ಮಾಚಿದೇವರ ಗಣಾಚಾರ ತತ್ವ ಆಚರಣೆಗೆ ತನ್ನಿ: ಬಸವ ಮಾಚಿದೇವ ಸ್ವಾಮೀಜಿ

ಡಾ ಸಂಗಮೇಶ ಕಲಹಾಳ
ಡಾ ಸಂಗಮೇಶ ಕಲಹಾಳ

ಸಾವಿರಾರು ಜನ ಸೆಳೆದ ಕಾಯಕ ಜನೋತ್ಸವ-2026

ಚಿತ್ರದುರ್ಗ

ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ 900 ವರ್ಷಗಳ ನಂತರವೂ ಜೀವಂತವಾಗಿದೆಯೆಂದರೆ ಕಾರಣರಾದವರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯರು ಎಂದು ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರು ನುಡಿದರು.

ಅವರು ಜನೇವರಿ 6ರಂದು ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ “ಕಾಯಕ ಜನೋತ್ಸವ-2026” ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತ ಮಾತನಾಡುತ್ತಿದ್ದರು.

ವಿಶ್ವಗುರು ಬಸವಣ್ಣನವರ ಮಾರ್ಗದರ್ಶನದಂತೆ ಶರಣ ಮಹಾದಂಡನಾಯಕ ಮಡಿವಾಳ ಮಾಚಿದೇವರು ಮತ್ತು ಶರಣ ಮಹಾದಂಡನಾಯಕಿ ಅಕ್ಕ ನಾಗಮ್ಮನವರಿಂದಾಗಿ ವಚನಸಾಹಿತ್ಯ ಸಂರಕ್ಷಣೆಯಾಗಿದೆ ಎಂದರು.

ಸಾಮಾಜಿಕ ಅಸಮಾನತೆಗಳನ್ನು ಖಂಡಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದವರು ಬಸವಾದಿ ಶರಣರು. ಬಸವಣ್ಣ, ಮಾಚಿದೇವ, ಹಡಪದ ಅಪ್ಪಣ್ಣ, ಕುಂಬಾರ ಗುಂಡಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾರಯ್ಯ, ಸತ್ಯಕ್ಕ, ಮೋಳಿಗೆ ಮಹಾದೇವಿ, ಸಿದ್ಧರಾಮೇಶ್ವರ, ಅಕ್ಕಮಹಾದೇವಿ, ಅಲ್ಲಮಪ್ರಭು, ಚೆನ್ನಬಸವಣ್ಣ ಮುಂತಾದವರು ಕಾಯಕ ದಾಸೋಹ ತತ್ವಗಳ ಮೂಲಕ ಸಮಸಮಾಜ ನಿರ್ಮಾಣ ಮಾಡಿದರು.

ವಿಶ್ವಕ್ಕೇ ಮಾರ್ಗದರ್ಶಿಯಾದ ಬಸವಾದಿ ಶರಣರ ವಚನಸಾಹಿತ್ಯ ಜನರ ಬದುಕನ್ನು ಹಸನಾಗಿಸಿವೆ. ಪ್ರತಿದಿನ ಕನಿಷ್ಠ ಒಂದು ವಚನ ಓದುವುದನ್ನು ರೂಢಿಸಿಕೊಳ್ಳಬೇಕೆಂದರು.

ಬಸವಣ್ಣನವರ ಭಕ್ತಿಪಥ, ಮಾಚಿದೇವರ ಗಣಾಚಾರ ತತ್ವಗಳನ್ನು ಆಚರಣೆಯಲ್ಲಿ ತರಬೇಕು. ಪ್ರತಿಯೊಬ್ಬರೂ ಮಾಚಿದೇವರ ಜೀವನ ಮೌಲ್ಯಗಳನ್ನು ಅನುಸರಿಸಬೇಕೆಂದರು.

ವಚನ ಶಿಕ್ಷಣ ಮತ್ತು ಶರಣ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಮುಖ್ಯವಾಹಿನಿಯಲ್ಲಿ ಸೇರುವಂತಾಗಬೇಕು ಎಂದು ಸಂದೇಶ ನೀಡಿದರು.

ಪ್ರತಿವರ್ಷದಂತೆ ಜನೇವರಿ 6ರಂದು ನಿಯಮಿತವಾಗಿ ಕಾಯಕ ಜನೋತ್ಸವವು ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಜರುಗುತ್ತ ಬಂದಿದೆ. ಈ ವರ್ಷ ಶ್ರೀಮಠದ ಶಂಕುಸ್ಥಾಪನೆಯ 17ನೇ ವಾರ್ಷಿಕೋತ್ಸವ, ಡಾ ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರ 27 ನೇ ಜಂಗಮದೀಕ್ಷಾ ಮಹೋತ್ಸವ ಹಾಗೂ 42ನೇ ಜನ್ಮದಿನೋತ್ಸವ, ಜಗದ್ಗುರು ಡಾ. ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರ 8ನೇ ಪಟ್ಟಾಧಿಕಾರ ಮಹೋತ್ಸವ ನಡೆಯಿತು.

ವಚನ ಸಾಹಿತ್ಯ ಸಂರಕ್ಷಕ ಮತ್ತು ವೀರಗಣಾಚಾರಿ ಶ್ರೀ ಮಡಿವಾಳ ಮಾಚಿದೇವರ ಮೂರ್ತಿ ಹಾಗೂ ವಚನಕಟ್ಟು ಪಲ್ಲಕ್ಕಿ ಉತ್ಸವ. ಜಗದ್ಗುರು ಡಾ. ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ 8 ನೇ ಪೀಠಾರೋಹಣ, ಮಡಿವಾಳ ಜನಾಂಗ ಜಾಗೃತಿ ಸಮಾವೇಶ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.

ಬೆಂಗಳೂರು ಮಾಜಿ ಕಾರ್ಪೋರೇಟರ್ ಲಗ್ಗೆರೆ ನಾರಾಯಣಸ್ವಾಮಿ, ಹಿರಿಯ ಸಮಾಜ ಸೇವಕರು ಮತ್ತು ಜನನಾಯಕರುಗಳಾದ ತರಿಕೇರಿ ಗೋಪಿಕೃಷ್ಣ, ರಾಜು ತಲ್ಲೂರು, ಮಾರೇಶ ಸಂಡೂರು ಮತ್ತು ಶ್ರೀಮಠದ ಮಹಾದ್ವಾರ ನಿರ್ಮಾತೃ ಮತ್ತು ಮಹಾದಾನಿ ಎಂ. ಕೆ. ಹನುಮಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹಿರಿಯ ರಂಗಕಲಾವಿದರಾದ ಬೆಂಗಳೂರು ಚೌಡಯ್ಯನವರು, ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಮಹಿಳಾ ಅಧ್ಯಕ್ಷರಾದ ವಿಜಯಲಕ್ಷ್ಮಿ ಅಂಜನಪ್ಪ, ಜಿಲ್ಲಾ ಪಂಚಾಯತ ಸದಸ್ಯರಾದ ತರೀಕೆರೆ ಅನಸೂಯಮ್ಮ ಗೋಪಿಕೃಷ್ಣ, ಬೆಂಗಳೂರು ಪಾಪಣ್ಣ, ಚಿತ್ರದುರ್ಗ ಜಿಲ್ಲಾ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ರಾಮಜ್ಜ, ಕಾರ್ಯದರ್ಶಿ ಕರವೇ ಮಂಜುನಾಥ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಡಾ. ಸಂಗಮೇಶ ಕಲಹಾಳ ಉಪಸ್ಥಿತರಿದ್ದರು.

ಧಾರ್ಮಿಕ ವಿಧಿವಿಧಾನಗಳನ್ನು ಶ್ರೀಮಠದ ಧರ್ಮದರ್ಶಿ ತಿಪಟೂರು ಶಂಕ್ರಣ್ಣ ಮತ್ತು ನಿಟ್ಟೂರು ಗಂಗಾಧರ ಕುಟುಂಬದವರು ನಿರ್ವಹಿಸಿದರು. ಶ್ರೀಮಠದ ಧರ್ಮದರ್ಶಿ ಪ್ರೊ. ಎ. ಆರ್. ಮಂಜುನಾಥ, ಶ್ರೀಮಠದ ಸೇವಕರಾದ ವಿ. ರುದ್ರಮುನಿ ಶಿಕ್ಷಕರು ವೇದಿಕೆ ವ್ಯವಸ್ಥೆಗಳನ್ನು ನಿರ್ವಹಿಸಿದರು. ಪ್ರಸಾದ ಸಿದ್ಧತೆ ಮತ್ತು ವಿತರಣೆ ವ್ಯವಸ್ಥೆಗಳನ್ನು ಶ್ರೀಮಠದ ಧರ್ಮದರ್ಶಿ ಗವಿಸಿದ್ದಪ್ಪ ಕಾರಟಗಿ ಮತ್ತು ರಾಜಣ್ಣ ಮರಿಕುಂಟೆ ನಿರ್ವಹಿಸಿದರು.

ನಿವೃತ್ತ ಪ್ರಾಚಾರ್ಯರು ಮತ್ತು ಶ್ರೀಮಠದ ಮಾರ್ಗದರ್ಶಕರಾದ ಡಾ ವಿ. ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ಜಾನಪದ ಕಲಾವಿದ ಗಂಜಿಗಟ್ಟಿ ಕೃಷ್ಣಮೂರ್ತಿ ಪ್ರಾರ್ಥನೆ ಗೈದರು. ರಾಜ್ಯಾದ್ಯಂತ ಬಂದಿದ್ದ ಸಾವಿರಾರು ಜನ ಕಾಯಕ ಜನೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *