ಅನುಭವ ಮಂಟಪದ ಇತಿಹಾಸ ಕೆದಕುವ ಪ್ರಯತ್ನ ಸರಿಯಲ್ಲ: ಬೆಲ್ದಾಳ ಶರಣರು

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ

12ನೇ ಶತಮಾನದ ಅನುಭವ ಮಂಟಪದ ಇತಿಹಾಸ ಕೆದಕುವ ಪ್ರಯತ್ನ ಕೆಲವರು ಮಾಡುತ್ತಿದ್ದಾರೆ, ಅದು ಸರಿಯಲ್ಲ ಎಂದು ಬಸವಯೋಗಾಶ್ರಮದ ಡಾ.ಸಿದ್ದರಾಮ ಶರಣರು ಬೆಲ್ದಾಳ ರವಿವಾರ ಹೇಳಿದರು.

ಬಸವಣ್ಣನನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು ಅನುಭವ ಮಂಟಪವನ್ನು ಸ್ಥಾಪಿಸಿದರು, ಅದಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬಸವಾದಿ ಶರಣರ ಅನೇಕ ವಚನಗಳಲ್ಲಿ ಅನುಭವ ಮಂಟಪದ ಬಗ್ಗೆ ಉಲ್ಲೇಖವಿದೆ,ʼ ಎಂದು ಡಾ.ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು.

ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ವಚನ ಜಾತ್ರೆ-2025 ಮತ್ತು ಡಾ.ಚನ್ನಬಸವ ಪಟ್ಟದ್ದೇವರ 26ನೆಯ ಸ್ಮರಣೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ʼಅನುಭವ ಮಂಟಪನು ಮಾಡಿ ಅನುಭಾವ ಮೂರ್ತಿಯಾದ ಬಸವಯ್ಯನುʼ ಗೋಷ್ಠಿಯಲ್ಲಿ ಅವರು ಅನುಭಾವ ನೀಡಿದರು.

ಕಮಲನಗರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇವೇಳೆ ನಾಗರಾಜ ವೈಜಿನಾಥ ಸಿರ್ಸೆ ಮತ್ತು ಸರಸ್ವತಿ ವೈಜಿನಾಥ ಸಿರ್ಸೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ನಾಡೊಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆ ವಹಿಸಿದ್ದರು.

ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ ಬಸವ ಗುರುವಿನ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಗನ್ನಾಥ ಹೆಬ್ಬಾಳೆ, ಕಲಬುರಗಿಯ ಎಸ್.ದಿವಾಕರ್ ಮಾತನಾಡಿದರು. ಪ್ರಗತಿ ಸಂಗಯ್ಯ ಸ್ವಾಮಿ ವಚನ ಸಂಗೀತ ನಡೆಸಿ ಕೊಟ್ಟರು. ಆರತಿ ಪಾತ್ರೆ ನಿರೂಪಿಸಿದರು. ಪಾರ್ವತಿ ಧುಮನಸೂರೆ ವಂದಿಸಿದರು.

ಇಂದು, ನಾಳೆ ಕಾರ್ಯಕ್ರಮ

ಸೋಮವಾರ ಸಂಜೆ ೬ಕ್ಕೆ ನಡೆಯಲಿರುವ ಜಾಗತೀಕರಣ ಕಾಲದಲ್ಲೂ ಬಸವವಾದದ ಪ್ರಸ್ತುತತೆ ಗೋಷ್ಠಿಯಲ್ಲಿ ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಬೀದರ್‌ನ ಡಾ.ಗಂಗಾಂಬಿಕಾ ಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ಗಾಜನೂರು ಅನುಭಾವ ನೀಡುವರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸುವರು.

ಏ.೨೨ರಂದು ಬೆಳಗ್ಗೆ ೬ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮವರೆಗೆ ಬಸವ ನಡಿಗೆ ನಡೆಯಲಿದೆ. ಔಸಾ ಶಿವಛತ್ರಪತಿ ಶಿಕ್ಷಣ ಪ್ರಸಾರಕ ಮಂಡಳ ಸಂಸ್ಥಾಪಕ ನಾಮದೇವರಾವ ಪವಾರ್ ಷಟಸ್ಥಲ ಧ್ವಜಾರೋಹಣ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದಬಂದಗೆ ಬಸವಗುರು ಪೂಜೆ ನೆರವೇರಿಸುವರು.

ಬೆಳಗ್ಗೆ ೧೧ಕ್ಕೆ ರಾಜ್ಯಪಾಲ ಥಾವರಚಂದ ಗೆಹಲೋತ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಅಥಣೇಶ ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ ಎಂದು ವಿವರಿಸಿದರು.

ಸಂಜೆ ೪ಕ್ಕೆ ನಡೆಯುವ ಸಮಾರೋಪದಲ್ಲಿ ಗುಳೇದಗುಡ್ಡ ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮೀಜಿ, ಹುಲಸೂರು ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಆನಂದ ದೇವರು, ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ಮೈತ್ರಾದೇವಿ ತಾಯಿ, ಡಾ.ಮಹಾದೇವಮ್ಮ ತಾಯಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಏ.೨೨ರ ಮಧ್ಯಾಹ್ನ ೩ಕ್ಕೆ ವಿವಿಧ ಕ್ಷೇತ್ರದ ಸಾಧಕರಿಗೆ ನಾನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಮಾರೋಪದಲ್ಲಿ ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕೊಟ್ಟೂರಿನ ನಾಡೋಜ ಕುಂ.ವೀರಭದ್ರಪ್ಪ, ಪಶ್ಚಿಮ ಬಂಗಾಳದ ಐಪಿಎಸ್ ಅಮಿತ ಜವಳಗಿ, ನವದೆಹಲಿಯ ಅನಂತ ಬಿರಾದಾರ್, ಕಲಬುರಗಿ ಸಮಾಜ ಸೇವಕ ಉಮೇಶ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪ್ರವಚನಾ ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ, ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷೆ ರೇಖಾ ಮಹಾಜನ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಇದ್ದರು.

ವಿವಿಧ ಗ್ರಂಥ ಲೋಕಾರ್ಪಣೆ

ವಚನ ಜಾತ್ರೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಮುದ್ರಿತ ವಿವಿಧ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ತಿಳಿಸಿದ್ದಾರೆ. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಂಪಾದಕತ್ವದ ಮಾತೆಂಬುದು ಜ್ಯೋತಿರ್ಲಿಂಗ, ಶರಣರ ವಚನ ಬೇವ ಸವಿದಂತೆ, ವಚನಾಭಿಷೇಕ, ವಚನ ಪ್ರಸಾದ (೪ನೇ ಮುದ್ರಣ), ಚೇತನಾ ಸಂತೋಷಕುಮಾರ ಚನ್ನಶೆಟ್ಟಿ ರಚಿಸಿದ ನವಚೇತನ, ಶಿವಸ್ವಾಮಿ ಚೀನಕೇರಾ ರಚಿಸಿದ ಸಮತಾವಾದ ಒಂದು ವಿವೇಚನೆ ಮತ್ತು ಮರಾಠಿ ಭಾಷೆಯಲ್ಲಿ ಡಾ.ಅಶೋಕ ಮೇನಕುದಳೆ ರಚಿಸಿರುವ ಸಮತಾಸೂರ್ಯ ಮಹಾತ್ಮ ಬಸವೇಶ್ವರ (೯ನೇ ಆವೃತ್ತಿ) ಮತ್ತು ಕ್ರಾಂತಿಕಾರಿ ಮಹಾತ್ಮ ಬಸವೇಶ್ವರ (೫ನೇ ಆವೃತ್ತಿ) ಗ್ರಂಥಗಳು ಲೋಕಾರ್ಪಣೆ ಆಗಲಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *