ಬೀದರ
ಸಜ್ಜನರ ಸಂಗ ಇದ್ದಾಗ ಬದುಕು ಅರಳಿ ಬೆಳಕು ದೊರಕಿ ಅಜ್ಞಾನ ಕಡಿಮೆಯಾಗುತ್ತದೆ. ಇಂತಹ ಅಜ್ಞಾನ ಕಳೆಯುವಂತಹ ಕೆಲಸ ಮಾಡುವವರೇ ಗುರು, ನಮಗೆ ಶಿವಪಥದ ಮಾರ್ಗ ತೋರಿಸುವಂತಹ ವ್ಯಕ್ತಿ ಗುರು ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ಬಸವಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಜರುಗಿದ ಶರಣ ಸಂಗಮ, ಗುರುಪೂರ್ಣಿಮಾ ಹಾಗೂ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಬಸವಣ್ಣನವರು ತಮ್ಮನ್ನು ತಾವು ಗುರು ಎಂದು ಹೇಳಿಕೊಳ್ಳಲಿಲ್ಲ. ೧೨ನೇ ಶತಮಾನದ ಬಹುತೇಕ ಶರಣರು ಬಸವಣ್ಣನವರನ್ನು ಗುರು ಎಂದು ಭಾವಿಸಿದ್ದರು. ಬಸವಣ್ಣ ನಮಗೂ, ನಿಮಗೂ ಗುರು ಮಾತ್ರವಲ್ಲ ಅವರು ವಿಶ್ವದ ಗುರುವಾಗಿದ್ದಾರೆ. ಗುರು ಅರಿವಿನ ಆಗರವಾಗಬೇಕು. ಅರಿವು ಆಚರಣೆ ಒಂದಾದಾಗ ಮಾತ್ರ ಗುರುವಾಗಲು ಸಾಧ್ಯ ಎಂದರು.

ಶರಣ ಸಾಹಿತಿ ಡಾ. ಅಮರನಾಥ ಸೋಲಪುರೆ ಮಾತನಾಡಿ, ಹಡಪದ ಅಪ್ಪಣ್ಣವರು ವಿಶ್ವದ ಪ್ರಥಮ ಸಂಸತ್ತಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಕಾರ್ಯದರ್ಶಿಯಾಗಿ ಅವರಿಗೆ ಯಾವುದೇ ಮುಜುಗರವಾಗದಂತೆ ಕೆಲಸ ನಿರ್ವಹಿಸಿದರು. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಿಂದ ತಿಳಿದು ಬರುತ್ತದೆ. ಅಪ್ಪಣ್ಣನವರು ಮೌಢ್ಯತೆ ಮೀರಿ ಮನುಷ್ಯತ್ವದ ನೆಲೆಗಟ್ಟಿನಲ್ಲಿ ಸತ್ಕಾರ್ಯಗಳನ್ನು ಮಾಡುವುದರ ಮೂಲಕ ಸಾರ್ಥಕ ಬದುಕು ಬದುಕಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ಸಾರಿದ್ದಾರೆ ಎಂದರು.
ಕ.ರಾ.ಶಿ ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ಹತ್ತಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ರಮೇಶ ರಂಜಿರೇ ಉದ್ಘಾಟಿಸಿದರು. ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಚಂದನಹಳ್ಳಿ ಧ್ವಜಾರೋಹಣಗೈದರು.
ಇದೇ ಸಂದರ್ಭದಲ್ಲಿ ಬೀದರನ ರೋಟರಿ ಕ್ಲಬ್ ಫೋರ್ಟ ಅಧ್ಯಕ್ಷ ಡಾ. ಉಲ್ಲಾಸ ಕಟ್ಟಿಮನಿ, ರೋಟರಿ ಕ್ಲಬ್ ನ್ಯೂಸೆಂಚುರಿ ಅಧ್ಯಕ್ಷ ಡಾ. ನಾಗೇಶ ಪಾಟೀಲ, ರೋಟರಿ ಕ್ಲಬ್ ಕ್ವಿನ್ಸ್ ಅಧ್ಯಕ್ಷ ಡಾ. ಸುಲೋಚನಾ ಪಾಟೀಲ, ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ ವಾಲಿ ಅವರನ್ನು ಸನ್ಮಾನಿಸಲಾಯಿತು.

ಚಂದ್ರಕಾಂತ ಪಟ್ನೆ ವಚನ ಗಾಯನ ಮಾಡಿದರೆ, ರೇವಣಪ್ಪ ಮೂಲಗೆ, ಶ್ರೀನಿವಾಸ ಅಲ್ಮಸಪೂರ ವಚನ ಸಂಗೀತ ನಡೆಸಿಕೊಟ್ಟರು. ಮೀರಾ ಖೇಣಿ ಸ್ವಾಗತಿಸಿದರೆ, ಸಾವಿತ್ರಿ ಮಹಾಜನ ನಿರೂಪಿಸಿದರು. ಮೀರಾ ಗಿರೀಶ ಖೇಣಿ ಭಕ್ತಿ ದಾಸೋಹಗೈದರು.
ಇದಕ್ಕೂ ಮುನ್ನ ಶ್ರೀ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಸ್ಲೇಟಿನ್ ಮೇಲೆ ಅಕ್ಷರಾಭ್ಯಾಸ ಮಾಡಿಸಿದರು. ನವೀಕರಣಗೊಂಡ ನೀಲಾಂಬಿಕಾ ತಾಯಿ ದಾಸೋಹ ಮನೆಯ ಪ್ರಸಾದೀಕರಣ ಕಾರ್ಯಕ್ರಮ ನಡೆಯಿತು.