ನವೆಂಬರ್ 16 ಮೈಸೂರಿನಲ್ಲಿ ಮೊದಲ ಬಾರಿಗೆ ನಿಜಾಚರಣೆ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ

ಕಳೆದ ಆರು ತಿಂಗಳಲ್ಲಿ ಬೃಹತ್ ವಚನ ಕಮ್ಮಟಗಳು ರಾಜ್ಯದ ಹಲವೆಡೆ ನಡೆದಿದೆ. ಸಾಣೇಹಳ್ಳಿ, ಸಿದ್ದಗಂಗಾ ಮತ್ತು ಮುರುಘಾ ಮಠಗಳ ನಂತರ ಈಗ ಮೈಸೂರಿನಲ್ಲಿ ಆಯೋಜಿತವಾಗಿದೆ.

ಮೈಸೂರು

ನವೆಂಬರ್ 16ರಂದು ಜಾಗತಿಕ ಲಿಂಗಾಯತ ಮಹಾಸಭಾದ ಆಶ್ರಯದಲ್ಲಿ ಒಂದು ದಿನದ ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆ ಕಮ್ಮಟ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಂಚಗವಿ ಮಠದಲ್ಲಿ ನಡೆಯಲಿದೆ.

ಮೈಸೂರು ನಗರದಲ್ಲಿ ನಿಜಾಚರಣೆ ಕಮ್ಮಟ ನಡೆಯುತ್ತಿರುವುದು ಇದೇ ಮೊದಲು. ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಸುಮಾರು 500 ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹಾದೇವಪ್ಪ ಹೇಳಿದರು.

ಭೂ ಹಗರಣಕ್ಕೆ ಸಿಲುಕಿಕೊಂಡು ವಿರಕ್ತ ಸಂಪ್ರದಾಯದ ಪಂಚಗವಿ ಮಠ 2020ರಲ್ಲಿ ಸರಕಾರಕ್ಕೆ ಹಸ್ತಾಂತರವಾಯಿತು. ಮೈಸೂರು ಮಹಾರಾಜರ ಆಶ್ರಯದಲ್ಲಿ ಅಭಿವೃದ್ದಿಯಾಗಿದ್ದ ಮಠದ ಭೂಮಿ ಅನಧಿಕೃತವಾಗಿ ಬಡಾವಣೆಗಳಾಗಿ ಪರಿವರ್ತನೆಯಾದ ಮೇಲೆ ಸರಕಾರ ತನಿಖೆ ಆರಂಭಿಸಿ ಆಡಳಿತಾಧಿಕಾರಿಯನ್ನು ನೇಮಿಸಿದೆ. ಸರಿಯಾದ ನಿರ್ವಹಣೆಯಿಲ್ಲದೆ ಮಠದ ಭವ್ಯವಾದ ಕಟ್ಟಡದ ಒಂದು ಭಾಗ ಮೂರು ವರ್ಷದ ಹಿಂದೆ ಮಳೆಗೆ ಕುಸಿದಿತ್ತು.

ಹಗರಣದ ನಂತರ ಮೊದಲನೇ ಬಾರಿ ಮಠದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಭಕ್ತಾದಿಗಳಲ್ಲಿ ಹೊಸ ಉತ್ಸಾಹ ತುಂಬಿದೆ, ಹತ್ತಿರದ ಗೌರಿ ಶಂಕರದ ನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಆಗಮಿಸಲಿದ್ದಾರೆ ಎಂದು ಮಹಾದೇವಪ್ಪ ಹೇಳಿದರು.

ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಯವರು ಕೆಲವು ವರ್ಷಗಳ ಹಿಂದೆ ಅಜ್ಜಂಪುರ ಶೆಟ್ರು ಸೇವಾ ಸಮಿತಿಯ ವತಿಯಿಂದ ಹುಲ್ಲಹಳ್ಳಿಯ ಸಂಗಮದಲ್ಲಿ ನಿಜಾಚರಣೆಯ ಕಮ್ಮಟ ನಡೆದಿತ್ತೆಂದು ಸ್ಮರಿಸಿಕೊಂಡರು. ಇಷ್ಟು ದೊಡ್ಡ ಕಮ್ಮಟ ಈಗ ನಗರದಲ್ಲಿ ನಡೆಯುತ್ತಿರುವುದು ಮೈಸೂರು ಪ್ರಾಂತ್ಯದಲ್ಲಿ ಬಸವ ತತ್ವದ ಬಗ್ಗೆ ಮೂಡುತ್ತಿರುವ ಜಾಗೃತಿಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಕಳೆದ ಆರು ತಿಂಗಳಲ್ಲಿ ಬೃಹತ್ ವಚನ ಕಮ್ಮಟಗಳು ರಾಜ್ಯದ ಹಲವೆಡೆ ನಡೆದಿದೆ. ಸಾಣೇಹಳ್ಳಿ, ಸಿದ್ದಗಂಗಾ ಮತ್ತು ಮುರುಘಾ ಮಠಗಳ ನಂತರ ಈಗ ಮೈಸೂರಿನಲ್ಲಿ ಆಯೋಜಿತವಾಗಿದೆ.

ನವಂಬರ್ 16ರಂದು ಬೆಳಿಗ್ಗೆ ಕಮ್ಮಟದ ಉದ್ಘಾಟನೆಯನ್ನು ನೀಲಕಂಠಸ್ವಾಮಿ ಮಠದ ಪೂಜ್ಯ ಸಿದ್ದಮಲ್ಲ ಮಹಾಸ್ವಾಮಿಗಳು ನೆರವೇರಿಸಲಿದ್ದು, ಸಾನಿಧ್ಯವನ್ನು ಹೊಸಮಠದ ಚಿದಾನಂದ ಮಹಾಸ್ವಾಮಿಗಳು ಮತ್ತು ಕುದೇರುಮಠದ ಗುರುಶಾಂತ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಂಚಗವಿಮಠದ ಆಡಳಿತಾಧಿಕಾರಿ ಕೆ.ಆರ್. ರಕ್ಷಿತ್ ಭಾಗವಹಿಸಲಿದ್ದಾರೆ.

ನಂತರ ಅಷ್ಟಾವರಣ ಮತ್ತು ಪಂಚಾಚಾರಗಳ ಸ್ಥೂಲ ಪರಿಚಯ, ಲಿಂಗಾಯತ ಧರ್ಮದ ಆಚರಣೆಗಳು ಮತ್ತು ಸಂಸ್ಕಾರದ ಪರಿಚಯ, ಕಲ್ಯಾಣ ಮಹೋತ್ಸವದ ಚಿಂತನ ಹಾಗೂ ಕಾರ್ಯವಿಧಾನ, ಗರ್ಭಕ್ಕೆ ಲಿಂಗಧಾರಣೆ ಮತ್ತು ನಾಮಕರಣ, ಷಟಸ್ಥಲ ಸಿದ್ಧಾಂತ, ಅಂತ್ಯ ಸಂಸ್ಕಾರ ಮತ್ತು ಸ್ಮರಣೋತ್ಸವ, ಮತ್ತಿತರ ಆಚರಣೆಗಳು ಮತ್ತು ಸಂಸ್ಕಾರಗಳು ಕುರಿತು ಪ್ರಾತ್ಯಕ್ಷಿಕೆ ಮತ್ತು ಪಾಠಗಳು ಜರುಗಲಿವೆ. ಸಂಜೆ ಪೂಜ್ಯ ಶ್ರೀ ಬಸವ ಯೋಗಿ ಪ್ರಭುಗಳು ಸಮಾರೋಪ ನುಡಿಗಳನ್ನು ಹೇಳಲಿದ್ದಾರೆ.

ವಚನಮೂರ್ತಿಗಳಾದ ಪಿ. ರುದ್ರಪ್ಪ, ಮಡಿವಾಳಪ್ಪ ಸಂಗೊಳ್ಳಿ, ಎಸ್.ಎನ್. ಅರಬಾವಿ ಶರಣರು ಕಮ್ಮಟ ನಡೆಸಿಕೊಡಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕಾರ್ಯದರ್ಶಿ ಬಿ.ಎಂ. ಮರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಈ. ಜ್ಯೋತಿ ರೇಚಣ್ಣ, ಕಾರ್ಯದರ್ಶಿ ಉಷಾ ನಾಗೇಶ ಅವರುಗಳು ಕೋರಿದ್ದಾರೆ.

Share This Article
4 Comments
  • ಲಿಂಗಾಯತ ಧರ್ಮ ಸಂರಕ್ಷಿಸಿ, ಬಸವಾದಿ ಶರಣರ ಮಾರ್ಗದಲ್ಲಿ ಸಮುದಾಯ ಕೊಂಡೊಯ್ಯುವುದೇ ಜಾತಿಕ ಲಿಂಗಾಯತ ಮಹಾಸಭೆ ಸದುದ್ದೇಶ. ಕಾರ್ಯಕ್ರಮ ನಡೆಯುವ ಪಂಚಗವಿ ಮಠ ನಗರದ ಅತಿಪ್ರಾಚೀನ ವಿರಕ್ತ ಮಠವಾಗಿದ್ದು ಅರಮನೆ ರಾಜ ಗುರುಗಳಾಗಿದ್ದ ಶ್ರೀ ಗೌರಿಶಂಕರ ಮಹಾಸ್ವಾಮಿಗಳು ಮಠಾಧೀಶರಾಗಿ ಕರ್ನಾಟಕದ ಅಂದಿನ ಮಠಾಧೀಶರಿಗೆಲ್ಲ ಗುರುಗಳಾಗಿದ್ದವರು. ಅವರ ಅಕಾಲ ಮರಣದ ನಂತರ ಇಲ್ಲ ಸಲ್ಲದ ವ್ಯಾಜ್ಯಗಳು ಪ್ರಾರಂಭವಾಗಿ ದುರಾಡಳಿತಗಳಿಂದ ಮಠದ ಆಸ್ತಿಪಾಸ್ತಿ ಹಾಳಾಗಿದ್ದು ಈ ಕಾರ್ಯಕ್ರಮದ ನಂತರ ಸಮಾಜಕ್ಕೆ ಇದರ ರಕ್ಷಣೆ ಮತ್ತು ಅಭಿವೃದ್ದಿಗೆ ಶ್ರಮಿಸುವ ಭರವಸೆ ಬಂದಿದೆ.

  • ಇಂತಹ ನಿಜಾಚರಣೆ ಎಲ್ಲೆಡೆ ಪಸರಿಸಿ ಬಸವ ತತ್ತ್ವವನ್ನು ಮತ್ತು ಸಿದ್ಧಾಂತಗಳನ್ನು ಜನಾನುರಾಗಿ ಮಾಡಬೇಕಾಗಿದೆ ಆ ಮೂಲಕ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ.

Leave a Reply

Your email address will not be published. Required fields are marked *