ಮರಿಯಾಲ
ಸಮ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿರುವ ಬಸವಣ್ಣನವರ ಸಿದ್ಧಾಂತ ನಮ್ಮೆಲ್ಲರಿಗೂ ‘ಬುಲೆಟ್ ಪ್ರೊಫ್ ಜಾಕೇಟ್’ ಇದ್ದಂತೆ, ಎಂದು ಬಾಲ್ಕಿ ಮಠದ ನಾಡೋಜ ಡಾ. ಶ್ರೀ ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಮರಿಯಾಲ ಮಠದಲ್ಲಿ ನಡೆದ ಬೃಹತ್ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಈಚೆಗೆ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಬಸವ ಮತ್ತು ವಚನ ಸೂತ್ರದಡಿಯಲ್ಲಿ ನಾವೆಲ್ಲರೂ ಒಂದಾಗಬೇಕಿದೆ ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಿದೆ ಎ೦ದರು.
ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಬಸವ ನಿಷ್ಠೆಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಬಸವಣ್ಣನವರನ್ನು ಹೃದಯದಲ್ಲಿ ತುಂಬಿಕೊಂಡು ಅನ್ನ, ಅಕ್ಷರ ದಾಸೋಹ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಇಡೀ ಕರ್ನಾಟಕವೇ ಮರಿಯಾಲ ಮಠದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕಾಲೇಜಿನ ಉಪನ್ಯಾಸಕ ಅಶೋಕ ಬಾಗಳಿ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಮರಿಯಾಲ ಮಠದ ಗುರುಪರಂಪರೆಯ ‘ಮಹಾಂತರು ಬೆಳಗಿದ ಮುರುಘ ಪ್ರಭೆ’ ಗ್ರಂಥವನ್ನು ಇಳಕಲ್ಲ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಬಿಡುಗಡೆ ಗೊಳಿಸಿ ಮಾತನಾಡಿದರು.
ಸಮಾಜಕ್ಕಾಗಿ ಬಸವಣ್ಣ ಶ್ರಮಿಸಿದಂತೆ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ದುಡಿಯುತ್ತಿದ್ದಾರೆ. ಎಲ್ಲ ಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.
ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಗುರುವಂದನೆ ಸಲ್ಲಿಸಿ ಮಠ ನಡೆದು ಬಂದ ಹಾದಿಯನ್ನು ತಿಳಿಸುತ್ತಾ, ಗುರುಗಳಾದ ಮಹಾಂತ ಸ್ವಾಮೀಜಿ ಹೇಳಿದಂತೆ ಬಸವ ತತ್ವಗಳನ್ನು ಪಾಲಿಸುತ್ತಾ ವೈದಿಕ ಆಚರಣೆಯಿಂದ ದೂರವಿದ್ದೇನೆ ಎಂದರು.

ಮಾಜಿ ಸಚಿವ ಎಂ.ರಾಜಶೇಖರಮೂರ್ತಿಯವರ ಆಶಯದಂತೆ ನಮ್ಮ ಶಿಕ್ಷಣ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದೇವೆ, 40 ಮಕ್ಕಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಇಂದು 1300 ಮಕ್ಕಳಿದ್ದಾರೆ. ಇಂದು ಮಠ ಇಷ್ಟು ಮುನ್ನೆಡೆಯಲು ಭಕ್ತರ, ಗ್ರಾಮಸ್ಥರ ಸಹಕಾರ ಮುಖ್ಯ ಎಂದರು.
ಎಂದರು.
ದೇವನೂರು ಶ್ರೀ ಗುರುಮಲ್ಲೇಶ್ವರ ಮಠದ ಮಹಾಂತಸ್ವಾಮಿಗಳು ಆಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಹಾಸನದ ಶ್ರೀ ಗುರು ಮುಕಂದೂರು ವಿರಕ್ತ ಮಠದ ಮಹಾಂತ ಬಸವಲಿಂಗಸ್ವಾಮೀಜಿ ವಚನ
ಸಿ೦ಚನ ಕುರಿತು ಮಾತನಾಡಿದರು. ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಆಶಯ ನುಡಿಗಳನ್ನಾಡಿದರು.

ಮೂಡುಗೂರು ಮಠದ ಇಮ್ಮಡಿ ಉದ್ದಾನಸ್ವಾಮೀಜಿ, ಬೆಟ್ಟದಪುರ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಕಬ್ಬಹಳ್ಳಿ ಗುರುಸಿದ್ದ ಸ್ವಾಮೀಜಿ ಇತರ ವಿವಿಧ ಮಠಾಧೀಶರು ಭಾಗವಹಿಸಿದ್ದರು.
