ಮಾನವನನ್ನು ಮಹಾಮಾನವನನ್ನಾಗಿ ಮಾಡುವ ಇಷ್ಟಲಿಂಗ

ಗುಳೇದಗುಡ್ಡ

ತಿಪ್ಪಾಪೇಟೆಯ ಚನ್ನಪ್ಪ ಪಂಪಣ್ಣಪ್ಪ ಅಲದಿ ಅವರ ಮನೆಯಲ್ಲಿ ಬಸವ ಕೇಂದ್ರದ ವತಿಯಿಂದ ಶನಿವಾರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಚಿಂತನೆಗಾಗಿ ಢಕ್ಕೆಯ ಮಾರಯ್ಯ ಶರಣರ ಕೆಳಗಿನ ವಚನವನ್ನು ಆಯ್ದುಕೊಳ್ಳಲಾಗಿತ್ತು,

ಶಿಲೆ ಭಾವ ಹಿಂಗಿ ಕುರುಹಾಯಿತ್ತು ಕಾರುಕನ ಕೈಯಲ್ಲಿ
ಪಾಷಾಣ ಭಾವ ಹಿಂಗಿ ಕಳೆಯಾಯಿತ್ತು ಆಚಾರ್ಯನ ಕೈಯಲ್ಲಿ
ಕಳೆ ನೆಲೆಯಾಯಿತ್ತು ಪೂಜಿಸುವಾತನ ಚಿತ್ತದಲ್ಲಿ
ಚಿತ್ತು ವಸ್ತುವಿನಲ್ಲಿ ಬೆರೆದು ಕಾಲಾಂತಕ
ಭೀಮೇಶ್ವರಲಿಂಗವಾಯಿತ್ತು.

ಪ್ರೊ. ಶ್ರೀಕಾಂತ ಗಡೇದ ಅವರು ಈ ವಚನವನ್ನು ವಿಶ್ಲೇಷಣೆ ಮಾಡುತ್ತ, ಢಕ್ಕೆಯ ಮಾರಯ್ಯ ಶರಣರನ್ನು ಢಕ್ಕೆಯ ಬೊಮ್ಮಣ್ಣನೆಂದೂ ಕರೆಯುತ್ತಿದ್ದರು. ಅವರ 90 ವಚನಗಳು ಲಭ್ಯವಾಗಿವೆ. ಇವರ ಮೊದಲಿನ ಕಾಯಕ ಮೊರದಲ್ಲಿ ಮಾರಿಯ ಹೊತ್ತು ಢಕ್ಕೆಯ ಬಾರಿಸುತ್ತ ಭಿಕ್ಷೆ ಬೇಡುವದಾಗಿತ್ತು. ಇವರ ಉಲ್ಲೇಖ ವೀರಶೈವಾಮೃತ ಮಹಾಪುರಾಣ, ಕಥಾಮಣಿ ಸೂತ್ರ ರತ್ನಾಕರ, ಪ್ರಭುದೇವರ ಪುರಾಣ ಮೊದಲಾದ ಕೃತಿಗಳಲ್ಲಿ ಕಂಡುಬರುತ್ತದೆ.

ಪ್ರತಿಮಾನವರು ಸರಳ ಸಜ್ಜನರಾಗಿರಬೇಕು. ಅದು ಅರಿವು ಆಚಾರ ಅನುಭಾವವನ್ನು ಹೊಂದಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಒಂದು ಶಿಲೆ ಲಿಂಗರೂಪ ಪಡೆದು ಇಷ್ಟಲಿಂಗವಾಗಿ ಸಾಧಕ ಶರಣನ ಕೈಯಲ್ಲಿ ಸಿಕ್ಕು ಆತನನ್ನು ಮಹಾಲಿಂಗವನ್ನಾಗಿ ಮಾಡುತ್ತದೆ ಎಂಬುದು ಈ ವಚನದ ಸಾರವಾಗಿದೆ ಎಂದು ತಮ್ಮ ಚಿಂತನದಲ್ಲಿ ಹೇಳಿದರು.

ಕನ್ನಡ ಪಂಡಿತರಾದ ಪ್ರೊ. ನೀಲಕಂಠಮಠ ಮಹಾದೇವಯ್ಯ ಅವರು ಇದೇ ವಚನದ ವಿಶ್ಲೇಷಣೆಗೆ ತೊಡಗಿ, -ಕೈಯಲ್ಲಿರುವ ಇಷ್ಟಲಿಂಗವು ಸಾಧಾರಣವಾದುದಲ್ಲ ಅದು ಶರಣನ ಕೈಯಲ್ಲಿ ಪೊಜೆಗೊಂಡು ಆತನನ್ನು ಮಹಾಮಾನವನನ್ನಾಗಿ ಮಾಡುತ್ತದೆ. ಮೊದಲು ಸಾಧಾರಣ ಶಿಲೆಯಾಗಿದ್ದ ಲಿಂಗವು ಹಲವು ಸಂಸ್ಕಾರಗಳಿಂದ ಹಾಗೂ ಸಾಧಕನ ಮಾನಸಿಕ ಹಂತದ ಬೆಳವಣಿಗೆಯೂ ಸೇರಿದಂತೆ ಆತನನ್ನು ಶರಣನನ್ನಾಗಿ ಮಾಡುತ್ತದೆ. ಲಿಂಗವು ದೈವತ್ವವನ್ನು ಪಡೆದುಕೊಳ್ಳುತ್ತದೆ ಎಂದು ವಿವರಿಸಿದರು.

ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ಸಮಾರೋಪ ಮಾಡುತ್ತ – ಶಿಲೆಯಿಂದ ತಯಾರಾದ ಕಲ್ಲಿನ ಇಷ್ಟಲಿಂಗದ ಬಾಹ್ಯರೂಪ, ಗುರುವಿನ ಕಾರುಣ್ಯದಿಂದಾಗಿ ಹಸ್ತಮಸ್ತಕ ಸಂಯೋಗದಿಂದ ಶಿಷ್ಯನಿಗೆ ಅರಿವಿನ ರೂಪದಿಂದ ಆತನ ಕುರುಹಾಗುತ್ತದೆ. ಇದೇ ಇಷ್ಟಲಿಂಗ, ಪ್ರಾಣಲಿಂಗವಾಗಿ, ಭಾವಲಿಂಗವಾಗುತ್ತದೆ. ಇದೆಲ್ಲ ಸಾಧಕ ಶರಣನ ಸಾಧನೆಯಿಂದ ಮಾತ್ರ ಸಾಧ್ಯವಾಗುತ್ತದೆ.

ಭಕ್ತನಿಂದ ಪ್ರಾರಂಭವಾಗಿ ಶರಣನಾಗಿ ಐಕ್ಯನಾಗುವವರೆಗೂ ಈ ಲಿಂಗ ಎದೆಯ ಮೇಲಿದ್ದು ಆಚಾರಲಿಂಗದಿಂದ ಮಹಾಲಿಂಗವಾಗಿ ಅವನೊಂದಿಗೆ ಇರುತ್ತದೆ. ಇಲ್ಲಿ ಭಕ್ತನು ತನು, ಮನ, ಭಾವಗಳನ್ನು ಲಿಂಗದಲ್ಲಿಯೇ ಲೀನಗೊಳಿಸಿ ಅದರೊಂದಿಗೆ ಬೆರೆತು ತಾನೂ ಕಾಲಾಂತಕ ಭೀಮೇಶ್ವರ ಲಿಂಗವೇ ಆಗುತ್ತಾನೆ ಎಂಬುದು ಈ ವಚನ ಭಾವಾರ್ಥವಾಗಿದೆಯೆಂದು ತಿಳಿಸಿದರು.

ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಸಲ್ಲಿಸಿದರು.

ಮಹಾಮನೆ ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ಪಾಂಡಪ್ಪ ಕಳಸಾ, ಸುರೇಶ ರಾಜನಾಳ ದಂಪತಿ, ಪ್ರೊ. ಚಂದ್ರಶೇಖರ ಹೆಗಡೆ, ಶಿರೂರ ಸರ್, ಮಹೇಂದ್ರಕರ್ ಸಂತರು, ಡಾ. ಗಿರೀಶ ನೀಲಕಂಠಮಠ, ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಹುಚ್ಚೇಶ ಯಂಡಿಗೇರಿ, ಚಂದ್ರಶೇಖರ ತೆಗ್ಗಿ, ಕುಮಾರ ಅರವಟಗಿ, ಶ್ರೀದೇವಿ ಶೇಖಾ, ಮಹಾಮನೆಯ ಕುಟುಂಬದ ಬಂಧುಗಳು ನೆರೆಹೊರೆಯವರು, ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *