ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ಮಹಾಮೇರು: ಭಾಲ್ಕಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ಅನುಭವ ಮಂಟಪದ ವತಿಯಿಂದ ನಡೆಯುವ ತಿಂಗಳ ಅನುಭವ ಮಂಟಪ-೧೦, ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಹಾಗೂ ಹೂಗಾರ ಮಾದಯ್ಯನವರ ಜಯಂತಿ ಉತ್ಸವ ಪಟ್ಟಣದ ಅನುಭವ ಮಂಟಪದಲ್ಲಿ ನೆರವೇರಿತು.

ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ಮಹಾಮೇರು ಆಗಿದ್ದಾರೆ. ಲಿಂಗಾಯತ ಸಿದ್ಧಾಂತ ಚೌಕಟ್ಟನ್ನು ರೂಪಿಸಿದವರು ಚೆನ್ನಬಸವಣ್ಣನವರು. ವಯಸ್ಸಿನಲ್ಲಿ ಕಿರಿಯರಾದರೂ ಜ್ಞಾನದಲ್ಲಿ ಶ್ರೇಷ್ಠರಾಗಿದ್ದರು. ಅನುಭವ ಮಂಟಪದ ಕಾರ್ಯಗಳನ್ನು ಸಮರ್ಥವಾಗಿ ನಡೆಸಿಕೊಂಡು ಹೋದವರು ಚನ್ನಬಸವಣ್ಣನವರು. ಇವರ ವಚನಗಳು ಲಿಂಗಾಯತ ಧರ್ಮದ ತಾತ್ವಿಕ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ.

ಜೊತೆಗೆ ಶರಣ ಹೂಗಾರ ಮಾದಯ್ಯ ಶರಣರು ಅನುಭವಮಂಟಪದಲ್ಲಿ ಅರಳಿದ ಮಹಾನ್ ಶರಣರು ಆಗಿದ್ದರು. ಅವರು ತಮ್ಮ ಸತ್ಯಶುದ್ಧ ಕಾಯಕದಿಂದ ಶರಣ ಸಂಕುಲದ ಪ್ರೀತಿ ಗಳಿಸಿದವರು. ಈ ಉಭಯ ಮಹಾ ಶರಣರ ಜೀವನ ಅರಿತುಕೊಳ್ಳುವ ಮೂಲಕ ನಾವು ಶರಣ ಮಾರ್ಗದಲ್ಲಿ ಮುನ್ನಡೆಯಬೇಕೆಂದು ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಗುರುಬಸವ ಪಟ್ಟದ್ದೇವರು, ಡಾ. ಗಂಗಾಂಬಿಕಾ ಅಕ್ಕ, ಪ್ರಭುದೇವ ಸ್ವಾಮಿಗಳು, ಸತ್ಯಕ್ಕ ತಾಯಿ ಸಮ್ಮುಖ ವಹಿಸಿದ್ದರು. ಬೆಳಗಾವಿ ಜಿಲ್ಲೆಯ ಕಾಗವಾಡದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಂ.ಬಿ. ಹೂಗಾರ ಅವರು ಶರಣ ಹೂಗಾರ ಮಾದಯ್ಯನವರ ಕುರಿತು ಅನುಭಾವ ನೀಡಿದರು.

ಜನಪದರು ಹೂಗಾರ ಮಾದಯ್ಯನವರ ಜೀವನ ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎಂಬುದು ಅವರು ತಮ್ಮ ಅನುಭಾವದಲ್ಲಿ ಅರ್ಥಪೂರ್ಣವಾಗಿ ತಿಳಿಸಿದರು.

ಹಿರಿಯ ಸಾಹಿತಿಗಳಾದ ಡಾ. ಸೋಮನಾಥ ಯಾಳವಾರ ಅವರು ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಕುರಿತು ಅನುಭಾವ ನೀಡಿದರು. ಚೆನ್ನಬಸವಣ್ಣವರ ವಚನಗಳ ವಿಶ್ಲೇಷಣೆ ಮಾಡುತ್ತ ಅವರ ವ್ಯಕ್ತಿತ್ವದ ಘನಮಹಿಮೆಯನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸಿದರು.

ಬಸವಗುರು ಪೂಜೆ ಡಾ. ಎಸ್.ಬಿ. ದುರ್ಗೆ ಅವರಿಂದ ನೆರವೇರಿತು. ಶರಣ ಮಲ್ಲಿಕಾರ್ಜುನ ಸಂಗಮಕರ ನಿರೂಪಿಸಿದರು. ರಾಜು ಜುಬರೆ  ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *