ಮಸ್ಕಿ
ಅಷ್ಟಾವರಣ, ಷಟ್ಸ್ಥಲ, ಮತ್ತು ಪಂಚಾಚಾರಗಳು ಬಸವ ಧರ್ಮದ ತಳಹದಿ. ಇವುಗಳನ್ನು ಪಾಲನೆ ಮಾಡುವುದೇ ಸನ್ಮಾರ್ಗ ಎಂದು ಶರಣ ಮಂಜುನಾಥ ನೇಗಿಹಾಳ ಹೇಳಿದರು.
ಅವರು ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹೋಗರನಾಳ ಗ್ರಾಮದಲ್ಲಿ ನಡೆದ ಶರಣರ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಈ ವಿಶ್ವದಲ್ಲಿ ಅನಂತ ಜಗತ್ತುಗಳಿವೆ, ಅನಂತ ಗ್ಯಾಲಾಕ್ಷಿಗಳಿವೆ. ಇದೆಲ್ಲವನ್ನು ಸೃಷ್ಟಿಸಿದಾತ ದೇವರು. ಇದರ ಅಧ್ಯಯನ 12 ವರ್ಷಗಳ ಕಾಲ ನಡೆದು ಲಿಂಗದ ಸಂಶೋಧನೆಯಾಯಿತು. ಅದನ್ನು ಅಪ್ಪ ಬಸವ ತಂದೆ ನಮ್ಮ ನಿಮ್ಮೆಲ್ಲರಿಗೆ ದಯಪಾಲಿಸಿದರು.
ಶರಣ ಮಾರ್ಗದಲ್ಲಿ ಬೇಡಿಕೊಳ್ಳುವ ದೇವರಿಗೆ ಆಮಿಷ ತೋರುವ ಪದ್ದತಿ ಇಲ್ಲ. ನಾವು ಕಾಯಕ ಮಾಡಬೇಕು, ಬಂದದ್ದನ್ನು ಸ್ವೀಕರಿಸಿ ಬಾರದ್ದಕ್ಕೆ ಚಿಂತಿಸಬಾರದು. ಬೇನೆ ಬಂದರೆ ನರಳಿ, ವ್ಯಾದಿ ಬಂದರೆ ಒರಲಿ, ಸಾವು ಬಂದರೆ ಸತ್ತುಹೋಗಬೇಕು ಎಂದು ಶರಣರು ನುಡಿದಿದ್ದಾರೆ.
ನಮ್ಮ ಅರಿವು ನಮಗೆ ಗುರುವಾಗಬೇಕು. ನಮ್ಮ ತಪ್ಪುಗಳು ನಮಗೆ ಗೊತ್ತಾಗಬೇಕು. ಆ ಅರಿವು ನೆಲೆ ನಿಂತಾಗ ಮಾತ್ರ ಅದು ಗುರುವಾಗುತ್ತದೆ. ದೇವರ ಇರುವಿಕೆ ಎಲ್ಲರಲ್ಲಿಯೂ ಇದೆ. ನಿರಾಕಾರದ ನೆಲೆ ನಮ್ಮಲ್ಲಿ ಅವ್ಯಕ್ತವಾಗಿದೆ. ಬಾಹ್ಯ ಪ್ರಪಂಚದಲ್ಲಿ ದೇವರು ಅಗಮ್ಯ, ಅಗೋಚರ, ಅಪ್ರತಿಮವಾಗಿದ್ದಾನೆ, ಅಖಂಡವಾಗಿದ್ದಾನೆ.
ಮರದೊಳಗೆ ಬೆಂಕಿಯಿದೆ ಆದರೆ ಉರಿಯೋದಿಲ್ಲ, ಹಾಲಿನಲ್ಲಿ ತುಪ್ಪವಿದೆ ಆದರೆ ಸ್ವಾದ ಕಾಣೋದಿಲ್ಲ. ಶರೀರದೊಳಗೆ ಆತ್ಮವಿದೆ ಆದರೆ ಅದು ಅಗೋಚರ. ಅಲ್ಲೆಲ್ಲ ಅಡಗಿರುವ ವಸ್ತುಗಳನ್ನು ಹೊರತೆಗೆಯಲು ಕ್ರಿಯೆ ಬೇಕು. ಹಾಗೆಯೇ ದೇವರನ್ನು ಕಂಡುಕೊಳ್ಳಲು ಕ್ರಿಯಾ ವಿಧಾನಗಳು ಮುಖ್ಯ ! ಸಾಕಾರ ನಿರಾಕಾರದ ನೆಲೆಯಲ್ಲಿ ಶಿವನಿದ್ದಾನೆ.
ನಮ್ಮ ದೇಹ ಸ್ಥಾವರ ಜೀವ ಅಥವಾ ಪ್ರಾಣ ಜಂಗಮ. ಸ್ಥಾವರ ಜಂಗಮ ಒಂದನ್ನು ಬಿಟ್ಟು ಒಂದು ಇಲ್ಲ. ಹಣ್ಣಿನಲ್ಲಿ ರುಚಿಯುಂಟು ಕಣ್ಣಿಗೆ ಕಾಣೊದಿಲ್ಲ ಹಾಗೆಯೇ ಜಂಗಮ.
ಬಸವಣ್ಣನವರ ದೃಷ್ಟಿ ಪರುಷ, ನುಡಿ ಪರುಷ, ಹಸ್ತ ಪರುಷ, ಹೀಗೆ ಪಂಚ ಪರುಷ ಗಳಿಂದ ಮನುಷ್ಯನಲ್ಲಿನ ಕೆಟ್ಟ ಭಾವನೆ ದೂರವಾಗುತ್ತಿತ್ತು. ತಮ್ಮ ಸ್ಪರ್ಶದಿಂದ ಬೇಡುವವರನ್ನು, ಕಾಡುವವರನ್ನು ಇಲ್ಲವಾಗಿಸಿದರು. ಬೇಡುವವರಿಲ್ಲದೆ ಕಾಡುವವರಿಲ್ಲದೆ ನಾನು ಬಡವನಾದೇನಯ್ಯ ಎಂದು ಅಪ್ಪ ಬಸವ ತಂದೆ ಹೇಳಿದ್ದಾರೆಂದು ವಿವರಿಸಿದರು.
ವಚನ ಪ್ರಾರ್ಥನೆಯನ್ನು ಬಸವರಾಜ ವರದಾಪುರ ಮತ್ತು ಸಂಗೀತ ಬಳಗದಿಂದ ನಡೆಯಿತು. ಪ್ರಾಸ್ತಾವಿಕವಾಗಿ ಅನಿತಾ ವರದಾಪುರ ಮಾತನಾಡಿದರು.
ವೇದಿಕೆಯಲ್ಲಿ ಶರಣಪ್ಪ ಸಾಹುಕಾರ ತುರ್ವಿಹಾಳ, ಸಿದ್ದಯ್ಯ ಸ್ವಾಮಿಗಳು, ಬಸವಲಿಂಗಪ್ಪ ಬಾದರ್ಲಿ, ಬಸವರಾಜಪ್ಪಣ್ಣ ಕುರಕುಂದಿ, ಶರಣಪ್ಪಣ್ಣ ತೆಂಗಿನಕಾಯಿ ಉಪಸ್ಥಿತರಿದ್ದರು. ಗ್ರಾಮದ ನೂರಾರು ಬಸವ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.