ಚಾಮರಾಜನಗರ
(2011ರಲ್ಲಿದ್ದ ಬಿಜೆಪಿ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ ಚಾಮರಾಜನಗರದ ಜಿಲ್ಲಾಡಳಿತದ ಕಚೇರಿಯ ಮುಂದೆ ಬಸವಣ್ಣನವರ ಪುತ್ತಳಿ ನಿರ್ಮಿಸಲು ಗುದ್ದಲಿ ಪೂಜೆ ನಡೆಸಿದರು.
2024 ಸೆಪ್ಟೆಂಬರ್ 20 ಸಂಜೆ 6.30ಕ್ಕೆ, 13 ವರ್ಷಗಳ ವಿಳಂಬದ ನಂತರ, ಬಸವಣ್ಣನವರ ಪುತ್ತಳಿ ತನಗೆ ಗೊತ್ತು ಮಾಡಿದ್ದ ಸ್ಥಳದ ಬಳಿ ಬಂದಿಳಿಯಿತು.
ಪುತ್ಥಳಿಯ ಸ್ಥಾಪನೆಯಲ್ಲಿ ಆದ ವಿಳಂಬ ಮತ್ತು ಅದನ್ನು ನನಸಾಗಿಸಲು ತಾವು ನಡೆಸಿದ ಹೋರಾಟವನ್ನು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಹಂಚಿಕೊಂಡಿದ್ದಾರೆ.)

2011ರಲ್ಲಿ ಸಚಿವ ರೇಣುಕಾಚಾರ್ಯ ಜಿಲ್ಲಾಡಳಿತದ ಕಚೇರಿಯ ಮುಂದೆ ಬಸವಣ್ಣನವರ ಪುತ್ಥಳಿ ನಿರ್ಮಿಸಲು ಗುದ್ದಲಿ ಪೂಜೆ ನಡೆಸಿದರು. ಆದರೆ ಮುಂದಿನ ಮೂರು ನಾಲಕ್ಕು ವರ್ಷ ಯಾವುದೇ ಕೆಲಸವಾಗಲಿಲ್ಲ.
ನಾನು 2014-15ರಲ್ಲಿ ಚಾಮರಾಜನಗರ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿ ಪುತ್ಥಳಿಯನ್ನು ಸ್ಥಾಪಿಸುವ ಪ್ರಯತ್ನ ಶುರು ಮಾಡಿದೆ. ರೈತ ಸಂಘದವರು, ದಲಿತ ಸಂಘದವರು, ಸಿದ್ಧಗಂಗೆ ಮಠದ ಸಂಘದವರು ಎಲ್ಲಾ ಪುತ್ಥಳಿ ಮಾಡಿ ಅಂತ ಪತ್ರ ಕೊಟ್ಟರು.
ಪುತ್ಥಳಿ ವಿನ್ಯಾಸಕ್ಕೆ ಅಂತ ಬಸವಣ್ಣನವರ ನಾಲಕ್ಕು ಬೇರೆ ಬೇರೆ ನಿಲುವಿನ ಫೋಟೋ ಕೂಡ ಜಿಲ್ಲಾಡಳಿತಕ್ಕೆ ಕೊಟ್ಟೆವು. ಅವುಗಳಲ್ಲಿ ಅವರು ಅಶ್ವಾರೂಢರಾಗಿರುವ ಬಸವಣ್ಣನವರನ್ನು ಆಯ್ಕೆ ಮಾಡಿದರು. (ಇಂದು ಸಾಂಸ್ಕೃತಿಕ ನಾಯಕ ಬಸವಣ್ಣನವರ ಅಧಿಕೃತ ಫೋಟೋವನ್ನೂ ಕೊಟ್ಟಿದ್ದೆವು.)
ಆದರೆ ಕೆಲಸದಲ್ಲಿ ಯಾವುದೇ ಪ್ರಗತಿ ಕಾಣಿಸಲಿಲ್ಲ. ಒಬ್ಬ ತಾಲೂಕು ಅಧ್ಯಕ್ಷನಾಗಿ ನನ್ನ ಮಾತಿಗೆ ಆಗ ಅಷ್ಟು ಶಕ್ತಿ ಇರಲಿಲ್ಲ.
2018-19ರಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಮತ್ತೆ ಕೆಲಸ ಶುರು ಮಾಡಿದೆ. ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ಮತ್ತು ಇಲ್ಲಿನ ಅಡಿಷನಲ್ ಡೆಪ್ಯುಟಿ ಕಮಿಷನರ್ ಕಾತ್ಯಾಯಿನಿ ಅವರ ಸಹಾಯದೊಂದಿಗೆ ಯಾರು ಯಾರನ್ನ ಭೇಟಿ ಮಾಡಬೇಕು ಅವರನ್ನೆಲ್ಲ ಭೇಟಿ ಮಾಡಿದೆ. ಆದರೂ ಕೆಲಸ ತುಂಬಾ ನಿಧಾನವಾಗಿ ಮುಂದುವರೆಯಿತು. ಸುಮಾರು 40-50 ಬಾರಿ ವಿಧಾನಸೌಧಕ್ಕೆ ಹೋಗಿ ಬೇರೆ ಬೇರೆ ಅಧಿಕಾರಿಗಳನ್ನು ನೋಡಿದೆ. ಶ್ರೀ ವಿಜಯೇಂದ್ರ, ಶ್ರೀ ರುದ್ರೇಶ, ಶ್ರೀ ತುಳಸಿ ಮುನೀರಾಜೆ ಗೌಡ ಮುಂತಾದ ನಾಯಕರು ಮಾಡಿದ ಸಹಾಯವನ್ನು ಇಲ್ಲಿ ನೆನೆಯಬೇಕು.
ಅಷ್ಟರಲ್ಲಿ ಕೋವಿಡ್ ಬಂದು ಮತ್ತೆ ಎರಡು ವರ್ಷಗಳು ವಿಳಂಬವಾಯಿತು.

ನಂತರ 2023ರ ಚುನಾವಣೆಗೆ ಸ್ವಲ್ಪ ಮುಂಚೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿ ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಹಣ ಬಿಡುಗಡೆ ಮಾಡಿಸಿಕೊಂಡೆ. ಆದರೆ ಸರಕಾರ ಬಿಡುಗಡೆ ಮಾಡಿದ್ದು ಕೇವಲ 15 ಲಕ್ಷ ರೂಪಾಯಿ, ಅದನ್ನೇ ಪುತ್ಥಳಿ, ಅಡಿಪಾಯ ಎರಡಕ್ಕೂ ಬಳಸಿಕೊಳ್ಳಿ ಅಂತ ಹೇಳಿದರು. ಅದು ಯಾತಕ್ಕೂ ಸಾಲುತ್ತಿರಲಿಲ್ಲ. ಮತ್ತೆ ವಿಳಂಬವಾಯಿತು.
ಆಗ ಸುತ್ತೂರು ಜಗದ್ಗುರುಗಳನ್ನು ಹೋಗಿ ನೋಡಿದೆ. ಅವರು ಒಂದೇ ಮಾತಿನಲ್ಲಿ ಪುತ್ಥಳಿಯನ್ನು ಮಠದ ಕಡೆಯಿಂದ ಮಾಡಿಸಿಕೊಡುವುದಾಗಿ ಹೇಳಿ ತಕ್ಷಣ ಮೀರಜ್ಜಿನಲ್ಲಿ ಒಬ್ಬರಿಗೆ ಕೆಲಸದ ಆದೇಶ ಕೊಟ್ಟರು.
ಈ ಮಧ್ಯೆ ನಾನು ಮತ್ತೆ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷನಾಗಿ ಪುನರಾಯ್ಕೆಯಾದೆ. ದೊಡ್ಡದೊಡ್ಡವರು ನನ್ನ ವಿರುದ್ಧ ಕೆಲಸ ಮಾಡಿದರೂ ಬಸವಣ್ಣನವರ ಆಶೀರ್ವಾದದಿಂದ ಜನ ನನ್ನ ಕೈ ಬಿಡಲಿಲ್ಲ.

ಮಂಡ್ಯದಿಂದ ಒಂದು ಸಂಘಟನೆ ಬಂದು ಪುತ್ಥಳಿಯನ್ನು ಏನೋ ಕಾರಣ ಹೇಳಿ ವಿರೋಧಿಸಿತು. ಆದರೆ ಸ್ಥಳೀಯವಾಗಿ ಎಲ್ಲರೂ ಬಸವಣ್ಣನವರ ಪುತ್ಥಳಿ ಪರವಾಗಿ ನಿಂತಿದ್ದರಿಂದ ಏನೂ ಸಮಸ್ಯೆಯಾಗಲಿಲ್ಲ.
ಈ ತಿಂಗಳು 18ರಂದು ಪುತ್ತಳಿ ಸಿದ್ಧವಾಗಿದೆ ಎಂದು ತಿಳಿಸಿದರು. ತಕ್ಷಣ ಮಿರಜಿಗೆ ಹೋಗಿ ಲಾರಿಯಲ್ಲಿ ಪುತ್ತಳಿ ತೆಗೆದುಕೊಂಡು ಚಾಮರಾಜನಗರಕ್ಕೆ 20ನೇ ತಾರೀಕು ಸಂಜೆ 4 ಗಂಟೆಗೆ ಬಂದೆ. ಕಾತ್ಯಾಯಿನಿ ಮೇಡಂ ಅವರ ಒಪ್ಪಿಗೆ ತೆಗೆದುಕೊಂಡು ತಕ್ಷಣವೇ ಕಾಮಗಾರಿ ಶುರುಮಾಡಿ ಅದೇ ಸಂಜೆ 8.30ಗೆ ಮುಗಿಸಿದೆವು. ಸುತ್ತೂರು ಶ್ರೀಗಳಿಂದಲೂ ಒಂದು ಲೆಟರ್ ತಂದು ಮಠದ ಕಡೆಯಿಂದ ಜಿಲ್ಲಾಡಳಿತಕ್ಕೆ ಪುತ್ತಳಿ ಹಸ್ತಾಂತರ ಮಾಡಿಸಿದೆ. ಲೋಕಾರ್ಪಣೆ ಬಾಕಿಯಿದೆ.

ಇದು ಮಾಡಿದ್ದು ನಾನೋಬ್ಬನೇ ಅಲ್ಲ. ಹಲವಾರು ಕಾಣದ ಕೈಗಳು, ಮುಖ್ಯವಾಗಿ ಸುತ್ತೂರು ಜಗದ್ಗುರುಗಳು, ನೆರವಾದವು.
ಸರಕಾರ ಸರಿಯಾದ ಸಮಯದಲ್ಲಿ ಹಣ ಬಿಡುಗಡೆ ಮಾಡಿದ್ದರೆ ಇಷ್ಟೊಂದು ವಿಳಂಬವಾಗುತ್ತಿರಲಿಲ್ಲ. ಈ ಕೆಲಸಕ್ಕೆ ಬೇಕಾದ ರಾಜಕೀಯ ಇಚ್ಚಾಶಕ್ತಿಯನ್ನು ಯಾರೂ ತೋರಲಿಲ್ಲ ಅಷ್ಟೇ.
ಬಸವಣ್ಣನವರ ಪುತ್ಥಳಿಗಾಗಿ ಇಷ್ಟು ಹಠ ಹಿಡಿದು ಇಷ್ಟು ವರ್ಷ ಯಾಕೆ ದುಡಿದೆ ಅಂತ ಅನೇಕರು ಕೇಳುತ್ತಾರೆ. ಅದಕ್ಕೆ ನಾನು ಕೊಡುವ ಉತ್ತರ:

ಬಸವಣ್ಣ ನಮ್ಮ ಧರ್ಮದ ಗುರುಗಳು. ಅಷ್ಟೇ ಅಲ್ಲ ಸಮಾಜದಲ್ಲಿ ಎಲ್ಲರನ್ನೂ ನಮ್ಮವರು ಎಂದು ಅಪ್ಪಿಕೊಂಡಿದ್ದವರು, ಸಮಾನತೆ ಸಾರಿದ್ದವರು, ಅನುಭ ಮಂಟಪದ, ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟಿದ್ದವರು. ಈ ಪುತ್ಥಳಿ ನಮ್ಮೆಲ್ಲರ ಹೆಮ್ಮೆ ಮತ್ತು ಅಭಿಮಾನದ ಕುರುಹು.
ಇಂತ ಪುತ್ಥಳಿ ಪ್ರತಿಯಿಂದು ಜಿಲ್ಲಾ ಕಚೇರಿಯ ಮುಂದೆಯೂ ಸ್ಥಾಪನೆಯಾಗಬೇಕು. ಅದೇ ನನ್ನ ಕನಸು.


Excellent.