ಬುದ್ಧ, ಬಸವ, ಅಂಬೇಡ್ಕರ್, ಬಾಬು ಜಗಜೀವನರಾಮ್ ಜಯಂತಿ ಆಚರಣೆ
ಕಲಬುರಗಿ
ನಿನಗೆ ನೀನೆ ಬೆಳಕು ಎಂದು ಹೇಳಿದ ಬುದ್ಧ, ದಯವೇ ಧರ್ಮದ ಮೂಲ ಎಂದು ಹೇಳಿದ ಬಸವಣ್ಣ, ಶಿಕ್ಷಣ ವಿಮೋಚನೆಯ ಅಸ್ತ್ರವಾಗಬೇಕು ಎಂದು ಹೇಳಿದ ಡಾ. ಅಂಬೇಡ್ಕರ್ ಅವರ ವಿಚಾರಗಳು ನಮ್ಮ ಬದುಕಾಗಬೇಕು ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.
ನಗರದ ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಗ್ರೀನ್ ಪಾರ್ಕ್ ನಿವಾಸಿಗಳ ಸಂಘದ ಆಶ್ರಯದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ ಅವರ ಜಯಂತಿ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಬ್ಬಿಣ, ಕಂಕರ್, ನೀರು ಕೂಡಿದರೆ ಕಾಂಕ್ರಿಟ್ ಆಗುವಂತೆ ಎಲ್ಲ ಜಾತಿ, ಧರ್ಮದವರು ಸೇರಿ ಸಮತೆಯ ಕಟ್ಟಡ ಕಟ್ಟಬೇಕು. ಬುದ್ಧ ಹಚ್ಚಿದ್ದು ಶಾಂತಿಯ ದೀಪ, ಬಸವಣ್ಣ ಹಚ್ಚಿದ್ದು ಕ್ರಾಂತಿಯ ದೀಪ, ಅಂಬೇಡ್ಕರ್ ಹಚ್ಚಿದ್ದು ಜ್ಞಾನದ ದೀಪ. ಈ ದೀಪಗಳ ಬೆಳಕಿನಲ್ಲಿ ನಮ್ಮ ಬದುಕಿನ ದೀಪ ಬೆಳಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಸವಕಲ್ಯಾಣ ಬಸವ ಮಹಾಮನೆ ಟ್ರಸ್ಟ್ ನ ಬೆಲ್ದಾಳ ಸಿದ್ಧರಾಮ ಶರಣರು ಮಾತನಾಡಿ, ಭಾರತ ಇಂದು ತೀರಾ ಸಂದಿಗ್ದ ಪರಿಸ್ಥಿಯಲ್ಲಿದ್ದು, ಜಾತಿ, ಧರ್ಮದ ಹುಲುಬಿನಲ್ಲಿ ಸಿಕ್ಕು ಒದ್ದಾಡುತ್ತಿದ್ದೇವೆ. ಸಂವಿಧಾನ ತೆಗೆದು ಆ ಜಾಗದಲ್ಲಿ ಮನುಸ್ಮೃತಿ ಹೇರುವ ಹುನ್ನಾರ ನಡೆದಿದ್ದು, ಇದರಿಂದ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಬುದ್ಧನ ಉಪದೇಶ, ಬಸವಣ್ಣನವರ ಸಂದೇಶ, ಅಂಬೇಡ್ಕರ್ ಅವರ ಕಾನೂನು ಮೈಗೂಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ತೊಡಗಬೇಕು. ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಚನ ಬುದ್ಧ ಬೋಧಿಸಿದರು. ಬಸವಣ್ಣನವರು ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಸ್ಥಾಪಿಸಿದರು. ಅಂಬೇಡ್ಕರ್ ಸಂವಿಧಾನ ರಚಿಸಿದರು. ಈ ಮೂವರ ಜೀವಪರ, ಜನಪರ ವಿಚಾರಗಳನ್ನು ನಾಶ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ ಕೊಡಿ. ಶಿಕ್ಷಣವೇ ಅಭಿವೃದ್ಧಿಯ ಬೇರು. ಮದ್ಯಪಾನ ಬೇರು ಸಮೇತ ಕಿತ್ತು ಹಾಕಬೇಕು. ಕೂಡಿ ಇರುವುದರಲ್ಲಿ ಶಕ್ತಿ ಇದೆ. ಸಮಾನತೆ, ಸ್ವಾತಂತ್ರ್ಯ, ಸಹೋದರತೆಯೇ ಧರ್ಮ ಎಂದು ಹೇಳಿದರು.
ಆಳಂದ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ, ಭಂತೆ ಧಮ್ಮ ರಾಮಗಿರಿ ನೇತೃತ್ವ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜೇಂದ್ರ ದೇಶಮುಖ ಸಮ್ಮುಖ ವಹಿಸಿದ್ದರು. ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಉದ್ಘಾಟಿಸಿದರು. ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ, ಮಂಗಳಾ ವಿ. ಕಪರೆ ಹಾಗೂ ಡಾ. ಅನಿಲ ಟೆಂಗಳಿ ಮುಖ್ಯ ಭಾಷಣಕಾರರಾಗಿದ್ದರು.
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ
ಮಲ್ಲಿಕಾರ್ಜುನ ಹುಲೇಕರ್, ದಶವಂತ ಬಿ. ಕಣಮಸ್ಕರ್, ಚಂದ್ರಕಾಂತ ಗದ್ದಗಿ, ಕೆ.ಎಸ್. ಬಂಧು, ಸುರೇಶ ಬಡಿಗೇರ ವೇದಿಕೆಯಲ್ಲಿದ್ದರು. ಶಾಂತಪ್ಪ ಸಂಗಾವಿ, ಶಂಕರ ಕೋಡ್ಲಾ, ಹಣಮಂತರಾಯ ಅಟ್ಟೂರ ಇತರರಿದ್ದರು. ಶಿವಕಾಂತ ಚಿಮ್ಮಾ ನಿರೂಪಿಸಿದರು. ವೀರೇಶ ಬೋಳಶೆಟ್ಟಿ ವಂದಿಸಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಸತ್ಕರಿಸಲಾಯಿತು. ನೂರಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ತ್ರಿಬಲ್ ಡಿ ತ್ಯಜಿಸಿ
ಡಿಜೆ, ಡ್ಯಾನ್ಸ್, ಡ್ರಿಂಕ್ಸ್ ಇಲ್ಲದೆ ಜಯಂತಿ ಆಚರಿಸಬೇಕು. ಸಂವಿಧಾನದ ರಚನೆಯಿಂದ ವೋಟ್, ನೋಟು, ಸೀಟಿನ ಹಕ್ಕು ಬಂದಿತು. ಡಾ. ಅಂಬೇಡ್ಕರ್ ಋಣದ ಮಕ್ಕಳು ಭಾರತೀಯರು. ಬುದ್ಧ, ಬಸವ, ಅಂಬೇಡ್ಕರ್ ಈ ಮೂವರ ದಾರಿಯಲ್ಲಿ ಬದುಕು, ಭವಿಷ್ಯ, ದಾರಿ ಇದೆ. ದಾರ್ಶನಿಕರ ತತ್ವ ಪಾಲಿಸಿರಿ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.