ಚನ್ನಬಸವಣ್ಣ ಚರಿತ್ರೆ 18: ಸಿದ್ಧರಾಮದೇವರಿಗೆ ಅನುಗ್ರಹಿಸಿದ ಗುರುಕರುಣ ಭಾಗ-3

[ನಿನ್ನೆಯಿಂದ ಮುಂದುವರಿದ ಭಾಗ…)

ಲಿಂಗ ಪದದ ವ್ಯಾಖ್ಯಾನ ಮಾಡಿದ ತರುವಾಯ, ಸಿದ್ಧರಾಮದೇವರು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಕುರಿತು ವಿವರಿಸಲು ಮುಂದಾಗುತ್ತಾರೆ.

ಸೀಮೆ ಸಂಬಂಧಕ್ಕೆ ಮೀರಿಪ್ಪ ಮಂತ್ರಕ್ಕೆ
ರಾಜಮಂತ್ರವು ತಾನು ಪಂಚಾಕ್ಷರಿ.
ಪಂಚಾಕ್ಷರಿಯ ಗುಣದ ಬಸವಾಕ್ಷರತ್ರಯದ
ಧ್ಯಾನ ಮೌನದ ಗುಣದ ಸತ್ವವಿಡಿದು
ಆನಂದ ತ್ತ್ರೈಲಿಂಗ ಮೂಲಮಂತ್ರಕ್ಕೀಗ
ಬಸವಾಕ್ಷರತ್ರಯವು ಮಾತೆಯಯ್ಯಾ ಕಪಿಲಸಿದ್ಧ
ಮಲ್ಲಿಕಾರ್ಜುನಾ.

ಪಂಚಾಕ್ಷರಿ ಮಂತ್ರದಷ್ಟೇ ಬಸವಾಕ್ಷರತ್ರಯವು ಮಹತ್ವದ ಸ್ಥಾನ ಪಡೆದಿದೆ ಎಂಬುದು ಸಿದ್ಧರಾಮರ ಅಭಿಪ್ರಾಯ. ಮುಂದುವರಿದು ಮತ್ತೊಂದು ವಚನದಲ್ಲಿ ದಸೆದಿಕ್ಕುಗಳಲ್ಲಿ ಬಸವನಾಮವು ಹಬ್ಬಿತು, ಇಡೀ ವಸುಧೆಯೊಳಗಿರುವುದೆಲ್ಲವೂ ಬಸವಾಕ್ಷರತ್ರಯದಿಂದ ಉದ್ಭವಿಸಿದವು. ಸಕಲ ಬ್ರಹ್ಮಾಂಡಗಳು ಈ ಬಸವನಾಮದಿಂದಲೇ ಉಗಮವಾದವು

ಅಣ್ಣನ ನೋಡಿರೇ ಲೋಕಕ್ಕೆ! ಜಗದ ಕಣ್ಣ ಮದವ ಕಳೆದನು. ಮುಕ್ಕಣ್ಣನಿಪ್ಪೆಡೆಯ ತೋರಿದ, ಅಣ್ಣ ಬಸವಣ್ಣ ವಾಙ್ಮನಕ್ಕಗೋಚರ. ಮುಕ್ಕಣ್ಣನವತಾರಂಗಳನು ನಾಟಕವೆಂದರಿದು ಮೆರೆದ ಸತ್ಯ ಶುದ್ಧ ನಿರ್ಮಳ ಕೈವಲ್ಯ ವಾಙ್ಮನಕ್ಕಗೋಚರ. ಸತ್ಯ ಶುದ್ಧ ಬಸವಣ್ಣ. ಅಣ್ಣಾ, ನಿಮ್ಮಿಂದ ಶುದ್ಧವ ಕಂಡೆ, ಸಿದ್ಧವ ಕಂಡೆ, ಪ್ರಸಿದ್ಧವ ಕಂಡೆ, ಆರರಲ್ಲಿ ಆಂದೋಳವಾದೆ. ಆರು ವ್ರತದಲ್ಲಿ ನಿಪುಣನಾದೆ. ನೀನೊಂದು ಮೂರಾಗಿ, ಮೂರೊಂದಾಗಿ ತೋರಿದ ಗುಣವಿಂತುಟಯ್ಯಾ ಬಸವಣ್ಣಾ, ಇನ್ನೆನಗಾಧಿಕ್ಯವಪ್ಪುದೊಂದಿಲ್ಲ, ನಾನಿನ್ನುರವಣಿಸಿ ಹರಿವೆ, ಹರಿಹರಿದು ಭರದಿಂದ ಗೆಲುವೆ, ತತ್ತ್ವ ಮೂವತ್ತಾರರಿಂ ಮೇಲೆ ಒಪ್ಪಿಪ್ಪ ತತ್ತ್ವಮಸಿಯನೈದುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಎನಗರಿದಪ್ಪುದಿಲ್ಲ ಕಾಣಾ ಬಸವನ ಪ್ರಸಾದದಿಂದ!

ಲೋಕಲೌಕಿಕಂಗಳೆಲ್ಲಾ ನೀವು ಕೇಳಿರೆ, ಏಕೈಕ ರುದ್ರನ ಅವತಾರವನರಿದೆವೆಂಬಿರಿ, ನೋಡಿ ನಚ್ಚಿರೆ ಶಿವನ. ಶಿವನು ಬಸವಣ್ಣನಾದ ನೋಡಿರೆ! ಬಸವಣ್ಣ ಗುರುವಾದ, ಬಸವಣ್ಣ ಲಿಂಗವಾದ, ಬಸವಣ್ಣ ಚರವಾದ ಬಸವಣ್ಣ ಪರಿಣಾಮ ಪ್ರಸನ್ನ ಪರವಾದ, ಬಸವಣ್ಣ ಮೂಲತ್ರಯವಾದ, ಬಸವಣ್ಣ ಭಕ್ತಿ ಎರಡು ತ್ರಯವಾದ, ಬಸವಣ್ಣ ಆರಾರರಿಂ ಮೇಲೆ ತೋರಿದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ. ಬಸವಣ್ಣನ ಪ್ರಸಾದವಕೊಂಡು ಭವಂ ನಾಸ್ತಿಯಾದೆ.

ಸೀಮೆಯ ಮೀರಿದ ಸಂಬಂಧನೆ, ಸಂಬಂಧದಲ್ಲಿ ಸಮನಿಸದ ಸಂಯೋಗನೆ, ಎನ್ನ ಸಲಹುವ ಗುರು ಲಿಂಗ ಜಂಗಮ ಪಾದೋದಕ ಪ್ರಸಾದಕ್ಕೆ ಅರ್ಹನ ಮಾಡಿದೆ, ಗುರುವೇ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ. ನೀ ಬಸವನಾಗಿ ಬಂದು, ನಿನ್ನವರಿಗೆ ಯೋಗ್ಯನ ಮಾಡಿ ಭವವ ತಪ್ಪಿಸಿದೆ.

ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ, ಲಿಂಗವಾಗಿ ಬಂದೆನ್ನ ಮನದ ಮಲಿನವ ಕಳೆದಿರಿ. ಜಂಗಮವಾಗಿ ಬಂದೆನ್ನ ಪ್ರಪಂಚಕ ತನುವಂ ಕಳೆದು ಪರಮ ಸೀಮೆಯ ಮಾಡಿದಿರಿ, ಇಂತಿವೆಲ್ಲವೂ ಬಸವಣ್ಣನಾಗಿ, ಎನಗೆ ಪ್ರಸಾದವ ನೀಡಿ ಸಲಹಿದ ಕಪಿಲಸಿದ್ಧಮಲ್ಲಿಕಾರ್ಜುನಾ, ಇನ್ನೆಗತಿಶಯವೇನೂ ಇಲ್ಲ.

ಅರ್ಪಿತ ಅವಧಾನ ಮುಖಂಗಳು ಎಲ್ಲರಿಗೆ ಸುಲಭವೆ, ಅನಾದಿಸಂಸಿದ್ಧವಾಗಿ ಬಂದ ಬಸವಣ್ಣಂಗಲ್ಲದೆ? ತ್ರೈಲಿಂಗ ಮೂಲಕ್ಕೆ ಮಂತ್ರಾದಿರೂಪು ಬಸವಣ್ಣ. ತ್ರೈಲಿಂಗ ಪ್ರಸಾದಕ್ಕೆ ಅರ್ಹ ಬಸವಣ್ಣ. ಮೂರುಲಿಂಗ ಒಂದಾದ ಮೂರ್ತಿ ಬಸವಣ್ಣ. ಕಪಿಲಸಿದ್ಧ-ಮಲ್ಲಿಕಾರ್ಜುನಯ್ಯಾ ನೀ ಸಾಕ್ಷಿಯಾಗಿ ಬಸವನ ನೆನೆವವರು ನೀನಹರು.

ಪ್ರಥಮನಾಮಕ್ಕೀಗ ಬಸವಾಕ್ಷರವೆ ಬೀಜ. ಗುರು ನಾಮ ಮೂಲಕ್ಕೆ ಅಕ್ಷರಾಂಕ ಬಸವಣ್ಣ. ಬಸವಣ್ಣ ಬಸವಣ್ಣ ಬಸವಣ್ಣ ಎಂದೀಗ ದೆಸೆಗೆಟ್ಟೆನಯ್ಯಾ, ಗುರುವೇ ಕಪಿಲಸಿದ್ಧಮಲ್ಲಿಕಾರ್ಜುನಾ!

ಆದಿಯಾಧಾರಕ್ಕೆ ಮೂಲ ತಾ ಬಸವಣ್ಣ. ಹೋದನೈ ಭಕ್ತಿಯೊಳಗೆ ಹೊಲಬುದಪ್ಪಿ, ಊರನರಿಯದ ಗ್ರಾಮ, ಹೊಲಬುದಪ್ಪಿದ ಸೀಮೆ, ಆತನಾನತದಿಂದ ನೀನಾದೆನೈ. ಬಸವಣ್ಣ ಬಸವಣ್ಣ ಬಸವಣ್ಣ ಎಂಬ ನಾಮಾಕ್ಷರದೊಳಗೆ ದೆಸೆಗೆಟ್ಟೆನಯ್ಯಾ, ಗುರುವೇ ಕಪಿಲಸಿದ್ಧಮಲ್ಲಿಕಾರ್ಜುನಾ!

ಸಿದ್ಧರಾಮದೇವರು ಭಕ್ತಿಯ ಆವೇಶದಲ್ಲಿ ಬಸವಗುರುವಿನ ಮಹಿಮಾತಿಶಯಗಳನ್ನೆಲ್ಲ ಮೇಲಿನ ವಚನಗಳಲ್ಲಿ ಹಾಡಿ ಹರಿಸಿದ್ದಾರೆ. ಬಸವಾಕ್ಷರತ್ರಯಗಳ ಮಹಿಮೆಯನ್ನು ಇಷ್ಟು ಅದ್ಭುತವಾಗಿ ವಿವರಣೆ ನೀಡಿದವರು ಸಿದ್ಧರಾಮದೇವರೊಬ್ಬರೆ ಎಂದು ಅಭಿಮಾನದಿಂದ ಹೇಳಬಹುದು.

ಈ ವಚನಗಳನ್ನು ಮಂತ್ರಗೀತೆಗಳಾಗಿ ಪ್ರತಿನಿತ್ಯ ನಮ್ಮ ಮನೆಯಲ್ಲಿ ಮಕ್ಕಳಿಗೆ ಹಾಡಿಸಿದರೆ, ಅದೊಂದು ಅದ್ಭುತ ಪರಿಣಾಮಕ್ಕೆ ದಾರಿಯಾಗುವದು.

ಸಿದ್ಧರಾಮದೇವರ ಈ ಭಾವಾವೇಶದ ಸ್ತೋತ್ರವಚನಗಳನ್ನು ಕೇಳಿದ ಚನ್ನಬಸವಣ್ಣನವರು ಚರ್ಚೆಯ ದಿಕ್ಕನ್ನು ಬೇರೆಡೆಗೆ ತಿರುಗಿಸುತ್ತಾರೆ.

“ಅನಂತ ಕಾಲ ಹೋಗಿ ತರುಮರಾದಿಗಳಲ್ಲಿ ತಪವಿರುವುದನು, ಒಂದು ದಿನ ಗುರುಕರುಣಸೇವೆ ಸಾಲದೆ ಅಯ್ಯಾ? ಅನಂತಕಾಲ ಗುರುಚರಣಸೇವೆಯ ಮಾಡುವವನು, ಒಂದು ದಿನ ಲಿಂಗಪೂಜೆ ಸಾಲದೆ ಅಯ್ಯಾ? ಅನಂತಕಾಲ ಲಿಂಗಪೂಜೆಯ ಮಾಡುವದನು, ಒಂದು ದಿನ ಜಂಗಮತೃಪ್ತಿ ಸಾಲದೆ ಅಯ್ಯಾ? ಅನಂತಕಾಲ ಜಂಗಮತೃಪ್ತಿ ಮಾಡುವದನು ಒಂದು ನಿಮಿಷ ನಿಮ್ಮ ಶರಣರ ಅನುಭಾವ ಸಾಲದೆ ಕೂಡಲ ಚೆನ್ನಸಂಗಮದೇವಾ?”

ಶರಣರ ಅನುಭಾವದ ಪರಿಣಾಮಗಳನ್ನು ಚನ್ನಬಸವಣ್ಣನವರು ಈ ರೀತಿಯಾಗಿ ಸರಳವಾಗಿ ವಿವರಿಸಿದಾಗ ಸಿದ್ಧರಾಮದೇವರು ಶುದ್ಧ ಸಿದ್ಧ ಪ್ರಸಿದ್ಧ ಎಂಬ ಮೂರು ರೀತಿಯ ಪ್ರಸಾದ ಮಹಿಮೆಯನ್ನು ಮುಂದಿನ ವಚನದಲ್ಲಿ ವಿವರಿಸುತ್ತಾರೆ:

ಶುದ್ಧ ಸಿದ್ಧ ಪ್ರಸಿದ್ಧದ ನೆಲೆಯನರಿದಹೆನೆಂದು ತೊಳಲಿ ಬಂದೆ ಗಿರಿಗಹ್ವರದೊಳಗೆ, ಕಂಡೆ ಕಾಣೆನೆಂಬ ಸಂಶಯವಾಯಿತ್ತು. ಅದೇನು ಕಾರಣ? ನಿನ್ನವರ ಗಣಸಮೂಹಕ್ಕೆ ತಾತ್ಪರ್ಯವನೊಲ್ಲರಾಗಿ, ನೀನು ಸದ್ಭಕ್ತದೇಹಿಕನಾಗಿ ಸದ್ಭಕ್ತರಲ್ಲಿ ಒಚ್ಚತವೋಗಿ ಇಪ್ಪೆಯಾಗಿ, ಇಪ್ಪಾ ಗಿರಿಗಹ್ವರದಲ್ಲಿ ಗುರುವಿನ ಕರುಣದಿಂದ ಕಂಡೆ ನೀನಿಪ್ಪ ನೆಲೆಯ. ಶುದ್ಧವ ಗುರುವಿನಲ್ಲಿ, ಸಿದ್ಧವ ಲಿಂಗದಲ್ಲಿ, ಪ್ರಸಿದ್ಧವ ಜಂಗಮದಲ್ಲಿ ಕಂಡೆ, ಅರಿದೆ ನೆಚ್ಚಿದೆ ಮೆಚ್ಚಿದೆ; ಎನ್ನ ಸರ್ವ ಸ್ವಯವನೊಚ್ಚತಗೊಟ್ಟೆ. ನಿನ್ನ ಗಣಸಮೂಹಕ್ಕೆ ಪ್ರಾಪ್ತನಾದೆ. ನಿನ್ನ ಭಕ್ತರ ಸಲುಗೆಗೆ ಸಂದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ತಂದೆ!

ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧ ಪ್ರಸಾದದ ನಿಲುವು ಹೀಗಿತ್ತು ಎಂಬುದನ್ನು ಸಿದ್ಧರಾಮದೇವರು ವಿವರಿಸುತ್ತ ಲಿಂಗದೀಕ್ಷೆ ಪಡೆದ ನಂತರ ನಾನು ಸತ್ತು ಹುಟ್ಟಿದಂತಾಯಿತು. ಸೋಹಂ, ನಾಹಂ ಎಂಬ ಭೇದವಳಿದು, ನಾನು ನೀನೆಂಬ ಸಂದು ಅಳಿದು ಬಿಟ್ಟಿತು. ಇದೊಂದು ಸೋಜಿಗದ ಸನ್ನಿವೇಶ ನನಗೆ ಎಂದು ವಿವರಿಸುತ್ತಾರೆ.

ಸಿದ್ಧರಾಮದೇವರ ಈವರೆಗಿನ ಎಲ್ಲ ಬದಲಾವಣೆಗಳನ್ನು ಗಮನಿಸಿದ ಅಲ್ಲಮಪ್ರಭುದೇವರು, ಇದಕ್ಕೆಲ್ಲ ಕಾರಣರಾದವರು ಚನ್ನಬಸವಣ್ಣನವರು ಎಂಬುದರ ಅರಿವು ಇಟ್ಟುಕೊಂಡೆ ಹೇಳುವ ವಚನ ಮಾರ್ಮಿಕವಾಗಿದೆ.

ಗಗನ ಪವನದ ಮೇಲೆ ಉದಯಮುಖದನುಭಾವ. ಸದಮದಗಜವ ನಿಲಿಸುವ ಮಾವತಿಗ ಬಂದ, ಅಷ್ಟದಲ ಕಮಲದೊಳು ಸೃಷ್ಟಿಯಂಕುರ ಭಜನೆ ಮೆಟ್ಟಿನಿಂದಾತ ಪರಮಯೋಗಿಯಾಗದೆ ಮಾಣ. ಬಯಲ ಬಣ್ಣಕೆ ತಂದು ನೆಳಲ ಶೃಂಗಾರವ ಮಾಡಿದ ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಶರಣೆನುತಿರ್ದೆನು!

ಅವಿರಳಜ್ಞಾನಿ ಎನಿಸಿದ ಚೆನ್ನಬಸವಣ್ಣ ಆಗಾಧವಾದ ಶಕ್ತಿವುಳ್ಳವನು. ಗಗನ-ಗಾಳಿಗಿಂತ ಮೇಲೆ ನಿಂತವನು. ಅಲ್ಲಿ ಚಿತ್ಕಲಾಭಾನುವಾಗಿ ಸ್ವಯಂಪ್ರಕಾಶಿಸುತ್ತಿರುವನು, ಲೌಕಿಕದ ಯಾವ ವಿಷಯ ವಾಸನೆಗಳ ಸುಳಿವಿಲ್ಲದೆ, ಹಮ್ಮುಬಿಮ್ಮಿನ ಆನೆಯನ್ನು ಮೆಟ್ಟದ ಮಾವುತ. ಎಂಟುದಳ ಕಮಲದಳಗಳಲ್ಲಿ ಸುಳಿದಾಡಿದರೂ ಚಂಚಲತೆ ಹೊಂದದೆ ಭೋಗರಾಹಿತ್ಯನಾಗಿ ನಿಂದ ಪರಮಯೋಗಿ. ಬಯಲಿಗೆ ಆಕಾರವಿತ್ತು ಅಶುದ್ಧ ಮಾಯೆಯನ್ನು ಶುದ್ಧಗೊಳಿಸಿದ ಪರಮ ವಿದ್ಯಾನಿಧಿ ಗುಹೇಶ್ವರನ ಶರಣ ಚೆನ್ನಬಸವಣ್ಣಗೆ ಶರಣು ಶರಣೆನುತಿದ್ದೆನಯ್ಯಾ ಎಂದು ಭಾವತುಂಬಿ ಹೇಳುತ್ತಾರೆ.

ವಾಣಿ ನಾಲ್ಕರಮೇಲೆ ಮಾಣದೆ ನುಡಿವ ನಿರ್ವಾಣೆಯ ಸಂಭಾಷಣೆಯ ಮಾಡಬಲ್ಲರೆ ನಿರ್ವಾಣ, ವರ್ಣವೇಳರೊಳಗೆ ಪರಿಪೂರ್ಣವಾಗಿಪ್ಪ ಮಹಾವರ್ಣವ ತನ್ಮಯವ ಮಾಡಬಲ್ಲರೆ ನಿರ್ವಾಣ. ಸ್ಥಾನ ಹತ್ತರಲ್ಲಿ ಆನಂದ ಸಿಂಹಾಸನದ ನಾನಾ ಬೆಳಗಿನ ಬೀಜದ ತಿರುಳನನುಭವಿಸಬಲ್ಲರೆ ಲಿಂಗಾನುಭಾವಿ. ಪ್ರಣವ ಹತ್ತರಲ್ಲಿ ಧ್ಯಾನಚತುಷ್ಟಯ ಕೂಡಿದಲ್ಲಿಯ ಕೀಲಬಲ್ಲರೆ ಲಿಂಗೈಕ್ಯ. ಇದು ಕಾರಣ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ. ನಿಮ್ಮ ಶರಣ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

ಈ ವಚನಕ್ಕೆ ಖ್ಯಾತ ವಿದ್ವಾಂಸರಾಗಿದ್ದ ಜೋಳದರಾಶಿಯವರು ನೀಡುವ ವಿವರಣೆ ಅತ್ಯಂತ ಚೇತೋಹಾರಿಯಾಗಿದೆ: “ಪರಾ ಪಶ್ಯಂತೀ ಮಧ್ಯಮಾ ವೈಖರೀ ಈ ನಾಲ್ಕು ನಾಭಿಯಿಂದ ಕಂಠದವರಿವಿಗೂ ಏರಿಬಂದ ನಾದ. ಪದ ವಾಕ್ಯಗಳ ಮೆಟ್ಟಲುಗಳು. ನಾಭಿಯಲ್ಲಿ ನೆಲೆಸಿದ ಪರಾಈಶ್ವರೀಬೀಜ. ಮೇಲಿನ ಪಶ್ಯಂತೀ ಮಧ್ಯಮಾ ವೈಖರಿಗಳು ಆ ಬೀಜದಿಂದ ಪಲ್ಲವಿಸಿದ ವೃಕ್ಷದಂತೆ. ವೈಖರೀ ಮಾತಾಡುವ ಚಾತುರ್ಯ, ಮಧ್ಯಮಾ-ವರ್ಣವಿನ್ಯಾಸವಿಲ್ಲದ ಮಧುರನಿನಾದ (ಸ್ವರ). ಪಶ್ಯಂತೀ-ಅಂತರ್ದನಿ, ನಾದಕ್ಕೆ ಮೂಲ. ಪರಾ-ನಿಶ್ಯಬ್ದ, ಕಾಣದು-ಕೇಳದು, ನುಡಿಯದು-ಆದರೂ ಈ ಮೂರಕ್ಕೆ ಮೂಲ. ಇನ್ನೊಂದು ರೀತಿ ಸಮಂಜಸ-ವೈಖರೀ-ಭಕ್ತ, ಮಧ್ಯಮಾ-ಮಾಹೇಶ್ವರ, ಪಶ್ಯಂತೀ-ಪ್ರಸಾದಿ, ಪರಾ-ಪ್ರಾಣಲಿಂಗಿ, ಶರಣ ಈ ನಾಲ್ಕರ ಮೇಲಿರುವ ಚಿನ್ಮಯಿ ವಾಣಿಯಲ್ಲಿ ನುಡಿಯುತ್ತಾನೆ. ಇವುಗಳನ್ನು ದಾಟಿ ವಾಣಿ ನಿರ್ವಾಣಿಯಾದಾತ ಚೆನ್ನಬಸವಣ್ಣ. ಹಳದಿ, ಬಿಳುಪು, ಕೆಂಪು, ಹಸಿರು, ಬೂದು, ನೀಲ ಆಚೆಯದು ಮಹಾನೀಲ. ಬಣ್ಣವೇಶರೊಳಗೆ ಪೂರ್ಣ ಅದನ್ನು ಆ ಪರವಸ್ತುವಿನಲ್ಲಿ ಬೆರಸಿ ಬೇರಿಲ್ಲದೆ ಮಾಡಿದಾತ ಚೆನ್ನಬಸವಣ್ಣ. ಆಧಾರ ಚಕ್ರ ಮೊದಲು ಸಹಸ್ರಾರದಳದ ಆನಂದಸ್ಥಾನ (ಬ್ರಹ್ಮಸ್ಥಾನ)ದಲ್ಲಿ ಲಿಂಗಾನುಭಾವಿಯಾಗಿರಬಲ್ಲ ಚೆನ್ನಬಸವಣ್ಣ. ಹತ್ತು ಪ್ರಣವಾಕ್ಷರ ಓಂ, ಹಂ, ಸಂ, ಸಃ, ಹಂ, ನಂ, ಮಂ, ಶಿಂ, ವಾಂ, ಯಂ, ಇವು, ಓಂ ಹಂಸಧ್ಯಾನ, ಓಂ ಸೋಹಂಧ್ಯಾನ, ಓಂ ನಮೋ ಧ್ಯಾನ. ಓಂ ಶಿವಾಯ ಧ್ಯಾನ. ಇವು ನಾಲ್ಕು ವಿಧವಾದ ಧ್ಯಾನಗಳು. ಈ ಧ್ಯಾನ ಚತುಷ್ಟಯದ ಸಕೀಲಬಲ್ಲಾತ ಚೆನ್ನಬಸವಣ್ಣ. ಈ ಕಾರಣದಿಂದ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ ಶರಣ ಚೆನ್ನಬಸವಣ್ಣಗೆ ನಮೋ ನಮೋ ಎಂಬೆನು.ಸರ್ವೋತ್ತಮ ತತ್ವದೈಸಿರಿಯ ಭಾವನೆಯಿಂದ ಸಿದ್ಧರಾಮದೇವರು ತನ್ನ ಗುರು ಚೆನ್ನಬಸವಣ್ಣನನ್ನು ಕೊಂಡಾಡಿದ್ದಾನೆ. ನಿಶ್ಶಬ್ದದಿಂದ ಶಬ್ದವೈಖರಿಯಲ್ಲಿ ಮೇಲೆ ಸಾಗಿ ಮತ್ತೆ ನಿಶ್ಶಬ್ದದ ನಿರ್ವಾಣಿಯಾಗಿ ಸಪ್ತವರ್ಣಗಳಿಂದ ಮಹಾವರ್ಣನಿರ್ವಾಣಿ ಯಾಗಿ, ಪ್ರಣವಾಕ್ಷರಗಳಲ್ಲಿ ಸಹಸ್ರಾರು ಬ್ರಹ್ಮಸ್ಥಾನದಲ್ಲಿ ಲಿಂಗಾನುಭಾವಿಯಾಗಿ, ಧ್ಯಾನ ಚತುಷ್ಟಯದಲ್ಲಿ ಲಿಂಗೈಕ್ಯನಾಗಿ, ಅಭಿವರ್ಣಿಸಿ ತಾನು ಸರ್ವೋತ್ತಮನಾಗಿದ್ದಾನೆ ಸಿದ್ದರಾಮ.” (ಜೋಳದರಾಶಿ ದೊಡ್ಡನಗೌಡರು : ಬಯಲ ಗಳಿಕೆಯ ಬೆಳಗು ಪು. ೫೮೭)

ತಮಗೆ ಲಿಂಗದೀಕ್ಷೆ ಕರುಣಿಸಲು ಕಾರಣರಾದ ಬಸವ, ಚನ್ನಬಸವ-ಅಲ್ಲಮರ ಕುರಿತು ಸಿದ್ಧರಾಮದೇವರಿಗೆ ಎಷ್ಟು ಸ್ತುತಿಸಿದರೂ ಸಮಾಧಾನವಿಲ್ಲ. ಇನ್ನೂ ಮುಂದುವರಿದು ಭಕ್ತಿ-ಕ್ಷಮಾ-ಗುರುರೂಪ ಬಸವಣ್ಣ, ಪ್ರಸಾದ ರೂಪ ಚನ್ನಬಸವಣ್ಣ, ಜಂಗಮರೂಪ ಅಲ್ಲಮರು ನನಗೆ ದೊರೆತೆರೆಂದು ಹೇಳುತ್ತಾರೆ. ಅಷ್ಟೇ ಅಲ್ಲ, ದೇವರ ಒಲವು ನಿಲುವುಗಳನ್ನು ಈ ಲೋಕದಲ್ಲಿ ಕಾಣುವುದು ಅಷ್ಟು ಸುಲಭವಲ್ಲ. ಅದಕ್ಕಿಂತಲೂ ಲಿಂಗಭಕ್ತಿ ಜಂಗಮಭಕ್ತಿ ಗುರುಭಕ್ತಿ ತುಂಬ ಕಠಿಣ. ಹೀಗಾಗಿ ಲಿಂಗಭಕ್ತ ಪ್ರಭುದೇವರು. ಜಂಗಮಭಕ್ತ ಬಸವಣ್ಣ. ಗುರು ಮೊದಲಾದ ಪ್ರಸಾದ ಸರ್ವಕ್ಕೆ ಅನುಭಾವಿ ಚೆನ್ನಬಸವಣ್ಣ ಈ ಮೂರು ತತ್ವಗಳಿಗೆ ವ್ಯಾಖ್ಯಾನವಾಗಿ ಬದುಕಿದವರು. ಈ ಮೂವರ ಪಾದಕ್ಕೆ ನಮೋ ನಮೋ ಎಂಬೆನು ಎನ್ನುತ್ತಾರೆ.

ಭಕ್ತಿಯೇ ರೂಪಾದ ಬಸವಣ್ಣ ಮತ್ತು ಕ್ಷಮಾರೂಪು ನಮ್ಮ ಬಸವಣ್ಣ. ಎಲ್ಲದಕ್ಕು ಗುರುರೂಪು ಬಸವಣ್ಣ. ಪ್ರಸಾದರೂಪೇ ಚಿಕ್ಕದಣ್ಣಾಯಕ ಚೆನ್ನಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಾ ಪ್ರಭುವಾಗಿ ಬಂದು ಜಂಗಮನಾದನೆಂದರೆ, ಬಸವಣ್ಣ ಚೆನ್ನಬಸವಣ್ಣನ ಒಕ್ಕ ಪ್ರಸಾದವಕೊಂಡಾದ. ರಹಸ್ಯ ಯಾರಿಗೆ ಗೊತ್ತು. ಅಯ್ಯಾ, ಅಯ್ಯಾ, ನಿಮ್ಮನ್ನು ಕಂಡರಿಯುವದು ಸುಲಭವೇ ಲೋಕದಲ್ಲಿ? ಗುರು ಲಿಂಗ ಜಂಗಮ ಭಕ್ತಿಯೇನು ಸುಲಭವೆ? ಲಿಂಗಭಕ್ತಿ ದೊರೆತಿತ್ತು ಅಲ್ಲಮಪ್ರಭುದೇವರಿಗೆ. ಜಂಗಮಭಕ್ತಿ ಬಸವಣ್ಣಗೆ. ಸರ್ವಪ್ರಸಾದದನುಭಾವ ವೊದಗಿತ್ತು ಚೆನ್ನಬಸವಣ್ಣಗೆ, ಕಪಿಲಸಿದ್ಧಮಲ್ಲಿಕಾರ್ಜುನಾ. ನಾನಿಂತು ಇವರ ಶ್ರೀಪಾದಗಳಿಗೆ ನಮೋ ನಮೋ ಎಂಬೆ.

ಈ ಸಂಪಾದನೆಯ ಕೊನೆಯಲ್ಲಿ ಸಿದ್ಧರಾಮ ದೇವರು ಆನಂದತುಂದಿಲರಾಗಿ ಸಕಲ ಶರಣಗಣತಿಂಥಿಣಿಗೆ ಕೃತಜ್ಞತಾಪೂರ್ವಕ ಶರಣುಗಳನ್ನು ಸಲ್ಲಿಸುತ್ತ ಹೇಳಿದ ಕೊನೆಯ ವಚನ ಹೀಗಿದೆ:

ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ, ಗುರುವಿನ ಕೃಪೆಯಿಂದ ಮಲತ್ರಯದ ಪಂಕವತೊಳೆದೆ, ಗುರುವಿನ ಕೃಪೆಯಿಂದ ದೀಕ್ಷಾತ್ರಯ ದಿಂದನುಭಾವಿಯಾದೆ, ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ, ಎನಾಗಾಧಿಕ್ಕವಪ್ಪ ವಸ್ತು ಬೇರೊಂದಿಲ್ಲ. ಅದೇನು ಕಾರಣ? ಅವ ನಾನಾದೆನಾಗಿ, ಗುರುವೆ, ಎನ್ನ ತನುವಿಂಗೆ ಲಿಂಗದೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವದೀಕ್ಷೆಯ ಮಾಡಿ, ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮ ದೀಕ್ಷೆಯ ಮಾಡಿ, ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು. ಆ ಲೋಕಕ್ಕೆ ಹೊರಗಾದೆ ಅದೇನುಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ, ಗುರುವೆ, ಸದ್ಗುರುವೆ, ಎನ್ನ ಭವದ ಬೇರ ಹರಿದೆ! ಗುರುವೆ, ಭವಪಾಶ ವಿಮೋಚನ, ಅವ್ಯಯ, ಮನದ ಸರ್ವಾಂಗಲೋಲುಪ್ತ, ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣಾ, ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾಂತರೆಲ್ಲರನು ತೋರಿದೆ ಗುರುವೆ!

ಇಲ್ಲಿಗೆ ಪ್ರಭುದೇವರ ಶೂನ್ಯಸಂಪಾದನೆಯ ಸಿದ್ಧರಾಮದೇವರ ಗುರುಕರುಣ ಎಂಬ ಭಾಗ ಮುಕ್ತಾಯಗೊಳ್ಳುತ್ತದೆ. ಇಲ್ಲಿ ಶೂನ್ಯಸಂಪಾದನಕಾರ ಲಿಂಗದೀಕ್ಷೆ ಎಂಬ ಪದವನ್ನು ಬಳಸದೆ, ಗುರುಕರುಣ ಎಂಬ ಪದವನ್ನು ಬಳಸಿದ್ದು ಗಮನಿಸುವ ಅಂಶವಾಗಿದೆ. ಇಡೀ ಶೂನ್ಯಸಂಪಾದನೆಗಳು ಮತ್ತೆ ಮತ್ತೆ ಪರಿಷ್ಕರಣೆಗೆ ಒಳಗಾಗಿದ್ದು ಈ ಸಂಪಾದನೆಯ ದೃಷ್ಟಿಯಿಂದಲೇ ಎಂಬುದು ಇನ್ನೂ ಗಮನಾರ್ಹ ಅಂಶವಾಗಿದೆ.

ಒಟ್ಟಾರೆ, ಚನ್ನಬಸವಣ್ಣನವರು ತಮ್ಮ ಅಪಾರ ವಿದ್ವತ್ತು ಅನುಭವ ಸಾಧನೆಗಳಿಂದ ಇಡೀ ಅನುಭವ ಮಂಟಪದ ಲಕ್ಷ್ಯವನ್ನು ಸೆಳೆದು, ಎಲ್ಲರಿಗೂ ಗುರುಸ್ವರೂಪರಾಗಿ ಮಾರ್ಗದರ್ಶನ ಮಾಡುತ್ತಿದ್ದರೆಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಅಂತೆಯೆ ಶೂನ್ಯಸಂಪಾದನೆಗಳಲ್ಲಿ ಚನ್ನಬಸವಣ್ಣನವರ ಲೋಕಾತೀತ ಘನವ್ಯಕ್ತಿತ್ವವು ಮಾಣಿಕ್ಯದಂತೆ ಹೊಳೆಯುತ್ತಲೇ ಸಾಗಿದೆ.

Share This Article
Leave a comment

Leave a Reply

Your email address will not be published. Required fields are marked *