ಭಾಲ್ಕಿ
ಡಾ. ಎಂ.ಎಂ. ಕಲಬುರ್ಗಿಅವರ ಚಿಂತನೆ ಸಹಿಸಲಾಗದ ಸಾಂಪ್ರದಾಯವಾದಿಗಳು ಅವರ ಹತ್ಯೆ ಮಾಡಿದರು. ಅವರು ದೇಹರೂಪದಿಂದ ನಮ್ಮಿಂದ ಅಗಲಿದರೂ, ಸಾಹಿತ್ಯ, ಸಂಶೋಧನೆಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿದ್ದಾರೆ, ಅವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಎಂದು ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಶನಿವಾರ ಹೇಳಿದರು.
ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ ಡಾ. ಎಂ. ಎಂ. ಕಲಬುರ್ಗಿಅವರ ೯ನೆಯ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪೂಜ್ಯರು ಶರಣ ಸಾಹಿತ್ಯಕ್ಕೆ ಡಾ. ಎಂ. ಎಂ. ಕಲಬುರಗಿ ಅವರ ಕೊಡುಗೆಯನ್ನು ಸ್ಮರಿಸಿಕೊಂಡರು.
ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಅವರು ಮಾಡಿರುವ ಅಧ್ಯಯನ, ಸಂಶೋಧನಾ ಮುಂದಿನವರಿಗೆ ದಾರಿದೀಪವಾಗಿವೆ.
ಡಾ. ಕಲಬುರ್ಗಿಅವರು ಬಸವಾದಿ ಶರಣರ ಚಿಂತನೆಗಳನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದರು. ಅವರ ಮಾರ್ಗ ಸಂಪುಟಗಳಲ್ಲಿ ಹೆಚ್ಚಿನ ಲೇಖನಗಳು ಶರಣ ಸಾಹಿತ್ಯದ ಸಂಶೋಧನೆಗಳೇ. ವಿಶೇಷವಾಗಿ ಸುಮಾರು ೩೫ ಭಾಷೆಗಳಲ್ಲಿ ಪ್ರಕಟವಾಗಿರುವ ವಚನ ಗ್ರಂಥದ ಸಂಪಾದಕರಾಗಿ ಅವರು ಸಲ್ಲಿಸಿರುವ ಸೇವೆ ಅನುಪಮವಾಗಿದೆ, ಎಂದು ಶ್ರೀಗಳು ಹೇಳಿದರು.
ಡಾ. ಕಲಬುರ್ಗಿ ಅವರ ಪ್ರಧಾನ ಸಂಪಾದಕೆತ್ವದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಜನಪ್ರಿಯ ವಚನ ಸಾಹಿತ್ಯ ಪ್ರಕಟಣ ಯೋಜನೆ ಕ್ರಿಯಾರೂಪಕ್ಕೆ ಬಂತು. ಅನೇಕ ಮಠಮಾನ್ಯಗಳಿಗೆ ಡಾ. ಕಲಬುರ್ಗಿ ಅವರು ಹೊಸ ಹೊಸ ಯೋಜನೆಗಳನ್ನು ನೀಡಿದರು, ಎಂದು ಶ್ರೀಗಳು ಸ್ಮರಿಸಿಕೊಂಡರು.
ಸಮಾರಂಭದ ಅಧ್ಯಕ್ಷತೆ ಶ್ರಾವಣ ಮಾಸ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾದ ಶರಣೆ ನಿರ್ಮಲಾ ಚಂದ್ರಕಾಂತ ಪಾಟೀಲ ಅವರು ವಹಿಸಿದ್ದರು. ಭಂಡಾರಿ ಶರಣರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶರಣ ಚಂದ್ರಕಾಂತ ಪಾಟೀಲ, ಬಾಬುರಾವ ಹುಣಜೆ, ಡಾ. ವಿಶ್ವನಾಥಪ್ಪ ಬಿರಾದಾರ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಶರಣ ವೀರಣ್ಣ ಕುಂಬಾರ ಅವರು ನಿರೂಪಿಸಿದರು.