ಮುಂಡಗೋಡ
ಟಿಬೇಟಿಯನ್ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ ನಡೆಯಿತು.
ಟಿಬೆಟಿಯನ್ ನಿರಾಶ್ರಿತರ ಕಛೇರಿ ಅಧಿಕಾರಿ ಹಿಚನ್ ವಾಂಗ್ಮೋ, ಮುಖ್ಯ ಟಿಬೆಟಿಯನ್ ಪ್ರತಿನಿಧಿ ಜಿಗ್ಮೆ ಸಲ್ಟ್ರಿಮ್ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಾಂತಕುಮಾರ ದೇಸಾಯಿ ಅವರು ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೂಜ್ಯ ಶ್ರೀ ಬಸವೇಶ್ವರಿ ಮಾತಾಜಿ ಅತ್ತಿವೇರಿಯವರು ಮಾತನಾಡಿ, ದಲಾಯಿಲಾಮರ 90 ವರ್ಷದ ಜೀವನ ಸುಖಕರವಾಗಿಯೇನು ಇರಲಿಲ್ಲ. ಸಾಕಷ್ಟು ಏಳು-ಬೀಳುಗಳಿಂದ, ಸುಖ-ದುಃಖಗಳಿಂದ, ಕಲ್ಲು-ಮುಳ್ಳುಗಳಿಂದ ಕೂಡಿತ್ತು. ಎಲ್ಲ ಧರ್ಮದ ಮಹಾಪುರುಷರು ತಮ್ಮ ಜೀವನವನ್ನು ಅತ್ಯಂತ ಕಷ್ಟದಲ್ಲಿ ನಡೆಸಿ ಲೋಕಕ್ಕೆ ಶಾಂತಿ ಮತ್ತು ಸಹಬಾಳ್ವೆಯನ್ನು ಸಾರಿದರು. ಅಂತಹ ಮಹಾತ್ಮರ ಸಾಲಿನಲ್ಲಿ ಪೂಜ್ಯ ದಲಾಯಿಲಾಮ ಅವರು ಕೂಡ ಒಬ್ಬರು ಎಂದು ಹೇಳಿದರು.

ಬುದ್ಧನ ಮಾನವತಾವಾದ, ಬಸವಣ್ಣನ ಕರುಣೆ, ಸಮಾನತೆ, ಮಹಾವೀರನ ಅಹಿಂಸೆ, ಏಸುವಿನ ದಯಾಶೀಲತೆ, ಮಹಮ್ಮದರ ದಿಟ್ಟತನ ಎಲ್ಲವನ್ನೂ ಮೈಗೂಡಿಸಿಕೊಂಡು ಪರಿಪೂರ್ಣರಾಗಿದ್ದಾರೆ. ಬಸವಣ್ಣನವರು ಹೇಳುವಂತೆ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ. ಈ ಭೂಲೋಕ ಆತನ ಸಾಮ್ರಾಜ್ಯ. ದೇವರ ನಿಯಮದಲ್ಲಿ ತನ್ನ ರಾಜ್ಯವು ಮಾತ್ರವೇ ಶಾಶ್ವತವಾಗಿರಬೇಕೆಂದು ಆತನ ಸಂಕಲ್ಪವಿದ್ದಂತೆ ತಿಳಿಯುತ್ತದೆ.

ಶಾಂತಿ, ಧರ್ಮ ಸಾಮ್ರಾಜ್ಯ ಸ್ಥಾಪಕರಾದ ಬುದ್ಧ, ಬಸವಣ್ಣ, ಏಸುಕ್ರಿಸ್ತ, ಮಹಾವೀರ, ಮಹಮ್ಮದ್ ಪೈಗಂಬರರ ಹೆಸರುಗಳನ್ನು ಹೇಳುವವರು ಅಸಂಖ್ಯಾತರಿದ್ದಾರೆ. ಅವರ ಅನುಯಾಯಿಗಳು ಇನ್ನೂ ಹೆಚ್ಚುತ್ತಲೇ ಇದ್ದಾರೆ. ಅಂತಹ ಶಾಂತಿ ಧರ್ಮಕ್ಕಾಗಿ ಹೋರಾಡಿದವರು ದಲಾಯಿಲಾಮರವರು ಎಂದು ಹೇಳಿದರು.
ಮತ್ತೊಬ್ಬ ಅತಿಥಿಗಳಾಗಿ ಆಗಮಿಸಿದ್ದ ಮೌಲಾನಾರವರು ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮದ ಎಲ್ಲರೂ ಸಹಬಾಳ್ವೆಯಿಂದ ನಡೆಯಬೇಕೆಂದು ಕೋರಿದರು.
ಫಾದರ್ ಮೆಲ್ವಿನ್ ಲೋಬೋರವರು ಮಾತನಾಡಿ, ಧರ್ಮಗುರುಗಳು ಜನತೆಗೆ ಶಿಕ್ಷಣ, ಆರೋಗ್ಯ, ಸಹಜೀವನ ನಡೆಸುವಲ್ಲಿ ಸಹಕಾರಿಯಾಗಬೇಕು ಎಂದು ಬಯಸಿದರು.

ಕಾರ್ಯಕ್ರಮದಲ್ಲಿ ಮುಂಡಗೋಡದ ಟಿಬೇಟಿಯನ್ ಕಾಲೋನಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಟಿಬೆಟಿಯನ್ ನಿರಾಶ್ರಿತ ಕಛೇರಿಯ ಅಧಿಕಾರಿ ವರ್ಗದವರು, ಮುಂಡಗೋಡದ ಗಣ್ಯರು ಭಾಗವಹಿಸಿದ್ದರು.