ಬಿದ್ದವರ ಬಾಳಿಗೆ ಬೆಳಕಾದ ವಚನ ಸಾಹಿತ್ಯ: ಡಾ. ಶಿವರಂಜನ ಸತ್ಯಂಪೇಟೆ

ಕಮಲಾಪುರ

ವಚನ ಸಾಹಿತ್ಯವೂ ಮಾನವನ ವ್ಯಕ್ತಿತ್ವ ಮತ್ತು ವಿಕಸನಕ್ಕೆ ಕಾರಣವಾಗಿದೆ. ಹನ್ನೆರಡನೆ ಶತಮಾನದ ವಚನ ಸಾಹಿತ್ಯ ಇಂದಿಗೂ ಮತ್ತು ಎಂದೆಂದಿಗೂ ಪ್ರಸ್ತುತವಾಗಿದೆ ಎಂದು ಪತ್ರಕರ್ತರು ಮತ್ತು ಶರಣ ಚಿಂತಕರಾದ ಡಾ. ಶಿವರಂಜನ ಸತ್ಯಂಪೇಟೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಲಿಂ. ಮಹಾದೇವಿಯಮ್ಮ ಗುರುಪಾದಪ್ಪ ಮಾಲಿಪಾಟೀಲ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ತಾಲ್ಲೂಕು ಘಟಕದ ವತಿಯಿಂದ ಮಹಾಗಾಂವ ಕ್ರಾಸ್ ಮೌಂಟವೇವ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ, ‘ವಚನ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಾಸ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ, ಮತ, ವರ್ಣ, ವರ್ಗ ಸೇರಿದಂತೆ ಎಲ್ಲ ಭೇಧವನ್ನು ತೊಡೆದು ಸಮಾನತೆ, ಸೌಹಾರ್ದತೆ, ಸತ್ಯ, ಶಾಂತಿ, ವಿಶ್ವಮಾನವತೆಯ ಜೊತೆಗೆ ಸಕಲ ಜೀವರಾಶಿಗಳ ಒಳಿತನ್ನೆ ಬಯಸುವ ಶರಣರ ನುಡಿಗಡಣಗಳಾದ ವಚನ ಸಾಹಿತ್ಯ ಸಾತ್ವಿಕ ಬದುಕಿಗೆ ಸೂಕ್ತ ಮಾರ್ಗದರ್ಶಿಗಳಾಗಿವೆ ಎಂದರು.

ಸಹಿತವಾದದು ಸಾಹಿತ್ಯ. ನುಡಿದಂತೆ ನಡೆದ ಜೀವನಾನುಭವ ಸಹಿತ ಸಾಹಿತ್ಯವೆ ವಚನ ಸಾಹಿತ್ಯ. ನೈತಿಕ ಮೌಲ್ಯ, ಸಾಮಾಜಿಕ ಸಾಮರಸ್ಯ ಸತ್ಯದ ದಾರಿಯಲ್ಲಿ ನಡೆಯುವಾಗ ಎದುರಾಗುವ ಸವಾಲುಗಳನ್ನು ಮೆಟ್ಟಿ ಮುನ್ನಡೆಯುವ ಎದೆಗಾರಿಕೆಯಂಥಹ ಹಲವು ಶಕ್ತಿಗಳ ಸಂಗಮ ವ್ಯಕ್ತಿತ್ವ.

ವಚನಗಳು ಮಾತುಗಳಲ್ಲ ಅನುಭಾವದ ನುಡಿಗಳು. ಅನುಭಾವಿ ಶರಣರ ಈ ಅನುಭವದ ನುಡಿಗಳನ್ನು ನಾವು ಅಳವಡಿಸಿಕೊಂಡರೆ ಮೌಲ್ಯಯುತ ವ್ಯಕ್ತಿತ್ವ ನಮ್ಮದಾಗುತ್ತದೆ ಎಂದು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಿವಶರಣಪ್ಪ ದಬಾ ಮಾತನಾಡಿ, ಕಾಯಕ ನಿಷ್ಠೆಯ ಶರಣರು ಸಾಮಾಜಿಕ ಕ್ರಾಂತಿಕಾರರು. ವಿದ್ಯಾರ್ಥಿಗಳು ಪರಿಶ್ರಮದಿಂದ ಓದಿ ನಿಮ್ಮ ಜೀವನ ಹಾಗೂ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬೇಕು ಎಂದರು.

ದತ್ತಿ ದಾಸೋಹಿ, ನಿವೃತ್ತ ಪ್ರಾಧ್ಯಾಪಕ ಕಲ್ಯಾಣರಾವ ಜಿ. ಪಾಟೀಲ ಮಾತನಾಡಿ ಒತ್ತಡದ ಬದುಕಿಗೆ ವಚನ, ಶರಣರ ಜೀವನ, ಸಂದೇಶಗಳು ನೆಮ್ಮದಿ ತಂದುಕೊಡುತ್ತವೆ. ಹಿರಿಯರು ಬುದ್ದಿವಾದ ಹೇಳಿದರೆ ನಕಾರಾತ್ಮಕ ಯೋಚಿಸಬೇಡಿ. ಸದಾ ಕ್ರಿಯಾಶೀಲತೆಯ ಜೊತೆಗೆ ಪಂಚೇಂದ್ರಿಯಗಳ ಕಾರ್ಯಗಳು ಶುದ್ಧವಾಗಿದ್ದರೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು. ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ ಪ್ರಾಸ್ತಾವಿಕ ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ
ಇದೇ ಸಂದರ್ಭದಲ್ಲಿ ಮೌಂಟ್ ವೇವ್ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅಕ್ಷತಾ ಚಂದ್ರಕಾಂತ, ಪ್ರೀತಿ ಶಿವಶರಣಪ್ಪ, ಕಾವೇರಿ ಅಣ್ಣಪ್ಪ, ಕೀರ್ತಿ ಭರತ, ಸಂಜನಾ ಸಿದ್ದಣ್ಣ, ಚಾಮುಂಡಿ ಸುಭಾಷ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಮಹಾದೇವ ಬಡಾ ಅಧ್ಯಕ್ಷತೆ ವಹಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ತೀರ್ಥಕುಮಾರ ಬೆಳಕೋಟಾ, ಉಪನ್ಯಾಸಕರಾದ ಕುಶ ಮಂಠಾಳ, ಅನಂತಕುಮಾರ ಪಾಟೀಲ, ಡಾ. ಲಕ್ಮೀಕಾಂತ ಪಾಂಚಾಳ ಮುಂತಾದವರಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಅಂಬಾರಾಯ ಮಡ್ಡೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಭವಾನಿ ಕರೆಪ್ಪ ಸ್ವಾಗತಗೀತೆ ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *