ಬೆಂಗಳೂರು:
ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಕೋರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ಅವರ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ, ಸುದ್ದಿ ಪ್ರಕಟ/ಪ್ರಸಾರ ಮಾಡದಂತೆ ವಕೀಲ ಕೆ.ಎನ್.ಜಗದೀಶ್ ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಬೆಂಗಳೂರಿನ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿದೆ.
ನಗರದ ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಾಣಿ.ಎ. ಶೆಟ್ಟಿ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಿ ಆದೇಶ ಹೊರಡಿಸಿದ್ದಾರೆ.
ಬೊಮ್ಮಾಯಿ ಅವರ ಮಾನಹಾನಿ ಆಗುವಂತಹ ಅಂಶಗಳನ್ನೊಳಗೊಂಡ ಎರಡು ಪೋಸ್ಟ್‌ಗಳನ್ನು 24 ಗಂಟೆ ಒಳಗೆ ಅಳಿಸಿಹಾಕಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಮತ್ತು ಸಮನ್ಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟಂಬರ್ 09ಕ್ಕೆ ಮುಂದೂಡಿದ್ದಾರೆ.
ರಾಜಕೀಯ ವಲಯಗಳಲ್ಲಿ ಕುತೂಹಲವೆಬ್ಬಿಸಿರುವ ಈ ಬೆಳವಣಿಗೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ, “ಈ ತಡೆಯಾಜ್ಞೆಗೆ ಕೆ.ಸುಧಾಕರ್ ಕಾರಣವೇ ಅಥವಾ ಸ್ಯಾಂಟ್ರೋ ರವಿ ಕಾರಣವೇ?” ಎಂದು ಪ್ರಶ್ನೆ ಕೇಳಿದೆ.