ಬೀದರ್:
ಭಾರತೀಯ ಬಸವ ಬಳಗದಿಂದ ಏರ್ಪಡಿಸಿದ್ದ ಚನ್ನಬಸವ ಪಟ್ಟದ್ದೇವರ ಜಯಂತಿ ಉತ್ಸವದಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರಿಗೆ ಸೋಮವಾರ ‘ಡಾ.ಚನ್ನಬಸವ ಪಟ್ಟದ್ದೇವರ ಕನ್ನಡ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಗೈರು ಹಾಜರಾದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಬದಲು ಅವರ ಸೊಸೆ ಡಾ.ಗೀತಾ ಖಂಡ್ರೆ ಅವರಿಗೆ ಸಾಂಕೇತಿಕವಾಗಿ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಪ್ರಶಸ್ತಿ ಪ್ರದಾನ ಮಾಡಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಚನ್ನಬಸವ ಪಟ್ಟದ್ದೇವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಈಗಲೂ ಭಾಲ್ಕಿ ಮಠ ಮುನ್ನಡೆಯುತ್ತಿದೆ’ ಎಂದರು.
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ,‘12ನೇ ಶತಮಾನದಲ್ಲಿ ಕನ್ನಡ ಬರದವರಿಗೆ ಕನ್ನಡ ಕಲಿಸಿ, ಅವರಿಂದ ವಚನಗಳನ್ನು ಬಸವಣ್ಣನವರು ಬರೆಸಿದರು. ಅದೇ ಕೆಲಸ 21ನೇ ಶತಮಾನದಲ್ಲಿ ಚನ್ನಬಸವ ಪಟ್ಟದ್ದೇವರು ಮಾಡಿದರು ’ ಎಂದು ತಿಳಿಸಿದರು.
ಡಾ.ಗೀತಾ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ಬೈಲೂರ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಭಾರತೀಯ ಬಸವ ಬಳಗದ ರಾಜ್ಯ ಘಟಕದ ಅಧ್ಯಕ್ಷ ಬಾಬುವಾಲಿ, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಸೋಮಶೇಖರ ಪಾಟೀಲ ಮತ್ತಿತರರು ಹಾಜರಿದ್ದರು.