ವೀರಶೈವ ಮಹಾಸಭೆ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ
ಬೆಳಗಾವಿ
ಸಮಾಜದ ಹಲವಾರು ಪೂಜ್ಯರ, ಗಣ್ಯರ ಉಪಸ್ಥಿತಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನಿರ್ಮಿಸಿರುವ ‘ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿನಿಲಯ’ದ ಉದ್ಘಾಟನೆ ಗುರುವಾರ ನಡೆಯಿತು.
ಅಧ್ಯಕ್ಷೀಯ ನುಡಿಗಳನ್ನಾಡಿದ ಮಹಾಸಭೆ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು “ಪದವಿ, ಉನ್ನತ ಶಿಕ್ಷಣವನ್ನು ಪಡೆಯಲು ಬೆಳಗಾವಿಗೆ ಆಗಮಿಸುವ ಅತಿಬಡ ಹೆಣ್ಣು ಮಕ್ಕಳಿಗಾಗಿ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸಬೇಕೆಂಬುದು ನನ್ನ ಇಚ್ಛೆಯಾಗಿತ್ತು.
3 ಕೋಟಿ ರೂ. ವೆಚ್ಚದ ವಸತಿ ನಿಲಯದಲ್ಲಿ ಎಲ್ಲ ಸೌಕರ್ಯಗಳನ್ನು ನಾವು ಒದಗಿಸಿದ್ದೇವೆ. ಅನೇಕ ದಾನಿಗಳು ಮುಂದೆ ಬಂದು ವಸತಿ ನಿಲಯ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಅದರಲ್ಲಿಯೂ ಖ್ಯಾತ ಉದ್ಯಮಿಗಳಾದ ಮಹೇಶ ಬೆಲ್ಲದ ಅವರು 1 ಕೋಟಿ ರೂ.ಗಳ ದಾನವನ್ನು ನೀಡಿದ್ದಾರೆ ಎಂದರು.

ಬೆಳಗಾವಿಯಲ್ಲಿ ಬಡ ಗ್ರಾಮೀಣ ಹೆಣ್ಣುಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯ ಕಟ್ಟುತ್ತಿರುವುದು ಕಂಡು ತುಂಬ ಸಂತೋಷವಾಯಿತು. ಬಸವಾದಿ ಶರಣರ ಕೃಪೆಯಿಂದ ಸಾಧ್ಯವಾದಷ್ಟು ಸಹಾಯ ಮಾಡಿದ್ದೇನೆ, ಎಂದು ಮಹೇಶ ಬೆಲ್ಲದ ಹೇಳಿದರು.
ಸಮಾಜ ಒಡೆಯಬೇಡಿ
ವೀರಶೈವ ಲಿಂಗಾಯತ ಸಮಾಜವು ರಾಜ್ಯದಲ್ಲಿಯೇ ಬೃಹತ್ ಸಮಾಜವಾಗಿದ್ದು ಇಂದು ಅದು ಕವಲುದಾರಿಯಲ್ಲಿ ಸಾಗಿರುವುದು ದುರ್ದೈವದ ಸಂಗತಿ. ಸಂಘಟನೆಯಿಂದ ಈ ಸಮಾಜವನ್ನು ನಾವು ಮುನ್ನಡೆಸಬೇಕಾಗಿದೆ ಎಂದು ಅರಣ್ಯ ಸಚಿವ ಹಾಗೂ ಮಹಾಸಭೆ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.
ಒಂದು ಕಾಲಘಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜ ಇಂದು ಚೇತರಿಸಿಕೊಂಡಿದೆ. ಆದರೆ ನಾವು ಸಾಮಾಜಿಕವಾಗಿ ದುರ್ಬಲರಾಗುತ್ತಿರುವುದು ಖೇದಕರವೆಂದರು.
ಅತಿಥಿಗಳಾಗಿ ಆಗಮಿಸಿದ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಮಾತನಾಡಿ, ಕೆಎಲ್‌ಇ, ಬಿವಿಬಿ, ಬಿಎಲ್‌ಡಿ ಅಂಥ ಅನೇಕ ಸಂಸ್ಥೆಗಳು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಆದರೆ ಸಮಾಜವನ್ನು ಇಬ್ಭಾಗ ಮಾಡುತ್ತಿರುವುದು ನಮ್ಮ ಇಂದಿನ ಅವಸ್ಥೆಗೆ ಹಿಡಿದ ಕನ್ನಡಿ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡುತ್ತ, ನಮ್ಮ ನಡುವೆ ಒಡಕನ್ನುಂಟುಮಾಡಿ ಸಮಾಜವನ್ನು ಒಡೆಯುತ್ತಿದ್ದಾರೆ. ಇದರಿಂದ ನಾವು ಮತ್ತಷ್ಟು ಹಿನ್ನಡೆಯನ್ನು ಪಡೆಯುವಂತಾಗಿದೆ. ವೀರಶೈವ ಲಿಂಗಾಯತ ಒಂದು ಶಕ್ತಿಯಾಗಿ ರೂಪಗೊಳ್ಳುವುದು ಇಂದಿನ ಕಾಲದ ಅಗತ್ಯವೆಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲ ಅವರು ಮಾತನಾಡಿ ರಾಜ್ಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಸಮುದಾಯದ ಮಠಗಳು, ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಾಜದ ಹಿರಿಯರ ಕೊಡುಗೆಗಳನ್ನು ಸ್ಮರಿಸಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಇಂದು ನಮ್ಮ ಮಕ್ಕಳಿಗೆ ವಚನಸಂಸ್ಕೃತಿ, ಲಿಂಗಪೂಜೆಯನ್ನು ಕಲಿಸಬೇಕಾಗಿರುವುದು ಅಗತ್ಯವಾಗಿದೆ. ನಮ್ಮ ಸಮಾಜದ ಸಂಸ್ಕೃತಿಯ ವಾಹಕರು ಮಕ್ಕಳು ಈ ಬಸವ ಪರಂಪರೆಯನ್ನು ಮುನ್ನಡೆಬೇಕಾಗಿದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಈ ವಸತಿ ನಿಲಯ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ಸುಸಜ್ಜಿತ ವಸತಿ ನಿಲಯ
18800 ಚದರ್ ಅಡಿ ವಿಸ್ತೀರ್ಣದಲ್ಲಿ ಹಾಗೂ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಸ್ಪರ್ಶ ನೀಡಲಾಗಿದೆ. 21 ಕೋಣೆಗಳಿದ್ದು ಎಲ್ಲಡೆ ರ‍್ಯಾಕ್‌ಗಳನ್ನು ಅಟ್ಯಾಚ್ ಸ್ನಾನ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ವಿಶಾಲವಾದ ಅಧ್ಯಯನ ಕೋಣೆ ಗ್ರಂಥಾಲಯ ಊಟದ ಹಾಲ್ ಬಟ್ಟೆಗಳನ್ನು ತೊಳೆದುಕೊಳ್ಳಲು ವಾಶ್‌ಮಷಿನ್ ಶುದ್ಧ ಕುಡಿಯುವ ನೀರು ಉದ್ಯಾನ ನಿರ್ಮಿಸಲಾಗಿದೆ.
ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿನಿಯರಲ್ಲಿ ಬಸವ ಸಂಸ್ಕೃತಿ ಚಿಂತನೆ ಮೂಡಿಸುವ ಗೃಹ ವಾತಾವರಣವನ್ನು ನಿರ್ಮಿಸಲಾಗಿದೆ.
ವಸತಿ ನಿಲಯಕ್ಕೆ ದಾನಿಗಳಾದ ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ ಅವರ ಹೆಸರು ಇಡಲಾಗಿದೆ.
ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿ, ಉದ್ಯಮಿ ಹಾಗೂ ದಾನಿ ಮಹೇಶ ಬಿ. ಬೆಲ್ಲದ, ಶಾಸಕರಾದ ರಾಜು ಕಾಗೆ, ಮಹಾಂತೇಶ ಕೌಜಲಗಿ, ಶೈಲೇಂದ್ರ ಬೆಲ್ದಾಳೆ, ಎಂ.ವೈ.ಪಾಟೀಲ, ಗಣೇಶ ಹುಕ್ಕೇರಿ, ಬಿ.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಶುಶಿಲ್ ನಮೋಶಿ, ಹನುಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ, ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ.ಎಚ್.ಬಿ.ರಾಜಶೇಖರ, ಆಶಾ ಪ್ರಭಾಕರ ಕೋರೆ, ಎಂ.ಬಿ.ಜೀರಳಿ, ಜಗದೀಶ ಮೆಟಗುಡ್ಡ, ಡಾ.ಪ್ರೀತಿ ಪ್ರಭಾಕರ ಕೋರೆ ಉಪಸ್ಥಿತರಿದ್ದರು. ಆಶಾ ಯಮಕನಮರಡಿ ನಿರೂಪಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ವಂದಿಸಿದರು. ಇದೇ ಸಂದರ್ಭದಲ್ಲಿ ದಾನಿಗಳಾದ ಡಾ.ಮಹೇಶ ಬೆಲ್ಲದ ಹಾಗೂ ಅನಿತಾ ಬೆಲ್ಲದ ದಂಪತಿಗಳಿಗೆ ಗಣ್ಯರು ಸತ್ಕರಿಸಿದರು.
