ಸಾವಿರಾರು ಶರಣ ಬಂಧುಗಳ ಸಮ್ಮುಖದಲ್ಲಿ ಬಸವ ಮೂರ್ತಿ ಅನಾವರಣ

ಚಿಂಚೋಳಿ :

“ ವಿಶ್ವಪ್ರೇಮದ ಸಂದೇಶ ಸಾರಿದ ಕ್ರಾಂತಿಕಾರಿ, ವಿಶ್ವಗುರು ಬಸವಣ್ಣನವರ ಸುಂದರವಾದ ‘ಅಭಯ ಹಸ್ತ’ ಮೂರ್ತಿಯ ಅನಾವರಣ ಕಾರ್ಯಕ್ರಮ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಸಮಸ್ತ ನಾಗರಿಕರ ಪರವಾಗಿ ‘ಬಸವೇಶ್ವರ ಮೂರ್ತಿ ಅನಾವರಣ ಸಮಿತಿ’ಯು ಆಯೋಜಿಸಿದ್ದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಶರಣ ಬಂಧುಗಳು ಸಾಕ್ಷಿಯಾದರು.

ಮುಂಜಾನೆ 9 ಗಂಟೆಗೆ ಧರ್ಮಗುರು ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ಮೆರವಣಿಗೆಯಲ್ಲಿ ಜನತೆ ಅತ್ಯುತ್ಸಾಹದಿಂದ ಪಾಲ್ಗೊಂಡು ಬಸವಣ್ಣನವರಿಗೆ ಜಯಘೋಷ ಮೊಳಗಿಸಿದರು. ರಾಷ್ಟ್ರೀಯ ಬಸವ ದಳದ ಮಕ್ಕಳಿಂದ ‘ಷಟ್ಸ್ಥಲ ಧ್ವಜಗೀತೆ’ ಹಾಗೂ ಪ್ರಾರ್ಥನೆ ನೆರವೇರಿತು.

ಶರಣಜೀವಿ ಡಾ. ರೇವಣಸಿದ್ದಪ್ಪ ಪಾಟೀಲ ವೇದಿಕೆ’ಯಲ್ಲಿ ನಡೆದ ಈ ಅರ್ಥಪೂರ್ಣ ಸಮಾರಂಭದಲ್ಲಿ ಪೋಲಕಪಳ್ಳಿ ಶಿವಶಂಕರ ಮಠದ ಪೂಜ್ಯ ಶಿವಶಂಕರ ಶಿವಾಚಾರ್ಯರು ಬಸವಣ್ಣನವರ ಮೂರ್ತಿಯನ್ನು ಅನಾವರಣಗೊಳಿಸಿದರು. ಹುಲಸೂರ ಸಂಸ್ಥಾನ ಮಠದ ಪೂಜ್ಯ ಶಿವಾನಂದ ಸ್ವಾಮಿಗಳು ಅನುಭಾವ ನುಡಿಗಳ ಮೂಲಕ ಸೇರಿದ್ದ ಜನಸಾಗರಕ್ಕೆ ಬಸವ ತತ್ವವನ್ನು ಉಣಬಡಿಸಿದರು.

ಸುಕ್ಷೇತ್ರ ಉಳವಿಯ ವೀರಮಾತೆ ಅಕ್ಕನಾಗಲಾಂಬಿಕಾ ಅನುಭಾವ ಪೀಠದ ಪೂಜ್ಯ ದಾನೇಶ್ವರಿ ಮಾತಾಜಿ ಅವರು ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು. ಅ.ಭಾ.ವೀ.ಲಿಂ. ಮಹಾಸಭಾದ ಅಧ್ಯಕ್ಷರಾದ ಶರಣು ಪಾಟೀಲ ಮೋತಕಪಳ್ಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೋಲಕಪಳ್ಳಿಯ ಮುಖಂಡ ಶಿವರಾಜ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮ್ಮುಖವನ್ನು ಪೂಜ್ಯ ಮಹಾಂತ ಶಿವಾಚಾರ್ಯರು, ಐನಾಪುರ ಸಂಸ್ಥಾನ ಮಠದ ಪೂಜ್ಯ ಉಪಮನ್ಯು ಶಿವಾಚಾರ್ಯರು ಹಾಗೂ ಸುಲೇಪೇಟೆಯ ಪೂಜ್ಯ ಪ್ರಭು ಖಿಟ್ಟಾಂಗೇಶ್ವರ ದೇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರ್. ಜಿ. ಶಟಗಾರ, ಡಾ. ಜಗದೀಶಚಂದ್ರ ಬುಳ್ಳಾ, ಜಗದೇವ ಬ್ಹೈಗೊಂಡ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಐದುದಿನಗಳ ಕಾಲ ಪ್ರತಿದಿನ ಸಂಜೆ ವಿಶ್ವ ಧರ್ಮ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರವಚನ ನಡೆಸಿಕೊಟ್ಟ ಉಳವಿ ಕ್ಷೇತ್ರದ ಮಾತೆ ಅಕ್ಕನಾಗಲಾಂಬಿಕಾ ಪೀಠದ ಪೂಜ್ಯ ದಾನೇಶ್ವರಿ ಮಾತಾಜಿಯವರ ನೇತೃತ್ವದಲ್ಲಿ ನಡೆದ “ಸಾಮೂಹಿಕ ಇಷ್ಟಲಿಂಗ ದೀಕ್ಷೆ ಮತ್ತು ಇಷ್ಟಲಿಂಗ ಪೂಜೆ”ಯು ಭಕ್ತರ ಕಣ್ಮನ ಸೆಳೆಯಿತು. ನೂರಾರು ಭಕ್ತರು ಶ್ರದ್ಧಾಭಕ್ತಿಗಳಿಂದ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದರು, ಪೂಜೆ ಮಾಡಿಕೊಂಡರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *