ಚನ್ನಬಸವಣ್ಣ ಚರಿತ್ರೆ: ಘಟಚಕ್ರ – ಭಾಗ-3

[ಇಂದು ಘಟಚಕ್ರದ ಮೂರನೆಯ ಅಂತಿಮ ಭಾಗ. ನಾಡಿನಾದ್ಯಂತ ಅನೇಕ ಅಧ್ಯಯನಾಸಕ್ತರು ತುಂಬ ಮೆಚ್ಚುಗೆಯ ಮಾತುಗಳನ್ನು ಆಡಿದರು. ಬೆಂಗಳೂರಿನ ಶರಣ ಶ್ರೀ ಉಮಾಶಂಕರ ಅವರು 65 ವರ್ಷಗಳಿಂದ ತಮ್ಮ ತಂದೆಯವರಿಂದ ಕಾಯ್ದುಕೊಂಡ ಬಂದ ಅಪರೂಪದ ಚಿತ್ರಪಟವನ್ನು ಕಳಿಸಿದ್ದಾರೆ. ಈ ಚಿತ್ರಪಟವೊಂದಿದ್ದರೆ, ಘಟಚಕ್ರ ಪೂರ್ಣಪ್ರಮಾಣದಲ್ಲಿ ಅರ್ಥವಾಗುವುದರಲ್ಲಿ ಸಂದೇಹವಿಲ್ಲ. ಕೇವಲ ವಚನಗಳಿಂದ-ಮಂತ್ರ ಬೀಜಗಳಿಂದ ಆವೃತ್ತವಾಗಿರುವ ಈ ಚಿತ್ರಪಟ ಲಿಂಗಸಂಕೀಲದ ಮತ್ತು ಮಾನವ ದೇಹದ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ಇನ್ನೂ ವಿಶೇಷವೆಂದರೆ ಇಲ್ಲಿಯ ಬೀಜಾಕ್ಷರಗಳ ಬಗ್ಗೆ ಮುಖ್ಯವಾಗಿ ಹೇಳಬೇಕು. ಕನ್ನಡವನ್ನು ಒಳಗೊಂಡಂತೆ ಭಾರತೀಯ ಭಾಷೆಗಳು 52 ಅಕ್ಷರಗಳಿಂದ ಕೂಡಿವೆ. ಇಂಗ್ಲಿಷದಂತೆ ಕೇವಲ 26 ಅಕ್ಷರಗಳಿಲ್ಲ. 52 ಅಕ್ಷರಗಳು ಮಾನವ ದೇಹಕ್ಕೂ ಹೇಗೆ ಅವಿನಾಭಾವ ಸಂಬಂಧ ಹೊಂದಿದೆ ಎಂಬುದರ ಸ್ಪಷ್ಟ ಪರಿಕಲ್ಪನೆ ನಮಗೆ ಆಗುತ್ತದೆ. ಹೀಗಾಗಿ ನಮ್ಮ ಭಾಷೆ ನಮ್ಮ ಹೆಮ್ಮೆ ಎನಿಸುತ್ತದೆ. ಈ ಕುರಿತು ನನ್ನ ಗಮನ ಸೆಳೆದ ಚಿತ್ರಪಟವನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಶರಣ ಉಮಾಶಂಕರ ಅವರಿಗೆ ಅನಂತ ಶರಣುಗಳು.]

(ನಿನ್ನೆಯಿಂದ ಮುಂದುವರಿದ ಭಾಗ….)

ಪಿಂಡಾಂಡ ಬ್ರಹ್ಮಾಂಡ:

ಇನ್ನು ಮಹಾ ಪುರುಷನಿಂದ ಕಲ್ಪಿತವಾದ ಪಿಂಡಾಂಡ ಬ್ರಹ್ಮಾಂಡ ಗಳಿಗೆ ಅಭೇಧವು ಹ್ಯಾಗಂದಡೆ- ನಾಶಿಕಾಗ್ರ ಪ್ರದೇಶ ಪೂರ್ವ ದಿಕ್ಕಿನಲ್ಲಿ ಇಂದ್ರಲೋಕ, ಕಣ್ಣಿನಲ್ಲಿ ತೇಜೋವತಿಪುರ, ಬಲಕಿವಿಯಲ್ಲಿ ಯಮ ಪುರ, ಬೆನ್ನಿನಲ್ಲಿ ವರುಣನಗರ, ಕಂಠದಲ್ಲಿ ವಾಯುನಗರ, ಎಡದ ಕಿವಿ ಉತ್ತರ ದಿಕ್ಕಿನ ನಾಮದಲ್ಲಿ ಕುಬೇರನ ಪಟ್ಟಣ. ಎಡದ ಕಣ್ಣಿನಲ್ಲಿ ಶಿವಲೋಕ, ಶಿರಸ್ಸಿನಲ್ಲಿ ಬ್ರಹ್ಮಲೋಕ. ಎರಡು ಪಾದಗಳಲ್ಲಿ ಆದಿಶೇಷ ಜೀವನಲ್ಲಿ ಕಾಲಾಗ್ನಿ ರುದ್ರಲೋಕ, ಅಂಗಾಲು ಅತಳಲೋಕ. ಹಿಮ್ಮಡ ವಿತಳ, ಪಾದದ ಸಂದು ಸುತಳ, ಪಕ್ಕೆಗಳು ತಳಾತಳ, ಮೊಣ ಕಾಲು ರಸಾತಳ, ತೊಡೆಗಳು ಮಹಾತಳ, ಕಟ (ನಡು) ಪಾತಾಳ ಇವು ಸಪ್ತ ಪಾತಾಳ ಲೋಕಗಳು.

ಇನ್ನು ಆಧಾರ ಚಕ್ರಸ್ಥನಾದ ಶೇಷನು ಹೆಡೆ ಎತ್ತಿಕೊಂಡು ನಾಶಿಕಾಗ್ರದ ಬ್ರಹ್ಮ ರಂಧ್ರದಲ್ಲಿಟ್ಟುಕೊಂಡು ಪಾತಾಳಲೋಕ ದೊರೆಯಾಗಿರುವನು, ಅದೇ ಘೋರ ನರಕವೆನಿಸುವದು. ಸೂರ್ಯ ಮಂಡಲದಿ೦ದ ದೈವ ಮಂಡಲದತನಕ ಸ್ವರ್ಗ, ಹೊಕ್ಕಳು ಬದಿಯಲ್ಲಿ ಭೂಲೋಕ, ಕುಕ್ಷಿಯ ಬದಿಯಲ್ಲಿ ಭುವರ್ಲೋಕ, ಹೃದಯದಲ್ಲಿ ಸುವರ್ಲೋಕ, ಎದೆಯಲ್ಲಿ ಮಹಾಲೋಕ, ಕಂಠದಲ್ಲಿ ಜನಲೋಕ, ಕಣ್ಣು ಬೊಂಬೆಗಳಲ್ಲಿ ಮರ್ತಲೋಕ, ಶಿರಸ್ಸಿನಲ್ಲಿ ಬ್ರಹ್ಮಲೋಕ – ಈ ಪ್ರಕಾರ ಬ್ರಹ್ಮಾಂಡ ಪಿಂಡಾಂಡದಲ್ಲಿದ್ದಿತು.

ಚತುರ್ದಶ ನಾಡಿಗಳು:

ಸುಷುಮ್ನ, ಈಡಾ, ಪಿಂಗಳ, ಗಾಂಧಾರಿ, ಹಸ್ತಿ ಜಿಹೈ, ಪೂಷಾ, ಪಯಸ್ವಿನಿ, ಲಕುಹ, ಅಲಂಬು, ಶಂಕಿನಿ – ಈ ಹತ್ತು ನಾಡಿಗಳಲ್ಲದೆ, ಸರಸ್ವತಿ, ವಿಶ್ವದ್ಧತಿ, ಬ್ರಾಹ್ಮ, ವಾರುಣಿ ಎಂಬ ನಾಲ್ಕು ಪ್ರಮುಖ ನಾಡಿಗಳುಂಟು, ಅವುಗಳ ಸ್ಥಾನ ಮತ್ತು ದೇವತೆಗಳ ವಿವರ – ಸರಸ್ವತಿಗೆ ಜಿಹೈ ಸ್ಥಾನ, ವಿರಾಟ ಅಧಿದೇವತೆ, ವಿಶ್ವದ್ಧತಿಗೆ ಜಠರಸ್ಥಾನ, ಪಾವಕ ಅಧಿದೇವತೆ, ಬಾಹೀಗೆ ವಾಮಪಾದಾಂಗುಷ್ಠ ಸ್ಥಾನ, ದಾರು ಣನು ಅಧಿದೇವತೆ, ವಾರುಣಿಕೆಯು ಸರ್ವಾಂಗಗಾಮಿನಿಯು, ವಾಯು ಅಧಿದೇವತೆ. ಇವುಗಳ ಅನುಷ್ಠಾನ ಉಪದೇಶ ಕ್ರಮವನ್ನು ಗುರೂಪ ದೇಶದಿಂದರಿವುದು. ಇನ್ನು –

ಚತುರ್ದಶ ವಾಯುಗಳ ವಿವರ:

ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯ – ಇವಲ್ಲದೆ ಇನ್ನು ನಾಲ್ಕು ವಾಯುಗಳು ವಜ್ರನು, ಮುಖ್ಯನು, ಅಂತರ್ಯಾಮಿ, ಪ್ರಪಂಚಕನು – ಈ ನಾಲ್ಕು ವಾಯುಗಳು ನಡೆಯುವ ಕ್ರಮವು ಹೀಗೆ, ಪ್ರಾಣವಾಯುವು ನಾಡಿಗ ಳೆಲ್ಲಕ್ಕೂ ಸುತ್ತಿ ಮೂಲಾಧಾರದಲ್ಲಿ ಓಂ, ಮಣಿಪೂರಕದಲ್ಲಿ ಹಂ ಎಂದು ತಾಕಿ ಈಡಾ ಪಿಂಗಳದಲ್ಲಿ ಸಾರಿ ಕಪಾಲದಲ್ಲಿ ಸುತ್ತಿ ಅಲ್ಲಿಂದ ಮೂಗಿ ನಲ್ಲಿ ೧೨ ಅಂಗುಲ ಪ್ರಮಾಣ ಹೊರಬಿದ್ದು ನಾಲ್ಕಂಗುಲ ಲಯವಾಗಿ ೮ ಅಂಗುಲ ಉದ್ದವಾಗಿ ತಿರುಗಿ ಒಳಗೆ ಹೋಗುವದು. ಇದು ಕಣ್ಣು ಬೊಂಬೆಗಳ ನಡುವೆ ಲಯವಾಗುವದು. ಹೀಗೆ ೬೦ ಘಳಿಗೆಗೆ ೨೧೬೦೦ ಉಶ್ವಾಸಗಳು ದಿನದಿನ ನಡೆಯುವವು. ೨೦೦೦ ಉಶ್ವಾಸ ಗಳು ನಷ್ಟವಾಗುವವು ೧೪೦೦೦ ಉಶ್ವಾಸಗಳು ನಿಲ್ಲುವವು. ಈ ಪರಿಯಿಂದ ಪ್ರತಿದಿನವೂ ಮನುಷ್ಯ ಮೊದಲಾದ ಸಕಲ ಜಂತುಗಳ ಆಯುಷ್ಯ ಕ್ಷೀಣವಾಗುವುದು.

ಇನ್ನು ದಶ ವಾಯುಗಳ ಸ್ಥಾನ – ಕಾರ್ಯಗಳು ಪ್ರಾಣವಾಯು ಹೃದಯಸ್ಥಾನದಲ್ಲಿದ್ದು ಉಶ್ವಾಸ-ನಿಶ್ವಾಸಗಳಂ ಮಾಡಿ ಅನ್ನ ಜೀರ್ಣಿಕರಣಮಂ ಮಾಡಿಸುತ್ತಿಹುದು. ಅಪಾನವಾಯು ಗುದಸ್ಥಾನದಲ್ಲಿದ್ದು ಮಲಮೂತ್ರ ವಿಸರ್ಜನೆಗೈಸಿ ಅನ್ನ ರಸವಂ ವ್ಯಾಪ್ತಿ ಯಂ ಮಾಡಿಸುವದು. ವ್ಯಾನವಾಯು ಸರ್ವ ಸಂಧಿಯಲ್ಲಿದ್ದು ಅನ್ನ ಪಾನಮಂ ತುಂಬಿಸುತ್ತಿಹುದು. ಉದಾನವಾಯು ಕಂಠಸ್ಥಾನದಲ್ಲಿದ್ದು ಅನ್ನರಸ ಆಹಾರ ಸ್ಥಾಪನಂಗೈಯ್ಯುತ್ತಿರುವುದು. ಸಮಾನವಾಯು

ನಾಭಿ ಸ್ಥಾನದಲ್ಲಿದ್ದು ಅನ್ನ ರಸಮಂ ಎಲ್ಲ ರೋಮನಾಳಂಗಳಿಗೆ ಹಂಚಿ ಕುತಿಹುದು. ನಾಗವಾಯು ರೋಮನಾಳಗಳಲ್ಲಿದ್ದು ಚಲನೆಯಿಲ್ಲದೆ ಆಡಿಸುತ್ತಿಹುದು. ಕೂರ್ಮವಾಯು ಉದರ ಲಲಾಟದಲ್ಲಿದ್ದು ನೇತ್ರದಲ್ಲಿ ಉಲನಮಂ ಮಾಡಿಸುತ್ತಿಹುದು. ಕ್ರಕರವಾಯು ನಾಸಿಕಾಗ್ರದ ಲ್ಲಿರ್ದು ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಗುಹ್ಯ ಕಟಸ್ಥಾನದಲ್ಲಿರ್ದು ಮರಣ ಕಾಲಕ್ಕೆ ನಿರ್ಘೋಷಮಪ್ಪುದು. ಇನ್ನುಳಿದ ನಾಲ್ಕು ವಾಯುಗಳು

ವಜ್ರವಾಯು – ೪೦ ಎಲುವುಳ್ಳ ಕಾಲಿನಲ್ಲಿ ಸೇರಿದ್ದು ದೇಹವು ಸುಕ್ಕಿಹೋದ ಹಾಗೆ ಮಾಡುವದು.

ಮುಖ್ಯವಾಯು – ಎಲುವುಗಳು ಕೂಡಿದ ದಿಕ್ಕಿನಲ್ಲಿ ಭುಜಗ ಳಲ್ಲಿ ನಿಂತು ತತ್ತ್ವಗಳನ್ನೆಲ್ಲ ಒಂದು ಮುಖಕ್ಕೆ ತರುವದು.

ಅಂತರ್ಯಾಮಿ ವಾಯು – ಪುರುಷಗೆ ವಾಹನವಾಗಿ ನಿಂತು ಪ್ರಾಣವಾಯುವಿನ ರಕ್ಷಣೆ ಮಾಡುವದು.

ಪ್ರಪಂಚವಾಯು – ಶರೀರಕ್ಕೆ ಬೇರಾಗಿ ದೇಹಸಂಚಲನವೆಸಗುವದು

ಇವೆಲ್ಲವೂ ಅಂಗವಗಲಿದರೆ ಕೆಟ್ಟು ಹೋಗುವವು.

ಸಪ್ತ ಧಾತುಗಳು: ರಸ, ರುಧಿರ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ಲ ಇಂತಿವು ಸಪ್ತಧಾತುಗಳು.
ಪಂಚಕೋಶಗಳು: ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ – ಇವು ಪಂಚಕೋಶಗಳು.
ಪಂಚಾವಸ್ಥೆಗಳು: ಜಾಗ್ರ, ಸ್ವಪ್ನ, ಸುಷುಪ್ತಿ, ತೂರ್ಯ, ತೂರ್ಯಾತೀತ ಪಂಚಾವಸ್ಥೆಗಳು. ವಿವರ :

೧. ಜಾಗ್ರಾವಸ್ಥೆ- ಪಂಚಭೂತ, ದಶೇಂದ್ರಿಯ, ಪ್ರಾಣಪಂ ಚಕ, ಅಂತಃಕರಣ, ಚತುಷ್ಟಯವೆಂಬ ೨೪ ತತ್ವಾತ್ಮಕ ಸ್ಕೂಲ ಶರೀರ ದಲ್ಲಿ, ಸತ್ವಗುಣ, ಅಕಾರಾಕ್ಷರ, ವಿಷ್ಣು ಅಧಿದೇವತೆ, ನೇತ್ರಸ್ಥಾನ, ಹೃದಯಕಮಲದ ಅಷ್ಟಗತಿಗಳಿಂದ ವಿಶ್ವ ಜೀವನು, ವಿರಾಟ ಸಂಜ್ಞೆಕನಾದ ಈಶ್ವರನು ಒಂದಾಗಿ ವನಿತಾದಿ ವಿಷಯ ಭೋಗನಂ ಸಕಲ ಕರಣ ಸಾಮಗ್ರಿಯಿಂದ ಅನುಭವಿಸುವುದು.

೨. ಸ್ವಪ್ನಾವಸ್ಥೆ- ಲೋಚನಾಗ್ರದಲ್ಲಿದ್ದಾತ್ಮನು, ಗಳ ಸ್ಥಾನ ತಿಳಿದು ಬಂದಾಗ ಕನಸು ಕಾಂಬುದೇ ಸ್ವಪ್ನ, ಇಪ್ಪತ್ತು ನಾಲ್ಕು ತತ್ವಗಳೊಳಗೆ ಸ್ಕೂಲಭೂತ ಐದನ್ನು, ಚಿತ್ರ ಬುದ್ಧಿಗಳೆರಡನ್ನು ಬಿಟ್ಟು ಮಿಕ್ಕ ಹದಿನೇಳು ತಮ್ಮ ಸಮಷ್ಟಿಯಾಗಿ ನಿಂದು ಸ್ಕೂಲ ತನುವಿನ ಮರವೇ ಸೂಕ್ಷ್ಮ ತನುವಿನೊಡನೆ ಕೂಡಿಕೊಂಡು ದೃಶ್ಯಾದೃಶ್ಯಮಾದಕಲ್ಪಿತ ರೂಪಿನ ಕಾಣಿಕೆಯಾಗಿಪ್ಪ ಸುಖದುಃಖ ಮೋಹ ರೂಪವಾದ ಸ್ವಪ್ನಂಗಳ ಕಾಣುವುದೇ ಸ್ವಪ್ನಾವಸ್ಥೆ. ಇಲ್ಲಿ ಸೂಕ್ಷ್ಮತನು, ರಜೋ ಗುಣ, ಉಕಾರಾಕ್ಷರ, ಬ್ರಹ್ಮನಧಿದೇವತೆ, ಕಂಠಸ್ಥಾನ, ಹೃತ್ಕಮಲ ಕರ್ಣಿಕಾಗತಿಗಳಿಂದ ತೈಜಸ ಜೀವನು, ಸೂತ್ರಾತ್ಮ ಸಂಜ್ಜಿತನಾದ ಈಶ್ವ ರನು ಒಂದಾಗಿ ಜಾಗ್ರದ್ವಾಸನಾ ವಿಷಯ ಭೋಗಮಂ ಮನವೆಂಬ ಕರ ಣದಿಂದ ಅನುಭವಿಸುವದು.

೩. ಸುಷುಪ್ತಾವಸ್ಥೆ- ಸಮಸ್ತ ಕಾರ್ಯವನೊಳಕೊಂಡು ತತ್ಸಂಸಾರ ಸಹಿತವಾಗಿ ಆತ್ಮಾಶ್ರಯದಲ್ಲಿ ನಿರವಸ್ಥೆಯಿಂದಿರ್ಪ ಪ್ರಕೃತಿ ರೂಪ ಕಾರಣ ದೇಹದಲ್ಲಿ ತಮೋಗುಣ, ಮಕಾರಾಕ್ಷರ, ರುದ್ರನಧಿದೇ ವತೆ, ಹೃತ್ಕಮಲ ಕರ್ಣಿಕಾ ಮಧ್ಯ ಗತಿಗಳಿಂದ ಪ್ರಾಜ್ಞ ಜೀವನು, ಅಂತ ರ್ಯಾಮಿಯಾದ ಈಶ್ವರನು ಒಂದಾಗಿ ಬ್ರಹ್ಮಾನಂದ ವಿಷಯ ಭೋಗ ಮಂ ಮಾಯಾ ವೃತ್ತಿಯೆಂಬ ಸೂಕ್ಷ್ಮ ಕರಣದಿಂದ ಅನುಭವಿಸುವುದು. ಸೂಕ್ಷ್ಮ, ೪. ತೂರ್ಯಾವಸ್ಥೆ- ಮರಣಾವಸ್ಥೆಯಂ ಪಡೆದಂತೆ ವ್ಯಾಪಾ ರಶೂನ್ಯನಾಗಿದ್ದರೂ, ನಿತ್ಯನಾಗಿ ಮನೋವ್ಯಾಪಾರವಿಲ್ಲದೆಯೂ, ಶಾಂತ ನಾಗಿ ಅಹಂಕಾರ ಮಮಕಾರವಿಲ್ಲದೆಯೂ, ಸುಖದುಃಖ ಮೋಹಾತ್ಮಕ ಗುಣತ್ರಯದ ವಾಸನೆ ಇಲ್ಲದೆಯೂ ಹೃದಯಾಸ್ಥಾನವನ್ನು ಮೀರಿದುದೇ ತೂರ್ಯಾವಸ್ಥೆಯು.

೫. ತೂರ್ಯಾತೀತಾವಸ್ಥೆ- ದೇಹದೊಡಗೂಡಿದರೂ ನಿರ್ಲೆಪವಾಗಿರುವ ಜೀವನ್ಮುಕ್ತ ಸ್ಥಿತಿಯು ತೂರ್ಯಾತೀತಾವಸ್ಥೆಯು, ಮಾನವರಿಗೆ ಮೊದಲಿನ ಮೂರು ಅವಸ್ಥೆಗಳು ತಮ್ಮಿಂದ ತಾವೇ ತೋರಿ ಸಂಸಾರಾತ್ಮಕವಾಗಿಹವು. ಮಿಕ್ಕವೆರಡವಸ್ಥೆಗಳು ಯೋಗಾಭ್ಯಾ ಸದಿಂದ ಜನಿಸಿ ಮುಕ್ತಿಸಾಧನಗಳಾಗಿರುವವು. ಈ ಅವಸ್ಥೆಗಳಂ ಗುರು ಕೃಪೆಯಿಂದರಿದು ಜೀವನ್ಮುಕ್ತರಾಗುವದು. ಇನ್ನು ಮೂರು ನದಿಗಳ ವಿವರ ಕಣ್ಣಿನ ನೀಲ ಮಧ್ಯದಲ್ಲಿರುವ ಉದಕವೇ ಗಂಗೆ, ಆ ನೀಲ ಮಧ್ಯದಲ್ಲಿರುವ ವಿದ್ಯುರ್ಲೇಖೆಯೇ ಸರಸ್ವತಿ, ಆ ಶಿಖಾ ಮಧ್ಯದಲ್ಲಿ ರುವ ಅಂಗುಷ್ಠ ಮಾತ್ರ ಪುರುಷನ ಕಳೆಯೇ ಯಮುನೆ.

ಈ ನೀಲತೋಯ ಮಧ್ಯಸ್ತವಾದ ಮಂಡಲತ್ರಯಗಳ ಮೇಲಿ ರುವ ವಿದ್ಯುರ್ಲೇಖೆಯೇ ಷೋಡಶ ಕಳಾ ಪರಿಪೂರ್ಣಲಿಂಗವು. ಅದೇ ಸರ್ವಸಾಕ್ಷಿ ಸರ್ವ ಕಾರಣವಾದ ವಿರೂಪಾಕ್ಷನ ಸ್ಥಾನ. ಅದೇ ಮೇರು ಶಿಖರ, ಅದೇ ವೈಕುಂಠ ಕೈಲಾಸಗಳ ಸ್ಥಾನ. ಇದೇ ತಾರಕ ಸ್ವರೂಪ ವಾದ ಲಕ್ಷಾನ. ಇದೇ ಸಕಲ ಜಗದ್ಭರಿತ ದಿವ್ಯಪ್ರಕಾಶ. ಇದು ಅಮ ನಸ್ಕ ರಾಜಯೋಗ ಫಲಸಿದ್ಧಿಯು.

ಹಿಂದೆ ಹೇಳಿದ ಮಂತ್ರ, ಲಯ, ಹಠ, ರಾಜಾದಿಯೋಗ ಸ್ಥಾಪನೆಯು ಕಷ್ಟತನವೆಂದು ಶರಣರು ಶಿವಯೋಗವನ್ನಂಗೀಕರಿಸಿದರು.

ಶಿವಯೋಗ ಲಕ್ಷಣ

ಬಳಿಕಾ ಯೋಗವೆಂತೆನೆ – ಶಿವಚೈತನ್ಯಕ್ಕಿಂತಲೂ ಜೀವಚೈತನ್ಯವು ಬೇರೆಯೆಂದರಿತಿರುವ, ಅವಿದ್ಯೆಯ ಪಾಶಮಂ ಪರಿಹರಿಸಲು ಶಿವ ಜೀವಯೋಗವೆಂಬೈಕ್ಯ ಜ್ಞಾನಸಿದ್ಧಿಯಂ ಪಡೆಯಲೋಸುಗ ಶಿವಲಿಂಗದೊಳು ನಿರ್ಭೇದಮಾದ ಐಕ್ಯವೇ ಶಿವಯೋಗವೆಂದರಿವುದು ತತ್ತ್ವ ಜ್ಞಾನಿಗಳು.

ಎಂಬಲ್ಲಿಗೆ ಶ್ರೀ ಚೆನ್ನಬಸವೇಶ್ವರದೇವರು ನಿರೂಪಿಸಿದ ಘಟಚಕ್ರವು ಸಮಾರಂ ಮಂಗಳ ಮಹಾ ಶ್ರೀ ಶ್ರೀ

ಇದು ಚನ್ನಬಸವಣ್ಣನವರು ನಿರೂಪಿಸಿದ ಘಟಚಕ್ರದ ಒಟ್ಟು ನೋಟ. ಅಧ್ಯಾತ್ಮ ಚಿಂತನೆ ಮಾಡುವವರಿಗೆ ಇಲ್ಲಿಯ ತತ್ವಗಳು ಬಹುಬೇಗ ಅರ್ಥವಾಗುತ್ತವೆ ಅಧ್ಯಾತ್ಮ ಸಾಧನೆ ಮಾಡುವ ಚಿಂತಕರು, ಸ್ವಾಮಿಗಳು ಈ ತತ್ವವನ್ನು ಕುರಿತು ಇನ್ನಷ್ಟು ವ್ಯಾಪಕವಾಗಿ ಅಧ್ಯಯನ ಮಾಡಿ, ಜನಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿ ಇದನ್ನು ಇನ್ನಷ್ಟು ಸರಳೀಕರಿಸಿ, ವಿಸ್ತಾರವಾಗಿ ವಿವರಿಸಿ ಬರೆಯಬೇಕಾದ ಅನಿವಾರ್ಯತೆ ಇದೆ.

Share This Article
Leave a comment

Leave a Reply

Your email address will not be published. Required fields are marked *