ಬಿಜನಳ್ಳಿಯಲ್ಲಿ ‘ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ’ಗೆ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ಸೇಡಂ :

ಬಿಜನಳ್ಳಿ ಗ್ರಾಮದ ಶರಣೆ ಕಲ್ಯಾಣಮ್ಮ – ಹರಳಯ್ಯಾ ದಂಪತಿಗಳು ಬಸವಣ್ಣನವರಿಗೆ ಅರ್ಪಿಸಿದ ಚೆಮ್ಮಾವುಗೆಯ ಈ ಸುಕ್ಷೇತ್ರ ಸರ್ವ ರೀತಿಯಲ್ಲೂ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಕಲಬುರ್ಗಿ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ್ ಹೇಳಿದರು.

ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ “ಕಲ್ಯಾಣ ನಡಿಗೆ ಮತ್ತು ಹರಳಯ್ಯಾ ಜ್ಯೋತಿಯಾತ್ರೆ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣತತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಶರಣತತ್ವ ಸರ್ವರಿಗೂ ತಲುಪಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರು, ಕಾರ್ಯಕ್ರಮದ ರೂವಾರಿಗಳಾದ ಶರಣ ಬಸವಕುಮಾರ ಪಾಟೀಲ ಮಾತನಾಡಿ, ಶರಣರು ನಮಗಾಗಿ ಮಾಡಿದ ತ್ಯಾಗ-ಬಲಿದಾನ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಅವರ ವಚನ ಸಂದೇಶಗಳನ್ನು ಮನೆ-ಮನೆಗೆ, ಮನ-ಮನಕ್ಕೆ ತಲುಪಿಸುವುದು ಇಂದಿನ ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ.

ಈ ಪಾದಯಾತ್ರೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ದೇಶದ ಸತ್ಪಜೆಗಳಾಗುವಂತೆ ಮಾರ್ಗದರ್ಶನ ಮಾಡಲಾಗುತ್ತದೆ. ಕೃಷಿ, ಪರಿಸರ, ಆರೋಗ್ಯ, ಸೌಹಾರ್ದತೆ, ಭಾವೈಕ್ಯತೆ, ಸೇವೆ, ಸಹಕಾರ ಮುಂತಾದ ಮಹತ್ವಪೂರ್ಣ ವಿಷಯಗಳ ಕುರಿತು ಉಪನ್ಯಾಸ ಗೋಷ್ಠಿಗಳು ಏರ್ಪಡಿಸಲಾಗಿದೆ.

ಎಲ್ಲರೂ ಎಲ್ಲರನ್ನು ಪ್ರೀತಿಸುವ ಮತ್ತು ಗೌರವಿಸುವ ವಿಶ್ವ ಕುಟುಂಬತ್ವದ ಭಾವ ಬೆಳೆಸುವುದು, ‘ದುರ್ಗುಣ ದುಶ್ಚಟಗಳ ಭಿಕ್ಷೆ, ಸದ್ಗುಣ ಸನ್ನಡತೆಯ ದೀಕ್ಷೆ’ಯ ಸಂಕಲ್ಪ ಹೊತ್ತು, ದುರ್ಗುಣ ದುಶ್ಚಟಗಳ ಭಿಕ್ಷೆ ಕೇಳುವುದು ಸೇರಿದಂತೆ ಮುಖ್ಯವಾಗಿ ಬಿಜನಳ್ಳಿ ಅಭಿವೃದ್ಧಿಯು ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರತಿದಿನ ಸಾಯಂಕಾಲ ೫ ಗಂಟೆಗೆ ಗ್ರಾಮಸ್ಥರೊಂದಿಗೆ ಗ್ರಾಮದಲ್ಲಿ ‘ಕಲ್ಯಾಣ ನಡಿಗೆ’, ಸಾಯಂಕಾಲ ೬ ಗಂಟೆಗೆ ಸಾರ್ವಜನಿಕ ಸಮಾರಂಭದಲ್ಲಿ ಉಪನ್ಯಾಸ ಕಾರ್ಯಕ್ರಮ, ರಾತ್ರಿ ೮ ಗಂಟೆಗೆ ‘ಕಲ್ಯಾಣ ಕ್ರಾಂತಿ’ ನಾಟಕ  ಜರುಗಲಿದೆ ಎಂದು ತಿಳಿಸಿದರು.

ಪೂಜ್ಯ ಶಂಕರಲಿಂಗ ಸ್ವಾಮೀಜಿ ಧುಮ್ಮನಸೂರ್ ಮಾತನಾಡಿ, ಈ ಪಾದಯಾತ್ರೆ ಸಮಾನತೆಯ ಸಾರುವ ಐತಿಹಾಸಿಕ ನಡಿಗೆಯಾಗಿದೆ. ಎಲ್ಲರೂ ಒಗ್ಗಟ್ಟಾಗಿ  ಲಿಂಗಾಯತ ಧರ್ಮ ಕಟ್ಟಬೇಕು ಎಂದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಬಸವಕಲ್ಯಾಣ ಗುಣತೀರ್ಥವಾಡಿ ಬಸವಪ್ರಭು ಸ್ವಾಮಿಜಿ  ಮಾತನಾಡಿ, ಲಿಂಗಾಯತ ಧರ್ಮೀಯರ ಪವಿತ್ರ ಕ್ಷೇತ್ರ ಬಿಜನಳ್ಳಿ ಗ್ರಾಮವಾಗಿದೆ. ಲಿಂಗಾಯತ ಧರ್ಮಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹರಳಯ್ಯ ದಂಪತಿಗಳು ಇಡೀ ಮನುಕುಲಕ್ಕೆ ಮಾದರಿ.

ಶರಣರ ವಚನ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ನಾಗರಿಕರು ಸದಾ ಕಾಲ ಶ್ರಮಿಸಬೇಕು. ಮೌಲ್ಯಾಧಾರಿತ, ಮಾನವೀಯತೆಯ ಸಂದೇಶ ಸಾರುವ ಕೆಲಸ ಈ ನಡಿಗೆಯ ಮುಖ್ಯ ಉದ್ದೇಶವಾಗಿದೆ. ವಚನ ಸಾಹಿತ್ಯದಲ್ಲಿ ಅನುಭವದ ಸಾಹಿತ್ಯವಿದೆ. ದಯವೇ ಧರ್ಮದ ಮೂಲ ಆಶಯವಿದೆ. ಬಸವಣ್ಣನವರ ಕಾಯಕ ತತ್ವ ಇಡೀ ಜಾಗತಿಕ ಮಟ್ಟಕ್ಕೆ ಪ್ರೇರೇಪಣೆಯಾಗಿದೆ.  ಇತಿಹಾಸ ಮರುಸೃಷ್ಟಿಸುವ ಐತಿಹಾಸಿಕ ನಡಿಗೆ ಈ ಹರಳಯ್ಯಾ ಜ್ಯೋತಿಯಾತ್ರೆಯಾಗಿದೆ ಎಂದರು.

ಸಾಹಿತಿ, ಪ್ರತಿಷ್ಠಾನದ ಪ್ರಮುಖರಾದ ಸಂಗಮೇಶ ಜವಾದಿ ಮಾತನಾಡಿ, ಕಲ್ಯಾಣ ನಡಿಗೆ ಪಾದಯಾತ್ರೆಯು ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಉನ್ನತಿಗೆ ಅತ್ಯಂತ ಪ್ರಮುಖವಾದ ಮಾರ್ಗವಾಗಿದೆ.  ಇದು ದೇಹವನ್ನು ದಂಡಿಸಿ ಮನಸ್ಸಿಗೆ ಸಂತೃಪ್ತಿ ನೀಡುವುದಲ್ಲದೆ, ಪ್ರಕೃತಿಯೊಂದಿಗೆ ಬೆರೆಯುವ ಈ ಚಟುವಟಿಕೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ತಾಳ್ಮೆಯನ್ನು ಕಲಿಸುತ್ತದೆ ಮತ್ತು ಜೀವನದ ಸಕಾರಾತ್ಮಕ ದೃಷ್ಟಿಕೋನವನ್ನು ಮೂಡಿಸುತ್ತದೆ ಎಂದರು.

ಸಮಾರಂಭದಲ್ಲಿ ಮಹಾಂತಪ್ಪ ಸಂಗಾವಿ, ಅಪ್ಪರಾವ ಅಕೋಣೆ, ಕಾಶಿರಾಯ ನಂದೂರಕರ್, ಸಾಹಿತಿ ಸಂಗಮೇಶ ಎನ್. ಜವಾದಿ, ರಾಜು ಕೋಟೆ, ರವೀಂದ್ರ ಶಾಬಾದಿ, ವೀರಣ್ಣಾ ಕೊರಲಳ್ಳಿ, ಶಂಕ್ರಪ್ಪ ಪಾಟೀಲ, ನಳಿನಿ ಮಹಾಗಾಂವಕರ್, ಸೋಮಶೇಖರ ಮಾಲಿಪಾಟೀಲ, ಶಾಂತಲಿಂಗ ಪಾಟೀಲ ಕೋಳಕೂರ, ಪಂಡಿತ ಬಾಳೊರೆ, ಭಗವಂತರಾವ ಪಾಟೀಲ, ರಮೇಶ ಸಲಗರ, ವೈಜನಾಥ ಸಜ್ಜನಶೆಟ್ಟಿ , ಕರಬಸಪ್ಪ ಕಟಗಿ, ಭೀಮಶಾ ಹಜ್ಜರಗಿ, ಬಾಬುರಾವ ಪಾಟೀಲ ಚಿತ್ತಕೊಟಾ, ಶ್ರಾವಣಕುಮಾರ ಹಮ್ಮಿಲಪೂರಕರ್  ಸೇರಿದಂತೆ ಚಿಟಗುಪ್ಪಾ , ಕೊಡಂಬಲ, ಕಲಬುರ್ಗಿ, ಬೀದರ, ಬೆಳಗಾವಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಹಾಗೂ ತೆಲಂಗಾಣ ರಾಜ್ಯದ ಬಸವಭಕ್ತರು, ಬಸವಾಭಿಮಾನಿಗಳು ಉಪಸ್ಥಿತರಿದ್ದರು.

ಯಾತ್ರೆ ಪ್ರಯುಕ್ತ ಶರಣ ಹರಳಯ್ಯ ಮತ್ತು ಕಲ್ಯಾಣಮ್ಮನವರ ಚಮ್ಮಾವುಗೆಗಳ ದೇವಸ್ಥಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಪೂಜ್ಯ ಬಸವಪ್ರಭು ಸ್ವಾಮಿಜಿ ನೇರವೇರಿಸಿದರು.

ಈ ಸಂದರ್ಭದಲ್ಲಿ ಗುರುಮಠಕಲ್ ಪೂಜ್ಯ ಶಾಂತವೀರ ಶ್ರೀಗಳು, ಶಂಕರಲಿಂಗ ಸ್ವಾಮಿಜಿ ಸೇರಿದಂತೆ ಬಸವಕುಮಾರ ಪಾಟೀಲ, ಸಂಗಮೇಶ ಜವಾದಿ ಸೇರಿದಂತೆ ನೂರಾರು ಬಸವಭಕ್ತರು ಹಾಜರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *