[ನಿನ್ನೆಯ ಸಂಚಿಕೆಯಲ್ಲಿ ಹಾಕಿದ ಒಂದು ಚಿತ್ರಪಟದ ಕುರಿತು ಬಹಳ ಜನ ಸಂತೋಷ ಹಂಚಿಕೊಂಡರು. ಬೆಳಗಾವಿ ಕಾರಂಜಿಮಠದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳವರು ಈ ಕುರಿತು ಅಪರೂಪದ ಮಾಹಿತಿಯನ್ನು ತಿಳಿಸಿದರು. ಪೂಜ್ಯ ಶ್ರೀಗಳಿಗೆ ಅನಂತ ಶರಣುಗಳು. ಇದು ನವಲಿಂಗ ಸಕೀಲದ ಚಿತ್ರ. ಈ ಭಾವಚಿತ್ರವನ್ನು ಶೀಲವಂತ ಎಂಬುವರಿಂದ ತೆಗೆಯಿಸಿ, ಸಾವಿರಾರು ಪ್ರತಿ ಮುದ್ರಿಸಲಾಗಿತ್ತು. ಅನೇಕ ಜನ ಹಿರಿಯ ಸ್ವಾಮೀಜಿಗಳು ತಮ್ಮಅಧ್ಯಾತ್ಮ ಸಾಧಕ ಭಕ್ತರಿಗೆ ಈ ಪಟವನ್ನು ನೀಡುತ್ತಿದ್ದರಂತೆ, ಆಗ ಭಕ್ತರಲ್ಲಿಯೂ ಎರಡು ವೇಳೆ ಲಿಂಗಪೂಜೆ ಮಾಡುವ ಕ್ರಿಯಸ್ಥರಿದ್ದರು. ಈ ಚಿತ್ರಪಟವನ್ನು ಲಿಂಗಪೂಜೆಯ ಸಮಯದಲ್ಲಿ ಗಮನಿಸಿದರೆ, ಇಡೀ ದೇಹದಲ್ಲಿರುವ ಅಂಗಗಳು ಯಾವ ಯಾವ ಲಿಂಗಕ್ಕೆ ಸಂಬಂಧಿಸಿವೆ ಎಂಬುದರ ಸಮಗ್ರ ಪರಿಕಲ್ಪನೆ ಆಗುತ್ತಿತ್ತು. ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳು, ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸಖರಾಯಪಟ್ಟಣದ ಸದಾಶಿವ ಶಿವಾಚಾರ್ಯರು ಮೊದಲಾದವರು ಈ ನವಲಿಂಗಸಕೀಲದ ಸಾಧನೆಯನ್ನು ಮಾಡಿದವರಾಗಿ, ತಾವೇ ಲಿಂಗಸ್ವರೂಪಿಗಳಾಗಿ ಪರಿಣಮಿಸಿದ್ದರು. ಹೀಗಾಗಿ ಈ ಲೋಕದ ಜಂಜಡಕ್ಕೆ ಒಳಗಾಗದೆ, ನಿರ್ಬಯಲಾದರು. ಲಿಂಗಾಯತ ಧರ್ಮ ವೈಚಾರಿಕ ಧರ್ಮದ ಜೊತೆಗೂ ಸಾಧನೆಯ ಧರ್ಮವೂ ಆಗಿದೆ ಎಂಬುದನ್ನು ಚನ್ನಬಸವಣ್ಣನವರ ಈ ಸಾಹಿತ್ಯ ನಮಗೆ ತೋರಿಸಿಕೊಡುತ್ತದೆ.]
ಚನ್ನಬಸವಣ್ಣನವರ ವಚನೇತರ ಸಾಹಿತ್ಯ ಪ್ರಕಾರದಲ್ಲಿ ಮಿಶ್ರಾರ್ಪಣವು ಒಂದು ಅಮೂಲ್ಯ ಕಿರುಕೃತಿ. ಲಿಂಗಾಯತ ಸಂಸ್ಕೃತಿಯ ಪ್ರಸಾದ ತತ್ವದ ನಿಜವಾದ ಆಂತರ್ಯವನ್ನು ತಿಳಿದುಕೊಳ್ಳಬೇಕಾದರೆ, ಈ ಮಿಶ್ರಾರ್ಪಣ ಅಧ್ಯಯನ ಮಾಡಬೇಕು. ದೇಹ-ಮನಸ್ಸು ಮತ್ತು ಪ್ರಸಾದಕ್ಕೆ ಇರುವ ಅನ್ಯೋನ್ಯ ಸಂಬಂಧವನ್ನು ಕುರಿತು ಚನ್ನಬಸವಣ್ಣನವರು ತುಂಬ ಅರ್ಥಪೂರ್ಣವಾದ ವಿಚಾರಗಳನ್ನು ಇಲ್ಲಿ ಕೊಟ್ಟಿದ್ದಾರೆ.
ಮಿಶ್ರಾರ್ಪಣವನ್ನು ಅನೇಕ ವಚನಕಾರರು ಹೇಳಿದ್ದಾರೆ. ತಾವು ಬರೆದ ವಚನಗಳಲ್ಲಿ ಅದನ್ನು ಹೇಳುತ್ತ ಬಂದಿದ್ದಾರೆ. ಆದಯ್ಯನವರು ಮತ್ತು ತೋಂಟದ ಸಿದ್ಧಲಿಂಗ ಯತಿಗಳು ತಮ್ಮ ತಮ್ಮ ವಚನಗಳಲ್ಲಿ ವಿಸ್ತಾರವಾಗಿ ಹೇಳಿದ್ದಾರೆ. ಹೀಗಿದ್ದೂ ಪ್ರತ್ಯೇಕವಾಗಿ ಚೆನ್ನಬಸವಣ್ಣನವರ ಮಿಶ್ರಾರ್ಪಣ ತುಂಬ ಪ್ರಸಿದ್ಧವಾದುದಾಗಿದೆ. ಅಲ್ಲದೆ ಮಿಶ್ರಾರ್ಪಣ ಪರಿಕಲ್ಪನೆಯನ್ನು ಮೊದಲು ಕೊಟ್ಟವರೇ ಚನ್ನಬಸವಣ್ಣನವರು. ಹೀಗಾಗಿ ಅವರ ಈ ಕಿರುಕೃತಿಗೆ ಮೊದಲ ಆದ್ಯತೆ ದೊರೆತಿದೆ.
ಅದರಲ್ಲೆಲ್ಲ ಶರಣ ಸಿದ್ಧಾಂತದ ಪ್ರಕಾರ ಅರ್ಪಣಕ್ರಿಯೆಯೆಂಬುದು ಅವಿಚ್ಛಿನ್ನವಾಗಿ ನಡೆದೇ ಇರುತ್ತದೆ. ಅದು ಸುಷುಪ್ತಾವಸ್ಥೆಯಲ್ಲಿ ಇರುತ್ತದೆ. ಈ ಅರ್ಪಣೆಯೆಲ್ಲ ಜ್ಞಾನಾರ್ಪಣೆಯಾಗಬೇಕೆಂಬುದೇ ಶರಣರ ಸಾಧನಾಮುಖದ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಲಿಂಗ ಸಕೀಲಗಳನ್ನು ಹೇಳುತ್ತಾರೆ. ಲಿಂಗ ಸಕೀಲಗಳಲ್ಲಿ ಷಡ್ವಿಧ ಲಿಂಗ ಸಕೀಲ, ನವವಿಧ ಲಿಂಗಸಕೀಲ, ೩೬ ವಿಧಲಿಂಗಸಕೀಲ, ೨೧೬ ಲಿಂಗಸಕೀಲಗಳು ಮುಖ್ಯವಾದುವು. ಇನ್ನೂ ಈ ಲಿಂಗಸಕೀಲಗಳನ್ನು ಬೆಳೆಸಿ, ಅತಿಸೂಕ್ಷ್ಮವಾಗಿ ತತ್ವಗರ್ಭವನ್ನು ಪ್ರವೇಶಮಾಡುತ್ತಾರೆ. ಆದರೆ ಅವೆಲ್ಲವನ್ನು ತತ್ವಕ್ಕಾಗಿ ಹೇಳಬೇಕೆ ವಿನಾ ಆರಿಯಲು ಆಚರಿಸಲು ಬಹಳ ಕಠಿಣವಾಗುತ್ತ ಹೋಗುವುದು. ಶರಣ ಸಿದ್ಧಾಂತ ಪ್ರಕಾರ ಸ್ಥೂಲವಾದ ದೇಹದ ವಿಷಯದ ಬಗೆಗಿನ ಆಲೋಚನೆ ಸೂಕ್ಷ್ಮವಾಗುತ್ತ ಸಮಸ್ತದೇಹದ ಕಣಕಣದವರೆಗೂ ಹೋಗುತ್ತದೆ. ದೇಹವೆಲ್ಲ ಲಿಂಗಮಯ, ಮಂತ್ರಮಯವಾಗುವ ಪೂರ್ಣವ್ಯಾಪ್ತಿಯನ್ನು ಹೊಂದಿಬಿಡುತ್ತದೆ. ಹೀಗೆ ಸರ್ವಾಂಗಲಿಂಗ ಸ್ವರೂಪ ಪಡೆಯುವುದೇ ಈ ಸಿದ್ಧಾಂತದ ಮುಖ್ಯಲಕ್ಷಣವಾಗಿದೆ.
ಭಾವವೆಂಬುದು ಮನುಷ್ಯನಿಗೊಂದು ದೊಡ್ಡ ಬೊಕ್ಕಸವಿದ್ದ ಹಾಗೆ, ಕಣ್ಣೆದುರಿಗಿರುವುದನ್ನೆಲ್ಲ ನೋಡುತ್ತದಲ್ಲವೆ! ಹಾಗೆ ಅದು ನೋಡಿ ತತ್ಸಂಬಂಧವಾದ ಜ್ಞಾನವನ್ನು ಗ್ರಹಿಸಲು ಮನದ ಸಹಕಾರ ಬೇಕು, ಭಾವ ಏನೂ ಕೆಲಸಮಾಡುವುದಿಲ್ಲ. ಅದು ಅನೇಕ ಅನುಭವಗಳನ್ನೆಲ್ಲ ಸಂಗ್ರಹಿಸಿಟ್ಟುಕೊಂಡುಬಿಡುವ ಸ್ವಭಾವದ್ದು ಮಾತ್ರ. ಕಣ್ಣು ಮನಗಳ ಸಹಕಾರದಿಂದ ಅನುಭವವಾದ ವಿಷಯವನ್ನು ಸಂಗ್ರಹಿಸಿಟ್ಟುಕೊಂಡು ಅನೇಕವರ್ಷಗಳ ಹಿಂದೆ ನೋಡಿದ ನೋಟ, ಅನುಭವಿಸಿದ ಅನುಭವಗಳನ್ನೆಲ್ಲ ತನ್ನಲ್ಲಿಟ್ಟುಕೊಂಡು ಮನಸ್ಸಿಗೆ ಬೇಕಾದಾಗ ತನ್ನ ಕೋಶದಿಂದ ಹೊರತಂದು ಮನಸ್ಸಿಗೆ ಕೊಡುವುದು. ಆದ್ದರಿಂದಲೇ ಭಾವದಲ್ಲಿ ಯಾವ ಯಾವ ವಿಷಯವನ್ನು ಸಂಗ್ರಹಿಸಿಡುತ್ತ ಬಂದಿರುತ್ತೇವೆಯೋ ಅವೇ ನಮಗೆ ಉತ್ತರೋತ್ತರ ಸಂಸ್ಕಾರಗಳಾಗಿ ನಮ್ಮ ಜೀವನದುದ್ದಕ್ಕೂ ಫಲಕೊಡುತ್ತವೆ. ನಮ್ಮ ನಮ್ಮ ಭಾವಗಳೇ ನಮ್ಮ ನಮ್ಮ ಸ್ವಭಾವ ಗಳೆನಿಸುತ್ತವೆ. ಉತ್ತಮಭಾವಗಳ ಕೋಶ ನಮ್ಮದಾಗಿದ್ದರೆ, ಉತ್ತಮ ಫಲ ಕೊಡುತ್ತವೆ. ‘ ಯದ್ಭಾವಂತದ್ಭವತಿ ‘ ಎಂಬ ಮಾತಿನ ಮಥಿತಾರ್ಥವೂ ಇದೇ ಆಗಿದೆ.
ಹಾಗಾದರೆ ಸದ್ವಸ್ತು ಸಂಗ್ರಹ ಹೇಗಾಗುತ್ತದೆ? ಎಂದರೆ ಇಂದ್ರಿಯಗಳ ಮೂಲಕ ಹೊರಗಿನ ವಿಶ್ವದೊಡನೆ ವ್ಯವಹರಿಸಿ ಸ್ವೀಕರಿಸುವ ಸಮಸ್ತವಸ್ತುಗಳು, ಅಥವಾ ಸಂಗ್ರಹಿಸುವ ಜ್ಞಾನ, ನೋಡುವ ನೋಟ; ಮಾಡುವ ಮಾಟ; ಕೂಡುವ ಕೂಟ ಇವೆಲ್ಲ ಲಿಂಗಭೋಗೋಪಭೋಗವಾಗಿದ್ದಾಗ ಅವೆಲ್ಲ ಅದೇ ಸಂಸ್ಕಾರದಿಂದ ಭಾವದಲ್ಲಿ ಉಳಿದು ನಮ್ಮನ್ನು ಸದ್ಭಾವಸಂಪನ್ನರನ್ನಾಗಿಮಾಡಿ, ಜಾಗ್ರತ, ಸ್ವಪ್ನ ಸುಷುಪ್ತಾವಸ್ಥೆಯಲ್ಲಿಯೂ ಜ್ಞಾನಕ್ರಿಯೆಗಳಿಂದ ಹೊಳೆಯುತ್ತ ನಮ್ಮನ್ನು ಪೂರ್ಣ ವ್ಯಕ್ತಿತ್ವದ ಕಡೆಗೆ ಒಯ್ಯುತ್ತವೆ. ಇಂಥ ಒಳ್ಳೆಯ ವಸ್ತು ಸಂಗ್ರಹದ ರೀತಿಯನ್ನು ಷಟ್ ಸ್ಥಲವು ತಿಳಿಸಿ ಕೊಡುತ್ತದೆ. ಅದಕ್ಕಾಗಿ ಅರ್ಪಣವಿಧಿಯು; ಹೊರಗಿನ ಪ್ರಪಂಚದಿಂದ ಪಿಂಡ ಪ್ರಪಂಚಕ್ಕೆ ಒದಗಿಸುವ ವಸ್ತುವಿಶೇಷಗಳೆಲ್ಲ ಅದು ಜ್ಞಾನವಾಗಿರಬಹುದು, ಪ್ರಸಾದವಾಗಿರಬಹುದು, ನೋಟವಾಗಿರಬಹುಮ, ಮಾಟವಾಗಿರಬಹುದು ಅರ್ಪಣಗಳೆನಿಸುವವು. ‘ನಡೆವಡೆಯಲ್ಲಿ, ನೋಡುವೆಡೆಯಲ್ಲಿ, ರಮಿಪ್ಪೆಡೆಯಲ್ಲಿ, ವಸ್ತುವಂ ಪಿಡಿವೆಡೆಯಲ್ಲಿ, ಭೋಗಿಪೆಡೆಯಲ್ಲಿ, ಸುಖಂಬಡವಲ್ಲಿ, ದೇಹಂ ಬಿಡುವೆಡೆಯಲ್ಲಿ ಲಿಂಗಕಳೆ ಲಿಂಗಗುಣಂ…. ” ಗಳಿಂದ ಕೂಡಿದ ಕ್ರಿಯೆಯೆಲ್ಲವೂ ಪರಿಶುದ್ಧವಾಗಿರಬೇಕೆಂಬುದೇ ಇದರ ತಾತ್ಪರ್ಯವಾಗಿದೆ.
ಈ ಅರ್ಪಣವಿಧಾನವು ಆತ್ಯಂತ ಸೂಕ್ಷ್ಮವಾಗಿದೆ. ೩೬ ಸಕೀಲ, ೨೧೬ ಸಕೀಲಗಳಲ್ಲೂ ಇದು ಸೂಕ್ಷ್ಮವಾಗುತ್ತ ಹೋಗುವುದು, ಇದೆಲ್ಲವನ್ನೂ ಶರಣಸಿದ್ಧಾಂತ ಪ್ರಸಾದ ಎಂದು ಕರೆಯುತ್ತದೆ. ಪ್ರಸಾದವೆಂದರೆ ಕೇವಲ ಊಟವಲ್ಲ. ಮನೋಗತ್ಯವಾದ ಯಾವುದೇ ಆಗಿರಬಹುದು. ಅದು ಮನಃಪ್ರಸಾದನವನ್ನುಂಟು ಮಾಡಬೇಕು. ಲೌಕಿಕವಾಗಿ ದುಃಖರೂಪವಾಗಿದ್ದರೂ ಆಗಿರಬಹುದು. ಅದೂ ಈಶ್ವರದತ್ತ ಪ್ರಸಾದ ಎಂದೇ ಭಾವಕ್ಕೆ ಗಮ್ಯವಾಗುವಂತಹ ಪರಿಪಕ್ವ ಸ್ಥಿತಿಯನ್ನು ಉಂಟುಮಾಡಿಕೊಳ್ಳಬೇಕು. ಈ ಅರ್ಪಣ ಮೊದಲೇ ಹೇಳಿದಂತೆ ಕಾಯದಿಂದ ಮಹಾಲಿಂಗಕ್ಕೆ ಅರ್ಪಿಸಲ್ಪಟ್ಟು ಕಾಯಾರ್ಪಿತವೆಂದೂ, ಇಂದ್ರಿಯಗಳ ಮೂಲಕ ಅರ್ಪಿಸಲ್ಪಟ್ಟು ಕರಣಾರ್ಪಿತ ವೆಂದೂ ಭಾವದಿಂದ ಅರ್ಪಿಸಲ್ಪಟ್ಟು ಭಾವಾರ್ಪಿತವೆಂದೂ ಪರಿಪೂರ್ಣದಿಂದ ಪರಿಪೂರ್ಣಕ್ಕೆ ಅರ್ಪಿಸಲ್ಪಟ್ಟು ಕೊಡುವುದೂ ಕೊಳ್ಳುವುದೂ ಒಂದೇ ಆಗಿ ಒಳಗು ಹೊರಗಾಗಬೇಕು; ಹೊರಗು ಒಳಗಾಗಬೇಕು, ‘ಕೊಡುವವ ಸಂಗ, ಕೊಳ್ಳುವವ ಸಂಗ ಎನಗೊಂದೂ ಭಾರವಿಲ್ಲ’ ಎಂದು ಬಸವಣ್ಣನವರು ಹೇಳುವ ಮಾತಿನ ಆಂತರ್ಯವು ಇದೇ. ಬಯಲೇ ಹೊಲ, ಬಯಲೇ ಬೀಜ; ಬಯಲು ಬಯಲನ್ನೇ ಬಿತ್ತಿ, ಬಯಲು ಬಯಲನ್ನೇ ಬೆಳೆದಂತೆ ಈ ಸಿದ್ಧಾಂತದ ವಿಧಿವಿಧಾನಗಳು ರೂಪುಗೊಂಡಿವೆ. ಈ ಬಗೆಗೆ ಚೆನ್ನಬಸವಣ್ಣನವರು ತಮ್ಮ ಮಿಶ್ರಾರ್ಪಣ ವಿಧಿಯನ್ನು ಹೀಗೆ ಪ್ರಾರಂಭಿಸುತ್ತಾರೆ.
“ಷಟ್ಸ್ಥಲಬ್ರಹ್ಮವನೊಡಗೂಡಿಹನೆಂದಡಾರಿಗೆ ನಿಲುಕುವುದಯ್ಯ; ಅರ್ಪಿತ ಅನರ್ಪಿತವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ ? ಅರ್ಪಣದೊಳಗಣ ಅರ್ಪಣ ಭೇದವನರಿದು ಸೊಪ್ಪಡಗಿದ ನಿಷ್ಪತಿ ನಿಜಲಿಂಗೈಕ್ಕದಿರವು ಅದೆಂತಯ್ಯ ? ಎಂದರೆ ಕಾಯದ ಕೈಮುಟ್ಟಿ ಕ್ರಿಯಾರ್ಪಣಮಾಡುವಲ್ಲಿ;
ಭೋಜವಾಚಾರಲಿಂಗದಲ್ಲಿ, ಪಾನೀಯ ಗುರುಲಿಂಗದಲ್ಲಿ, ಭಕ್ಷ್ಯಶಿವಲಿಂಗದಲ್ಲಿ, ಚೋಹ್ಯ ಜಂಗಮಲಿಂಗದಲ್ಲಿ, ಲೇಹ್ಯ ಪ್ರಸಾದಲಿಂಗದಲ್ಲಿ, ಇವೆಲ್ಲರಲ್ಲಿಯ ಅರಿವು ಮಹಾಲಿಂಗದಲ್ಲಿ. ಇಂತೀ ಷಡ್ವಿಧ ಕಾಯಾರ್ಪಣವಾದಲ್ಲಿ ಮುಂದೆ ಕರಣಾರ್ಪಿತಭೇದವ ಪೇಳ್ವೆ ಎಂದು ಹೇಳುತ್ತ ಚನ್ನಬಸವಣ್ಣನವರು-
ನಾಸಿಕದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ನೇತ್ರದಲ್ಲಿ ಶಿವಲಿಂಗ, ತ್ವಕ್ಕಿನಲ್ಲಿ ಜಂಗಮಲಿಂಗ, ಶ್ರೋತ್ರದಲ್ಲಿ ಪ್ರಸಾದಲಿಂಗ, ಹೃದಯದಲ್ಲಿ ಮಹಾಲಿಂಗ, ಇಂತೀ ಷಡ್ವಿಧ ಲಿಂಗಾರ್ಪಣದ ವಿವರವೆಂತೆಂದಡೆ :
ಆಚಾರಲಿಂಗದರಿವು ಗಂಧ: ಗುರುಲಿಂಗದರಿವು ರಸ: ಶಿವಲಿಂಗದರಿವು ರೂಪ; ಜಂಗಮಲಿಂಗದರಿವು ಸ್ಪರ್ಶನ: ಪ್ರಸಾದಲಿಂಗದರಿವು ಶಬ್ದ: ಮಹಾಲಿಂಗದರಿವು ಸರ್ವೇಂದ್ರಿಯ.
‘ಇಂತೀ ಪಡ್ವಧಲಿಂಗಕ್ಕೆ ಮಿಶ್ರಾರ್ಪಣ ಛತ್ತೀಸ ತತ್ವದ ಭೇದವ ಕುರುಹಿನಲ್ಲಿ ಪೇಳ್ವೆ’ನೆಂದು ಸಕೀಲಗಳ ವಿವರದಂತೆ ೩೬, ೨೧೬ರ ವರೆಗೆ ಅರ್ಪಣವಿಧಾನದ ಸ್ವರೂಪ ವಿರಾಡೂಪಧರಿಸಿ ಸಾಗುತ್ತದೆ. ಇಲ್ಲಿ ನೋಡುವವರಿಗೆ ಕೂದಲು ಸಿಳಿಕೆ ಹೆಚ್ಚಾಯಿತೆಂದು ಭಾಸವಾಗಬಹುದು. ಯಾವ ಸಿದ್ಧಾಂತವೇ ಆಗಿರಲಿ ಶಾಸ್ತ್ರಿಯವಾಗಿ ಅದು ತನ್ನ ಸತ್ಯವನ್ನು ಅದರ ಮೂಲದವರೆಗೂ ಇಳಿದು ಹೋಗಿ ವಿವರಣೆ ಕೂಡಲೇಬೇಕಾಗುತ್ತದೆ. ಇಲ್ಲದಿದ್ದರೆ ಶಾಸ್ತ್ರದ ಸಮಗ್ರತೆ ತರ್ಕಬದ್ಧವಾಗುವದಿಲ್ಲ. ಮೇಲಾಗಿ ಸಂಶಯಕ್ಕೆ ಎಡೆಯುಂಟಾಗುವುದು. ಈ ಮಿಶ್ರಾರ್ಪಣದ ವಿಧಾನ ೨೧೬ ಸಕೀಲಗಳಲ್ಲೂ ಪಸರಿಸಿದಾಗ ಪಿಂಡಪ್ರಪಂಚವೆಲ್ಲ ಶಿವಪ್ರಪಂಚವಾಗುವುದೆಂದು ಈ ಸಿದ್ಧಾಂತದ ನಂಬಿಕೆ. ಈ ವಿಧಿಯ ಶಾಸ್ತ್ರೀಯತೆ ತುಂಬಾ ವೈಜ್ಞಾನಿಕ ವಿಚಾರ ಪರಿಪ್ಲುತವಾಗಿದೆ. ಧರ್ಮವೂ ಒಂದು ಬಗೆಯ ವಿಜ್ಞಾನವೇ ಎಂಬುದು ಇದರಿಂದ ಅರ್ಥವಾಗುವಂತೆ ಇದೆ. ಮಹಾವೃಕ್ಷದ ಬೇರಿನಿಂದ ಹೀರಲ್ಪಟ್ಟ ಅನ್ನ ಸತ್ವವು ಬೊಡ್ಡೆ, ರಂಬೆ, ಕೊಂಬೆ, ಟಿಸಿಲು, ಅಕಲು, ಕವಲು, ಎಲೆ, ಹೂವು, ಹೀಚು, ಕಾಯಿ ಹಣ್ಣು, ಆದರೊಳಗಿರುವ ಬೀಜ ಇತ್ಯಾದಿ ಸಮಗ್ರ ಭಾಗಗಳಿಗೂ ಪ್ರಸಾರಗೊಂಡು ಆಖಂಡ ಮರದ ಯೋಗಕ್ಷೇಮಕ್ಕೆ ಕಾರಣವಾಗುವ ಹಾಗೆ, ಅರ್ಪಣ ವಿಧಿವಿಧಾನದ ಸಮಸ್ತವೂ ದೇಹದ ಕಣಕಣದ ವರೆಗೆ ಸಾಗಬೇಕೆಂಬುವ ವಿಶಿಷ್ಟವಾದ ಆಲೋಚನೆ ಮಾಡಿ ಅದರ ಕ್ರಮವನ್ನು ತಿಳಿಸಿರುವ ಶರಣರ ಈ ವೈಜ್ಞಾನಿಕ ದೃಷ್ಟಿಗೆ ಮೂಕ ವಿಸ್ಮಿತರಾಗಿ ವಿನಮ್ರ ಭಾವದಿಂದ ತಲೆಬಾಗುವಂತೆ ನಮ್ಮನ್ನು ಮಾಡುತ್ತದೆ.
ಈ ಮಿಶ್ರಾರ್ಪಣೆಯ ನಂತರದಲ್ಲಿ ಕ್ರಿಯಾಶಕ್ತಿ ಮಥನದಿಂದ ಪ್ರಾಣವಾಯು ವನ್ನೂ, ಜ್ಞಾನಶಕ್ತಿಮಥನದಿಂದ ಆಪಾನ ವಾಯುವನ್ನೂ ಇದರಂತ ಇಚ್ಛಾ, ಆದಿ, ಪರಾಶಕ್ತಿಗಳ ಮಥನದಿಂದ ಕ್ರಮವಾಗಿ ವ್ಯಾನ, ಉದಾನ ಸಮಾನಗಳನ್ನು ಚಿತ್ ಶಕ್ತಿಯೊಂದರಿಂದಲೇ ನಾಗ, ಕೂರ್ಮ, ಕ್ರಕರ ದೇವದತ್ತ, ಧನಂಜಯಾದಿ ದಶವಾಯು ಗಳನ್ನು ಹತೋಟಿಯಲ್ಲಿಟ್ಟುಕೊಂಡು ಶಿವಯೋಗಸಿದ್ಧಿಯನ್ನು ಸಾಧಿಸಬೇಕು. ಒಂದು ಎರಡಾಗಿ, ಎರಡು ಒಂದೊಂದರಲ್ಲೂ ಮೂರು ಮೂರಾಗಿ, ಮೂರು ಆರಾಗಿ, ಆರು ಮೂವತ್ತಾರಾಗಿ, ಮೂವತ್ತಾರು ಇನ್ನೂರ ಹದಿನಾರರವರೆಗೂ ಬೆಳೆದ ಈ ತತ್ವದ ಹರವು ವಿಲೋಮ ಕ್ರಮದಲ್ಲಿ ಪುನಃ ಹಿಂದಕ್ಕೆ ಕ್ರಮವಾಗಿ ಸಾಗುತ್ತ ನಿರ್ಭಾವಸ್ಥಿತಿ ಯಳವಡಬೇಕೆಂಬ ಪ್ರವೃತ್ತಿ, ನಿವೃತ್ತಿ ವಿಧಿವಿಧಾನಗಳ ಶಾಸ್ತ್ರೀಯ ನಿರೂಪಣ ಕ್ರಮ ಸೂಚ್ಯವಾಗಿಯೂ, ಅರ್ಥಪೂರ್ಣವಾಗಿಯೂ, ವೈಜ್ಞಾನಿಕವಾಗಿಯೂ ನಿರೂಪಿಸಲ್ಪಟ್ಟಿದೆ ಈ ಮಿಶ್ರಾರ್ಪಣದಲ್ಲಿ.
ಒಟ್ಟಿನಲ್ಲಿ ಮಿಶ್ರಾರ್ಪಣ ವಿಧಿಯ ಬಗೆಗೆ ಹೇಳುವುದಾರೆ : ಪಿಂಡಾಂಡವು ಬ್ರಹ್ಮಾಂಡದೊಡನೆ ಇಟ್ಟುಕೊಂಡ ತತ್ವಬದ್ಧವಾದ ಆತ್ಯಂತಿಕ ಸಂಬಂಧವೇ ಅರ್ಪಣ ವಿಧಿಯ ಮುಖ್ಯ ತಿರುಳೆಂದು ಕರೆಯಬಹುದು. ಈ ಅರ್ಪಣವು ಪಿಂಡಗತವಾದ ಸೂಕ್ಷ್ಮಾತ್ ಸೂಕ್ಷ್ಮಕರವಾದ ಭಾಗವಿಭಾಗಗಳವರೆಗೂ, ಕಣಕಣಗಳವರೆಗೂ ಪ್ರಸಾರ ಗೊಳ್ಳಬೇಕು. ಆಗಲೇ ಪಿಂಡ ಶರೀರವು ತದ್ಗತಮಲನಿವೃತ್ತಿಗೊಳಿಸಿಕೊಂಡು ಆತ್ಮ ತತ್ವವು ಸ್ವಯಂಪ್ರಕಾಶಗೊಳ್ಳುವುದು. ಎಲ್ಲೆಲ್ಲ ಪೂರ್ಣ ಬೆಳ್ಳಂಬೆಳಕಾಗುವುದು, ಆಗ ವಾಚಾತೀತವೂ, ಮನೋತೀತವೂ, ಭಾವಾತೀತವೂ ಆದ ಶೂನ್ಯ (ಪರಿಪೂರ್ಣ) ಸ್ಥಿತಿಯಳವಟ್ಟು ಸರ್ವಶೂನ್ಯನಿರಾಲಂಬ ನಿಶ್ಯಬ್ದ ಬ್ರಹ್ಮಸ್ಥಿತಿಯಳವಡುವುದು. ಆ ಸ್ಥಿತಿ, ಅಭೇದ್ಯ ಭೇದಕ: ಅಸಾಧ್ಯ ಸಾಧಕ; ಚಿನ್ಮಯ ಚಿದ್ರೂಪ ಚಿದಾನಂದ ಸ್ಥಿತಿ ಎಂಬುದನ್ನು ಚೆನ್ನಬಸವಣ್ಣನವರು ತಮ್ಮ ಮಿಶ್ರಾರ್ಪಣ ಕೃತಿಯಲ್ಲಿ ಮನಂಬುಗುವಂತೆ ವಿವರಿಸಿದ್ದಾರೆ.
ಮೂಲ ಪಠ್ಯ
ಶ್ರೀ ಚೆನ್ನಬಸವೇಶ್ವರದೇವರು ನಿರೂಪಿಸಿದ ಮಿಶ್ರಾರ್ಪಣವು
ಷಟ್ ಸ್ಥಲ ಬ್ರಹ್ಮವನೊಡಗೂಡುವೆನೆಂದೊಡೆ ಅದು ಆರಿಗೂ ನಿಲುಕದಯ್ಯ, ಅರ್ಪಿತ ಅನರ್ಪಿತವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ ಅರ್ಪಣದೊಳಗಿನ ಅರ್ಪಣದ ಭೇದವನರಿದು ಸೊಪ್ಪಡಗಿದ ನಿಷ್ಪತ್ತಿ ನಿಜಲಿಂಗೈಕ್ಯನಿರವು ಅದು ಹೇಗೆಂದೊಡೆ
ಕಾಯಾರ್ಪಣ
ಕಾಯದ ಕೈಯ ಮುಟ್ಟಿ, ಕ್ರಿಯಾರ್ಪಣವ ಮಾಡುವಾಗ, ಭೋಜ್ಯ ವಾಚಾರಲಿಂಗದಲ್ಲಿ, ಪಾನ್ಯ ಗುರುಲಿಂಗದಲ್ಲಿ, ಭಕ್ಷ ಶಿವಲಿಂಗದಲ್ಲಿ, ಚೋಹ್ಯ ಜಂಗಮಲಿಂಗದಲ್ಲಿ, ಲೇಹ್ಯ ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ಅರಿವು ಮಹಾಲಿಂಗದಲ್ಲಿ – ಇಂತೀ ಷಡ್ವಿಧ ಕಾಯಾರ್ಪಣವಾದಲ್ಲಿ ಮುಂದೆ ಕರಣಾರ್ಪಣದ ಭೇದಮಂ ಪೇಳ್ವೆ,
ಕರಣಾರ್ಪಣ
ನಾಸಿಕದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ನೇತ್ರದಲ್ಲಿ ಶಿವಲಿಂಗ, ತ್ವಕ್ಕಿನಲ್ಲಿ ಜಂಗಮಲಿಂಗ, ಶೋತ್ರದಲ್ಲಿ ಪ್ರಸಾದಲಿಂಗ ಹೃದಯದಲ್ಲಿ ಮಹಾಲಿಂಗವು – ಇಂತೀ ಷದ್ವಿಧ ಲಿಂಗಾರ್ಪಣವೆಂತೆಂದೊಡೆ ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು, ಜಂಗಮಲಿಂಗದರಿವು ಸ್ಪರ್ಶನ, ಪ್ರಸಾದಲಿಂಗದರಿವು ಶಬ್ದ, ಮಹಾಲಿಂಗದರಿವು ಸರ್ವೇಂದ್ರಿಯ – ಇಂತೀ ಷಡ್ವಿಧ ಲಿಂಗಕ್ಕೆ ಮಿಶ್ರಾರ್ಪಣವು, ಛತ್ತಿಸ್ (೩೬)ತತ್ವದ ಭೇದಮಂ ಕುರುಹಿನಲ್ಲಿ ಪೇಳ್ವೆಂ
ಆಚಾರಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣ
ಇನ್ನು ಆಚಾರಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣದ ವಿವರವೆಂತೆಂದೊಡೆ – ಅವುದಾನೊಂದು ಅರ್ಪಣಕ್ಕೆ ಬೇಕಾದುದು ಬೇರು, ಗೆಣಸು ಮೊದಲಾದ ಗಂಧವನವುದು ಆಚಾರಲಿಂಗದಲ್ಲಿ, ಮರಗಡುತಿಹಗಿನ ಮೊದಲಾದ ಗಂಧವನರಿವುದು ಗುರುಲಿಂಗದಲ್ಲಿ, ಚಿಗುರು ಮೊದಲಾದ ಪತ್ರೆಯ ಗಂಧವನರಿವುದು ಶಿವಲಿಂಗದಲ್ಲಿ, ಮೊಗ್ಗೆ ಮೊದಲಾದ ಪುಷ್ಪದ ಗಂಧವನರಿವುದು ಜಂಗಮ ಲಿಂಗದಲ್ಲಿ, ಕಾಯಿ ಹಣ್ಣು ಮೊದಲಾದ ಫಲದ ಗಂಧವನರಿವುದು ಪ್ರಸಾದಲಿಂಗದಲ್ಲಿ, ಇವೆಲ್ಲರಲ್ಲಿಯ ಗಂಧವನರಿನ್ನದು ಮಹಾಲಿಂಗದಲ್ಲಿ, ಇಂತು ಆಚಾರಲಿಂಗದ ಮಿಶ್ರಾರ್ಪಣವು.
ಗುರುಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣ
ಇನ್ನು ಗುರುಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣದ ವಿವರವು. ಮಧುರವಾದ ರುಚಿಯನರಿವುದು ಆಚಾರಲಿಂಗದಲ್ಲಿ, ಒಗರಾದ ರುಚಿಯನರಿವುದು ಗುರುಲಿಂಗದಲ್ಲಿ, ಖಾರವಾದ ರುಚಿಯನರಿವುದು ಶಿವಲಿಂಗದಲ್ಲಿ, ಆಮ್ಲವಾದ ರುಚಿಯನರಿವುದು ಜಂಗಮಲಿಂಗದಲ್ಲಿ ಕಹಿಯಾದ ರುಚಿಯನರಿವುದು ಪ್ರಸಾದ ಲಿಂಗದಲ್ಲಿ, ಇವು ಎಲ್ಲರಲ್ಲಿಯ ರುಚಿಯನರಿವುದು ಮಹಾಲಿಂಗದಲ್ಲಿ. ಇಂತೀ ಪಂಚರಸಂಗಳು ಲವಣ ಕೂಡಿದಲ್ಲದೆ ರುಚಿಯಾಗಿ ಆ ಲವಣವನ್ನು ಪಂಚರಸಂಗಳಲ್ಲಿ ಕೂಡಿ ಅರ್ಪಿಸಬೇಕಲ್ಲದೆ ಬೇರೆ ಬೇರೆ ಅರ್ಪಿಸಲಾಗದು. ಇಂತು ಗುರುಲಿಂಗದ ಮಿಶ್ರಾರ್ಪಣವು.
ಶಿವಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣ
ಶಿವಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣದ ವಿವರವು, ಪೀತವರ್ಣದ ರೂಪನುವುದು ಆಚಾರಲಿಂಗದಲ್ಲಿ, ಶ್ವೇತವರ್ಣದ ರೂಪನರಿವುದು ಗುರುಲಿಂಗದಲ್ಲಿ, ಹರಿತವರ್ಣದ ರೂಪನರಿವುದು ಶಿವಲಿಂಗದಲ್ಲಿ, ಮುಂಜಿಷ್ಠವರ್ಣದ ರೂಪನರಿವುದು ಜಂಗಮಲಿಂಗದಲ್ಲಿ, ಕಪೋತವರ್ಣದ ರೂಪನರಿವುದು, ಪ್ರಸಾದ ಲಿಂಗದಲ್ಲಿ ಇಂತಿವು ಎಲ್ಲರಲ್ಲಿಯ ರೂಪನರಿವುದು ಮಹಾಲಿಂಗದಲ್ಲಿ ಇಂತು ಶಿವಲಿಂಗದ ಮಿಶ್ರಾರ್ಪಣವು,
ಜಂಗಮಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣ
ಇನ್ನು ಜಂಗಮಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣದ ವಿವರವು. ಕಠಿಣವಾದ ಸ್ಪರ್ಶನವನರಿವುದು ಆಚಾರಲಿಂಗದಲ್ಲಿ, ಮೃದುವಾದ ಸ್ಪರ್ಶನವನರಿವುದು ಗುರುಲಿಂಗದಲ್ಲಿ, ಉಷ್ಣವಾದ ಸ್ಪರ್ಶನವನರಿವುದು ಶಿವಲಿಂಗದಲ್ಲಿ, ಶೈತ್ಯವಾದ ಸ್ಪರ್ಶನವನರಿವುದು ಜಂಗಮಲಿಂಗದಲ್ಲಿ ನುಣುಪುಮಿಶ್ರವಾದ ಸ್ಪರ್ಶನವನರಿವುದು ಪ್ರಸಾದಲಿಂಗದಲ್ಲಿ – ಇಂತಿವು ಎಲ್ಲರಲ್ಲಿಯ ಸ್ಪರ್ಶನವನರಿವುದು ಮಹಾಲಿಂಗದಲ್ಲಿ – ಇಂತು ಜಂಗಮ ಲಿಂಗದ ಮಿಶ್ರಾರ್ಪಣವು,
ಪ್ರಸಾದಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣ
ಇನ್ನು ಪ್ರಸಾದಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣದ ವಿವರವು, ತಾಳ ಕಂಸಾಳವಿಡಿದು ಹುಟ್ಟಿದ ಶಬ್ದವನರಿವುದು ಆಚಾರಲಿಂಗದಲ್ಲಿ, ತಂತಿವಿಡಿದು ಹುಟ್ಟಿದ ಶಬ್ದವನರಿವುದು ಗುರುಲಿಂಗದಲ್ಲಿ, ಕುಡುಹು ಹಿಡಿದು ಹುಟ್ಟಿದ ಶಬ್ದವನರಿವುದು ಶಿವಲಿಂಗದಲ್ಲಿ, ಕೊಳಲು ವಾಸುಗಿ ನಾಗಸರ ಶಂಖದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಜಂಗಮಲಿಂಗದಲ್ಲಿ, ವಚನ ಗೀತದೊಳಗಾದಿಯಾಗಿ ಹುಟ್ಟಿದ ಶಬ್ದವನರಿವುದು ಪ್ರಸಾದಲಿಂಗದಲ್ಲಿ ಇಂತಿವೆಲ್ಲದರಲ್ಲಿಯ ಹುಟ್ಟಿದ ಶಬ್ದವನರಿವುದು ಮಹಾಲಿಂಗದಲ್ಲಿ – ಇಂತು ಪ್ರಸಾದ ಲಿಂಗದ ಮಿಶ್ರಾರ್ಪಣವು.
ಮಹಾಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣ
ಇನ್ನು ಮಹಾಲಿಂಗದ ಮಿಶ್ರ ಷಡ್ವಿಧ ಲಿಂಗಾರ್ಪಣದ ವಿವರವು ಎಂತೆಂದೊಡೆ ಗಂಧದ ತೃಪ್ತಿಯನರಿವುದು ಆಚಾರಲಿಂಗದಲ್ಲಿ, ರಸದತೃಪ್ತಿಯನರಿವುದು ಗುರುಲಿಂಗದಲ್ಲಿ, ರೂಪಿನ ತೃಪ್ತಿಯನರಿವುದು ಶಿವಲಿಂಗದಲ್ಲಿ, ಸ್ಪರ್ಶನ ತೃಪ್ತಿಯನರಿವುದು ಜಂಗಮಲಿಂಗದಲ್ಲಿ, ಶಬ್ದದ ತೃಪ್ತಿಯನುವುದು ಪ್ರಸಾದಲಿಂಗದಲ್ಲಿ, ಇವು ಎಲ್ಲರಲ್ಲಿಯ ತೃಪ್ತಿಯನರಿವುದು ಮಹಾಲಿಂಗದಲ್ಲಿ ಇಂತಿವು ಮಹಾಲಿಂಗದ ಮಿಶ್ರಾರ್ಪಣವು.
ಭಾವಾರ್ಪಣ
ಇಂತಿವು ಛತ್ತೀಸು ಕರಣಾರ್ಪಣವಾದಲ್ಲಿ ಅದರೊಳಗೆ ಭಾವಾರ್ಪಣವುಂಟು ಅದು ಹೇಗೆಂದೊಡೆ, ಮಿಶ್ರದೊಳಗಣ ಮಿಶ್ರಮಂ ಪೇಳ್ವೆ. ಆವುದಾನೊಂದು ಇಂದ್ರಿಯಂಗಳು ಸೋಂಕುವ ಕಾಲವೇಳೆ(?)ಆಚಾರ ಲಿಂಗದಲ್ಲಿ, ಸೋಂಕಿಹುದನರಿವ ಕಾಲವೇಳೆ ಗುರುಲಿಂಗದಲ್ಲಿ, ಅರಿದು ನಿಶ್ಚಯಿಸುವ ಕಾಲವೇಳೆ ಶಿವಲಿಂಗದಲ್ಲಿ, ನಿಶ್ಚಯಿಸಿ ಸುಖಿಸುವ ಕಾಲ ವೇಳೆ ಜಂಗಮಲಿಂಗದಲ್ಲಿ ಸುಖಿಸಿ ಪರಿಣಾಮಿಸುವ ಕಾಲವೇಳೆ ಪ್ರಸಾದ ಲಿಂಗದಲ್ಲಿ, ಪರಿಣಾಮಿಸಿ ತೃಪ್ತಿಯನೈದುವ ಕಾಲವೇಳೆ ಮಹಾಲಿಂಗದಲ್ಲಿ ಪಸರಿಸಿ, ಇಂತು ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣ ದೊಳಗೆ ಷಡ್ವಿಧಲಿಂಗ ಮಿಶ್ರಾರ್ಪಣ ಪರಿಪೂರ್ಣವಾಗಿ ಪಿಂಡಾಂಡದಲ್ಲಿ ಸದಾ ಸನ್ನಿಹಿತವಾಗಿಪ್ಪುದು. ಅದು ಸರ್ವರಿಗೆ ಸಾಧ್ಯವಪ್ಪುದೊ? ಅದು ಸರ್ವರಿಗೆ ಸಾಧ್ಯವಿಲ್ಲ. ಅದೇನು ಕಾರಣವೆಂದಡೆ, ಕುಚಿತ್ತವಳಿದು ಸುಚಿತ್ತ ನೆಲೆಗೊಂಡಲ್ಲದೆ ಆ ಹಸ್ತಕ್ಕೆ ಆಚಾರಲಿಂಗ ಸಾಧ್ಯವಾಗದು, ಕುಬುದ್ಧಿ ಅಳಿದು ಸುಬುದ್ಧಿ ನೆಲೆಗೊಂಡಲ್ಲದೆ ಆ ಹಸ್ತಕ್ಕೆ ಗುರುಲಿಂಗ ಸಾಧ್ಯವಾಗದು, ಅಹಂಕಾರವಳಿದು ನಿರಹಂಕಾರ ನೆಲೆಗೊಂಡಲ್ಲದೆ ಆ ಹಸ್ತಕ್ಕೆ ಶಿವಲಿಂಗ ಸಾಧ್ಯವಾಗದು, ವ್ಯಾಕುಲವಳಿದು ಸುಮನ ನೆಲೆಗೊಂಡಲ್ಲದೆ ಆ ಹಸ್ತಕ್ಕೆ ಜಂಗಮಲಿಂಗ ಸಾಧ್ಯವಾಗದು, ಅಜ್ಞಾನವಳಿದು ಸುಜ್ಞಾನ ನೆಲೆಗೆಂಡಲ್ಲದೆ ಆ ಹಸ್ತಕ್ಕೆ ಪ್ರಸಾದಲಿಂಗ ಸಾಧ್ಯವಾಗದು, ದುರ್ಭಾವವಳಿದು ಸದ್ಭಾವನೆ ನೆಲೆಗೊಂಡಲ್ಲದೆ ಆ ಹಸ್ತಕ್ಕೆ ಮಹಾಲಿಂಗ ಸಾಧ್ಯವಾಗದು – ಇಂತೀ ಷಡ್ವಿಧ ಹಸ್ತ ನೆಲೆಗೊಂಡಲ್ಲದೆ ಷಡ್ವಿಧಲಿಂಗ ಸಾಧ್ಯವಾಗವು, ಷಡ್ವಿಧಲಿಂಗ ಸಾಧ್ಯವಾದಲ್ಲದೆ ಲಿಂಗ ಸಂಯೋಗವಾಗದು. ಷಡ್ವಿಧಲಿಂಗ ಸಂಯೋಗವಾದಲ್ಲದೆ ಷಡ್ವಿಧ ಲಿಂಗಾರ್ಪಣದ ಮಿಶ್ರದೊಳಗಣ ಮಿಶ್ರಾರ್ಪಣದ ಛಾಯೆ ಕಾಣಿಸದು. ಅದು ಕಾರಣವಾಗಿ ಈ ಷಡ್ವಿಧಹಸ್ತ ಸ್ವಸ್ಥವಾಗಿ ನೆಲೆಗೊಂಬ ಭೇದಮಂ ಪೇಳ್ವೆ,
ಸುಚಿತ್ತದ ನೆಲೆ
ಅದೆಂತೆಂದೊಡೆ, ಕ್ರಿಯಾಶಕ್ತಿಯ ಮಥನದಿಂದ ಪ್ರಾಣವಾಯುವ ನಿಲ್ಲಿಸಿ ಆಧಾರ ಚಕ್ರದ, ಕೆಂಪು ವರ್ಣದ ನಾಲ್ಕುದಳದ ‘ವ ಶ ಷ ಸ’ ಎಂಬ ನಾಲ್ಕು ಅಕ್ಷರದ ಅಧಿದೈವ ಬ್ರಹ್ಮನ ಜಾಗ್ರತಾವಸ್ಥೆಯನ್ನು ‘ನ’ ಕಾರವೆಂಬ ಬೀಜಾಕ್ಷರದಿಂ ತಿಳಿದು ಇಂತೀ ಷಡ್ವಿಧ ವಿಚಾರವಿಡಿದು, ಸದ್ಭಕ್ತಿಯಿಂದ ಒಂದನೆಯ ತತ್ವವಾದಿಯ ಪಶ್ಚಿಮ ದಿಕ್ಕಿನ ಸದ್ಯೋಜಾತ ಮುಖವನರಿದು ಪೃಥ್ವಿಯ ಕಠಿಣವನ್ನು ಕಿಂಕುರ್ವಾಣ ಭಯ ಭಕ್ತಿಯಿಂದ ತಿಳಿದು, ತನುಗುಣ ನಾಸ್ತಿಯಾಗಿ ಭಕ್ತಸ್ಥಲವನಂಗಂಗೊಂಡುದೀಗ ಸುಚಿತ್ತದ ನೆಲೆ.
ಸುಬುದ್ಧಿಯ ನೆಲೆ
ಇನ್ನು ಜ್ಞಾನಶಕ್ತಿಯ ಮಥನದಿಂದ ಅಪಾನವಾಯುವ ನಿಲ್ಲಿಸಿ, ಸ್ವಾದಿಷ್ಠಾನ ಚಕ್ರದ ನೀಲವರ್ಣದ ಷಡುದಳದ ‘ಬ. ಭ. ಮ. ಯ. ರ. ಲ’ ಎಂಬ ಅಕ್ಷರದ ಅಧಿದೈವ ವಿಷ್ಣುವಿನ ಸ್ವಪ್ನಾವಸ್ಥೆಯನ್ನು ‘ಮ’ಕಾರವೆಂಬ ಬೀಜಾಕ್ಷರದಿಂ ತಿಳಿದು, ಇಂತೀ ಷಡ್ಡಿದ ವಿಚಾರವಿಡಿದು ನೈಷ್ಠಿಕ ಭಕ್ತಿಯಿಂದ ಎರಡನೆಯ ತತ್ವವಾದಿಯ ಉತ್ತರ ದಿಕ್ಕಿನ ವಾಮದೇವ ಮುಖವನರಿದು, ಅಪ್ಪುವಿನ ಮೃದುವನ್ನು ದೃಢವ್ರತದಿಂ ತಿಳಿದು ಸಂಸಾರ ನಾಸ್ತಿಯಾಗಿ, ಮಹೇಶ್ವರ ಸ್ಥಲವನಂಗಂಗೊಂಡುದೀಗ ಸುಬುದ್ಧಿಯ ನೆಲೆ.
ನಿರಹಂಕಾರದ ನೆಲೆ
ಇನ್ನು, ಇಚ್ಛಾಶಕ್ತಿಯ ಮಥನದಿಂದ ವ್ಯಾನವಾಯುವನ್ನು ನಿಲ್ಲಿಸಿ ಮಣಿಪೂರಕ ಚಕ್ರದ ಕುಂಕುಮ ವರ್ಣದ ದಶದಳದ ‘ಡ. ಢ. ಣ, ತ. ಥ. ದ. ಧನ, ಪಫ’ ಎಂಬ ದಶಾಕ್ಷರದ ಅಧಿದೈವ ರುದ್ರನ ಸುಷುಸ್ತಾವಸ್ಥೆಯನ್ನು ‘ಶಿ’ಕಾರವೆಂಬ ಬೀಜಾಕ್ಷರದಿಂ ತಿಳಿದು, ಇಂತಿ ಷಡ್ವಿಧ ವಿಚಾರವಿಡಿದು, ಅವಧಾನ ಭಕ್ತಿಯಿಂದ ಮೂರನೆಯ ತತ್ವವಾದಿಯ ತಿಳಿದು, ದಕ್ಷಿಣ ದಿಕ್ಕಿನ ಆಘೋರ ಮುಖರನರಿದು, ಅಗ್ನಿಯ ಉಷ್ಣವನ್ನು ಶಿವಯೋಗದಿಂ ಕೆಡಿಸಿ ಕಾಮ್ಯನಾಸ್ತಿಯಾಗಿ, ಪ್ರಸಾದಿ ಸ್ಥಲವನಂಗಂಗೊಂಡುದೀಗ ನಿರಹಂಕಾರದ ನೆಲೆ.
ಸುಮನದ ನೆಲೆ
ಇನ್ನು, ಆದಿಶಕ್ತಿಯ, ಮಥನದಿಂದ ತಿಳಿದು, ಉದಾನ ವಾಯುವ ನಿಲ್ಲಿಸಿ, ಅನಾಹತ ಚಕ್ರದ ಪೀತವರ್ಣದ ದ್ವಾದಶ ದಳದ ‘ಕ. ಖ. ಗ. ಘ. ಙ. ಚ. ಛ. ಜ. ಝ. ಞ. ಟ. ತ’ ಎಂಬ ದ್ವಾದಶ ದಳದ ಅಕ್ಷರದ ಅಧಿದೈವ ಈಶ್ವರನ ತೂರ್ಯಾವಸ್ಥೆಯನ್ನು ‘ವ’ಕಾರವೆಂಬ ಬೀಜಾಕ್ಷರದಿಂ ತಿಳಿದು ಇಂತೀ ಷಡ್ವಿಧ ವಿಚಾರವಿಡಿದು ಅನುಭಾವ ಭಕ್ತಿಯಿಂದ ನಾಲ್ಕನೆ ತತ್ವವಾದಿಯ ಪೂರ್ವದಿಕ್ಕಿನ ತತ್ಪುರುಷ ಮುಖವನರಿದು, ವಾಯುವಿನ ಚಲನೆಯನ್ನು ಪರಿಪೂರ್ಣತ್ವದಿಂ ಕಡಿಸಿ ಗಮನ ನಾಸ್ತಿಯಾಗಿ, ಪ್ರಾಣಲಿಂಗಿಯ ಸ್ಥಲವಿನಂಗಂಗೊಂಡುದೀಗ ಸುಮನದ ನೆಲೆ.
ಸುಜ್ಞಾನದ ನೆಲೆ
ಇನ್ನು ಪರಿಶಕ್ತಿಯ ಮಥನದಿಂದ ಸಮಾನವಾಯುವ ನಿಲ್ಲಿಸಿ, ವಿಶುದ್ಧಿ ಚಕ್ರದ ಶ್ವೇತವರ್ಣದ ಸೂಚಕ ದಳದ ಅ. ಆ. ಇ. ಈ. ಉ. ಊ. ಎ. ಏ. ಐ. ಒ. ಓ. ಔ. ಎಂಬ ಷೋಡಶಕ್ಷರದ ಅಧಿದೈವ ಸದಾಶಿವನ ಅತೀತಾವಸ್ಥೆಯನ್ನು ‘ಯ’ಕಾರವೆಂಬ ಬೀಜಾಕ್ಷರದಿಂ ತಿಳಿದು, ಇಂತೀ ಷಡ್ವಿಧ ವಿಚಾರವಿಡಿದ, ಆನಂದ ಭಕ್ತಿಯಿಂದ ಐದನೆಯ ತತ್ವಾದಿಯ, ಊರ್ಧ್ವ ದಿಕ್ಕಿನ ಈಶಾನ ಮುಖವನರಿದು, ಆಕಾಶದ ಭ್ರಮೆಯನ್ನು ಪರಿಣಾಮದಿಂ ತಿಳಿದು ಕರ್ಮನಾಸ್ತಿಯಾಗಿ, ಶರಣಸ್ಥಲವನಿಂಟಿಗೊಂಡುದೀಗ ಸುಜ್ಞಾನದ ನೆಲೆ.
ಸದ್ಭಾವದ ನೆಲೆ
ಇನ್ನು ಚಿತ್ ಶಕ್ತಿಯ ಮಥನದಿಂದ ನಾಗ ಕೂರ್ಮ ಮಕರ ದೇವದತ್ತ ಧನಂಜಯ ಎಂಬ ಪಂಚವಾಯುವ ನಿಲಿಸಿ, ಆಜ್ಞಾಚಕ್ರದ ಮಾಣಿಕ್ಯ ವರ್ಣದ ದ್ವಿದಳದ ‘ಹಂ ಕ್ಷಂ’ ಎಂಬ ದ್ವಿಅಕ್ಷರದ ಅಧಿದೈವ ಮಹಾಶ್ರೀಗುರುವಿನ ನಿರಾವಸ್ಥೆಯಂ ‘ಓಂ’ಕಾರವೆಂಬ ಬೀಜಾಕ್ಷರದಿಂ ತಿಳಿದು, ಇಂತಿ ಷಡ್ವಿಧ ವಿಚಾರವಿಡಿದು ಸಮರಸ ಭಕ್ತಿಯಿಂದ ಆರನೆಯ ತತ್ವವಾದಿಯ ಗಂಭೀರ ದಿಕ್ಕಿನ ಮಹಾತತ್ವದ ಮುಖವನರಿದು, ಆತ್ಮನ ಅಹಂ ಮಮತೆಯನ್ನು ಘನಪ್ರಕಾಶದಿಂ ತಿಳಿದು ಮೋಕ್ಷಾರ್ಥ ನಾಸ್ತಿಯಾಗಿ, ಐಕ್ಯಸ್ಥಲವನಂಗಂಗೊಂಡುದೀಗ ಸದ್ಭಾವದನೆಲೆ.
ತ್ರಯಾಂಗ ಸ್ಥಲದ ವಿವರ
ಇಂತೀ ಷಡ್ವಿಧ ಶಕ್ತಿಯ ಮಥನದಿಂದ ದಶವಾಯುಗಳ ನಿಲ್ಲಿಸಿ, ಷಡ್ವಿಧ ಚಕ್ರದ, ಷಡ್ವಿಧ ವರ್ಣದ, ಷಡ್ವಿಧ ದಳದ, ಷಡ್ವಿಧ ಅಕ್ಷರದ ಷಡ್ವಿಧ ಅಧಿದೈವದ, ಷಡ್ವಿಧ ಅವಸ್ಥೆಯನ್ನು, ಷಡ್ವಿಧ ಬೀಜಾಕ್ಷರದಿಂ ತಿಳಿದು, ಇಂತೀ ಅಂತರ್ಮುಖದ ಛತ್ತೀಸು ವಿಚಾರವಿಡಿದು ಕಾಣಿಸಿದ ಷಡ್ವಿಧ ಭಕ್ತಿಯಿಂದ ಷಡ್ವಿಧ ತತ್ವವಾದಿಯ ಷಡ್ವಿಧ ದಿಕ್ಕಿನ ಷಡ್ವಿಧ ಮುಖವನರಿದು, ಷಡ್ವಿಧ ಭೂತಗುಣವನು ಷಡ್ವಿಧ ಶೀಲವ್ರತದಿಂ ತಿಳಿದು, ಷಡ್ವಿಧ ಮದನಾಸ್ತಿಯಾಗಿ, ಷಡ್ವಿಧ ಅಂಗಸ್ಥಲವನುವಾಗಿ, ಷಡ್ವಿಧ ಹಸ್ತ ನೆಲೆಗೊಂಡು ಷಡ್ವಿಧಲಿಂಗ ಸಾಧ್ಯವಾಗಿ, ಇಂತೀ ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣದೊಳಗೆ, ಷಡ್ವಿಧ ಕಾಯಾರ್ಪಣ ಮಿಶ್ರ ಇಂದ್ರಿಯಾರ್ಪಣವು ಛತ್ತೀಸು ತತ್ವದ ಭೇದಮಂ ಕುರುಹಿನಲ್ಲಿ ಅರಿವು ಮಿಶ್ರ ಷಡ್ವಿಧವಾಗಿ ಷೋಡಶೋತ್ತರ ದ್ವಿಶತಾರ್ಪಣದಲ್ಲಿ ಪರಿಣಾಮವ ಪ್ರಸಾದದೊಳಗೋಲಾಡುತ್ತ, ಪರಿಣಾಮವು ಅಂಗವಾಗಿ, ಪರಿಣಾಮವು ಲಿಂಗವಾಗಿ, ಪರಿಣಾಮವು ಸಂಗವಾಗಿ, ಪರಿಣಾಮವು ಸಮರಸವಾಗಿ, ಒಳಹೊರಗೆ ತೆರಹಿಲ್ಲದೆ ಷಡ್ವಿಧ ಸ್ಥಳದ ಬೆಳಗ ಬೀರುತ್ತ, ತೋರುತ್ತ, ಮೀರುತ್ತ, ಇಂತೀ ಷಡ್ವಿಧ ಸ್ಥಲದ ನಿರ್ದೆಶವನು ಗುರು ಲಿಂಗಜಂಗಮವೆಂಬ ಮೂರುಸ್ಥಲದಲ್ಲಿ ಕಾಣಿಸಿ, ನಾದ ಬಿಂದು, ಕಳೆಯ ತಿಳಿದು, ಜೀವಾತ್ಮ, ಅಂತರಾತ್ಮ, ಪರಮಾತ್ಮನೆಂಬ ಆತ್ಮತ್ರಯದಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗವೆಂಬ ಲಿಂಗತ್ರಯವ ಸಂಬಂಧಿಸಿ, ಸ್ಥೂಲತನು, ಸೂಕ್ಷ್ಮತನು, ಕಾರಣತನವೆಂಬ ತನುತ್ರಯದಲ್ಲಿ ತ್ಯಾಗಾಂಗ ಭೋಗಾಂಗ ಯೋಗಾಂಗವೆಂಬ ತ್ರಯಾಂಗಸ್ಥಲ ಸಂಬಂಧವಾಗಿನಿಂದ ನಿರ್ದೆಶದ ವಿವರವೆಂತೆಂದಡೆ ಭಕ್ತ ಮಹೇಶ್ವರ ಎಂಬುಭಯಸ್ಥಲವು ತನು, ಮನ, ಧನದಲ್ಲಿ ವಂಚನೆಯಿಲ್ಲದೆ ಪ್ರಕಾಶಿಸುತ್ತಿರುದಾಗಿ, ತ್ಯಾಗಾಂಗಸ್ಥಲದ ಬೆಳಗಿನೊಳಗಡಗಿತ್ತು, ಪ್ರಸಾದಿ ಪ್ರಾಣಲಿಂಗಿ ಎಂಬುಭಯಸ್ಥಲವು ಲಿಂಗಾಂಗವಾಗಿ ಸಕಲ ಕಳೆಯೊಳಗೆ ಲಿಂಗವೆಂದೆನಿಸಿಕೊಂಡು ಪ್ರಕಾಶಿಸುತ್ತಿಹುದಾಗಿ ಭೋಗಾಂಗಸ್ಥಲದ ಬೆಳಗಿನೊಳಗಡಗಿತ್ತು. ಶರಣ ಐಕ್ಯರೆಂಬ ಉಭಯಸ್ಥಲವು ಭಿನ್ನ ರುಚಿಯನರಿಯದೆ ಪ್ರಕಾಶಿಸುತ್ತಿಹುದಾಗಿ, ಯೋಗಾಂಗಸ್ಥಲದ ಬೆಳಗಿನೊಳಗಡಗಿತ್ತು. ಇಂತು ತ್ರಯಾಂಗಸ್ಥಲದ ವಿವರ, ಇನ್ನು
ತ್ರಿಲಿಂಗ ಸ್ಥಲ
ತ್ರಿಲಿಂಗ ಸ್ಥಲದ ವಿವರವೆಂತೆಂದಡೆ- ಆಚಾರಲಿಂಗ ಗುರು ಲಿಂಗವೆಂಬ ಉಭಯ ಸ್ಥಲವು ಸಾಕಾರವಾಗಿ ಇಷ್ಟಲಿಂಗವೆನಿಸಿಕೊಂಡು ಅನಿಷ್ಟವ ಪರಿಹರಿಸಿತೋರಿತ್ತು. ಶಿವಲಿಂಗ ಜಂಗಮ ಲಿಂಗವೆಂಬುಭಯ ಸ್ಥಲ ಸಕಲ ನಿಃಕಲವಾಗಿ, ಪ್ರಾಣಲಿಂಗವೆನಿಸಿಕೊಂಡು ಒಳಹೊರಗೆ ಬೆಳಗಿ ತೋರಿತ್ತು. ಪ್ರಸಾದಲಿಂಗ ಮಹಾಲಿಂಗವೆಂಬುಭಯ ಸ್ಥಲವು ನಿರವಯವಾಗಿ ಭಾವಲಿಂಗವೆನಿಸಿ ಕೊಂಡು ಸರ್ವನಿರ್ವಹವ ಮಾಡಿತೋರಿತ್ತು. ಇಂತು ತ್ರಿಲಿಂಗ ಸ್ಥಲದ ವಿವರ,
ದಿವ್ಯ ಶಿವಯೋಗಿಯ ದರ್ಶನ
ಇಂತಿವು ಮೂರು ಸ್ಥಲದ ಲಿಂಗಾಂಗದ ನಿರ್ಣಯ ಮುಟ್ಟಿನೋಡುತ್ತ ಮೂರುಸ್ಥಲದ ಬೆಳಗನು ಭಕ್ತ ಜಂಗಮವೆಂಬುಭಯ ಸ್ಥಲದಲ್ಲಿ ಕಾಣಿಸಿ, ಶಿವಭಕ್ತಿಯಲ್ಲಿ ತಿಳಿದು, ಕಾಯಪ್ರಾಣದಲ್ಲಿ ಸಂಬಂಧಿಸಿ, ಭಕ್ತ, ಮಹೇಶ್ವರ, ಪ್ರಸಾದಿ ಎಂಬ ತ್ರಯಾಂಗ ಸ್ಥಲವು ಭಕ್ತನಲ್ಲಿಯೇ ಸುಳಿದು, ಪ್ರಾಣಲಿಂಗಿ ಶರಣೈಕ್ಯನೆಂಬ ತ್ರಯಾಂಗ ಸ್ಥಲವು ಜಂಗಮಲಿಂಗದಲ್ಲಿಯೇ ಸುಳಿದು, ಸಾಕಾರ ಮೂರುಸ್ಥಲವು ಕ್ರಿಯಾಚರಣೆಯಲ್ಲಿ ಸವೆದು, ನಿರಾಕಾರ ಮೂರುಸ್ಥಲವು ಜ್ಞಾನಾಚರಣೆಯಲ್ಲಿ ಸವೆದು, ಮಾರ್ಗಕ್ರಿಯೆ ಮೀರಿದ ಕ್ರಿಯೆಯೆಂದೆನಿಸಿ, ಕುರುಹಿನ ಸ್ಥಲವನು ರೂಪವ ಮಾಡಿ, ಅರುಹಿನ ಸ್ಥಲವನು ನಿರೂಪ ಮಾಡಿ, ರೂಪು ರುಚಿಯಂತೆ ಉಭಯಸ್ಥಲದಲ್ಲಿ ಒಂದು, ಉಭಯ ಸ್ಥಲವ ನೆಲೆಮಾಡಿ ತೋರುತ್ತ, ಉಭಯಸ್ಥಲವಳಿದುಳಿದು, ಏಕಮೇವ ಪರಬ್ರಹ್ಮವೆಂಬಲ್ಲಿ ತನ್ನ ಪಶ್ಚಿಮ ಪಾದದ ನಿಜ ಬೆಳಗಿನ ಪ್ರಭೆಯಲ್ಲಿ ಒಂದು ಎರಡಾದುದಂ ಕಂಡು, ಎರಡು ಮೂರಾದುದಂ ಕಂಡು, ಮೂರು ಆರಾದುದಂ ಕಂಡು, ಆರು ಮೂವತ್ತಾರಾದುದಂ ಕಂಡು, ಆ ಮೂವತ್ತಾರು ಇನ್ನೂರ ಹದಿನಾರು ಆದುದಂ ಕಂಡು, ಆ ಇನ್ನೂರ ಹದಿನಾರರ ಮಿಶ್ರ ಪಿಂಡಾಂಡದಲ್ಲಿ ಪರಿಪೂರ್ಣವಾಗಿ ಬೆಳಗಿ ತೋರಿತ್ತೆಂಬುದಂ ಕಂಡು, ಕಡೆಸೂಸಿ ಅರೆಮರುಳು ಬೆರಗು ನಿಬ್ಬೆರಗಾಗಿ ಪಿಂಡಾಂಡದಲ್ಲಿ ತೋರುವ ಪರಿಪೂರ್ಣ ಪ್ರಭೆಯನು ಆ ಇನ್ನೂರ ಹದಿನಾರರಲ್ಲಿ ಭೇದಿಸಿ, ಆ ಇನ್ನೂರ ಹದಿನಾರರ ಪ್ರಭೆಯನ್ನು ಆ ಇನ್ನೂರ ಹದಿನಾರರಲ್ಲಿ ಭೇದಿಸಿ, ಆ ಇನ್ನೂರ ಹದಿನಾರರ ಪ್ರಭೆಯನು ಮೂವತ್ತಾರರಲ್ಲಿ ಅರಿದು, ಆ ಮೂವತ್ತಾರರ ಬೆಳಗನು ಆರು ಸ್ಥಲದಲ್ಲಿ ಅರಿದು ಆ ಆರುಸ್ಥಲದನ್ವಯವನು ಮೂರು ಸ್ಥಲದಲ್ಲಿ ಅರಿದು ಆ ಮೂರುಸ್ಥಲದ ಮೂಲವನ್ನು ಉಭಯ ಸ್ಥಳದಲ್ಲಿ ಅರಿದು, ಆ ಉಭಯಸ್ಥಲದ ಉಪಮೆಯನು ಉಪಮಾತೀತದಲ್ಲಿ ಅರಿದು, ಉಪಮೆ ಅನುಪಮೆಯೆಂಬ ಅರಿವರಿತು ಮರವು ನಷ್ಟವಾಗಿ ||ಶೃತಿ|| ವಾಚಾತೀತಂ ಮನೋತೀತಂ | ಭಾವಾತೀತಮಗೋಚರಂ | ಸರ್ವಶೂನ್ಯ ನಿರಾಕಾರಂ | ನಿತ್ಯತ್ವಂ ಪರಮಂಪದಂ||” ಎಂದುದಾಗಿ ಗ್ರಂಥ ‘ಆದಿಶೂನಂ ಮಧ್ಯಂ | ಅಂತ್ಯ ಶೂನ್ಯಂ ನಿರಾಮಯಂ || ಸರ್ವಶೂನ್ಯಂ ನಿರಾಲಂಬಂ | ನಿಃಶಬ್ದಂ ಬ್ರಹ್ಮಮುಚ್ಯತೆ!’ ಎಂಬ ನುಡಿಗೆಡೆಗೆಡದೆ ನಿರವಯ ಸ್ಥಲದಲ್ಲಿ ನಿಜವ ನೈದಿಪ್ಪಾತನೀಗ ಅಭೇದ್ಯಭೇದಕ, ಅಸಾಧ್ಯ ಸಾಧಕ, ಚಿನ್ಮಯ, ಚಿದ್ರೂಪ, ಚಿದಾನಂದ ಇಂತಪ್ಪ ದಿವ್ಯಶಿವಯೋಗಿ, ಮಹಾಶರಣ ಪ್ರಭುದೇವರ ಬಸವಣ್ಣನ ಕರುಣದಿಂದ ನಾನು ಬದುಕಿದೆನಯ್ಯ ಕೂಡಲ ಚೆನ್ನಸಂಗಮದೇವ.
ಇಂತು ಮಿಶ್ರಾರ್ಪಣ ಸಂಪೂರ್ಣ೦, ಮಂಗಳ ಮಹಾ ಶ್ರೀ ಶ್ರೀ ಶ್ರೀ.
ಮಿಶ್ರಾರ್ಪಣದ ಸಾರ
ಮಿಶ್ರವೆಂದೊಡೆ ಪದಾರ್ಥ, ಅರ್ಪಣವೆಂದೊಡೆ ಲಿಂಗಾರ್ಪಣವು, ಆ ಲಿಂಗಾರ್ಪಣದ ಸಕಲಂಗಳನ್ನು ಹೇಳುವ ಶಾಸ್ತ್ರವು ಮಿಶ್ರಾರ್ಪಣವು. ಇದು ಅಷ್ಟಾವರಣ ಷಟ್ ಸ್ಥಲಗಳನ್ನು ತಿಳಿದವರಿಗೆ ಮಾತ್ರ ಸಾಧ್ಯವು. ಷಡ್ವಿಧಾಂಗವನ್ನು ಷಡ್ವಿಧಲಿಂಗದಲ್ಲಿ ಒಡಗೂಡಿಸಿ ಷಡ್ವಿಧಲಿಂಗ ಸಂಬಂಧವನ್ನು ಮಾಡಿಕೊಂಡು ಷಡ್ವಿಧ ಭಕ್ತಿವಿಡಿದು ಆಚರಿಸಿ ಪರಮಾತ್ಮನೊಡನಿರುವ ಸ್ಥಿತಿಯನ್ನುಂಟುಮಾಡಿಕೊಳ್ಳುವುದೇ ಮಿಶ್ರಾರ್ಪಣದ ಮುಖ್ಯ ಉದ್ದೇಶವು. ಇದರಲ್ಲಿ ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣಗಳೆಂದು ಮೂರು ಭಾಗಗಳಿವೆ.
ಕಾಯಾರ್ಪಣ
ಭೋಜ, ಪಾನ್ಯ, ಭಕ್ಷ: ಚೋಹ್ಯ (ಸುಲಿದು ತಿನ್ನುವ), ಲೇಹ್ಯ(ನೆಕ್ಕಿ ತಿನ್ನುವ) ಮತ್ತು ಇವೆಲ್ಲವುಗಳ ಅರಿವನ್ನು ಅನುಕ್ರಮವಾಗಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗಗಳಲ್ಲಿ ಷಡ್ವಿಧ ಭಕ್ತಿ ಸಕೀಲಗಳಿಂದ ಸಮರ್ಪಿಸುವುದೇ ಕಾಯಾರ್ಪಣವು.
ಕರಣಾರ್ಪಣ
ಪ್ರಾಣಲಿಂಗವು ನಾಶಿಕದಲ್ಲಿ ಪಂಚಾಚಾರ ಸ್ವರೂಪ ಆಚಾರಲಿಂಗವಾಗಿ, ಜಿಹ್ವೆಯಲ್ಲಿ ಮಂತ್ರಮೂರ್ತಿ ಗುರುಲಿಂಗವಾಗಿ, ನೇತ್ರದಲ್ಲಿ ಪ್ರಕಾಶ ಸ್ವರೂಪ ಶಿವಲಿಂಗವಾಗಿ, ತ್ವಕ್ಕಿನಲ್ಲಿ (ಚರ್ಮದಲ್ಲಿ) ಯಜನ ಪೂಜಾಸ್ವರೂಪವಾದ ಚರಲಿಂಗವಾಗಿ, ಶೋತ್ರದಲ್ಲಿ ಈಳನ ಪ್ರಾರ್ಥನಾ ರೂಪವಾದ ಪ್ರಸಾದಲಿಂಗವಾಗಿ, ಹೃದಯದೊಳಗೆ ಬೋಧಾರೂಪ ಮಹಲಿಂಗವಾಗಿರುತ್ತದೆ. ಆದುದರಿಂದ ಸುಗಂಧ, ಸುರಸ, ಸುಪ್ರಕಾಶ ಸುಸ್ಪರ್ಶನ, ಸುಶಬ್ದ ಸುಪರಿಣಾಮ – ಇವುಗಳನ್ನು ಅನುಕ್ರಮವಾಗಿ, ಆಚಾರಲಿಂಗ, ಗುರುಲಿಂಗ ಶಿವಲಿಂಗ, ಜಂಗಮಲಿಂಗ ಪ್ರಸಾದಲಿಂಗ ಮತ್ತು ಮಹಾಲಿಂಗಗಳಿಗೆ ಅರ್ಪಿಸತಕ್ಕದ್ದು. ಮುಂದೆ ಈ ಪದಾರ್ಥಗಳಲ್ಲಿ ಅವುಗಳ ಗುಣಗಳ ಪ್ರಕಾರ ಪುನಃ ಆರು ವರ್ಗಗಳನ್ನು ಮಾಡಿ, ಆಯಾ ಲಿಂಗಗಳಿಗೆ ಅರ್ಪಿಸುವುದೇ ಕರಣಾರ್ಪಣವು,
ಭಾವಾರ್ಪಣ
ಇದರಲ್ಲಿ ಆತ್ಮತತ್ವ ಸಂಬಂಧವಾದ ೨೧೬ ತೆರದ ತೃಪ್ತಿ ಪದಾರ್ಥಗಳು ೨೧೬ ಲಿಂಗಗಳಿಗೆ ೨೧೬ ಭಕ್ತಿ ಸಕೀಲಗಳಿಂದ ಸಮರ್ಪಿತವಾಗುವುವು. ಕರಣಾರ್ಪಣದ ಪ್ರತಿಯೊಂದು ಗುಂಪಿನಲ್ಲಿ ಆರು ಆರು ವಿಧಗಳಾಗಿ ೩೬ ಭಾಗಗಳಾಗುವವು. ಈ ಪ್ರತಿಯೊಂದರಲ್ಲಿ ಭಾವಲಿಂಗ ಸಂಬಂಧದ ಆರು ಕ್ರಿಯೆಗಳಿರುತ್ತವೆ. ಅವು, ಇಂದ್ರಿಯಗಳಿಗೆ ತಟ್ಟುವುದು, ತಟ್ಟಿದ್ದನ್ನು ತಿಳಿಯುವುದು, ತಿಳಿದದ್ದನ್ನು ನಿಶ್ಚಯಿಸುವುದು, ನಿಶ್ಚಯಿಸಿದ್ದನ್ನು ದೃಢೀಕರಿಸುವುದು, ದೃಢೀಕರಿಸಿದ್ದನ್ನು ಅನುಭವಿಸುವುದು, ಅನುಭವಿಸಿದ್ದನ್ನು ಆನಂದಿಸುವುದು-ಹೀಗೆ ಇರುತ್ತವೆ. ಅವು ಆತ್ಮಸಂಬಂಧವಾದವುಗಳು. ಅವುಗಳನ್ನು ಭಾವಲಿಂಗಕ್ಕೆ ಅರ್ಪಿಸಬೇಕು. ಮೂವತ್ತಾರು ಪದಾರ್ಥಾರ್ಪಿತ ಕರಣಾರ್ಪಣದ ಪ್ರತಿಯೊಂದರಲ್ಲಿ ಮೇಲೆ ಹೇಳಿದ ಆರು ಕ್ರಿಯೆಗಳು ಇದ್ದು, ಈ ಕ್ರಿಯೆಗಳೆಲ್ಲವೂ ೩೬ರ ಪ್ರತಿಯೊಂದರಲ್ಲಿ ಇರುವುದರಿಂದ ಎಲ್ಲವೂ ಕೂಡಿ ೨೬ ತೆರದ ಅರ್ಪಣಗಳಾಗುವವು. ಇದೇ ಭಾವಾ ರ್ಪಣವು.
ಇಂತು ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣದೊಳಗೆ ಷಡ್ವಿಧಲಿಂಗ ಮಿಶ್ರಾರ್ಪಣವು ಪಸರಿಸಿ ಲಿಂಗಪರಿಪೂರ್ಣವಾಗಿ ಪಿಂಡಾಂಡದಲ್ಲಿ ಸದಾ ಸನ್ನಿಹಿತನಾಗಿರುತ್ತಾನೆ. ಇದು ಸರ್ವರಿಗೆ ಸಾಧ್ಯವೆ ? ಸಾಧ್ಯವಿಲ್ಲ. ಏನು ಕಾರಣವೆಂದರೆ-
ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ ಸದ್ಭಾವ ನೆಲೆಗೊಳ್ಳದೆ ಷಡ್ವಿಧ ಲಿಂಗಗಳು ಸಾಧ್ಯವಾಗವು. ಷಡ್ವಿಧಲಿಂಗ ಸಂಯೋಗವಾಗದು. ಆ ಷಡ್ವಿಧಲಿಂಗಸಂಯೋಗವಾದಲ್ಲದೆ ಷಡ್ವಿಧಾರ್ಪಣದ ಮಿಶ್ರದೊಳಗಣ ವಿಶ್ರಾರ್ಪಣದ ಛಾಯೆ ಕಾಣಿಸದು.
ತ್ರಯಾಂಗ ಮತ್ತು ತ್ರಿಲಿಂಗ ಸ್ಥಲಗಳು
ಕೊನೆಯಲ್ಲಿ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಐಕ್ಯರೆಂಬ ಆರು ಸ್ಥಲಗಳು ತ್ಯಾಗಾಂಗ, ಭೋಗಾಂಗ, ಯೋಗಾಂಗ ಎಂಬ ಮೂರು ಅಂಗಸ್ಥಲಗಳ ಬೆಳಗಿನೊಳಗೆ ಅಡಗುವವು. ಅದೇ ಪ್ರಕಾರ ಆಚಾರಾದಿ ಅರುವಿಧ ಲಿಂಗಗಳು ಸಾಕಾರವಾಗಿ ಇಷ್ಟ ಪ್ರಾಣ ವತ್ತು ಭಾವಲಿಂಗಗಳೆನಿಸಿಕೊಳ್ಳುವವು.
ದಿವ್ಯ ಶಿವಯೋಗಿ
ಕೃತಿಯಲ್ಲಿ ಹೇಳಿದ ವಾಚ್ಯಾತೀತವೂ, ಮನೋತೀತವೀ, ಭಾವಾತೀತವೂ, ಅಗೋಚರವೂ, ಸರ್ವಶೂನ್ಯವೂ, ನಿರಾಕಾರವೂ, ಶಾಶ್ವತವೂ, ಆದಿ ಮಧ್ಯ ಅಂತ್ಯ ಶೂನ್ಯವೂ, ನಿರಾಮಯವೂ, ಸರ್ವ ಶೂನ್ಯವೂ, ನಿರಾಲಂಬ ನಿಃಶಬ್ದವೂ ಎನಿಸಿದ ಪರಬ್ರಹ್ಮವೇ ನಾನೆಂದು ಹೇಳುವ ನಡಿಗೆಡೆಗೊಡದೆ ನಿರವಯ ಸ್ಥಲದಲ್ಲಿ ನಿಜವನೈದಿದನೇ ಅಭೇದ್ಯ ಭೇದಕ, ಅಸಾಧ್ಯಸಾಧಕ, ಚಿನ್ಮಯ, ಚಿದಾನಂದ, ದಿವ್ಯ ಶಿವಯೋಗಿ ಮಹಾ ಶರಣಾದ ಪ್ರಭುದೇವರ ಬಸವಣ್ಣನ ಕರುಣದಿಂದ ಶ್ರೀ ಚೆನ್ನ ಬಸವಣ್ಣನವರು ಬದುಕಿರುವೆನೆಂಬ ಹೇಳುವಲ್ಲಿಗೆ ವಿಶ್ರಾರ್ಪಣ ಸಂಪೂರ್ಣ
(ಅನ್ನದಾನಯ್ಯ ಪುರಾಣಿಕ ಸಂಪಾದಿಸಿದ ಚೆನ್ನಬಸವ ಸಾಹಿತ್ಯ ಪು. ೩೪-೪೬)