ಮುಂಡಗೋಡ
ಕರ್ನಾಟಕದ ದಲಿತರು ಬಸವಣ್ಣನವರನ್ನು ಅರಿಯುವ ಪ್ರಯತ್ನ ಮಾಡಬೇಕು ಅವರ ವಚನಗಳ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕೆಂದು ಮುಂಡರಗಿ, ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಮುಂಡಗೋಡ ಪಟ್ಟಣದ ವಿವೇಕಾನಂದ ಬಯಲು ರಂಗಮಂಟಪದಲ್ಲಿ ಎಸ್. ಫಕೀರಪ್ಪ ನೇತೃತ್ವದ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 134 ನೇ ಜಯಂತಿ ಮತ್ತು ಹಸಿರು ಕ್ರಾಂತಿ ಹರಿಕಾರ ಭಾರತದ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ರವರ 118ನೇ ಜಯಂತಿ ಅಂಗವಾಗಿ, ಗೌತಮ ಬುದ್ಧ, ಬಸವಣ್ಣನವರ ಶಾಂತಿ ಮತ್ತು ಸಮಾನತೆಯ ವೈಚಾರಿಕ ಹಬ್ಬ ಜಿಲ್ಲಾಮಟ್ಟದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಅನುಭಾವ ನೀಡಿದರು.

12ನೇ ಶತಮಾನದ ಅಂದಿನ ಸಮಾಜದಲ್ಲಿದ್ದ ವರ್ಣಾಶ್ರಮ ವ್ಯವಸ್ಥೆ ತೊಡೆದು ಹಾಕಿ, ಸಮಾನತೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತರಬೇಕೆಂದು ಹೋರಾಡಿದವರು ಬಸವಣ್ಣನವರು. ಅವರು ಮೇಲ್ಜಾತಿ ವರ್ಗದಿಂದ ಬಂದವರಾಗಿದ್ದರು ಸಹಿತ ದಲಿತರಿಗೆ ಸಮಾನತೆ ಕೊಡಲು ಹೋರಾಡುತ್ತ, ಅವರನ್ನು ಅಪ್ಪಿ, ಒಪ್ಪಿ ತಾನು ಮಾದಿಗರ ಚನ್ನಯ್ಯನ ಮಗ ಎಂದು ಹೇಳಿ ಹೃದಯ ವೈಶಾಲ್ಯತೆ ಮೆರೆದರು ಎಂದರು.
ರಾಜ್ಯದಲ್ಲಿರುವ ಎಲ್ಲ ನೂರಾರು ದಲಿತ ಸಂಘಟನೆಗಳು ಒಂದಾದರೆ ದಲಿತರು ಬಲಾಢ್ಯರಾಗಲು ಸಾಧ್ಯ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ವಿಚಾರಧಾರೆಗಳನ್ನು ಎಲ್ಲೆಡೆಯಲ್ಲಿಯೂ ಪ್ರಚಾರ ಮಾಡುವಂತಾಗಬೇಕು. ಏಕೆಂದರೆ ಬುದ್ಧನ ಶಾಂತಿ ಉಳಿಯಬೇಕು, ಬಸವನ ಸಮಾನತೆ ಬೇಕು, ಅಂಬೇಡ್ಕರ್ ಅವರ ಸಂವಿಧಾನ ಉಳಿದರೆ ಮಾತ್ರ ನಮಗೆ ಉಳಿಗಾಲವೆಂದು ಅಭಿಪ್ರಾಯಪಟ್ಟರು.

ಟಿಬೆಟ್ ಧರ್ಮಗುರುಗಳನ್ನು ಕಂಡು ನಿಜಗುಣಾನಂದ ಶ್ರೀ ಖುಷಿಪಟ್ಟು, ಬಸವಣ್ಣನವರ ಸಮಾನತೆಯ, ಪ್ರಜಾಸತ್ತಾತ್ಮಕ ವಿಚಾರಗಳನ್ನು ಟಿಬೆಟಿಯನ್ ಗೆ ಭಾಷಾಂತರ ಮಾಡಿ ಅವರಿಗೆ ಒದಗಿಸಬೇಕೆಂದು ಸಂಘಟಕರಲ್ಲಿ ಮನವಿ ಮಾಡಿದರು.
ಎಸ್. ಫಕ್ಕಿರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ ಉದ್ಘಾಟನೆಯನ್ನು ಮಾಡಿ ಮಾತನಾಡಿದರು. ರಾಜ್ಯ ಸಂಚಾಲಕ ಎಮ್. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬೌದ್ಧಧರ್ಮ ಗುರುಗಳು, ರಾಜ್ಯ ಸಂ.ಸಂಚಾಲಕ ಎಸ್.ಎನ್. ಬಳ್ಳಾರಿ, ರಾಜ್ಯದ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ಪಿ ನಾಗೇಂದ್ರ, ವಂದನಾರ್ಪಣೆಯನ್ನು ನಾಗರಾಜ ಕಟ್ಟಿಮನಿ ಮಾಡಿದರು.