ಬಸವಕಲ್ಯಾಣ:
ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಮಹಾಶರಣೆ ದಾನಮ್ಮದೇವಿ ಉತ್ಸವ, 4ನೇ ಶರಣ ಸಮಾಗಮ ಮತ್ತು ಶರಣ ಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಎರಡು ದಿನದ ಉತ್ಸವದಲ್ಲಿ ದಾಂಪತ್ಯ ಧರ್ಮ ಸಮಾವೇಶ, ಕಾಯಕ ಶರಣರ ಸಮಾವೇಶ, ಶರಣ ಜ್ಞಾನ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗುರುವಂದನಾ ಹಾಗೂ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ ನೆರವೇರಲಿದೆ ಎಂದು ಪೂಜ್ಯ ಬಸವಪ್ರಭು ಸ್ವಾಮೀಜಿ ಅವರು ತಿಳಿಸಿದ್ದಾರೆ.
ಗುಣತೀರ್ಥವಾಡಿ ಮಹಾಮನೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಶರಣೆ ದಾನಮ್ಮ ಉತ್ಸವದ ವೇದಿಕೆಯಲ್ಲಿ 4ರಂದು ಬೆಳಿಗ್ಗೆ 5 ರಿಂದ 6ಗಂಟೆಗೆ ಪತಂಜಲಿ ಯೋಗ ಗುರು ಬಸವರಾಜ ಮಾಳಿ, ಶರಣೆ ಮೇಘಾ ಯೋಗಾಸನ ಹೇಳಿಕೊಡಲಿದ್ದಾರೆ. ಬೆಳಿಗ್ಗೆ 7 ರಿಂದ 9ರವರೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ, ಲಿಂಗಾನುಭಾವ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಹಾಗೂ ವಚನ ಪಠಣ, ದಾನಮ್ಮ ದೇವಿ ಮಂತ್ರ ಪಠಣ ನೆರವೇರಲಿದೆ.
ಬೆಳಿಗ್ಗೆ 10 ಗಂಟೆಗೆ ಪೂಜ್ಯರ ಮತ್ತು ಸರ್ವ ಶರಣರ ಸಮ್ಮುಖದಲ್ಲಿ ನಿವೃತ್ತ ನ್ಯಾಯಾಧೀಶರಾದ ಎಸ್. ಎಸ್. ನಾಗರಾಳೆ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ಹುಲಸೂರಿನ ಪೂಜ್ಯ ಶಿವಾನಂದ ಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಪ್ರಭು ಮಹಾಸ್ವಾಮಿಗಳು ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಡಾ. ವಚನ ಕುಮಾರಸ್ವಾಮಿ ರೂಪಾ ಅವರು ವಹಿಸಲಿದ್ದಾರೆ. ದಿಲೀಪ ಶಿಂದೆ ಆಶಯ ನುಡಿಯಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿ ಅವರು ರಚಿಸಿದ “ಜೀವನ ದರ್ಶನ” ಕೃತಿ ಬಿಡುಗಡೆಗೊಳ್ಳಲಿದ್ದು, ಈ ಕೃತಿಯನ್ನು ಹಾವೇರಿಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು ಬಿಡುಗಡೆ ಮಾಡಲಿದ್ದಾರೆ.

ಪೂಜ್ಯ ಡಾ. ಶಿವಲಿಂಗೇಶ್ವರ ಸ್ವಾಮಿಗಳು ಸಂಖ, ಗೋರ್ಟಾದ ಪ್ರಭುದೇವ ಮಹಾಸ್ವಾಮೀಜಿ ಅವರು ಸಮ್ಮುಖ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ಥಳಿಯ ಶಾಸಕ ಶರಣು ಸಲಗರ ಮತ್ತು ಹುಮನಾಬಾದ ಶಾಸಕರಾದ ಸಿದ್ಧು ಪಾಟೀಲ ಆಗಮಿಸಲಿದ್ದಾರೆ.
ಅಂದು ಮದ್ಯಾಹ್ನ 3 ರಿಂದ 5ರವರೆಗೆ ನಡೆಯುವ ಮಕ್ಕಳ ಶರಣ ಜ್ಞಾನ ಗೋಷ್ಠಿ ಮತ್ತು ಸೋಲಾಪುರ ಶರಣೆಯರಿಂದ ದಾನಮ್ಮ ರೂಪಕ ನೆರವೇರಲಿದೆ. ಪ್ರತಿಭಾನ್ವಿತ ಮಕ್ಕಳಿಂದ ವಿಶೇಷ ಅನುಭಾವ ನಡೆಯಲಿದೆ.
ಸಂಜೆ 6 ರಿಂದ 9ರವರೆಗೆ ನಡೆಯುವ ಕಾಯಕ ಶರಣರ ಸಮಾವೇಶವನ್ನು ವಿಧಾನ ಪರಿಷತ್ ಸದಸ್ಯ ಎಮ್.ಜಿ. ಮುಳೆ ಅವರು ಉದ್ಘಾಟನೆ ಮಾಡಲಿದ್ದು, ಬಸವಕಲ್ಯಾಣ ಮಹಾಮನೆಯ ಅಧ್ಯಕ್ಷರಾದ ಸಿದ್ಧರಾಮ ಬೆಲ್ದಾಳ ಶರಣರು ನೇತೃತ್ವ ವಹಿಸಲಿದ್ದಾರೆ.
ಬೇಲೂರಿನ ಪಂಚಾಕ್ಷರಿ ಸ್ವಾಮೀಜಿ, ಅಂಬಿಗರ ಚೌಡಯ್ಯ ಪೀಠದ ರತ್ನಕಾಂತ ಶಿವಯೋಗಿ, ಚೆನ್ನಯ್ಯ ಅರಿವು ಪೀಠದ ಕಾಂತ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ದಿಲೀಪ ಶಿಂಧೆ ಅವರು ವಹಿಸಲಿದ್ದು, ರಾಜಕೀಯ ಧುರೀಣೆ ಬಿ. ಮಾಲಾ, ಬಾಬು ಹೊನ್ನನಾಯಕ, ಸಹಾಯಕ ಆಯುಕ್ತ ಪ್ರಕಾಶ ಕುದರಿ ಭಾಗವಹಿಸಲಿದ್ದಾರೆ.
ನಿವೃತ್ತ ಕೆಎಎಸ್ ಅಧಿಕಾರಿ ಎಸ್. ದಿವಾಕರ ಅವರು ಆಶಯ ನುಡಿ ಆಡಲಿದ್ದು, ವಿಶೇಷ ಉಪನ್ಯಾಸವನ್ನು ಡಾ. ಗುರುಲಿಂಗಪ್ಪ ದಬಾಲೆ ನೀಡಲಿದ್ದಾರೆ. ಸಂಖ ಶರಣೆಯರಿಂದ ನುಲಿಯ ಚಂದಯ್ಯ ಹಾಗೂ ಹರಳಯ್ಯ ರೂಪಕ ನೆರವೇರಲಿದೆ.
05 ರಂದು ಬೆಳಿಗ್ಗೆ 10:30ಕ್ಕೆ ರೈತ ಸಮಾವೇಶ ಮತ್ತು ರೈತ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಬೀದರ ಕೆವಿಕೆ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ. ರವಿ ದೇಶಮುಖ ಉದ್ಘಾಟನೆ ಮಾಡಲಿದ್ದಾರೆ. ರಾಯಚೂರು ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಆರ್. ಎಲ್. ಜಾಧವ ಅವರು ವಿಶೇಷ ಉಪನ್ಯಾಸ ಮತ್ತು ರೈತ ಸಂವಾದ ನಡೆಸಿಕೊಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಆಯುಕ್ತರಾದ ಜಗನ್ನಾಥ ರೆಡ್ಡಿ, ರಾಜ್ಯ ರೈತ ಸಂಘ ಉಪಾಧ್ಯಕ್ಷರಾದ ಚಂದ್ರಕಾಂತ ಜಮಖಂಡಿ ಅವರು, ಬಸವ ಕಲ್ಯಾಣದ ಸಹಾಯಕ ಕೃಷಿ ನಿರ್ದೇಶಕ ಗೌತಮ್, ರೈತ ಸಂಘ ಬೀದರ ಜಿಲ್ಲಾಧ್ಯಕ್ಷ ಸಿದ್ಧರಾಮಪ್ಪ ಆಣದೂರೆ ಆಗಮಿಸಲಿದ್ದಾರೆ. ಮುಂಬೈನ ಆಹಾರ ಘಟಕದ ಸಹಾಯಕ ತಂತ್ರಜ್ಞ ದೀಪ್ತಿ ಎಸ್. ಬಿರಾದಾರ ಆಶಯ ನುಡಿ ನುಡಿಯಲಿದ್ದಾರೆ.
ಮಧ್ಯಾಹ್ನ 3ರಿಂದ ನಡೆಯುವ ಯುವ ಶರಣ ಜ್ಞಾನ ಸಂಗಮದಲ್ಲಿ ದಿವ್ಯ ನೇತೃತ್ವವನ್ನು ಸಂಚಾರಿ ಜಂಗಮರಾದ ಪೂಜ್ಯ ಬಸವದೇವರು ವಹಿಸಲಿದ್ದು, ಪ್ರಕಾಶ ಗಂದಿಗುಡಿ ಬೀದರ; ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ನಾಗಪ್ಪ ಮುಗನೂರ ಅವರು ಆಶಯ ನುಡಿಯನ್ನಾಡಲಿದ್ದಾರೆ.
‘ಕಾಯಕ ತತ್ವದಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ಸಿದ್ರಾಮ ಶೆಟಗಾರ, ‘ಹೆಣ್ಣು ದೇಶದ ಕಣ್ಣು’ ವಿಷಯದ ಕುರಿತು ಸಿದ್ಧಪ್ಪ ಮುಗನೂರು, ‘ಬಸವ ತತ್ವದಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ಸಿದ್ಧವೀರ ಸಂಗಮದ ಅನುಭಾವ ನೀಡಲಿದ್ದಾರೆ.
ಸಂಜೆ 6 ಗಂಟೆಗೆ ನಡೆಯುವ 15ನೇ ಜ್ಯೋತಿ ಯಾತ್ರೆ ಸಮಾರೋಪ ಸಮಾರಂಭ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಮತ್ತು ಪೂಜ್ಯ ಸತ್ಯಾದೇವಿ ಮಾತಾಜಿ ಹಾಗೂ ಅನುಭವ ಮಂಟಪದ ಶಿವಾನಂದ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ.
ನಗರದ ಪೌರಾಯುಕ್ತರಾದ ರಾಜು ಬಣಕಾರ ದೀಪ ಪ್ರಜ್ವಲನೆ ಮಾಡಲಿದ್ದು, ವಿಶೇಷ ಆಹ್ವಾನಿತರಾಗಿ ಮಾಜಿ ಸಚೀವ ರಾಜಶೇಖರ ಪಾಟೀಲ, ಮಲ್ಲಿಕಾರ್ಜುನ ಖೂಬಾ, ಪ್ರದೀಪ ವಾತಡೆ, ಗುಂಡುರೆಡ್ಡಿ, ಡಾ. ಗವಿಸಿದ್ಧಪ್ಪ ಪಾಟೀಲ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ದಿಲೀಪ ಶಿಂದೆ, ಗೌರವಾಧ್ಯಕ್ಷ ಲಕ್ಷ್ಮಣರಾವ್ ಹಂದಿಕೇರಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಪಾಟೀಲ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಸಂಗಮೇಶ ಜವಾದಿ, ಬಸವತತ್ವ ಪ್ರಚಾರ ಮತ್ತು ಪ್ರಸಾರ ಕೇಂದ್ರದ ಜಯಪ್ರಕಾಶ ಸದಾನಂದೆ, ಸಂಗಮೇಶ ತೊಗರಖೇಡೆ, ದಾನಮ್ಮ ಬಳಗದ ಗಿರಿಜಾ ಸಿದ್ದಣ್ಣ, ಸುಮಿತ್ರಾದೇವಿ ದಾವಣಗಾವೆ ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು.
