ಬಸವತತ್ವ ಮಂದಿರದ ಬಹುಮುಖಿ ಸಾಧನೆ ಬಿಂಬಿಸಿದ ಸುವರ್ಣ ಮಹೋತ್ಸವ

ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿಗೆ ವಿಜಯೇಂದ್ರ ಕರೆ

ಚಿಕ್ಕಮಗಳೂರು:

ಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಬಸವ ಮಂದಿರದಲ್ಲಿ ಫೆಬ್ರವರಿ 24ರಿಂದ 28ರವರೆಗೆ ಐದು ದಿನಗಳ ಕಾಲ ನಡೆದ ಶ್ರೀ ಬಸವತತ್ವ ಪೀಠದ ಸುವರ್ಣ ಮಹೋತ್ಸವ ಹಾಗೂ ಭವ್ಯ ಬಸವತತ್ವ ಸಮಾವೇಶ ಭಕ್ತಿಭಾವ, ತತ್ವಚಿಂತನೆ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.

ಮಹೋತ್ಸವವು ಪೂಜ್ಯ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳವರ 171ನೇ ಜಯಂತಿ ಮತ್ತು 30ನೇ ವರ್ಷದ ಸಂಸ್ಮರಣೆಯ ಅಂಗವಾಗಿ ವಿಶೇಷತೆಯಿಂದ ಆಯೋಜಿಸಲಾಗಿತ್ತು. 1976ರಲ್ಲಿ ಪೂಜ್ಯ ಶ್ರೀ ಜಯಚಂದ್ರಶೇಖರ ಮಹಾಸ್ವಾಮಿಗಳವರಿಂದ ಸ್ಥಾಪಿತವಾದ ಶ್ರೀ ಬಸವತತ್ವ ಪೀಠವು ಬಸವತತ್ವದ ಪ್ರಚಾರ–ಪ್ರಸಾರವನ್ನು ಧ್ಯೇಯವನ್ನಾಗಿಸಿಕೊಂಡು ಐವತ್ತು ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವದ ಘಟ್ಟ ತಲುಪಿರುವದು.

ರಾಷ್ಟ್ರೀಯ ಮೌಲ್ಯಗಳ ಸಂದೇಶ:

ಫೆಬ್ರವರಿ 28ರಂದು “ವಚನಗಳಲ್ಲಿ ರಾಷ್ಟ್ರೀಯ ಮೌಲ್ಯಗಳು”ಎಂಬ ವಿಷಯದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೂಜ್ಯ ಡಾ.ಬಸವ ಮರುಳಸಿದ್ಧ ಸ್ವಾಮಿಗಳವರ ನೇತೃತ್ವದಲ್ಲಿ ಬಸವತತ್ವ ಪೀಠ ಮತ್ತು ಬಸವ ಕೇಂದ್ರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದವು.

ಕಾರ್ಯಕ್ರಮವನ್ನು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಉದ್ಘಾಟಿಸಿದರು. ಪುಷ್ಪಗಿರಿಯ ಶ್ರೀ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ನೂರಾರು ಮಹಿಳೆಯರಿಂದ ನಡೆದ ವಚನಗಾಯನ ಮನಮುಟ್ಟುವಂತಿತ್ತು. ಬಸವಣ್ಣನವರ ವಚನಗಳ ಸಾರ್ಥಕತೆ ಭಕ್ತರ ಮನಸ್ಸನ್ನು ಆವರಿಸಿತು.

ಆಧ್ಯಾತ್ಮಿಕತೆ ಜೊತೆಗೆ ಸಮಾಜ ಸೇವೆ :

ಪೂಜ್ಯ ಡಾ.ಬಸವ ಮರುಳಸಿದ್ಧ ಸ್ವಾಮಿಗಳವರ ನೇತೃತ್ವದಲ್ಲಿ ಶ್ರೀ ಬಸವತತ್ವ ಪೀಠವು ಕೇವಲ ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿಯೂ ಗಮನಾರ್ಹ ಸಾಧನೆ ಮಾಡುತ್ತಿದೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲೇ ಒಂದು ದಿನದಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡುವ ಕಾರ್ಯ, ಸಾವಿರಾರು ಬಡ ಕುಟುಂಬಗಳಿಗೆ ಆಹಾರಧಾನ್ಯ ಕಿಟ್‌ಗಳ ವಿತರಣೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ರಕ್ತಾಮೃತ ದಾಸೋಹ’ಕಾರ್ಯಕ್ರಮದ ಮೂಲಕ ರಕ್ತದಾನ ಶಿಬಿರಗಳ ಆಯೋಜನೆ ಮುಂತಾದ ಅನೇಕ ಸೇವಾಕಾರ್ಯಗಳು ಪೀಠದ ಸಮಾಜನಿಷ್ಠತೆಯನ್ನು ತೋರಿಸಿವೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಮಹಡಿಮನೆ ಸತೀಶ್ ಅವರು ಹೇಳಿದರು.

“ನಮ್ಮ ಬಸವತತ್ವ ಮಠಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತರು ಮಠದ ಶೈಲಿಯನ್ನು ನೋಡಿ ‘ವೈಟ್ ಹೌಸ್’ಎಂದು ಕರೆಯುತ್ತಾರೆ. ಈ ಮಠ ಇಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಪೂಜ್ಯ ಮರುಳಸಿದ್ಧ ಸ್ವಾಮಿಗಳವರ ದೂರದೃಷ್ಟಿಯೇ ಕಾರಣ”ಎಂದರು.

ಒಗ್ಗಟ್ಟಿನ ಅಗತ್ಯವಿದೆ:

ಬಿ.ವೈ. ವಿಜಯೇಂದ್ರ ಅವರು ಮಾತನಾಡಿ ಬಸವತತ್ವ ಪೀಠದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಬಸವತತ್ವದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಪ್ರಸ್ತುತತೆಯನ್ನು ವಿಶ್ಲೇಷಿಸಿ ಒಗ್ಗಟ್ಟಿನ ಅಗತ್ಯವನ್ನು ಬಲವಾಗಿ ಒತ್ತಿ ಹೇಳಿದರು.

“ಐವತ್ತು ವರ್ಷಗಳ ಪಯಣವನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಬಸವತತ್ವ ಪೀಠವು ಕೇವಲ ಧಾರ್ಮಿಕ ಸಂಸ್ಥೆಯಲ್ಲ, ಸಮಾಜವನ್ನು ಜಾಗೃತಗೊಳಿಸುವ ಚಿಂತನೆಗಳ ಕೇಂದ್ರವಾಗಿದೆ. ಬಸವಣ್ಣನವರು ಸಾರಿದ ಸಮಾನತೆ, ಸತ್ಯ, ಶ್ರಮ ಹಾಗೂ ಸೇವೆಯ ಮೌಲ್ಯಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಆ ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಸುವ ಕಾರ್ಯವನ್ನು ಪೀಠ ನಿರಂತರವಾಗಿ ಮಾಡುತ್ತಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ಹಾಗೂ ಸೌಭಾಗ್ಯ,” ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು ಮತ್ತು ವೈಮನಸ್ಸುಗಳ ನಡುವೆ ಪರಸ್ಪರ ಸಹಕಾರ ಮತ್ತು ಒಗ್ಗಟ್ಟೇ ಶ್ರೇಷ್ಠ ಮಾರ್ಗವೆಂದು ಅಭಿಪ್ರಾಯಪಟ್ಟರು. “ಸಮಾಜದ ಉನ್ನತಿ ಯಾರೊಬ್ಬರ ವೈಯಕ್ತಿಕ ಪ್ರಯತ್ನದಿಂದ ಸಾಧ್ಯವಿಲ್ಲ. ಪರಸ್ಪರ ವಿಶ್ವಾಸ, ಸಹಕಾರ ಮತ್ತು ಕೈಜೋಡಿಕೆ ಅಗತ್ಯ. ನಾವು ಮತ್ತೊಬ್ಬರನ್ನು ದೂರದೇ, ವಿಭಜನೆಯ ರಾಜಕಾರಣಕ್ಕೆ ಒಳಗಾಗದೇ ಒಗ್ಗಟ್ಟಿನಿಂದ ಮುಂದುವರಿದರೆ ಮಾತ್ರ ಸಮಾಜದ ಶಕ್ತಿಯನ್ನು ಹೆಚ್ಚಿಸಬಹುದು,” ಎಂದು ಹೇಳಿದರು.

ಯುವಜನತೆಗೆ ವಿಶೇಷ ಸಂದೇಶ ನೀಡಿದ ಅವರು, “ಇಂದಿನ ಯುವಕರು ದಾರಿ ತಪ್ಪುವ ಅಪಾಯ ಹೆಚ್ಚಾಗಿದೆ. ತಂತ್ರಜ್ಞಾನ ಯುಗದಲ್ಲಿ ಅವಕಾಶಗಳೂ ಹೆಚ್ಚಿವೆ, ಸವಾಲುಗಳೂ ಹೆಚ್ಚಿವೆ. ಇಂತಹ ಸಂದರ್ಭದಲ್ಲಿ ಬಸವತತ್ವ ಸಮಾವೇಶಗಳ ಮೂಲಕ ಸನ್ಮಾರ್ಗದ ಚಿಂತನೆಗಳನ್ನು ಯುವ ಮನಸ್ಸುಗಳಿಗೆ ತಲುಪಿಸುವುದು ಅತ್ಯಂತ ಅಗತ್ಯ. ಶಿಸ್ತು, ನೈತಿಕತೆ ಮತ್ತು ಸೇವಾಭಾವವನ್ನು ಅಳವಡಿಸಿಕೊಂಡ ಯುವಜನತೆ ದೇಶದ ಭವಿಷ್ಯವನ್ನು ರೂಪಿಸಬಲ್ಲದು,” ಎಂದು ಹೇಳಿದರು.

ವೀರಶೈವ–ಲಿಂಗಾಯತ ಸಮಾಜದ ಒಗ್ಗಟ್ಟಿನ ಕುರಿತು ಮಾತನಾಡಿದ ಅವರು, “ನಮ್ಮ ಸಮಾಜ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ಮುಂದುವರೆಯಲು ಸಾಧ್ಯ. ಒಳಭೇದಗಳು ನಮ್ಮನ್ನು ದುರ್ಬಲಗೊಳಿಸುತ್ತವೆ. ಒಗ್ಗಟ್ಟಿನ ಶಕ್ತಿ ನಮ್ಮ ದೊಡ್ಡ ಬಲ. ನಾವು ಕೈಜೋಡಿಸಿ ನಿಂತರೆ ಯಾವ ಸವಾಲನ್ನೂ ಎದುರಿಸಬಹುದು,” ಎಂದು ಹೇಳಿದರು.

ಈ ವೇಳೆ ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸೇವೆಯನ್ನು ಸ್ಮರಿಸಿದ ವಿಜಯೇಂದ್ರ, “ನಮ್ಮ ತಂದೆಯವರು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ ಪಥವೇ ನನಗೆ ದಾರಿದೀಪ. ಅವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವುದು ನನ್ನ ಕರ್ತವ್ಯ. ಅವರು ತೋರಿಸಿದ ಸೇವಾ ಮನೋಭಾವ ಮತ್ತು ಸಮರ್ಪಣೆ ನನ್ನ ಪ್ರೇರಣೆ,” ಎಂದು ತಿಳಿಸಿದರು.

ಸಮಗ್ರ ಅಭಿವೃದ್ಧಿಗೆ ಬಸವತತ್ವವೇ ದಾರಿ ಬಸವತತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸೋಣ ಎಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಡಿ. ತಮ್ಮಯ್ಯ, ಮಾಜಿ ಶಾಸಕ ಬಿ.ವೈ. ಬೆಳ್ಳಿ ಪ್ರಕಾಶ್ (ಕಡೂರು), ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಿ.ಹೆಚ್. ಹರೀಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಐದು ದಿನಗಳ ಈ ಮಹೋತ್ಸವದಲ್ಲಿ ಧಾರ್ಮಿಕ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ತತ್ವಚಿಂತನೆ ಹಾಗೂ ಭಕ್ತರ ಸಮಾಗಮ ವಿಶೇಷ ಆಕರ್ಷಣೆಯಾಗಿತ್ತು. ಬಸವತತ್ವದ ಸಂದೇಶವನ್ನು ಸಮಾಜದ ಪ್ರತಿಯೊಂದು ಹಂತಕ್ಕೂ ತಲುಪಿಸುವ ಮಹೋದ್ದೇಶದೊಂದಿಗೆ ನಡೆದ ಈ ಸಮಾವೇಶ ಚಿಕ್ಕಮಗಳೂರಿನ ಆಧ್ಯಾತ್ಮಿಕ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವಾಗಿ ಉಳಿಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
1 Comment
  • ಡಾ. ಬಸವ ಮರುಳಸಿಧ್ಧ ಸ್ವಾಮೀಜಿಗಳು ಬಸವತತ್ವವನ್ನು ಜನಮಾನಸಕ್ಕೆ ತಿಳಿಸಿ ಯಾವುದೇ ಆಡಂಬರವಿಲ್ಲದೇ ಸಮಾಜದ ಎಲ್ಲ ವರ್ಗದವರನ್ನೂ ಇಂಬಿಟ್ಟುಕೊಂಡು ಬಸವಾದಿ ಶರಣರ ವಿಚಾರಧಾರೆಯನ್ನು ಮುಟ್ಟಿಸುತ್ತಿರುವವರಲ್ಲಿ ಅಗ್ರಗಣ್ಯರೆಂದರೆ ತಪ್ಪಾಗಲಿಕ್ಕಿಲ್ಲ. ನಾಡಿನ ರಾಜಕಾರಣಿಗಳ, ಪೂಜ್ಯರ ಪ್ರಸಂಶೆಗೆ ಪಾತ್ರರಾದ ಕೆಲವೇ ಕೆಲವು ಪೀಠಾಧಿಪತಿಗಳಲ್ಲಿ ಇವರೂ ಒಬ್ಬರು.

Leave a Reply

Your email address will not be published. Required fields are marked *

ಸಂಪಾದಕರು, ಡಿಟೆಕ್ಟಿವ್ ನ್ಯೂಸ್ 24