ಫೆಬ್ರವರಿ 28 ಬಸವತತ್ವ ಸಮಾವೇಶ, ಮಾರ್ಚ್ 1ರಂದು ಬಸವ ಮಂದಿರದ ಉದ್ಘಾಟನೆ
ಚಿಕ್ಕಮಗಳೂರು
ಬಸವತತ್ವದ ಪ್ರಚಾರವನ್ನೇ ಮುಖ್ಯ ಆಶಯವಾಗಿಟ್ಟು ಕೊಂಡು ಚಿಕ್ಕಮಗಳೂರಿನಲ್ಲಿ ಆರಂಭಗೊಂಡ ಶ್ರೀ ಬಸವತತ್ವ ಪೀಠ ಈಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ ಪೀಠದ ಸುಸಜ್ಜಿತ ನೂತನ ಕಟ್ಟಡ ಉದ್ಘಾಟನೆ ಹಾಗೂ ಬಸವತತ್ವ ಸಮಾವೇಶ ಫೆ.28 ಹಾಗೂ ಮಾರ್ಚ್ 1ರಂದು ನಡೆಯಲಿದೆಯೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಈ ಕಾರ್ಯಕ್ರಮಗಳು ಚಿಕ್ಕಮಗಳೂರು ಶ್ರೀ ಬಸವತತ್ವಪೀಠದ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿವೆ.

28ರಂದು ಸಂಜೆ 6 ಗಂಟೆಗೆ ಬಸವತತ್ವ ಸಮಾವೇಶ ಶಿವಾನುಭವ ಗೋಷ್ಠಿ-43 ನಡೆಯಲಿದ್ದು, ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಪೂಜ್ಯ ಡಾ. ಪ್ರಸನ್ನಾನಂದ ಮಹಾಸ್ವಾಮೀಜಿ ಅವರನ್ನು ಅಭಿವಂದಿಸಲಾಗುವುದು.
ಕಡೂರು ಯಳನಾಡು ಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಜಡೆ ಸಂಸ್ಥಾನ ಮಠ, ಗುರುಮಠಕಲ್‍ನ ಖಾಸಾಮಠ, ಶಂಕರದೇವರಮಠ, ಕೋಡಿಹಳ್ಳಿ ಭೃಗೀಶ್ವರ ಮಠ, ಹಾಸ ಮುಕಂದೂರು ಮಠ, ಸಿಂದಿಗೆರೆ ಕರಡಿಗವಿಮಠ, ಅಥಣಿಯ ಗಚ್ಚಿನಮಠದ ಶ್ರೀಗಳು ಸಾನ್ನಿಧ್ಯವಹಿಸುವರು.
ಈ ಸಂದರ್ಭದಲ್ಲಿ ಡಾ. ಜಯರಾಜಶೇಖರ ಅವರ ಗಮಕ ರೂಪಕಗಳು ಎಂಬ ಪುಸ್ತಕವನ್ನು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಡುಗಡೆ ಮಾಡುವರು. ದಾಕ್ಷಾಯಿಣಿ ಜಯದೇವಪ್ಪ ಅವರ ದಾಕ್ಷಾಯಿಣಿ ವಚನಗಳು ಕೃತಿಯನ್ನು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಿಡುಗಡೆ ಮಾಡುವರು. ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ, ಕಾರ್ಗಿಲ್ ಯೋಧ ನವೀನ ನಾಗಪ್ಪ, ಐಕ್ಯಾಟ್ ಸಂಸ್ಥಾಪಕಿ ಡಾ. ಶಾಲಿನಿ ನಲವಾಡ ಅವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್ ಸುರೇಶ, ವಿಧಾನ ಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ, ಮಾಜಿ ಶಾಸಕರಾದ ಎಸ್.ರುದ್ರೇಗೌಡರು, ಗಾಯತ್ರಿ ಶಾಂತೇಗೌಡ ಇನ್ನಿತರರು ಆಗಮಿಸುವರು.
ಮಾರ್ಚ್ 1ರಂದು ಬೆಳಗ್ಗೆ 10 ಗಂಟೆಗೆ ಶ್ರೀಮಠದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಿರಿಗೆರೆ ಶ್ರೀತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೂತನ ಬಸವಮಂದಿರವನ್ನು ಉದ್ಘಾಟಿಸುವರು. ಸುತ್ತೂರು ವೀರಸಿಂಹಾಸ ಮಹಾಸಂಸ್ಥಾನ ಮಠದ ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸುವರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜೀಯವರ ಅಲ್ಲಮಪ್ರಭುದೇವರ ಕುರಿತ ಉಪನ್ಯಾಸಗಳ ಸಂಗ್ರಹ ಕೃತಿ ಬಿಡುಗಡೆ ಮಾಡುವರು. ಅಲ್ಲಮ ಅನುಸಂಧಾನ ಕೃತಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡುವರು. ರೋಹನ್ ಭಾರ್ಗವಪುರಿ ಅವರ ಲತೆಯ ರೋಹಣ ಕೃತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಬಿಡುಗಡೆ ಮಾಡುವರು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ವಿಶೇಷ ಉಪನ್ಯಾಸ ನೀಡುವರು.
ಶಾಸಕರು ಹಾಗೂ ಶ್ರೀಮಠ ನಿರ್ಮಾಣ ಸಮಿತಿ ಅಧ್ಯಕ್ಷರೂ ಆದ ಹೆಚ್.ಡಿ. ತಮ್ಮಯ್ಯ, ಮಾಜಿ ಸಚಿವ ಸಿಟಿ ರವಿ, ಶಾಸಕರಾದ ನಯನ ಮೋಟಮ್ಮ, ಬೋಜೇಗೌಡ, ಡಾ. ಧನಂಜಯ ಸರ್ಜಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಶಾಸಕ ಹಾಗೂ ಪೀಠದ ನೂತನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ, ಮಠದ ಭಕ್ತರು, ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

ಶ್ರೀಪೀಠದ ಇತಿಹಾಸ…
ಬಸವತತ್ವದ ಪ್ರಚಾರವನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಪರಮಪೂಜ್ಯ ಶ್ರೀ ಮ.ನಿ.ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳವರಿಂದ 1976ರಲ್ಲಿ ಸ್ಥಾಪನೆಯಾದ ಶ್ರೀಬಸವತತ್ವ ಪೀಠವು 2026ಕ್ಕೆ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಮಠದ ಪೀಠಾಧ್ಯಕ್ಷರಾದ ಡಾ. ಬಸವ ಮರುಳಸಿದ್ದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ವೈಚಾರಿಕ ನೆಲೆಯಾಗಿ ಈ ಪೀಠವು ರೂಪುಗೊಂಡಿದೆ. ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಬಸವತತ್ವ ಅಭಿಮಾನಿಗಳ ಶ್ರದ್ಧಾ ಕೇಂದ್ರವಾಗಿದೆ.
ಬಸವಾಭಿಮಾನಿಗಳ ಆಶಯದಂತೆ ಸುಸಜ್ಜಿತ ಬಸವಮಂದಿರ ನಿರ್ಮಾಣವಾಗಿದ್ದು, ಎಲ್ಲರ ತನು-ಮನ-ಧನ ಸಹಾಯ ದೊರಕಿದೆ. ಮುಂದಿನ ದಿನಗಳಲ್ಲಿ ಈ ಮಂದಿರವು ನಾಡಿನಲ್ಲಿ ಬಸವತತ್ವ ಹಾಗೂ ಶರಣ ಚಳವಳಿಯ ಆಶಯವನ್ನು ಮುಂದುವರೆಸಿಕೊಂಡು ಹೋಗುವ ಗುರಿ ಹಾಗೂ ಧಾರ್ಮಿಕ ಚಟುವಟಿಕಗಳಿಗೆ ಪೂರಕವಾಗಿ ಕಲೆ-ಸಾಹಿತ್ಯ- ಸಾಂಸ್ಕೃತಿಕ ಮನಸ್ಸುಗಳ ನೆಲೆಯಾಗುವ ಉದ್ದೇಶ ಹೊಂದಿದೆ.
