ವಿವಾದಿತ ‘ಶರಣರ ಶಕ್ತಿ’ ಚಿತ್ರ ಎರಡನೇ ಹಂತದ ಬಿಡುಗಡೆಗೆ ಸಜ್ಜು

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಹುಬ್ಬಳ್ಳಿ

ವಿವಾದಿತ ‘ಶರಣರ ಶಕ್ತಿ’ ಚಿತ್ರ ಎರಡನೇ ಹಂತದ ಬಿಡುಗಡೆಗೆ ಸಜ್ಜಾಗಿದೆ.

ಕಡಿಮೆ ಬಜೆಟಿನ ಚಿತ್ರ ಮತ್ತು ಶರಣ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದ ಚಿತ್ರವನ್ನು ಬಿಡುಗಡೆ ಮಾಡಲು ಯಾವ ಹಂಚಿಕೆದಾರರೂ ಮುಂದೆ ಬಂದಿರಲಿಲ್ಲ. ಆದ್ದರಿಂದ ನಿರ್ಮಾಪಕಿ ಆರಾಧನಾ ಕುಲಕರ್ಣಿ (ನಿರ್ದೇಶಕ ದಿಲೀಪ ಶರ್ಮಾರ ಪತ್ನಿ) ಕಳೆದ ನವೆಂಬರ್ನಲ್ಲಿ ತಾವೇ ನಾಲ್ಕು ಕೇಂದ್ರಗಳಿಗೆ ಭಾಡಿಗೆ ಕೊಟ್ಟು ಬಿಡುಗಡೆ ಮಾಡಿದ್ದರು.

ಈಗ ಬೆಂಗಳೂರು ಭಾಗಕ್ಕೆ ಒಬ್ಬರು ಹಂಚಿಕೆದಾರರು, ಉತ್ತರ ಕರ್ನಾಟಕ ಭಾಗಕ್ಕೆ ಮತ್ತೊಬ್ಬರು ಸಿಕ್ಕಿದ್ದಾರೆ. ಹೀಗಾಗಿ ಸಿನಿಮಾ ಮತ್ತೆ ಬಿಡುಗಡೆಗೊಳ್ಳುತ್ತಿದೆ, ಎಂದು ಸಿನೆಮಾದ ಬಸವಣ್ಣನವರ ಪಾತ್ರಧಾರಿ‌, ನಾಯಕ ನಟ ಮಂಜುನಾಥಗೌಡ ಪಾಟೀಲ ಬಸವ ಮೀಡಿಯಾದೊಂದಿಗೆ ಹೇಳಿದರು.

ಮೊದಲ ಹಂತದಲ್ಲಿ ದಾವಣಗೆರೆ, ಹುಬ್ಬಳ್ಳಿ, ಭಾಲ್ಕಿ, ನವಲಗುಂದ ಈ ನಾಲ್ಕು ಕೇಂದ್ರಗಳಲ್ಲಿ ಸಿನೆಮಾ ಬಿಡುಗಡೆಯಾಗಿತ್ತು. ಭಾಲ್ಕಿ, ದಾವಣಗೆರೆಯಲ್ಲಿ ಸ್ವಲ್ಪ ಗಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ ಲಾಭಾನೂ ಇಲ್ಲ ನಷ್ಟಾನೂ ಇಲ್ಲ. ನವಲಗುಂದದಲ್ಲಿ ನಷ್ಟ ಉಂಟಾಗಿದೆಯಂತೆ.

ಈಗ ಎರಡನೇ ಹಂತದಲ್ಲಿ ಧಾರವಾಡ, ಬೆಳಗಾವಿ, ಹಾವೇರಿ, ರಾಣೆಬೆನ್ನೂರು, ಬದಾಮಿ, ಅಥಣಿ, ಮುಧೋಳ, ಇಳಕಲ್ಲ, ಹೊಸರಿತ್ತಿ, ಮುದ್ದೇಬಿಹಾಳ, ಬಸವನಬಾಗೇವಾಡಿ, ಗುಳೇದಗುಡ್ಡ, ಕೊಪ್ಪಳ ಸೇರಿದಂತೆ 35ರಿಂದ 40 ಕೇಂದ್ರಗಳಲ್ಲಿ ಇದೇ ಫೆಬ್ರವರಿ 07ರಂದು ಬಿಡುಗಡೆಯಾಗುತ್ತಿದೆ, ಎಂದು ಪಾಟೀಲ ಹೇಳಿದರು.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ‘ಶರಣರ ಶಕ್ತಿ’ ಟ್ರೇಲರ್ ಬಿಡುಗಡೆಯಾದಾಗ ಅದರಲ್ಲಿದ್ದ ಹಲವಾರು ದೃಶ್ಯ, ಸಂಭಾಷಣೆಗಳು ಲಿಂಗಾಯತರ ಧಾರ್ಮಿಕ ಭಾವನೆಗೆ ದಕ್ಕೆ ತಂದು, ಹಲವಾರು ಕಡೆ ಪ್ರತಿಭಟನೆಯನ್ನೂ ಎದುರಿಸಿತ್ತು.

ನಂತರ ಸಮಾಜದ ಗುರುಗಳು ಮತ್ತು ಪ್ರಮುಖರು ಬೆಂಗಳೂರಿನಲ್ಲಿ ಚಿತ್ರ ವೀಕ್ಷಿಸಿ ಶರಣ ತತ್ವ ಮತ್ತು ಪರಂಪರೆಗೆ ವಿರುದ್ದವಾಗಿದ್ದ ದೃಶ್ಯ, ಸಂಭಾಷಣೆಗಳನ್ನು ತೆಗೆಸಿ ಹಾಕಿದ್ದರು. ಇದರಿಂದ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಒಂದು ತಿಂಗಳು ತಡವಾಗಿ ಬಿಡುಗಡೆಯಾಗಿತ್ತು.

ಮೊದಲ ಹಂತದಲ್ಲಿ ಬಿಡುಗಡೆಯಾಗಿದ್ದ ಪ್ರತಿಯೇ ಈಗಲೂ ಬಿಡುಗಡೆಯಾಗುತ್ತಿದೆ, ಮೂಲ ಪ್ರತಿಯಲ್ಲಿದ್ದ ಯಾವ ವಿವಾದಿತ ಅಂಶವನ್ನೂ ಮತ್ತೆ ಸೇರಿಸಿಲ್ಲವೆಂದು ಪಾಟೀಲ್ ಒತ್ತಿ ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *