ಸಂಡೂರು
ಸಂಡೂರು- ತೋರಣಗಲ್ಲು ವಲಯದ ‘ಶಾಕ್ಯ ಮಿತ್ರ ತಂಡ’ ಗೆಳೆಯರು ಇತ್ತೀಚೆಗೆ ಹಳೆದರೋಜಿ ಗ್ರಾಮದ ಕರಡಿಧಾಮದ ತಪ್ಪಲಿನಲ್ಲಿ, ‘ಮಾದಾರ ಚೆನ್ನಯ್ಯ ವೇದಿಕೆ’ ವತಿಯಿಂದ ಒಂದು ದಿನದ ಕೇಡರ್ ಕ್ಯಾಂಪ್ ಆಯೋಜಿಸಿದ್ದರು. ನನ್ನನ್ನು ‘ಮಾದಿಗ ಜನಾಂಗದ ಸಂಸ್ಕೃತಿ ಮತ್ತು ಇತಿಹಾಸ’ ವಿಷಯದ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು.
ಆರೇಳು ನೂರು ಯುವಕರು ಪಾಲ್ಗೊಂಡಿದ್ದ ಈ ಶಿಭಿರದಲ್ಲಿ ಜಾತಿಯನ್ನು ಮೀರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿರುವ ನವಯಾನ ಬೌದ್ಧ ಮಾರ್ಗದಲ್ಲಿ ಸಾಮಾಜಿಕ ವಿಮೋಚನೆ ಹೊಂದಬೇಕಾದ ಹಂಬಲಗಳನ್ನು ಕುರಿತು ಮಾತನಾಡಿದೆ. “ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯಲಾರೆ” ಎಂದು ಹೇಳಿದ ಅಂಬೇಡ್ಕರ್ ತಾನು ಹೇಳಿದಂತೆಯೇ ನಡೆದು ತೋರಿಸಿದ್ದಾರೆ. “ಹಿಂದೂವಾಗಿ ಸಾಯಲಾರೆ” ಎಂಬ ಇದೇ ಧ್ಯೇಯ ಮತ್ತು ಮಾದರಿಯನ್ನು ಮುಂದಿರಿಸಿಕೊಂಡು ದಲಿತರು ಹಿಂದೂಧರ್ಮ ತೊರೆದು ಸಾಮಾಜಿಕ ವಿಮೋಚನೆ ಹೊಂದಬೇಕಿದೆ… ಹಾಗಾಗಿ ‘ಧಮ್ಮ ದೀಕ್ಷಾ ಕಾರ್ಯಕ್ರಮಗಳನ್ನು’ ಇಂತಹ ವೇದಿಕೆಗಳು ಹೆಚ್ಚೆಚ್ಚು ಆಯೋಜಿಸಬೇಕೆಂದು ಸೂಚಿಸಿ ಮಾತನಾಡಿದೆ.
ಇದೇ ನಿಟ್ಟಿನಲ್ಲಿ ಲಿಂಗಾಯತರು, ಲಿಂಗಾಯತ ಧರ್ಮದ ಪ್ರತ್ಯೇಕ ಗುರುತಿಗಾಗಿ ರೂಪಿಸಿರುವ ‘ಮತ್ತೆ ಕಲ್ಯಾಣ’ ಚಳವಳಿಯನ್ನು ದಲಿತರು ಬೆಂಬಲಿಸಬೇಕಾದ ಅಗತ್ಯವನ್ನು ಕೂಡಾ ಮನಗಾಣಿಸಿದೆ. ಲಿಂಗಾಯತ ಧರ್ಮದ ನಿರ್ಮಾತೃಗಳು ಮೂಲದಲ್ಲಿ ದಲಿತರೇ ಆಗಿರುವುದರಿಂದ ಹಾಗೂ ಬಸವಣ್ಣನವರ ನಾಯಕತ್ವದಲ್ಲಿ ದಲಿತರೇ ಶರಣ ಚಳವಳಿಯ ತಾಯಿಬೇರುಗಳಾಗಿರುವುದರಿಂದ ಲಿಂಗಾಯತ ಧರ್ಮದ ದಾರಿಯು ಕೂಡಾ ದಲಿತರಿಗೆ ಮುಕ್ತವಾಗಿ ತೆಗೆದುಕೊಳ್ಳಬೇಕೆಂದು ಆಶಿಸಿ ಮಾತನಾಡಿದೆ. ನನ್ನ ಉಪನ್ಯಾಸದ ನಂತರದಲ್ಲಿ ನಡೆದ ಸಂವಾದದಲ್ಲಿ ಶಿಬಿರಾರ್ಥಿಗಳು ಕೇಳಿದ ಹಲವಾರು ಬಗೆಯ ಪ್ರಶ್ನೆಗಳಿಗೆ ನಾನು ಉತ್ತರಗಳನ್ನು ತಿಳಿಸಿಕೊಡುವ ಮತ್ತು ಉತ್ತರಗಳನ್ನು ಕಂಡುಕೊಳ್ಳುವ ನನ್ನ ಪ್ರಯತ್ನ ಅತ್ಯಂತ ಸಂತೋಷ ನೀಡಿತು.
ಯಶಸ್ವಿದಾಯಕ ಶಿಬಿರವನ್ನು ಅತ್ಯಂತ ಶ್ರದ್ಧೆಯಿಂದ ಆಯೋಜಿಸಿದ ‘ಶಾಕ್ಯ ಮಿತ್ರ ತಂಡದ’ ಎಲ್ಲಾ ಗೆಳೆಯರಿಗೆ, ವಿಶೇಷವಾಗಿ ಮಲಿಯಪ್ಪ ಎಸ್, ಮಲ್ಲಿ. ಎಸ್. , ಕಸ್ತೂರಿ ಮಂಜುನಾಥ್ ಹಾಗೂ ಸಂಡೂರು- ತೋರಣಗಲ್ಲು ವಲಯದ ಶಿಬಿರಾರ್ಥಿಗಳಿಗೆ ನಮೋ ಬುದ್ಧಾಯ- ಶರಣು ಶರಣಾರ್ಥಿ- ಜೈ ಭೀಮ್.