ದರ್ಶನ ಬಾಹ್ಯನೋಟವಲ್ಲ, ಅದು ಅಂತರಂಗದ ಅನುಭಾವ : ಗಿರಿಜಕ್ಕ ಧರ್ಮರೆಡ್ಡಿ

ಗದಗ :

ದೇವಸ್ಥಾನದಲ್ಲಿ ಪ್ರತಿಮೆಯನ್ನು ನೋಡಿ ದರ್ಶನವಾಯಿತು ಎಂದು ಭಾವಿಸುವ ಮನೋಭಾವದಿಂದ ದರ್ಶನ ಎಂಬ ಪದವು ಸಂಕುಚಿತವಾಗಿದೆ, ದರ್ಶನ ಎಂದರೆ ಕೇವಲ ಬಾಹ್ಯನೋಟವಲ್ಲ ಅದು ಅಂತರಂಗದ ಅನುಭಾವ ಎಂದು ಶರಣ ಸಾಹಿತಿಗಳಾದ ಗಿರಿಜಕ್ಕ ಧರ್ಮರೆಡ್ಡಿ ನುಡಿದರು.

 ಅವರು ರವಿವಾರ ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆದ ೧೬೭೬ನೇ ಶರಣ ಸಂಗಮದಲ್ಲಿ ಶರಣ ಮಾದಾರ ಚೆನ್ನಯ್ಯನವರ ಜಯಂತಿ ಅಂಗವಾಗಿ ಉಪನ್ಯಾಸ ನೀಡಿ ಮಾತನಾಡಿದರು.

ಮಾದಾರ ಚೆನ್ನಯ್ಯನವರು ಮೂಲತಃ ತಮಿಳುನಾಡಿನವರು, ವಯಸ್ಸಿನಲ್ಲಿ ಹಿರಿಯರಾಗಿದ್ದ ಅವರು ಬಸವೇಶ್ವರರ ಸಂಪರ್ಕಕ್ಕೆ ಬಂದ ನಂತರ ಶರಣ ಜೀವಿಗಳಾದರು. ಅವರು ಹಲವಾರು ವಚನಗಳನ್ನು ರಚಿಸಿದ್ದರೂ ನಮಗೆ ಕೇವಲ ೧೦ ವಚನಗಳು ಈ ವರೆಗೆ ಲಭ್ಯವಾಗಿವೆ.

ಆದರೆ ಬಸವೇಶ್ವರರು ತಮ್ಮ ಅನೇಕ ವಚನಗಳಲ್ಲಿ ಮಾದಾರ ಚೆನ್ನಯ್ಯನವರ ಗುಣಗಾನ ಮಾಡಿದ್ದಾರೆ. “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ” ಎಂದು ವರ್ಣಿಸಿರುವುದು ಮಾದಾರ ಚೆನ್ನಯ್ಯನವರ ಜ್ಯೇಷ್ಠ ವ್ಯಕ್ತಿತ್ವದ ಅರಿವು ಮೂಡಿಸುತ್ತದೆ.

 ಜಾತಿ ಹಾಗೂ ಸಂಪ್ರದಾಯಗಳನ್ನು ಮೀರಿದ ಮಾದಾರ ಚೆನ್ನಯ್ಯನವರು ಇಷ್ಟಲಿಂಗದ ಮಹತ್ವವನ್ನು ಕುರಿತು ಬರೆದ ಸಾಲುಗಳು ಗಮನಾರ್ಹವಾಗಿವೆ. ಶಿವ-ಶಕ್ತಿಗಳ ಕುರಿತು ವ್ಯಾಖ್ಯಾನಗಳನ್ನು ಮಾದಾರ ಚೆನ್ನಯ್ಯನವರು ನೀಡಿದ್ದು, ಸಾಕಾರ ಅಂಶಗಳೆಲ್ಲ ಶಕ್ತಿ ನಿರಾಕಾರ ಅಂಶವು ಶಿವ ಎಂಬುದನ್ನು ಸ್ಪಷ್ಟವಾಗಿ ಸಾರಿದ್ದಾರೆ. ಶರಣರ ವಚನಗಳು ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಸೀಮಿತವಲ್ಲ, ಅವುಗಳಲ್ಲಿ ವಿಜ್ಞಾನವೂ ಅಡಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವದಳದ ಅಧ್ಯಕ್ಷರಾದ ವಿ.ಕೆ ಕರೇಗೌಡ್ರ ಮಾತನಾಡಿ, ಮಾದಾರ ಚೆನ್ನಯ್ಯನವರ ಹಾಗೂ ಬಸವೇಶ್ವರರಿಗಿದ್ದ ಅವಿನಾಭಾವ ಸಂಬಂಧದ ಕುರಿತು ಮಾತನಾಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಜಗದ್ಗುರು ತೋಂಟದಾರ್ಯ ಶಾಲೆಯ ಸಂಸ್ಕೃತ ಶಿಕ್ಷಕರಾದ ಮಹಾಂತೇಶ ಮಾದರ ವಚನ ಸಂಗೀತ ಗಾಯನ ನಡೆಸಿ ಮಾತನಾಡಿದರು. ಇನ್ನೋರ್ವ ಅತಿಥಿಗಳಾದ ಸನ್ಮಾರ್ಗ ಪ.ಪೂ. ಕಾಲೇಜು ಇಂಗ್ಲೀಷ್‌ ಉಪನ್ಯಾಸಕರಾದ ವೀರೇಶ ಹರ್ಲಾಪೂರ ತಮ್ಮ ಹಾಗೂ ಬಸವದಳದ ಸಂಬಂಧವನ್ನು ಮೆಲುಕು ಹಾಕಿದರು.

ಎಂ.ಬಿ. ಲಿಂಗದಾಳ ಸ್ವಾಗತಿಸಿದರು. ಬಸವದಳದ ಕಾರ್ಯಾಧ್ಯಕ್ಷರಾದ ಪ್ರಕಾಶ ಅಸುಂಡಿ ನಿರೂಪಿಸಿದರು. ರೇಣುಕಾ ಕರೇಗೌಡ್ರ ಶರಣು ಸಮರ್ಪಣೆಗೈದರು.

ಗೌರಕ್ಕ ಬಡಿಗಣ್ಣವರ, ಮಂಗಳಕ್ಕ ನಾಲವಾಡ, ಸುವರ್ಣಾ ಗಾಳಪ್ಪನವರ, ಲಕ್ಷ್ಮೀ ಅಂಗಡಿ, ಸಂಜೀವಿನಿ ಬಂಡಿವಡ್ಡರ, ಸರೋಜಕ್ಕ ಲಿಂಗದಾಳ, ವೀಣಾ ತಡಸದ, ಮಂಗಲಾ ಕಾಮಣ್ಣವರ, ಗಿರಿಜಾ ಹತ್ತಿಹಾಳ, ಮಂಜುಳಾ ಹಾಸಲಕರ, ರೇಣುಕಾ ಹಾಸಲಕರ, ಸಹನಾ ಆಲತಗಿ, ನೀಲಲೋಚನ ಹಂಚಿನಾಳ, ನಾಗಭೂಷಣ ಬಡಿಗಣ್ಣವರ, ಶೇಖಣ್ಣ ಕವಳಿಕಾಯಿ, ಸಿದ್ದು ಅಂಗಡಿ, ಸಿದ್ಧಲಿಂಗಪ್ಪ ಹಂಚಿನಾಳ, ಪ್ರಭು ತಡಸದ, ಎಸ್.ಎನ್‌. ಹಕಾರಿ, ಮಹಾಂತೇಶ ಅಂಗಡಿ, ಮೃತ್ಯುಂಜಯ ಜಿನಗಾ ಸೇರಿದಂತೆ ಬಸವದಳದ ಸದಸ್ಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *