ಭಾಲ್ಕಿ
ಸತ್ಯ ಶುದ್ಧ ಕಾಯಕವೇ ಕೈಲಾಸವೆಂದು ನಂಬಿದ ಬಸವಾದಿ ಶರಣರು ಕೊಡಮಾಡಿದ ವಚನ ಸಾಹಿತ್ಯದಿಂದ ವ್ಯಕ್ತಿಶುದ್ಧಿ ಸಮಾಜ ಶುದ್ಧಿ ಆಗಬಹುದಾಗಿದೆ ಎಂದು ಗೋರ್ಟಾ(ಬಿ)ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಭಾಲ್ಕಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಮಹಾದೇವ ಮಂದಿರದಲ್ಲಿ ಗ್ರಾಮದ ಬಸವ ಬಳಗ ಹಾಗೂ ಗ್ರಾಮಸ್ಥರ ವತಿಯಿಂದ 770 ಪ್ರವಚನಗಳ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿದ್ದ ಬಸವ ದರ್ಶನ ಪ್ರವಚನದ ಸಮಾರೋಪದಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರು ಅಂದು ಎಲ್ಲಾ ಬಗೆಯ ಭೇದಭಾವ ಅಳಿಸಿ ಹಾಕಿ ಸಮಾನತೆ ಸಹಿತ ಸಮ ಸಮಾಜ ಕಟ್ಟ ಬಯಸಿದರು. ಶರಣರ ಕೊಡುಗೆಯಾದ ವಚನ ಸಾಹಿತ್ಯ ಇಂದು ಜಗತ್ತಿಗೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಶಿವಾಜಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ವಿಶೇಷ ಉಪನ್ಯಾಸ ನೀಡಿದರು. ಗೋರ್ಟಾ ಗ್ರಾಮದ ನಿವೃತ್ತ ಶಿಕ್ಷಕ ಬಾಬುರಾವ ರಾಜೋಳೆ, ಬಸವರಾಜ, ಕಾಶಪ್ಪ ಧನ್ನೂರೆ, ಬಸವರಾಜ ಬಿರಾದಾರ, ಶಿವರಾಜ ಬಿರಾದಾರ, ಕಮಲಾಕರ ಬಿರಾದಾರ, ನಾಗರಾಜ ಬಿರಾದಾರ, ಸುನೀಲ ಬಿರಾದಾರ ಮತ್ತಿತರರು ಇದ್ದರು.

ಗೋರ್ಟಾ, ಮೋರಂಬಿ, ತೊಗಲೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಬಸವ ಭಕ್ತರು, ನೀಲಮ್ಮನ ಬಳಗದ ಶರಣೆಯರು ಭಾಗವಹಿಸಿ ವಚನ ಗಾಯನ ನಡೆಸಿಕೊಟ್ಟರು. ಇದೇ ವೇಳೆ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರದ ವೈಭವದ ಮೆರವಣಿಗೆ ನೆರವೇರಿತು. ಸ್ಪೂರ್ತಿ ಸುಧಾಕರ ವಚನ ನೃತ್ಯ ನಡೆಸಿಕೊಟ್ಟರು.