ಚಾಮರಾಜನಗರದಲ್ಲಿ ಮುಖ್ಯಮಂತ್ರಿಗಳಿಂದ ಬಸವಣ್ಣ, ಅಂಬೇಡ್ಕರ್ ಪುತ್ಥಳಿ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

2011ರಲ್ಲಿ ಪುತ್ಥಳಿಯನ್ನು ಸ್ಥಾಪಿಸುವ ಪ್ರಯತ್ನ ಶುರುವಾದರೂ ಹಲವಾರು ಕಾರಣಗಳಿಂದ ಯೋಜನೆ 15 ವರ್ಷಗಳಷ್ಟು ವಿಳಂಬವಾಯಿತು.

ಚಾಮರಾಜನಗರ

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಸವೇಶ್ವರ ಮತ್ತು ಅಂಬೇಡ್ಕರ್ ಪುತ್ಥಳಿಗಳನ್ನು ಶ್ರೀ ಶಿವರಾತ್ರಿ ದೇಶೀಕೆಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾವರಣ ಮಾಡಿದರು.

ವಿಶ್ವದಲ್ಲಿ ಮೊದಲ ಬಾರಿಗೆ ಸಂಸತ್ ಭವನ ನಿರ್ಮಿಸಿದ ಬಸವಣ್ಣನವರ ಆಶ್ವರೂಢ ಪುತ್ಥಳಿಯನ್ನು ಸ್ಥಾಪಿಸಲು ಶ್ರಮಿಸಿದ ಎಲ್ಲರನ್ನೂ ಮುಖ್ಯಮಂತ್ರಿಗಳು ಅಭಿನಂದಿಸಿದರು.

2011ರಲ್ಲಿ ಪುತ್ಥಳಿಯನ್ನು ಸ್ಥಾಪಿಸುವ ಪ್ರಯತ್ನ ಶುರುವಾದರೂ ಹಲವಾರು ಕಾರಣಗಳಿಂದ 15 ವರ್ಷಗಳಷ್ಟು ವಿಳಂಬವಾಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮುಡ್ಲಾಪುರ ನಂದೀಶ್ ಅವರ ಸತತ ಪರಿಶ್ರಮದ ಫಲವಾಗಿ ಯೋಜನೆ ಕೊನೆಗೂ ಸಾಕಾರವಾಯಿತು.

ತಡೆಗೆ ಹೈಕೋರ್ಟ್ ನಕಾರ

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಸ್ಥಾಪಿಸಲಾಗಿರುವ ಬಸವಣ್ಣನವರ ಪುತ್ಥಳಿ ತೆರವುಗೊಳಿಸಬೇಕು ಹಾಗೂ ಪುತ್ಥಳಿ ಅನಾವರಣಕ್ಕೆ ತಡೆ ನೀಡಬೇಕು ಎಂದು ಕೋರಿ ಚಾಮರಾಜನಗರ ತಾಲೂಕು ಹೊಂಗನೂರು ಗ್ರಾಮದ ನಟರಾಜ ಹಾಗೂ ಇತರರು ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಪುತ್ಥಳಿಯ ಅನಾವರಣಕ್ಕೆ ತಡೆ ನೀಡಲು ​ ನಿರಾಕರಿಸಿದರು.

ಪುತ್ಥಳಿಗಳ ಸ್ಥಾಪನೆ ಅಥವಾ ತೆರವು ಆಡಳಿತಾತ್ಮಕ ವಿಷಯಗಳಾಗಿದ್ದು, ಅವುಗಳಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ನ್ಯಾಯಾಲಯದ ವ್ಯಾಪ್ತಿ ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ.

2024ರ ನವೆಂಬರ್ 19ರಂದು ಕೆಲವು ಅನಾಮಧೇಯ ವ್ಯಕ್ತಿಗಳು ರಾತ್ರೋರಾತ್ರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ, ಇದರಿಂದ ಪಾರ್ಕಿಂಗ್ ವ್ಯವಸ್ಥೆಗೆ ಅನಾನುಕೂಲವಾಗುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಲ್ಲದೇ ಪುತ್ಥಳಿ ಸ್ಥಾಪನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ. ಹಾಗಾಗಿ, ಪುತ್ಥಳಿ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *