ನರಗುಂದ
ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕ, ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಜಯ ಭಾರತ ಜನನಿಯ ತನುಜಾತೆ, ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಇಂತಹ ಹಲವಾರು ಮೌಲಿಕ ಕವನಗಳು ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದೆ ಉಳಿದಿವೆ. ವರಕವಿ ಬೇಂದ್ರೆ ಯವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡ ಅವರು ವಿಶ್ವಮಾನವ ಸಂದೇಶ ನೀಡಿದ ಕನ್ನಡದ ಎರಡನೆಯ ರಾಷ್ಟ್ರಕವಿ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಶ್ರೀಗಳು ಬಣ್ಣಿಸಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕುವೆಂಪುರವರ ಜಯಂತಿ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಹಾಗೂ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-೪೨ ಮತ್ತು ನಾಗಯ್ಯ ಶಿರಹಟ್ಟಿಮಠ ಇವರ ೭೬ ನೇ ವರ್ಷದ ಹುಟ್ಟುಹಬ್ಬ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಕ್ಕೆ ಪ್ರಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿ ಕುವೆಂಪುರವರಿಗೆ ಸಲ್ಲುತ್ತದೆ. ಕುವೆಂಪುರವರ ಸಾಹಿತ್ಯದ ಕಾಲಘಟ್ಟವನ್ನು ಕ್ರಾಂತಿಕಾರಕ ಸಂಧಿಕಾಲವೆನ್ನಬಹುದು. ವೈಚಾರಿಕ ಚಿಂತನೆಗಳೊಂದಿಗೆ ಸಮಾಜದಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಿದ ಅವರ ಚಿಂತನೆಗಳು ಸರ್ವಕಾಲಿಕವಾಗಿವೆ ಎಂದು ಅವರು ಹೇಳಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಬಸಯ್ಯ ಶಾಸ್ತ್ರೀಗಳು ಮಾತನಾಡಿ ನಾವೆಲ್ಲರೂ ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮತನವನ್ನು ಬಿಟ್ಟುಕೊಡುತ್ತಿರುವುದು ದುರ್ದೈವದ ಸಂಗತಿ. ಇದಕ್ಕೆ ಅಪವಾದವೆಂಬಂತೆ ನಾಗಯ್ಯ ಶಿರಹಟ್ಟಿಮಠ ಅವರು ತಮ್ಮ ಹುಟ್ಟು ಹಬ್ಬವನ್ನು ಶ್ರೀಮಠದ ಉಚಿತ ಪ್ರಸಾದ ನಿಲಯದಲ್ಲಿರುವ ಮಕ್ಕಳಿಗೆ ಬಟ್ಟೆ ಹಾಗೂ ಪ್ರಸಾದವನ್ನು ವಿತರಿಸುವ ಮೂಲಕ ಅತ್ಯಂತ ಸರಳವಾಗಿ ಮತ್ತು ವೈಶಿಷ್ಠ್ಯಪೂರ್ಣವಾಗಿ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇಂತಹ ಸಂಸ್ಕೃತಿ ಪ್ರತಿಯೊಬ್ಬರಲ್ಲಿಯೂ ಒಡಮೂಡಬೇಕಾಗಿದೆ, ನಮ್ಮ ಮಕ್ಕಳಿಗೆ ನಾವು ನೈತಿಕ ಶಿಕ್ಷಣವನ್ನು ನೀಡುವ ಅನಿವಾರ್ಯತೆ ಇದೆ ಎಂದು ಹೇಳಿದರು.
ವೇದಿಕೆ ಮೇಲೆ ಮೃತ್ಯುಂಜಯ್ಯ ಹಿರೇಮಠ, ಶಿವಕುಮಾರ ಹಿರೇಮಠ, ವಿಶ್ರಾಂತ ಉಪತಹಸಿಲ್ದಾರರಾದ ವ್ಹಿ. ಜಿ. ಐನಾಪೂರ, ಹುಬ್ಬಳ್ಳಿಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಅಭಿಯಂತರರಾದ ವಿಶ್ವನಾಥ ಶಿರಹಟ್ಟಿಮಠ, ಮಹಾಂತೇಶ ಬೆಟಗೇರಿ, ಪ್ರಮೋದ ಶಿರಹಟ್ಟಿಮಠ, ಗೀರಿಶ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.