ಭಾಲ್ಕಿ
ಮಹಾರಾಷ್ಟದ ಜಾಲನಾ ಜಿಲ್ಲಾ ಕೇಂದ್ರದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ಯ ಗುರು ಗೌರವ ಸಮಾರಂಭ ಮತ್ತು ಗ್ರಂಥ ತುಲಾಭಾರ ಏರ್ಪಡಿಸಲಾಗಿತ್ತು.
ಈ ಸಮಾರಂಭದ ದಿವ್ಯಸಾನಿಧ್ಯ ವಹಿಸಿ, ಬಸವತತ್ವದ ಆಚರಣೆ ಸಹಜಾಚರಣೆ ಆಗಿದೆ. ಯಾವುದೇ ಆಡಂಬರ, ಶೋಷಣೆ, ಡಂಭಾಚಾರ, ಮೂಢನಂಬಿಕೆಗಳು ಬಸವತತ್ವದದಲ್ಲಿ ಇಲ್ಲ. ನಾವು ಬಾಹ್ಯ ಆಕರ್ಷಣೆ ಡಂಬಾಚಾರಕ್ಕೆ ಮರುಳಾಗದೆ ಬಸವತತ್ವದ ಸಹಜಾಚರಣೆಗೆ ಆದ್ಯತೆ ನೀಡಿದರೆ ಸುಖಿ ಸಮಾಜ ನಿರ್ಮಾಣವಾಗುತ್ತದೆ.
ಬಸವಾದಿ ಶರಣರು ನಮಗೆ ಸರಳ, ಸಹಜವಾದ ಧರ್ಮ ನೀಡಿದ್ದಾರೆ. ಧರ್ಮ ನಿಜಾಚರಣೆಯಲ್ಲಿ ಬರಬೇಕಾದರೆ ವಚನಗಳ ಅಧ್ಯಯನ ಮಾಡಬೇಕು. ಅದಕ್ಕಾಗಿಯೇ ಮನೆ ಮನೆಗೆ ವಚನ ಸಾಹಿತ್ಯ ತಲುಪಬೇಕೆಂಬ ಉದ್ದೇಶದಿಂದ ನಾವು ಮಹಾರಾಷ್ಟ ಬಸವ ಪರಿಷತ್ತ ಸ್ಥಾಪಿಸಿ, ಇಲ್ಲಿಯವರೆಗೆ ೨೦೦ ಕ್ಕಿಂತಲೂ ಹೆಚ್ಚಿನ ಮರಾಠಿ ಪುಸ್ತಕಗಳು ಪ್ರಕಟಿಸಿದ್ದೇವೆ.
ಈ ಗ್ರಂಥಗಳ ಲಕ್ಷಾಂತರ ಪ್ರತಿಗಳು ಮರಾಠಿ ಜನರಿಗೆ ತಲುಪಿವೆ. ಇಂದು ನಮ್ಮ ಅಮೃತ ಮಹೋತ್ಸವದ ನಿಮಿತ್ಯ ವಚನ ಗ್ರಂಥಗಳ ತುಲಾಭಾರ ಮಾಡಿ ವಚನ ಗ್ರಂಥಗಳು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಖುಷಿ ತಂದಿದೆ.

ನಾವು ಇಲ್ಲಿಯವರೆಗೆ ತುಲಾಭಾರವನ್ನು ಮಾಡಿಕೊಳ್ಳಲು ಒಪ್ಪಲಿಲ್ಲ. ಆದರೆ ವಚನ ಸಾಹಿತ್ಯ ಮನೆ ಮನೆಗೆ ತಲುಪಲು ಇದೊಂದು ಮಾರ್ಗವಾಗಿದೆ ಎಂದು ಮಹಾರಾಷ್ಟದ ಸದ್ಭಕ್ತರ ಮುಂದೆ ಇದನ್ನು ಒಪ್ಪಿಕೊಂಡಿದ್ದೇವೆ ಎಂದು ಪೂಜ್ಯ ತಮ್ಮ ಆಶೀರ್ವಚನದಲ್ಲಿ ನುಡಿದರು.
ಸಮಾರಂಭದ ಉದ್ಘಾಟನೆ ಸಂಭಾಜಿನಗರದ ಹಿರಿಯ ಸಾಹಿತಿಗಳಾದ ಡಾ.ವಾಸುದೇವ ಮುಲಾಟೆ ಅವರು ನೆರವೇರಿಸಿದರು. ಬಸವಾದಿ ಶರಣರ ಚಿಂತನೆಗಳು ಪರಮಪೂಜ್ಯರು ತಾವು ಆಚರಣೆಯಲ್ಲಿ ತರುವುದರ ಜೊತೆಗೆ ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ.
ಅವರ ಅಮೃತ ಮಹೋತ್ಸವದ ನಿಮಿತ್ಯ ಗ್ರಂಥ ತುಲಾಭಾರ ಮಾಡಿ ಸುಮಾರು ೫೦೦ ಪುಸ್ತಕಗಳು ವಿತರಣೆ ಮಾಡುತ್ತಿರುವುದು ಆದರ್ಶ ಮತ್ತು ಅನುಕರಣೀಯವಾಗಿದೆ ಎಂದು ನುಡಿದರು. ವಕೀಲರಾದ ಶಿವಾನಂದ ಹೈಬತಪುರೆ ಅವರು ತಮ್ಮ ಅತಿಥಿ ಭಾಷಣದಲ್ಲಿ ಪೂಜ್ಯರು ಮಾಡುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯ ಕುರಿತು ಮಾತನಾಡಿದರು. ಡಾ.ಬಸವರಾಜ ಕೋರೆ ಸ್ವಾಗತಿಸಿದರು. ರಾಜು ಜುಬರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡ್ವಕೇಟ್ ಮಧುಕರ ಲಿಂಗಾಯತ ಮತ್ತು ಜಾಲನದ ಸಮಸ್ತ ಸಮಾಜ ಬಾಂಧವರು ಕಾರ್ಯಕ್ರಮ ರೂಪಿಸಿದರು. ನಿರೂಪಣೆ ರಾಜೇಂದ್ರ ವಾಂಜೋಳೆ ಮಾಡಿದರು. ಶರಣೆ ಹೇಮಾ ಸಾವರಗಾಂವಕರ ವಂದಿಸಿದರು. ಕೊನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಯಿತು.