ಯಲಬುರ್ಗಾ:
ತಾಲೂಕಿನ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ, ಅಕ್ಕ ನಾಗಲಾಂಬಿಕ ಮಹಿಳಾಗಣ ಹಾಗು ಯುವ ಘಟಕದ ವತಿಯಿಂದ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನ ಜಯಂತಿಯನ್ನು ಆಚರಿಸಲಾಯಿತು. ಪ್ರಥಮದಲ್ಲಿ ಗುರುಪೂಜೆ, ಸಾಮೂಹಿಕ ಇಷ್ಟಲಿಂಗ ಅರ್ಚನೆಯ ನಂತರ ಚೆನ್ನಬಸವಣ್ಣನ ವಚನ ಆಧಾರಿತ ಅನುಭಾವ ಜರುಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶರಣಪ್ಪ ಹೊಸಳ್ಳಿ ಅವರು, ಧರ್ಮಪಿತ ಬಸವಣ್ಣನವರ ನೇತೃತ್ವದಲ್ಲಿ ಸಂಸ್ಕಾರಗೊಂಡ ಲಿಂಗಾಯತ ಧರ್ಮಕ್ಕೆ ತಾತ್ವಿಕ ಚೌಕಟ್ಟನ್ನು ಕೊಟ್ಟವರು ಚೆನ್ನಬಸವಣ್ಣನವರು. ಅದಕ್ಕಾಗಿ ಅವರನ್ನು ಷಟಸ್ಥಲ ಚಕ್ರವರ್ತಿ ಎಂದು ಕರೆಯುತ್ತಾರೆ. ಇಂಥ ಮಹಾತ್ಮರು ರಚಿಸಿದ ವಚನಗಳನ್ನು ಪಚನ ಮಾಡಿಕೊಂಡು ಬಾಳಿ ಬದುಕಬೇಕಾಗಿದೆ ಎಂದರು.
ಶಂಕ್ರಪ್ಪ ಬೇವೂರು ಬಸವಪರ ಚಿಂತಕರು ಬೆಂಗಳೂರು ಮಾತನಾಡಿ, ಚೆನ್ನಬಸವಣ್ಣನವರು ಷಟಸ್ಥಲಗಳನ್ನು ಸಂಪೂರ್ಣ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕರ್ಣ ಹಾಸಿಗೆಯನ್ನ ರಚಿಸುವುದರ ಮೂಲಕ ಅತ್ಯಂತ ಅರ್ಥಪೂರ್ಣವಾದಂತ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ವಿಶೇಷ ಉಪನ್ಯಾಸದ ನೀಡಿದ ಬಸವನಗೌಡ ಪೊಲೀಸ್ ಪಾಟೀಲ ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಎಂದು ಎಲ್ಲಾ ಶರಣರಿಂದ ಕರೆಸಿಕೊಳ್ಳುವುದರ ಮೂಲಕ, ಕೂಡಲಚನ್ನಸಂಗಮದೇವ ಎಂಬ ವಚನಾಂಕಿತದಿಂದ 1263 ವಚನಗಳ ರಚಿಸಿ ಸಮಾಜದ ಪರಿವರ್ತನೆಗೆ ಅವರು ನೀಡಿದ ಕೊಡುಗೆ ಸ್ಮರಣೀಯ.
ಅಷ್ಟೇ ಅಲ್ಲದೆ ಅಲ್ಲಮಪ್ರಭುಗಳು ಚೆನ್ನಬಸವಣ್ಣನವರನ್ನು ಹೃದಯ ತುಂಬಿ ಹೊಗಳಿದ್ದಾರೆ. ಅಷ್ಟಾವರಣವೆ ಅಂಗ, ಪಂಚಚಾರವೇ ಪ್ರಾಣ, ಷಟಸ್ಥಲವೆ ಆತ್ಮ ಎಂದು ಶರಣರ ಅಭಿಪ್ರಾಯ ಆಗಿತ್ತು.
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗ ಶರಣ ಐಕ್ಯ ಇವು ಷಟಸ್ಥಲಗಳಾಗಿದ್ದು ಭಕ್ತ ಸ್ಥಳದಲ್ಲಿ ಶ್ರದ್ಧಾಭಕ್ತಿ, ಮಹೇಶ್ವರ ಸ್ಥಳದಲ್ಲಿ ನಿಷ್ಠಾ ಭಕ್ತಿ, ಪ್ರಸಾದಿ ಸ್ಥಳದಲ್ಲಿ ಅವಧಾನ ಭಕ್ತಿ, ಪ್ರಾಣಲಿಂಗಿ ಸ್ಥಲದಲ್ಲಿ ಅನುಭವ ಭಕ್ತಿ, ಶರಣಸ್ಥಲದಲ್ಲಿ ಆನಂದ ಭಕ್ತಿ, ಐಕ್ಯಸ್ಥಲದಲ್ಲಿ ಸಮರಸ ಭಕ್ತಿ, ಹೀಗೆ ಆತ್ಮನು ಷಡ್ವಿಧ ಭಕ್ತಿಗಳನ್ನು ಮಾಡಿದ ವ್ಯಕ್ತಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರಾಗಿದ್ದಾರೆ. ಕಾರಣ ಈ ಆರು ಸ್ಥಲಗಳನ್ನ ನಾವು ಕೂಡ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು.
