ಸಡಗರದ ಬಸವ ಸಂಸ್ಕೃತಿ ಅಭಿಯಾನ: ಸಿದ್ಧವಾಗುತ್ತಿದೆ ರೂಪುರೇಷೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಮುಖ್ಯಾಂಶಗಳು: ಹೈ ಟೆಕ್ ಬಸವ ರಥ, ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ, ಎರಡು ಹಂತದ ಅಭಿಯಾನ

ಧಾರವಾಡ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಸಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ‘ಬಸವ ಸಂಸ್ಕೃತಿ ಅಭಿಯಾನ’ದ ರೂಪುರೇಷೆ ಸಿದ್ಧವಾಗುತ್ತಿದೆ.

ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ, ಸಾಕಷ್ಟು ಬಿನ್ನಾಬಿಪ್ರಾಯಗಳೂ ಇವೆ. ಆದರೆ ಈ ಅಭಿಯಾನವನ್ನು ರೂಪಿಸುತ್ತಿರುವ ಹಲವಾರು ವ್ಯಕ್ತಿಗಳ ಜೊತೆ ಬಸವ ಮೀಡಿಯಾ ಮಾತನಾಡಿದಾಗ ಒಂದು ಸ್ಪಷ್ಟ ಚಿತ್ರಣ ಸಿಕ್ಕಿತು.

ಬಸವನ ಬಾಗೇವಾಡಿಯಲ್ಲಿ ಅಭಿಯಾನ ಶುರುವಾಗಲಿದೆ. ನಂತರ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಿರ್ದಿಷ್ಟ ದಿನಗಳಲ್ಲಿ ನಡೆಯಲಿದೆ. ಯಾವ ಯಾವ ಜಿಲ್ಲೆಗಳಲ್ಲಿ ಯಾವಾಗ ಅಭಿಯಾನ ನಡೆಯಬೇಕೆಂದು ನಿರ್ಧಾರವಾಗಿದೆ.

ಎರಡು ಹಂತಗಳು

ಒಬ್ಬ ಪ್ರಮುಖರ ಪ್ರಕಾರ ಅಭಿಯಾನ ಎರಡು ಹಂತಗಳಲ್ಲಿ ನಡೆಯಲಿದೆ. ಪೂವಭಾವಿಯಾಗಿ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ವಚನ ಕಂಠಪಾಠಗಳಂತಹ ಸ್ಪರ್ಧೆಗಳು ಚಟುವಟಿಕೆಗಳು ನಡೆಸುವ ಆಲೋಚನೆಯಿದೆ.

ಅಭಿಯಾನದ ದಿನ ಬೆಳಗ್ಗೆ ಸ್ಥಳೀಯ ಶರಣ ಸಮುದಾಯದ ಜೊತೆ ಸಂವಾದವಿರುತ್ತದೆ. ವಿದ್ಯಾಥಿಗಳು, ಯುವಕರು, ಮಹಿಳೆಯರಿಗೆ ವಿಶೇಷ ಆಹ್ವಾನವಿರುತ್ತದೆ. ಶರಣ ಸಂಸ್ಕೃತಿ, ಇತಿಹಾಸ, ವಚನ ಸಾಹಿತ್ಯ, ಲಿಂಗಾಯತ ಧರ್ಮದ ಹೋರಾಟ ಮುಂತಾದವುಗಳ ಬಗ್ಗೆ ಪ್ರಶ್ನೆ ಕೇಳುವ ಅವಕಾಶವಿರುತ್ತದೆ.

ಮಠಾಧಿಪತಿಗಳ ಒಕ್ಕೂಟದ ಪ್ರತಿನಿಧಿಗಳು, ಶರಣ ತತ್ವ ಚಿಂತಕರು ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.

“ನಮ್ಮದು ಕುರುಡು ನಂಬಿಕೆಯ ಧರ್ಮವಲ್ಲ. ನಮ್ಮ ತತ್ವ, ಇತಿಹಾಸ, ಸಂಸ್ಕೃತಿ, ಪರಂಪರೆಯ, ಮುಂದಿರುವ ಸವಾಲುಗಳ ಬಗ್ಗೆ ಸಮಾಜದಲ್ಲಿ ಅರಿವು, ಕುತೂಹಲ ಮೂಡಿಸುವುದು ಮುಖ್ಯ ಉದ್ಧೇಶ. ಈ ರೀತಿಯ ಸಂವಾದವನ್ನು ಜಿಲ್ಲಾ ಸಂಘಟನೆಗಳು ಮುಂದುವರೆಸಿಕೊಂಡು ಹೋಗಬೇಕು. ಅರಿವಿನ ಮೂಲಕ ಬೆಳೆಸಬೇಕಾಗಿರುವ ಧರ್ಮ ನಮ್ಮದು,” ಎಂದು ಅವರು ಹೇಳಿದರು.

ವಚನ ಮೆರವಣಿಗೆ

ಅದೇ ದಿನ ಮದ್ಯಾಹ್ನ ಮೂರು ಅಥವಾ ನಾಲ್ಕು ಗಂಟೆಗೆ ಸಾವಿರಾರು ಜನ ಸೇರಿಸಿ ಇಡೀ ಜಿಲ್ಲೆಯ ಗಮನ ಸೆಳೆಯುವಂತಹ ವಚನ ಮೆರವಣಿಗೆ ನಡೆಯಲಿದೆ. ವಚನ ಕಟ್ಟುಗಳು, ಶರಣ ವೇಷಧಾರಿಗಳು, ಕಲಾ ತಂಡಗಳು, ವಚನ ಗಾಯಕರು, ಲಿಂಗಾಯತ ಧರ್ಮದ ಭಿತ್ತಿಪತ್ರಗಳು
ಮೆರವಣಿಗೆಯ ಭಾಗವಾಗಲಿದೆ.

ವೇದಿಕೆ ಕಾರ್ಯಕ್ರಮ

ಮೆರವಣಿಗೆಯ ನಂತರ ವೇದಿಕೆ ಕಾರ್ಯಕ್ರಮ. ವಿಶೇಷವಾಗಿ ಆಹ್ವಾನಿತರಾಗಿರುವ ಚಿಂತಕರಿಂದ ಎರಡು ಅಥವಾ ಮೂರು ವಿಷಯಗಳ ಮೇಲೆ ಉಪನ್ಯಾಸವಿರುತ್ತದೆ.

ಲಿಂಗಾಯತ ಧರ್ಮದ ಮೇಲೆ ಜಾಗೃತಿ ಮೂಡಿಸುವುದು ಈ ವಿಷಯಗಳ ಮೂಲ ಉದ್ದೇಶ. ಸಾಂಸ್ಕೃತಿಕ ನಾಯಕ, ಸ್ವತಂತ್ರ ಧರ್ಮ ಮುಂತಾದ ವಿಷಯಗಳ ಮೇಲೆ ಉಪನ್ಯಾಸ ನಡೆಯಬಹುದು.

“ವಿಷಯಗಳ ಪಟ್ಟಿ ಇನ್ನೂ ಸಿದ್ಧವಾಗುತ್ತಿದೆ. ವಿದ್ವಾಂಸರ, ಚಿಂತಕರ ಪಟ್ಟಿಯೂ ಸಿದ್ಧವಾಗಬೇಕು. ವಿಷಯ ಮತ್ತು ಉಪನ್ಯಾಸ ನೀಡುವವರು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗಬಹುದು,” ಎಂದು ಒಬ್ಬರು ಹೇಳಿದರು.

ಉಪನ್ಯಾಸದ ನಂತರ ಒಕ್ಕೂಟದ ಪ್ರತಿನಿಧಿಯಾಗಿ ಬರುವ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. “ಕೆಲವು ಸ್ವಾಮೀಜಿಗಳಿಗೆ ಬಹಳ ಜಿಲ್ಲೆಗಳಿಂದ ಬೇಡಿಕೆಯಿದೆ. ಆದರೆ ಕೆಲವರೇ ಎಲ್ಲ ಕಡೆ ಹೋಗಲು ಸಾಧ್ಯವಿರುವುದಿಲ್ಲ. ಎಲ್ಲಾ ಶ್ರೀಗಳು ಒಂದು ತಿಂಗಳು ಪೂರ್ತಿ ಮಠ ಬಿಟ್ಟು ಸಮಾಜಕ್ಕೆ ದುಡಿಯಲು ಬಂದರೆ ದೊಡ್ಡ ಸಂದೇಶ ಹೋಗುತ್ತದೆ,” ಎಂದು ಒಬ್ಬರು ಹೇಳಿದರು.

ನಂತರ ಬಹುಮಾನ ವಿತರಣೆ ಮತ್ತು ವಚನ ಗಾಯನ, ನೃತ್ಯಗಳಂತಹ ಸಾಂಸ್ಕೃತಿಕ ಕಾರ್ಯಕ್ರಮ. ನಂತರ ಪ್ರಸಾದ.

ಫೈಲ್ ಫೋಟೋ

ಅಭಿಯಾನಕ್ಕೆ ಸಂಬಂಧಿಸಿದ ಹಲವರ ಮಾತಿನಲ್ಲಿ ಕೇಳಿಸಿದ ಇತರ ಕೆಲವು ವಿಷಯಗಳು:

ಬೆಂಗಳೂರು

ಬೆಂಗಳೂರಿನ ಅಭಿಯಾನದಲ್ಲಿ ವಚನ ಮೆರವಣಿಗೆಗೆ ಒತ್ತು ಕೊಡಲಾಗುವುದು. ಅಕ್ಕ ಪಕ್ಕದ ಜಿಲ್ಲೆಗಳಿಂದ ಸುಮಾರು 25,000 ಜನ ಸೇರಿಸಿ ಭಾರಿ ಮೆರವಣಿಗೆ ನಡೆಸುವ ಯೋಜನೆಯಿದೆ. ಸರಕಾರದ ಗಮನವೂ ಸೆಳೆಯುವಂತಹ ಶಕ್ತಿ ಪ್ರದರ್ಶನ ನಡೆಯಬೇಕು. ರಾಜಧಾನಿಯಲ್ಲಿ ಎಲ್ಲಿ ಕಾರ್ಯಕ್ರಮ ನಡೆಸಬೇಕೆನ್ನುವುದು ಇನ್ನೂ ನಿರ್ಧಾರವಾಗಿಲ್ಲ.

ಒಕ್ಕೂಟದ ನೇತೃತ್ವ

ಅಭಿಯಾನ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯಲಿದೆ. ವೇದಿಕೆ, ಕರಪತ್ರ, ಬ್ಯಾನರ್ ಎಲ್ಲದರಲ್ಲಿಯೂ ಓಕ್ಕೂಟದ ಹೆಸರು ಮಾತ್ರವಿರುತ್ತದೆ. ಒಕ್ಕೂಟದ ಹೆಸರಿನಲ್ಲಿ ಎಲ್ಲ ಬಸವ ಸಂಘಟನೆಗಳು ಕೈ ಜೋಡಿಸಿ ದುಡಿಯುತ್ತವೆ.

“ಇದು ಒಳ್ಳೆಯ ಬೆಳವಣಿಗೆ. ಒಕ್ಕೂಟದ ಹೆಸರೇ ಎಲ್ಲ ಕಡೆ ಕಾಣಿಸುವುದರಿಂದ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಭಾಗವಹಿಸಬಹುದು. ಪರಸ್ಪರ ಪ್ರತಿಷ್ಠೆಯ ಪ್ರಶ್ನೆಯೇ ಬರುವುದಿಲ್ಲ,” ಎಂದು ಒಬ್ಬರು ಹೇಳಿದರು.

ಆಯೋಜನೆ

ಅಭಿಯಾನವನ್ನು ಆಯೋಜಿಸಲು ಜಿಲ್ಲೆಗಳಲ್ಲಿ ಎಲ್ಲಾ ಬಸವ ಸಂಘಟನೆಗಳ ಸಮಿತಿ ರಚಿಸಲಾಗುವುದು. ಸಮಿತಿಯ ಸದಸ್ಯರು ಅಭಿಯಾನವನ್ನು ನಡೆಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.

ಜಿಲ್ಲಾ ಮಠಾಧಿಪತಿಗಳ ಸಮಿತಿ

ಪ್ರತಿ ಜಿಲ್ಲೆಯಲ್ಲಿಯೂ ಬಸವ ತತ್ವಕ್ಕೆ ಒಲವಿರುವ ಮಠಾಧಿಪತಿಗಳ ಸಮಿತಿಯನ್ನು ಒಕ್ಕೂಟ ರಚಿಸಬೇಕೆಂದು ಹಲವರು ಸಲಹೆ ಮಾಡಿದ್ದಾರೆ.

“ಜಿಲ್ಲೆಗಳಲ್ಲಿರುವ ಬಸವ ತತ್ವದ ಸ್ವಾಮೀಜಿಗಳನ್ನು ಮುನ್ನೆಲೆಗೆ ತರಲು ಇದು ನೆರವಾಗುತ್ತದೆ. ಜಿಲ್ಲಾ ಮಠಾಧಿಪತಿಗಳ ಸಮಿತಿ ಕೈ ಜೋಡಿಸಿದರೆ ಅಭಿಯಾನ ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದು. ಅಭಿಯಾನ ಮುಗಿದ ಮೇಲೂ ಸಂಘಟನೆ, ಕೆಲಸ ಮುಂದುವರೆಸಲು ಇದರಿಂದ ಸಾಧ್ಯವಾಗುತ್ತದೆ,” ಎಂದು ಒಬ್ಬರು ಹೇಳಿದರು.

“ಆದರೆ ಇದು ಸದ್ಯಕ್ಕೆ ಚರ್ಚೆಯ ಹಂತದಲ್ಲಿದೆ. ಈ ಸಮಿತಿ ರಚಿಸುವ ವಿಷಯದಲ್ಲಿ ಹಿಂಜರಿಕೆಯೂ ಇದೆ. ಇದು ನಡೆದರೆ ಒಳ್ಳೆಯದು,” ಎಂದು ಅವರೇ ಹೇಳಿದರು.

ಫೈಲ್ ಫೋಟೋ

ಸಂಘಟನೆಯಿಲ್ಲದ ಜಿಲ್ಲೆಗಳು

ಕೆಲವು ಜಿಲ್ಲೆಗಳಲ್ಲಿ ಬಸವ ಸಂಘಟನೆಗಳು ಕಡಿಮೆ ಸಂಖ್ಯೆಯಲ್ಲಿವೆ. ಅಲ್ಲಿ ಅಕ್ಕ ಪಕ್ಕದ ಜಿಲ್ಲೆಗಳಿಂದ ಜನರನ್ನು ಸೇರಿಸಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸುವ ಯೋಜನೆಯಿದೆ.

ಹೈಟೆಕ್ ಬಸವ ರಥ

ಕೊನೆಯದಾಗಿ ಹೈಟೆಕ್ ಬಸವ ರಥ ಅಭಿಯಾನದ ಮುಖ್ಯ ಆಕರ್ಷಣೆಯಾಗಲಿದೆ. ಬಸವಣ್ಣನವರ ಮೂರ್ತಿ, ವಚನಗಳು, ಶರಣರ ಚಿತ್ರಗಳು, ಲಿಂಗಾಯತ ಧರ್ಮದ ಬಿತ್ತಿ ಪತ್ರಗಳು, ವಿಶೇಷ ಬೆಳಕು, ಶಬ್ದ ಸಂಯೋಜನೆಯೊಂದಿಗೆ ಶರಣ ತತ್ವವನ್ನು ಇದು ಪ್ರಸಾರ ಮಾಡಲಿದೆ.

ಬಸವ ರಥ ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FfnvVrZr7jWFggbitEJjky

Share This Article
5 Comments
    • ಬಸವ ಸಂಸ್ಕೃತಿ ಅಭಿಯಾನ ನಡೆಸುತ್ತಿರುವುದು ಬಹಳ ಸಂತೋಷದ ವಿಷಯ ನಾನು ಸಹ ಬಸವ ಸಂಸ್ಕೃತಿ ಅಭಿಯಾನಕ್ಕೆ ಸಾಧ್ಯವಾದಷ್ಟು ತನು ಮನ ಧನ ದಿಂದ ಸಹಕಾರ ನೀಡುತ್ತೇನೆ ಇಂತಿ ಬಸವ ಅಭಿಮಾನಿ ಅಬ್ದುಲ್ ಕರೀಂ ಸಾಬ್ ಕವಿತಾಳ 584120 ತಾಲೂಕ ಸಿರವಾರ ಜಿಲ್ಲಾ ರಾಯಚೂರು ೯೭ ೩೧೧ ೯೩ ೨೩೧ 9731193231

  • ಸಾಂಸ್ಕೃತಿಕ ನಾಯಕ ಬಸವ ಸಂಸ್ಕೃತಿ ಅಭಿಯಾನವನ್ನು ಬರಿ ಚರ್ಚೆಯಲ್ಲಿಯೇ ಮುಗಿಸದೆ ದಯವಿಟ್ಟು ಕಾರ್ಯರೂಪದಲ್ಲಿ ಕ್ಷಿಪ್ರಗತಿಯಲ್ಲಿ ತರಲು ಎಲ್ಲರೂ ಕೈಜೋಡಿಸುವುದು ಆದ್ಯ ಕರ್ತವ್ಯವಾಗಿದೆ. ಎಲ್ಲೆಡೆಯೂ ಬಸವ ಕಹಳೆ ಮೊಳಗಲಿ ಬರಿ ಸಾಂಸ್ಕೃತಿಕ ನಾಯಕ ಎನ್ನುವ ಘೋಷಣೆ ಸಾಲದು ಬಸವ ತತ್ವ ಚಿಂತನೆ ವಿಶ್ವ ಮಟ್ಟಕ್ಕೆ ಪಸರಿಸುವ ಹೊಣೆ ಎಲ್ಲರಮೇಲಿರಲಿ.

  • How can we contribute or participate in this event? Like many other I also need more understanding about Basava philosophy. Looking forward to hearing from you. Regards

Leave a Reply

Your email address will not be published. Required fields are marked *