ಬೇಡಜಂಗಮ ಸುಳ್ಳು ನೋಂದಣಿ ವಿರುದ್ಧ ದೂರು ಸ್ವೀಕರಿಸಿದ ನಾಗಮೋಹನ್ ದಾಸ್

ಬಸವ ಮೀಡಿಯಾ
ಬಸವ ಮೀಡಿಯಾ

ಸುಳ್ಳು ಹೇಳಿ ನೋಂದಾಯಿಸಿಕೊಂಡವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಒತ್ತಾಯ

ಬೆಂಗಳೂರು

ಪರಿಶಿಷ್ಟ ಜಾತಿಯ ಬೇಡಜಂಗಮ, ಬುಡ್ಗಜಂಗಮ ಹೆಸರಿನಲ್ಲಿ ಲಿಂಗಾಯಿತ ಸಮಾಜದ ಗುರುಸ್ಥಾನದಲ್ಲಿರುವ ವೀರಶೈವರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಸುಳ್ಳು ಹೇಳಿ ನೋಂದಾಯಿಸಿಕೊಂಡವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಮಾದಿಗ-ಛಲವಾದಿ ಮುಖಂಡರ ನಿಯೋಗ ಒಳಮೀಸಲಾತಿ ಆಯೋಗಕ್ಕೆ ಒತ್ತಾಯಿಸಿದೆ.

ಶುಕ್ರವಾರ ಬೆಂಗಳೂರಿನಲ್ಲಿ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿದ ಮಾದಿಗ-ಛಲವಾದಿ ಮುಖಂಡರ ನಿಯೋಗವು, ನಾವು ಬೇಡಜಂಗಮರೆಂದು ನೋಂದಾಯಿಸಿಕೊಳ್ಳುತ್ತಿರುವ ವೀರಶೈವರಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ (ವೀರಶೈವ) ಜಂಗಮರಿಗೆ ಒಳಮೀಸಲಾತಿ ಸಮೀಕ್ಷೆಯಲ್ಲಿ ಬೇಡ ಜಂಗಮರೆಂದು ನೋಂದಾಯಿಸಿಕೊಳ್ಳಬೇಕೆಂದು ಕರೆ ನೀಡಿ ಇತ್ತೀಚೆಗೆ ಪ್ರಕಟಣೆ ಹೊರಡಿಸಿತ್ತು. ಇದರ ವಿರುದ್ಧ ಪರಿಶಿಷ್ಟ ಸಮುದಾಯಗಳು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದವು.

“ವೀರಶೈವ ಲಿಂಗಾಯತರು ‘ಜಂಗಮ’ ಹೆಸರನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆಯಲು ಹುನ್ನಾರ ನಡೆಸಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಈ ಕುರಿತು ನ್ಯಾ.ಎಚ್‌.ಎನ್‌. ನಾಗಮೋಹನದಾಸ್‌ ಆಯೋಗಕ್ಕೆ ದೂರು ನೀಡಲಿದ್ದೇವೆ” ಎಂದು ಎಂದು ಮಾದಿಗ ಸಮುದಾಯದ ಮುಖಂಡ, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಹೇಳಿದ್ದರು.

ನಾಗಮೋಹನದಾಸ್‌ ಆಯೋಗದ ಕಚೇರಿಗೆ ಭೇಟಿ ನೀಡಿದ ಮಾದಿಗ-ಛಲವಾದಿ ಮುಖಂಡರ ನಿಯೋಗ ಜಾತಿ ಸಮೀಕ್ಷೆ ವೇಳೆ ಎದುರಾಗಿರುವ ಸಮಸ್ಯೆಗಳನ್ನು ಬಿಕ್ಕಟ್ಟುಗಳನ್ನು ತಕ್ಷಣ ಪರಿಹರಿಸಬೇಕು ಎಂದು ಕೋರಿದರು.

ಜಾತಿಸಮೀಕ್ಷೆ ಕಾರ್ಯಕ್ಕೆ ಗಣತಿದಾರರಿಗೆ ಕೇವಲ 3 ಗಂಟೆ ತರಬೇತಿ ನೀಡಿರುವುದು ಬಹಳಷ್ಟು ಲೋಪಗಳಿಗೆ ಕಾರಣವಾಗಿದೆ. ಆದ್ದರಿಂದ ಅವರಿಗೆ ಒಂದು ದಿನದ ಮಟ್ಟಿಗೆ ಸಮಗ್ರ ಮಾಹಿತಿ ನೀಡುವ ತರಬೇತಿ ಆಯೋಜಿಸಬೇಕು ಎಂದು ನಿಯೋಗ ಮನವಿ ಮಾಡಿದೆ.

ಪರಿಶಿಷ್ಟ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ, ಜಾತಿಗಣತಿಯಲ್ಲಿನ ಪ್ರಶ್ನಾವಳಿಗಳಿಗೆ ಮಾಹಿತಿ ನೀಡಲು ತಡವರಿಸುತ್ತಿದ್ದಾರೆ. ಆದ್ದರಿಂದ ಪ್ರಶ್ನೆಗಳನ್ನು ಸರಳಗೊಳಿಸಬೇಕು ಎಂದು ನಿಯೋಗ ತಿಳಿಸಿದೆ.

ನಿಯೋಗದ ಮನವಿಗಳನ್ನು ಆಲಿಸಿದ ನ್ಯಾ.ನಾಗಮೋಹನ್ ದಾಸ್ ಅವರು, ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ, ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಕೆಪಿಎಸ್‍ಸಿ ಮಾಜಿ ಸದಸ್ಯ ದಾಸಯ್ಯ, ಮುತ್ತುರಾಜ್, ಅಮರನಾಥ ಮಳವಳ್ಳಿ ಇತರರು ನಿಯೋಗದಲ್ಲಿದ್ದರು.

(ಕೃಪೆ ವಾರ್ತಾ ಭಾರತಿ)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *