ದರ್ಶನ್, ಹೋಮ ಹವನ ಮತ್ತು ನಮ್ಮ ಅಂತರಂಗ…

ಕನ್ನಡ ಚಲನಚಿತ್ರದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ಈಗ ಕೊಲೆ ಆರೋಪಿ ದರ್ಶನ್ ಬಿಡುಗಡೆಗಾಗಿ ಅವರ ಪತ್ನಿ ರಾಜ್ಯದಾದ್ಯಂತ ಪ್ರಖ್ಯಾತ ಮತ್ತು ಬಹಳ ನಂಬಿಕೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಿದ್ದಾರೆ. ಸತ್ಯಕ್ಕೆ, ನ್ಯಾಯಕ್ಕೆ ಜಯ ಲಭಿಸುತ್ತದೆ ಎಂದು ಹೇಳುತ್ತಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗ ಈ ದರ್ಶನ್ ಬಿಡುಗಡೆಯ ವಿಷಯವನ್ನು ನೆಪವಾಗಿಟ್ಟುಕೊಂಡು ಒಟ್ಟಾರೆಯಾಗಿ ಚಿತ್ರರಂಗದ ಯಶಸ್ಸಿಗಾಗಿ ವಿವಿಧ ಹೋಮ ಹವನಗಳನ್ನು ಮಾಡಿಸುತ್ತಿದೆ….

ಇದು ಅವರವರ ನಂಬಿಕೆಗೆ ಸಂಬಂಧಿಸಿದ ವಿಷಯ. ಇದರಿಂದ ಯಾರಿಗೂ ತೊಂದರೆ ಇಲ್ಲ ಮಾಡಿಕೊಂಡರೆ ಮಾಡಿಕೊಳ್ಳಲಿ ಬಿಡಿ, ಅವರುಗಳು ಒಂದಷ್ಟು ಮಾನಸಿಕ ತೃಪ್ತಿ, ಸಮಾಧಾನ ಪಟ್ಟುಕೊಂಡರೆ ಯಾರಿಗೇನು ನಷ್ಟ ಎಂಬುದು ಕೆಲವರ ವಾದ ಸರಣಿ. ಅದನ್ನು ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯವೂ ಸಹ. ಹಾಗೆಯೇ ಅದನ್ನು ಪ್ರಶ್ನಿಸಬೇಕಾಗಿರುವುದು ಸಹ ಇನ್ನೂ ಕೆಲವರ ಜವಾಬ್ದಾರಿ. ಅದನ್ನು ಸಹ ಅವರು ಗೌರವಿಸಬೇಕಾಗುತ್ತದೆ…..

ಈಗ ಈ ವಾದ ಸರಣಿ ಹೋಮ, ಹವನ ಎಂಬ ದೇವರ ಅತಿಮಾನುಷ ಶಕ್ತಿ ಹೆಚ್ಚು ಪ್ರಭಾವಶಾಲೆಯೋ ಅಥವಾ ಮನುಷ್ಯ ಪ್ರಯತ್ನದ ನಮ್ಮ ಅಂತರಂಗ ಹೆಚ್ಚು ಬಲಶಾಲಿಯೋ ಎಂಬುದರ ಸುತ್ತಾ…..

ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆಯೆಂದರೆ, ಒಂದು ವೇಳೆ ದೈವ ಭಕ್ತಿಯಿಂದ ದರ್ಶನ್ ಬಿಡುಗಡೆಯಾಗಿ ಅಥವಾ ಕನ್ನಡ ಚಿತ್ರರಂಗ ಯಶಸ್ವಿಯಾಗುವುದೇ ಆದರೆ ದೇವರು ದರ್ಶನ್ ಕೈಯಲ್ಲೇ ಕೊಲೆ ಮಾಡಿಸಿದ್ದು ಏಕೆ ? ಅಥವಾ ಚಿತ್ರರಂಗವನ್ನು ದುಸ್ಥಿತಿಗೆ ತಂದಿದ್ದು ಏಕೆ ? ಅಥವಾ ದರ್ಶನ್ ಮತ್ತು ಕನ್ನಡ ಚಿತ್ರರಂಗದವರು ದೇವರ ಆಜ್ಞೆಯನ್ನು ಮೀರಿದರೆ ? ದೇವರಿಗೆ ಕೋಪ ಬರುವಂತೆ ನಡೆದುಕೊಂಡರೆ ? ದೇವರ ಪೂಜೆ ಪುನಸ್ಕಾರ, ಕಪ್ಪ ಕಾಣಿಕೆಗಳನ್ನು ಸರಿಯಾಗಿ ಸಲ್ಲಿಸಲಿಲ್ಲವೇ ? ಎಂಬುದು……

ಒಂದು ವೇಳೆ ಆ ಕಾರಣದಿಂದ ಇವರಿಗೆ ಕಷ್ಟ ಬಂದಿದ್ದೇ ಆಗಿದ್ದರೆ ಅದು ದೇವರು ಕೊಟ್ಟ ಶಿಕ್ಷೆ ಆಗಿರುವುದರಿಂದ ಅದನ್ನು ಇವರು ಅನುಭವಿಸಲೇಬೇಕು. ಮತ್ತೆ ಅದರಿಂದ ಎದ್ದು ಬರಲು ದೈವ ಪೂಜೆಯೇ ದಾರಿಯಾಗುವುದಾದರೆ ದೇವರಿಗೂ ಇವರು ವಂಚಿಸಿದಂತೆ ಅಲ್ಲವೇ. ತಪ್ಪು ಮಾಡಿ ಶಿಕ್ಷೆ ಅನುಭವಿಸದೆ ಪೂಜೆ ಪುನಸ್ಕಾರಗಳಿಂದ ಕ್ಷಮಾಪಣೆ ದೊರೆಯುವುದಾದರೆ ದೇವರ ಗುಣ ಧರ್ಮವನ್ನೇ ಪ್ರಶ್ನಿಸಬೇಕಾಗುತ್ತದೆ. ಏಕೆಂದರೆ ಕೊಲೆಯಾದ ರೇಣುಕಾ ಸ್ವಾಮಿಯೂ ದೇವರ ಸೃಷ್ಟಿಯೇ ಅಲ್ಲವೇ. ಅವನ ತುಂಬು ಗರ್ಭಿಣಿ ಪತ್ನಿ ಮತ್ತು ಹೊಟ್ಟೆಯೊಳಗಿನ ಕೂಸಿಗೂ ನ್ಯಾಯ ಸಿಗಬೇಕಲ್ಲವೇ. ಹಾಗೆಯೇ ಕನ್ನಡ ಚಿತ್ರರಂಗದ ಅಭಿಮಾನಿಗಳು ಸಹ ದೇವರ ಮಕ್ಕಳೇ. ಅವರಿಗೂ, ಅವರು ಸಿನಿಮಾ ನೋಡಲು ಕೊಡುವ ಕಾಸಿಗೂ ನ್ಯಾಯ ಸಿಗಬೇಕಲ್ಲವೇ……

ಎಲ್ಲರೂ ಹೇಳುವಂತೆ ದರ್ಶನ್ – ರೇಣುಕಾ ಸ್ವಾಮಿ ಕೊಲೆ ಘಟನೆಯಲ್ಲಿ ಸತ್ಯ ಮತ್ತು ನ್ಯಾಯ ಗೆಲ್ಲುವುದೇ ಆದರೆ ಅದು ದರ್ಶನ್ ಗೆ ಶಿಕ್ಷೆಯಾದಾಗ ಮಾತ್ರ. ಹಾಗಾಗುತ್ತದೆಯೇ ? ಅದನ್ನ ಇವರು ಒಪ್ಪಿಕೊಳ್ಳುವರೇ ? ಒಂದು ವೇಳೆ ದರ್ಶನ್ ಬಿಡುಗಡೆಯಾಗಿ ಅದನ್ನು ಇವರು ಈಗ ಸತ್ಯಕ್ಕೆ ಸಂದ ಜಯ ಎಂದರೆ ಆಗ ದೇವರ ಪಾತ್ರವೇನು? ದೇವರ ಮೇಲೆ ನಮಗೆಲ್ಲ ಹೇಗೆ ನಂಬಿಕೆ ಬರುತ್ತದೆ ? ಹೀಗೆ ಪ್ರಶ್ನೆಗಳ ಸರತಿ ಕಾಡುತ್ತಲೇ ಇರುತ್ತದೆ….

ಇದರ ನಂತರದ ಪ್ರಶ್ನೆ,

ಒಂದು ವೇಳೆ ದರ್ಶನ್ ನಿಜವಾಗಲೂ ಸಂಸ್ಕಾರವಂತರಾಗಿದ್ದರೆ, ಮಾನವೀಯ ಪ್ರಜ್ಞೆಯುಳ್ಳವರಾಗಿದ್ದರೆ, ದೈವಭಕ್ತರಾಗಿದ್ದಿದ್ದರೆ, ತನ್ನನ್ನು ಅಥವಾ ತನ್ನ ಗೆಳತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಿಂಸಿಸಿದ ವ್ಯಕ್ತಿಯನ್ನು ಕ್ಷಮಿಸಬಹುದಿತ್ತು, ನಿರ್ಲಕ್ಷಿಸಬಹುದಿತ್ತು, ಬೆದರಿಸಬಹುದಿತ್ತು, ಕಾನೂನಿನ ಮೂಲಕ ಶಿಕ್ಷೆಗೆ ಒಳಪಡಿಸಬಹುದಿತ್ತು. ಅದನ್ನು ಮೀರಿ ದೇವರನ್ನು ಧಿಕ್ಕರಿಸಿ ಅತ್ಯಂತ ಕ್ರೌರ್ಯ ಮೆರೆದ ದರ್ಶನ್ ಗೆ ದೇವರು ಸಹಾಯ ಮಾಡುತ್ತಾನಾದರೆ ದೇವರ ನೈತಿಕತೆಯನ್ನೇ ಪ್ರಶ್ನೆ ಮಾಡಬೇಕಾಗುತ್ತದೆ…

ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಇಲ್ಲಿನ ಮಣ್ಣಿನ ಗುಣವನ್ನು ಮರೆತು, ಜನರ ಮಾನಸಿಕ ಬದಲಾವಣೆಯನ್ನು, ಸಮಾಜದ ಸಾಮೂಹಿಕ ಮನಸ್ಥಿತಿಯನ್ನು ಅರಿಯದೆ, ಬದಲಾಗುತ್ತಿರುವ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನ ತೀವ್ರತೆಯನ್ನು ಅರ್ಥಮಾಡಿಕೊಳ್ಳದೆ, ಚಲನಚಿತ್ರ ನಿರ್ಮಿಸಿ ಅದು ಹಣ ಮಾಡದ ಕಾರಣಕ್ಕಾಗಿ ಚಿತ್ರರಂಗವೇ ದುಸ್ಥಿತಿಯಲ್ಲಿದೆ ಎಂದು ಅರ್ಥೈಸಿಕೊಳ್ಳುವುದೇ ಮೂರ್ಖತನವಾಗುವುದಿಲ್ಲವೇ.

ಕೇವಲ ಚಿತ್ರರಂಗ ಮಾತ್ರವಲ್ಲ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಯಾವಾಗಲೋ ಒಂದು ಕಾಲಘಟ್ಟದಲ್ಲಿ ಬದಲಾವಣೆಯ ಗಾಳಿ ಬೀಸುತ್ತಲೇ ಇರುತ್ತದೆ. ಆಗ ಆ ಸ್ಪರ್ಧೆಯನ್ನು ದೃಢವಾಗಿ ಎದುರಿಸಿ ನಿಂತವರು ಮಾತ್ರ ಉಳಿಯುತ್ತಾರೆ, ಇಲ್ಲದಿದ್ದರೆ ಆ ಇಡೀ ಕ್ಷೇತ್ರವೇ ನಾಶವಾಗಿ ಹೊಸದೊಂದು ರೂಪದಲ್ಲಿ ಪುನಃ ಹುಟ್ಟು ಪಡೆಯುತ್ತದೆ. ಚಿತ್ರರಂಗದ ವಿಷಯದಲ್ಲಿಯೂ ಹಾಗೆಯೇ ಸಹಜವಾಗಿ ಪರಿವರ್ತನೆ ಆಗುತ್ತಿದೆ. ಆಗ ಒಂದಷ್ಟು ಆತಂಕ, ಗೊಂದಲ ಸಹಜ…….

ಹೋಮ ಹವನಗಳು, ಪೂಜೆ ಪುನಸ್ಕಾರಗಳು ಈ ಎಲ್ಲವನ್ನೂ ಪುನಃಸ್ಥಾಪಿಸಲು, ಯಶಸ್ವಿಯಾಗಲು, ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದೇ ಆಗಿರಲಿ ಸಾರ್ವತ್ರಿಕ ಸತ್ಯವಾಗಿದ್ದರೆ, ವೈಚಾರಿಕವಾಗಿದ್ದರೆ ಒಪ್ಪಿಕೊಳ್ಳೋಣ. ಇಲ್ಲದಿದ್ದರೆ ತಿರಸ್ಕರಿಸೋಣ ಅಥವಾ ಪ್ರಶ್ನಿಸೋಣ. ಕನಿಷ್ಠ ಆ ನಿಟ್ಟಿನಲ್ಲಿ ಯೋಚಿಸೋಣ.

ಹಾಗೆಯೇ ಕನ್ನಡ ಚಿತ್ರರಂಗ ಮತ್ತೆ ಶ್ರಮದಿಂದ, ಕ್ರಿಯಾತ್ಮಕತೆಯಿಂದ, ತನ್ನ ಮಣ್ಣಿನ ಗುಣದಿಂದ ಎದ್ದು ಬಂದು ಯಶಸ್ವಿಯಾಗಲಿ ಎಂದು ಹಾರೈಸೋಣ ಮತ್ತು ಪ್ರೋತ್ಸಾಹ ನೀಡೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,

Share This Article
Leave a comment

Leave a Reply

Your email address will not be published. Required fields are marked *