ನರಗುಂದ
ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಎಂದು ಪ್ರಸಿದ್ದಿ ಪಡೆದ ಡಾ. ಫ.ಗು. ಹಳಕಟ್ಟಿಯವರು ೧೨ ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಉಳಿಸುವಲ್ಲಿ ಅವರ ಪಾತ್ರ ಮಹತ್ತರವಾದುದು. ೧೯೨೫ರಲ್ಲಿ ಹಿತಚಿಂತಕ ಎಂಬ ಮುದ್ರಣಾಲಯನ್ನು ಸ್ಥಾಪಿಸಿ ನಶಿಸಿಹೋಗುತ್ತಿರುವ ವಚನ ಸಾಹಿತ್ಯವನ್ನು ವಚನ ಶಾಸ್ತ್ರಸಾರ ಎಂಬ ಪುಸ್ತಕವನ್ನು ಪ್ರಕಟಿಸಿ ವಚನಗಳನ್ನು ಸಂರಕ್ಷಿಸಿದ ಕೀರ್ತಿ ಡಾ. ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ಪ್ರೊ. ಆರ್. ಕೆ. ಐನಾಪೂರ ಅವರು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜಯಂತಿ ಪ್ರಯುಕ್ತ ವಚನ ಸಂರಕ್ಷಣಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಶರಣರು ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ ಜಾತ್ಯಾತೀತ ಹಾಗೂ ಸಮಾನತೆ, ಕಾಯಕ-ದಾಸೋಹ ಸಿದ್ದಾಂತಗಳ ಆದಾರದ ಮೇಲೆ ವಚನಗಳನ್ನು ರಚಿಸಿದ್ದಾರೆ.
ಅಂತಹ ಶ್ರೇಷ್ಠ ವಚನ ಸಾಹಿತ್ಯವನ್ನು ಸಂಗ್ರಹಿಸಿ ಹಳಕಟ್ಟಿಯವರು ನಮಗೆ ನೀಡದೆ ಇದ್ದರೆ ಇಂದು ವಿಶ್ವಕ್ಕೆ ಬಸವಣ್ಣನವರ ಪರಿಕಲ್ಪನೆಗಳ ಮಾಹಿತಿ ದೊರೆಯುತ್ತಿರಲಿಲ್ಲ. ಮೂಲತಃ ವೃತ್ತಿಯಲ್ಲಿ ನ್ಯಾಯವಾದಿಗಳಾಗಿದ್ದ ಹಳಕಟ್ಟಿಯವರು ಕಕ್ಷಿದಾರರಿಂದ ಸಂಭಾವನೆಯನ್ನು ಪಡೆಯದೆ ಅಳಿದು ಹೋಗುತ್ತಿರುವ ವಚನಗಳ ಕಟ್ಟನ್ನು ಪಡೆದು ವಚನಗಳನ್ನು ಸಂರಕ್ಷಿಸಿದ ವಚನ ಗುಮ್ಮಟ ಅವರು ಎಂದು ಸಂಭೋದಿಸಿದರು.
ವ್ಯವಸ್ಥಾಪಕರಾದ ಮಹಾಂತೇಶ ಹಿರೇಮಠ ಅವರು ಮಾತನಾಡಿ, ವಚನ ಸಾಹಿತ್ಯವನ್ನು ಸಂರಕ್ಷಿಸಿ, ಸಂಗ್ರಹಿಸಿ ಜನರಿಗೆ ಪರಿಚಯಿಸಲು ಹಳಕಟ್ಟಿಯವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ಜಾತಿ ಧರ್ಮಗಳ ಮೀರಿ ವರ್ಗರಹಿತ ಸಮಾಜವನ್ನು ಕಟ್ಟಿದ ಬಸವಾದಿ ಶಿವಶರಣರ ಕಲ್ಪನೆಯನ್ನು ನನಸು ಮಾಡುವಲ್ಲಿ ಹಗಲಿರುಳು ಶ್ರಮಿಸಿದ ಹಳಕಟ್ಟಿಯವರು ಈ ನಾಡು ಕಂಡ ಶ್ರೇಷ್ಠ ಬಸವ ಭಕ್ತ.
ಕನ್ನಡದ ವಚನ ಸಾಹಿತ್ಯವನ್ನು ವಿಶ್ವದೆತ್ತರಕ್ಕೆ ಬೆಳೆಸಿದ ಹಳಕಟ್ಟಿಯವರು ನಾಡವರಿಂದ ಕರ್ನಾಟಕದ ಮ್ಯಾಕ್ಸ್ಮುಲ್ಲರ ಎಂದು ಹೊಗಳಿಸಿಕೊಂಡ ವಚನ ಪಿತಾಮಹ ಅವರನ್ನು ವಚನ ಸಾಹಿತ್ಯದ ದೈತ್ಯಶಕ್ತಿ ಎಂದು ತಪ್ಪಾಗಲಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜಯ್ಯ ಶಾಸ್ತ್ರಿಗಳು ಹಿರೇಮಠ, ಮೃತ್ಯುಂಜಯ್ಯ ಹಿರೇಮಠ , ಲಿಂಗರಾಜ ಐನಾಪೂರ ಪ್ರಮುಖರು ಉಪಸ್ಥಿತರಿದ್ದರು.