ಬೆಂಗಳೂರು
ಕರ್ನಾಟಕದಲ್ಲಿ ಉಪಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳ ಪೈಕಿ ಎರಡಕ್ಕೆ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಹಾಗೂ ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಆಧ್ಯಕ್ಷ ಬಂಗಾರು ಹನುಮಂತು ಅವರು ಕ್ರಮವಾಗಿ ಹಾವೇರಿಯ ಶಿಗ್ಗಾವಿ ಮತ್ತು ಬಳ್ಳಾರಿಯ ಸಂಡೂರು (ಎಸ್.ಟಿ. ಮೀಸಲು) ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆ.
ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನ ಇ.ತುಕಾರಾಂ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಈ ಕ್ಷೇತ್ರಗಳು ತೆರವಾಗಿದ್ದವು.
ಚನ್ನಪಟ್ಟಣ ಕ್ಷೇತ್ರಕ್ಕೆ ಇನ್ನಷ್ಟೇ ಅಭ್ಯರ್ಥಿ ಘೋಷಣೆಯಾಗಬೇಕಿದೆ. ಮಿತ್ರ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಈ ಕ್ಷೇತ್ರಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದೆ.
ಸುಮಾರು 60 ಆಕಾಂಕ್ಷಿಗಳು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನ ಆಕಾಂಕ್ಷಿಯಾಗಿದ್ದರು, ಆದರೆ ಬಸವರಾಜ ಬೊಮ್ಮಾಯಿ ಪ್ರಾಬಲ್ಯ ಹೊಂದಿರುವ ಮತ್ತು ಲಿಂಗಾಯತ ಮತದಾರರೇ ಹೆಚ್ಚಾಗಿರುವ ಕ್ಷೇತ್ರಕ್ಕೆ ಈಗ ಭರತ್ ಬೊಮ್ಮಾಯಿ ಅವರಿಗೆ ಬಿಜೆಪಿ ಮಣೆ ಹಾಕಿದೆ.
ಭರತ್ ಬೊಮ್ಮಾಯಿ 2023 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಂದೆ ಪರವಾಗಿ ಶಿಗ್ಗಾವಿ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದು ಅವರಿಗೆ ಟಿಕೆಟ್ ದೊರಕಿಸುವಲ್ಲಿ ನೆರವಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.