬ ನಂಬುಗೆ ನಮ್ಮದು.