ಬೀದರಿನಲ್ಲಿ ಲಿಂಗಾಯತ ಸಂಘಟನೆಗಳಿಂದ ಸಾಮೂಹಿಕ ಇಷ್ಟಲಿಂಗ ಪೂಜೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಮನದ ಮೈಲಿಗೆ ತೊಳೆದು, ಧರ್ಮ ಮಾರ್ಗದಲ್ಲಿ ನಡೆಯಲು ಇಷ್ಟಲಿಂಗದ ಅವಶ್ಯಕತೆ ಬಹಳಷ್ಟಿದೆ. ಪ್ರತಿಯೊಬ್ಬ ವ್ಯಕ್ತಿಯ ಅರಿವಿನ ಕಣ್ಣು ಅರಳಲು ಸಾಮೂಹಿಕ ಇಷ್ಟಲಿಂಗಪೂಜೆ ಮಾಡಬೇಕೆಂದು ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ತಿಳಿಸಿದರು.

ನಗರದ ಬಸವ ಮಂಟಪದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ,
ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಜರುಗಿದ ಸಾಮೂಹಿಕ ಇಷ್ಟಲಿಂಗದ ಪ್ರಾತ್ಯಕ್ಷಿತೆ ತೋರಿಸಿ ಮಾತನಾಡಿದರು.

ಪ್ರಪಂಚದ ಮೊಟ್ಟಮೊದಲ ಯೋಗಗುರು ಯೋಗಿಶಿವ. ಬಸವೇಶ್ವರರನ್ನು ದ್ವಿತೀಯ ಶಂಭು ಎಂದು ಕರೆಯುತ್ತಾರೆ. ಇಂತಹ ಗುರುಬಸವೇಶ್ವರರು ನೀಡಿದ ಇಷ್ಟಲಿಂಗಪೂಜೆಯನ್ನು ಶಿವರಾತ್ರಿ ದಿವಸ ಮಾಡಲಾಗುತ್ತದೆ. ‘ಶರಣ ನಿದ್ರೆಗೈದರೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ’ ಎನ್ನುವಂತೆ ವರ್ಷದ ಎಲ್ಲಾ ದಿವಸವೂ ಲಿಂಗಾಯತರಿಗೆ ಶಿವರಾತ್ರಿಯೇ ಆಗಿದೆ ಎಂದು ಮಾತಾಜಿ ತಿಳಿಸಿದರು.

ಬೆಂಗಳೂರಿನ ಶರಣ ಸಾಹಿತಿ ಸಚ್ಚಿದಾನಂದ ಚಟ್ನಳ್ಳಿ ಮಾತನಾಡಿ ವರ್ಷವಿಡೀ ಮನುಷ್ಯ ತನ್ನ ಕೌಟುಂಬಿಕ ಜೀವನದ ಜಂಜಾಟದಲ್ಲಿ ಒದ್ದಾಡುತ್ತಿರುತ್ತಾನೆ. ಹೀಗಾಗಿ ಶಿವರಾತ್ರಿ ದಿವಸ ಉಪವಾಸ ಎನ್ನುವ ಪದ್ಧತಿ ಜಾರಿಗೆ ತರಲಾಗಿದೆ. ‘ಉಪ’ ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ದೇವರ ಹತ್ತಿರಕ್ಕೆ ಇದ್ದು, ಆತನ ಸ್ಮರಣೆ ಮಾಡುವುದೇ ಶಿವರಾತ್ರಿ.

ಇದೊಂದು ಗಣಮೇಳ ಎಂದೂ ಹೆಸರಿಸಲಾಗಿದೆ. ಗಣ ಎಂದರೆ ಸಮೂಹ. ಮೇಳ ಎಂದರೆ ಸೇರುವುದು.ಬಸವಾದಿ ಶರಣರು ತ್ಯಾಗ ಬಲಿದಾನಗಳ ಮೂಲಕ ಇಷ್ಟಲಿಂಗ ಮತ್ತು ಧರ್ಮ ನೀಡಿರುವ ನಿಮಿತ್ಯ ಸರ್ವಶರಣರ ದಿನಾಚರಣೆ ಮಾಡಿ ಶರಣರನ್ನು ಅಂತರಂಗದಲ್ಲಿ ಸ್ಮರಿಸುತ್ತ ಶಿವರಾತ್ರಿ ಆಚರಣೆ ಮಾಡಬೇಕೆಂದು ತಿಳಿಸಿದರು.

ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ ಮಾ. ೨೨ ಮತ್ತು ೨೩ರಂದು ಮಹಾದಂಡನಾಯಕರ ಸಂಸ್ಮರಣೆ ಬೀದರ ನಗರದಲ್ಲಿ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕರೆಸುವ ಪ್ರಯತ್ನ ನಡೆಯುತ್ತಿದೆ. ಎಲ್ಲರೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಹಾವಶೆಟ್ಟ ಪಾಟೀಲ ಬಸವ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಇಷ್ಟಲಿಂಗ ಪೂಜೆಯಲ್ಲಿ ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ಡಾ. ಮಹೇಶ ಬಿರಾದಾರ, ನಾಗಶೆಟ್ಟಿ ದಾಡಗಿ, ಬಸವರಾಜ ಸಂಗಮದ, ಬಸವಂತರಾವ ಬಿರಾದಾರ, ವಿಜಯಕುಮಾರ ಪೊಲೀಸ್ ಪಾಟೀಲ, ನಾಗಶೆಟ್ಟಿ ದಾಡಗಿ, ಕಾಶಿನಾಥ ಪಾಟೀಲ, ಡಾ. ವೀರಶೆಟ್ಟಿ ಮೈಲೂರಕರ್, ರಾಜಕುಮಾರ ದಾಡಗಿ, ಡಾ. ಸುರೇಶ ಪಾಟೀಲ, ಅಕ್ಕಮಹಾದೇವಿ ಸ್ವಾಮಿ, ಸುನಿತಾ ಬಿರಾದಾರ, ಶೀತಲ ಸೂರ್ಯವಂಶಿ ಸೇರಿದಂತೆ ನೂರಾರು ಶರಣ ಶರಣೆಯರು ಇಷ್ಟಲಿಂಗಪೂಜೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *