ಶಂಕರ ಬಿದರಿ ಮನೆ ಅಥವಾ ಮಹಾಸಭಾ ಕಚೇರಿ ಮುಂದೆ ಪ್ರತಿಭಟನೆಗೆ ಭಾಲ್ಕಿ ಶ್ರೀ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

ಬಸವ ಜಯಂತಿಯಂದು ರೇಣುಕಾ ಜಯಂತಿಯನ್ನು ಆಚರಿಸಲು ಸುತ್ತೋಲೆ ಹೊರಡಿಸಿರುವ ಶಂಕರ ಬಿದರಿಯವರ ವಿರುದ್ಧ ಬೆಂಗಳೂರಿನಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಲಿಂಗಾಯತ ಮಠಾಧೀಶರ ಒಕ್ಕೊಟದ ಅಧ್ಯಕ್ಷ ಭಾಲ್ಕಿಯ ಬಸವಲಿಂಗ ಪಟ್ಟದೇವರು ಎಚ್ಚರಿಕೆ ನೀಡಿದರು.

ಬಿದರಿ ಸುತ್ತೋಲೆಯ ವಿರುದ್ಧ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಲಿಂಗಾಯತ ಮಠಾಧೀಶರು ಮತ್ತು ಸಂಘಟನೆಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

“ನೆನ್ನೆ ರಾತ್ರಿ 15 ನಿಮಿಷ ಶಂಕರ ಬಿದರಿಯವರ ಜೊತೆ ಮಾತಾನಾಡಿದೆ, ಆದರೆ ಅವರು ಸುತ್ತೋಲೆ ವಾಪಸ್ಸು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಅದಕ್ಕೆ ಈ ರೀತಿ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿದರೆ ಪ್ರಯೋಜನವಿಲ್ಲ. ಬೆಂಗಳೂರಿಗೆ ಹೋಗಿ ವೀರಶೈವ ಮಹಾಸಭಾ ಕಚೇರಿ ಅಥವಾ ಬಿದರಿಯವರ ಮನೆಯ ಮುಂದೆ ಎಲ್ಲಾ ಜಿಲ್ಲೆಗಳಿಂದ ಜನ ಬಂದು ಪ್ರತಿಭಟನೆ ಮಾಡಬೇಕು,” ಎಂದು ಭಾಲ್ಕಿ ಶ್ರೀಗಳು ಕರೆ ಕೊಟ್ಟರು.

ಬಿದರಿ ಸುತ್ತೋಲೆಯನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳಿಸಲಿರುವ ಮನವಿ ಪತ್ರವನ್ನು ಬಸವರಾಜ ಧನ್ನೂರ ಸಭೆಯಲ್ಲಿ ಓದಿದರು. ಬಿದರಿ ಸುತ್ತೋಲೆ ಲಕ್ಷಾಂತರ ಬಸವ ಭಕ್ತರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿರುವ ಗಂಭೀರ ವಿಷಯ. ಪಂಚಾಚಾರ್ಯರ ಯುಗಮಾನೋತ್ಸವವನ್ನು ಬಸವ ಜಯಂತಿಯ ಜೊತೆ ಸೇರಿಸುವ ಪ್ರಯತ್ನ ಈ ಪವಿತ್ರ ದಿನದ ತಾತ್ವಿಕತೆ, ಮಹತ್ವ ಮತ್ತು ಐತಿಹಾಸಿಕತೆಯನ್ನು ಕುಗ್ಗಿಸಲು ನಡೆಸುತ್ತಿರುವ ಪ್ರಯತ್ನವೆಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಬೆಲ್ದಾಳ ಶರಣರು ಕಿವಿಯಲ್ಲಿ, ಕಲ್ಲಿನಲ್ಲಿ ಯಾರೂ ಹುಟ್ಟಿಲ್ಲ. ಹುಟ್ಟಿದ್ದು ರೇವಣ ಸಿದ್ದರು ಆದರೆ ಅವರನ್ನು ರೇಣುಕಾಚಾರ್ಯರೆಂದು ಬದಲಿಸಲಾಗಿದೆ ಎಂದು ಹೇಳಿದರು. ಯಾವುದೇ ಅಧ್ಯಯನವಿಲ್ಲದ ಪುಡಾರಿ ಕಳಿಸಿರುವ ಆದೇಶ ಎಂದು ಶರಣರು ಹೇಳಿದರು.

ಅಸಮಾನತೆಯ ಪಂಚಾಚಾರ್ಯ ಪರಂಪರೆಯನ್ನು ಮಾನವೀಯತೆ ಬೋಧಿಸುವ ಬಸವ ತತ್ವದ ಜೊತೆ ಸೇರಿಸುವ ಬಸವ ದ್ರೋಹದ ಕೆಲಸ ಬಿದರಿ ಮಾಡಬಾರದು ಎಂದು ಅಕ್ಕ ಗಂಗಾಂಬಿಕೆ ಹೇಳಿದರು.

ಬಸವಣ್ಣನವರಿಗೆ ಅವಮಾನ ಮಾಡಿರುವುದರಿಂದ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅರೆಸ್ಟ್ ಮಾಡಬೇಕೆಂಬ ಬೇಡಿಕೆಯೂ ಸಭೆಯಲ್ಲಿದ್ದವರು ಹೇಳಿದರು.

ಪ್ರತಿಭಟನೆಯ ಮುಖಂಡರು ನಂತರ ಸುದ್ದಿಗೋಷ್ಠಿಯಲ್ಲಿಯೂ ಮಾತನಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
3 Comments
  • ಲಿಂಗಾಯತ ಧರ್ಮವೇ ಹೊರತು ಪಂಥವಲ್ಲ!
    ಅಭಾವೀಮಸ ಅಧ್ಯಕ್ಷರು ಲಿಂಗಾಯತ ಪಂಥವೇ ಹೊರತು ಧರ್ಮವಲ್ಲ ಎಂದು ಅಪ್ರಬುದ್ಧವಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಕೆಲವು ಕಾರಣಗಳ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.
    ಅವರು ನೀಡಿರುವ ಕಾರಣಗಳು ಎಷ್ಟು ಅಸಮಂಜಸವಾಗಿವೆ ನೋಡಿ.

    ೧) ಇಪ್ಪತ್ತು ವರ್ಷಗಳಿಂದ ಇವರು ಧರ್ಮ ಮಾನ್ಯತೆಗಾಗಿ ಪ್ರಯತ್ನ ಪಟ್ಟರೂ ಮಾನ್ಯತೆ ಸಿಕ್ಕಿಲ್ಲ
    ೨) 1955 ರ ಹಿಂದೂ ಕೋಡ್ ಬಿಲ್ ಮತ್ತು 2011 ರ ಜನಗಣತಿಯಲ್ಲಿ ಲಿಂಗಾಯತರು ಹಿಂದೂ ಧರ್ಮದ ಭಾಗ ಎಂದು ಪರಿಗಣಿಸಲಾಗಿದೆ
    ೩) ಕೇಂದ್ರಸರ್ಕಾರ ಕೂಡಾ ಇದೇ ನಿಲುವನ್ನು ಹೊಂದಿದೆ.

    ಈ ಕಾರಣಗಳಿಗಾಗಿ ಲಿಂಗಾಯತ ಒಂದು ಪಂಥ ಧರ್ಮವಲ್ಲ ಎಂದು ಸಾಹೇಬರು ತೀರ್ಪಿತ್ತಿದ್ದಾರೆ!

    ಆದರೆ ಬ್ರಿಟಿಷರ ಕಾಲದ ದಾಖಲೆಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗಿತ್ತು ಎಂಬುದು ಇವರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತೆ, ಅಧ್ಯಯನದ ಕೊರತೆ ಇರಬೇಕು! (ಡಾ. ಶಿವಾನಂದ ಜಾಮದಾರ್ ಬರೆದ ದಾಖಲೆಗಳ ಪುಸ್ತಕವನ್ನು ಓದಿ)

    ತಾತ್ವಿಕವಾಗಿ ಲಿಂಗಾಯತ ಸಂಪೂರ್ಣವಾಗಿ ಹಿಂದೂ ಧರ್ಮದಿಂದ ಭಿನ್ನ. ತಾತ್ವಿಕವಾಗಿ, ಆಚಾರ, ವಿಚಾರಗಳ ದೃಷ್ಟಿಯಿಂದ ಹೇಗೆ ಭಿನ್ನ ಎಂಬ ವಿಚಾರ ಇಂದು ಎಲ್ಲಾ ಲಿಂಗಾಯತ ಪ್ರಜ್ಞಾವಂತರಿಗೂ ಗೊತ್ತು. ಇವರಿಗೆ ಗೊತ್ತಿಲ್ಲವೆಂದರೆ ಅಧ್ಯಯನ ಮಾಡಲಿ.

    ಕೇಂದ್ರ ಸರ್ಕಾರದ ನಿಲುವೂ ಇದೇ ಆಗಿದೆ ಎಂಬ ವಾದ ಎಷ್ಟು ಬಾಲಿಷ ನೋಡಿ. ಕೇಂದ್ರಕ್ಕೆ ಮನವರಿಕೆ ಮಾಡುವುದೇ ನಮ್ಮ ಕರ್ತವ್ಯ.

    ಮೊದಲು ಅಭಾವೀಮಸ ಅಧ್ಯಕ್ಷರು ಶರಣರ, ಲಿಂಗಾಯತ ಧರ್ಮದ ಉಗಮ ಮತ್ತು ಬೆಳವಣಿಗೆಗಳ ಕುರಿತು ಆಳವಾದ ಅಧ್ಯಯನ ಮಾಡಲಿ

    • ಬಿದರಿಯವರ ಆದೇಶದಂತೆ ಅ ಭಾ ವೀ ಮ ಸ ಭಾ ಕ್ಕೆ ಕಾನೂನಾತ್ಮಕ ಉತ್ತರ ಕೊಡಲು & ತಾಲೂಕಾ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ಮಾಡಲೇಬೇಕು ,ಇಲ್ಲವಾದರೆ ಬಿದರಿ ಹೇಳಿದಂತೆ ವೀರಶೈವ ಪುಡಾರಿಗಳು ನಾಯಿಕೊಡೆಗಳಂತೆ ಅಲ್ಲಲ್ಲಿ ತಮ್ಮ ಚಾಳಿಯನ್ನು ಮುಂದುವರೆಸುವ ಲಕ್ಷಣಗಳಿವೆ.

  • ಯಾರು ಲಿಂಗಾಯಿತರು ಸಂಪೂರ್ಣ ಬಸವ ತತ್ತ್ವವನ್ನು ಪಾಲಿಸುವದಿಲ್ಲಾ.
    ಎಷ್ಟು ಜನ ಲಿಂಗಾಯಿತರು ಗಣೇಶ ಪೂಜೆ ಮಾಡುವದಿಲ್ಲಾ
    ಮಂತ್ರಾಲಯಕ್ಕೆ, ತಿರುಪತಿ ಗೆ ಹೋಗ್ತಾರೆ,
    ನಾನು ಸಹ ಪಂಚಪೀಠಗಳನ್ನು ಅನುಸರಿಸುವದಿಲ್ಲಾ
    ಆದರೆ ಯಾರಿಗೆ ರೇಣುಕಾಚಾರ್ಯ ಜಯಂತಿ ಇಷ್ಟು ಇಲ್ಲಾ ಅವರು ಹೋಗಬೇಡರೀ ,ಬಸವ ಜಯಂತಿ ಆಚರಿಸಿ ರಿ.
    ಬೇರೆ ಜಾತಿಯವರು ನಮ್ಮ ಒಳ ಜಗಳ ನೋಡಿ ನಗುತ್ತಾರೆ

Leave a Reply

Your email address will not be published. Required fields are marked *