ಧಾರವಾಡದಲ್ಲಿ ಬಸವ ಸಂಘಟನೆಗಳಿಂದ ‘ಮಿಥ್ಯ v/s ಸತ್ಯ’ ಲೋಕಾರ್ಪಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಾಯತರನ್ನು ಹಿಂದುತ್ವದ ಭಾಗವಾಗಿಸುವ ಕುತಂತ್ರ; ಅಸಲಿಗೆ ಧರ್ಮ ಒಡೆಯುವವರು ಯಾರು?

ಧಾರವಾಡ

ನಗರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ‘ವಚನದರ್ಶನ ಮಿಥ್ಯ v/s ಸತ್ಯ’ ಪುಸ್ತಕ ಲೋಕಾರ್ಪಣೆಯಾಯಿತು.

ಬಸವ ಧ್ವಜಾರೋಹಣ ಕಾರ್ಯಕ್ರಮವನ್ನು ತೋಂಟದಾರ್ಯ ಸಿದ್ದರಾಮ‌ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ಜೆಎಲ್ಎಮ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ, ಸವಿತಕ್ಕ ನಡಕಟ್ಟಿ, ಎಂ ವಿ ಗೊಂಗಡಶೆಟ್ಟಿ ಇನ್ನಿತರು ನೆರವೇರಿಸಿದರು. ಬಸವಂತಪ್ಪ ತೋಟದ ಧ್ವಜಗೀತೆ ಹಾಡಿದರು. ಜೆಎಲ್ಎಮ್ ಜಿಲ್ಲಾಧ್ಯಕ್ಷ ಗೊಂಗಡಶೆಟ್ಟಿ ಸ್ವಾಗತಿಸಿದರು.

ಲಿಂಗಾಯತರನ್ನು ಹಿಂದುತ್ವದ ಭಾಗವಾಗಿಸುವ ಕುತಂತ್ರದಿಂದ ಆರ್‌ಎಸ್‌ಎಸ್ ನವರು ವಚನದರ್ಶನ ಪುಸ್ತಕ ಬರೆಸಿದ್ದಾರೆ. ಅಸಲಿಗೆ ಧರ್ಮ ಒಡೆಯುವವರು ಯಾರು ಎಂಬ ಪ್ರಶ್ನೆ ಹಾಕಿಕೊಳ್ಳಬೇಕಿದೆ. ಲಿಂಗಾಯತ ಧರ್ಮ ಹಿಂದುತ್ವದ ಭಾಗವಲ್ಲ ಎಂದು ಜಾಮದಾರ ಹೇಳಿದರು.

ಸಂಘಪರಿವಾರದವರು ಕರ್ನಾಟಕದ ಒಂಭತ್ತು ಜಿಲ್ಲೆ ಹಾಗೂ ದೆಹಲಿಯಲ್ಲಿ ಲಿಂಗಾಯತ ಸ್ವಾಮಿಗಳನ್ನು‌ ಮುಂದು ಮಾಡಿಕೊಂಡು ವಚನದರ್ಶನ ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಯಾವುದೇ ಪಕ್ಷದವರಾಗಿರಲಿ ಶರಣತತ್ವ ಮತ್ತು ಲಿಂಗಾಯತ ಧರ್ಮವನ್ನು ಯಾರು ವಿರೋಧಿಸುತ್ತಾರೋ ಅಂತವರನ್ನು ವಿರೋಧಿಸುವುದು ನಮ್ಮ ಜನ್ಮಸಿದ್ಧ ಹಕ್ಕಾಗಲಿ.

ವೈದಿಕರು ಅನುಭವ ಮಂಟಪವೇ ಇರಲಿಲ್ಲ ಎನ್ನುವ ಸುಳ್ಳು ಬಿತ್ತುತ್ತಿದ್ದಾರೆ. ಹೀಗೆಯೇ ನಾವು ಮೌನವಹಿಸಿದರೆ ಮುಂದೊಂದು ದಿನ ಅನುಭವ ಮಂಟಪ ಜಾಗವನ್ನು ಕಬಳಿಸುವ ಮೂಲಕ ಸಂಘಪರಿವಾರ ಶಾಖೆ ಶುರು ಮಾಡಬಹುದು! ಎಚ್ಚರವಿರಲಿ.

ಮಠಗಳ ಸಂಸ್ಕೃತಿ ಹುಟ್ಟಿದ್ದೇ ಹದಿನೈದನೆಯ ಶತಮಾನದಲ್ಲಿ. ಬಸವಾದಿ ಶರಣರ ಕಾಲಕ್ಕೆ ಅನುಭವ ಮಂಟಪದ ಒಂದೇ ಚಾಲ್ತಿಯಲ್ಲಿತ್ತು. ವಿರೋಧಿಗಳಿಗೆ ಅನುಭವ ಮಂಟಪ ಇದೆ ಎಂದು ಸೂಕ್ತ ಉತ್ತರ ಕೊಟ್ಟವರು ಧಾರವಾಡದ ಕ್ರಿಶ್ಚಿಯನ್ ಸಮುದಾಯದ ಉತ್ತಂಗಿ ಚನ್ನಪ್ಪನವರು. ಲಿಂಗಾಯತ ಜಾತಿಯಿಲ್ಲದ ಮಾನವ ಸಮಾನತೆಯ ಪಾಲಿಸುವ ಧರ್ಮವಾಗಿದೆ. ಇದು ಸಂಸಾರಿಕರ ಧರ್ಮ. ಸ್ತ್ರೀ ಸಮಾನತೆಯ ಧರ್ಮವಾಗಿದೆ ಎಂದರು.

ಎಲ್ಲರೂ ಸಹಾನುಭೂತಿ ಮತ್ತು ಸೌಹಾರ್ದಯುತವಾಗಿ ಕೆಲಸ ಮಾಡಬೇಕಿದೆ. ಬಸವ ಜಯಂತಿಯನ್ನು ಕರ್ನಾಟಕದಲ್ಲಿ ನೆರವೇರಿಸಲು ಮೊದಲು ಆದೇಶ ಕೊಟ್ಟವರು ಎಸ್ ಎಮ್ ಕೃಷ್ಣ ಅವರು, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಿ, ಸಾಂಸ್ಕೃತಿಕ ನಾಯಕ ಬಸವಣ್ಣ ಘೋಷಣೆ ಜಾರಿಗೆ ತಂದವರು ಸಿದ್ಧರಾಮಯ್ಯನವರು.

ನಾಡಿನ ಪ್ರಭಾವಿ ಸಾಹಿತಿ, ವಿದ್ವಾಂಸರು ಬರೆದ ಲೇಖನಗಳ ಒಟ್ಟುಗೂಡಿಕೆ ವಚನದರ್ಶನ ಮಿಥ್ಯ ಮತ್ತು ಸತ್ಯ ಪುಸ್ತಕದಲ್ಲಿ ಸಿಗುತ್ತವೆ, ಎಂದರು.

ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಪಾಟೀಲ್ ಮಾತನಾಡಿ, ಮುಂದೊಂದು ದಿನ ವೀರಶೈವ ಮಹಾಸಭಾ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಒಗ್ಗಟ್ಟಿನಿಂದು ಕೆಲಸ ಮಾಡುವ ಕಾಲ ಬರಬಹುದು. ಉಪ ಪಂಗಡಗಳಾಗಿ ಒಡೆದು ಹೋದರೆ ನಮ್ಮ ಅಸ್ಥಿತ್ವಕ್ಕೆ ಹೊಗುತ್ತದೆ. ನಾವೆಲ್ಲ ಒಂದಾಗಿ ಸಾಗುವುದೇ ಲಿಂಗಾಯತ ತತ್ವ. ಯಾವುದೇ ಸಮುದಾಯವರೇ ಆಗಿರಲಿ ಎಲ್ಲರೂ ಒಂದಾಗಬೇಕು ಎಂದರು.

ಬಸವಪೀಠದ ಸಂಯೋಜಕ ಸಿ ಎಂ ಕುಂದಗೋಳ ಮಾತನಾಡಿ, 12ನೇ ಶತಮಾನದಲ್ಲಿ ಹೊಸ ವಿಚಾರಗಳಿಂದ ನವ ಸಮಾಜ ನಿರ್ಮಿಸಿದರು. ವಚನಗಳು ವೇದ ಉಪನಿಷತ್ತುಗಳ ವಿಚಾರಗಳನ್ನೇ ಪ್ರತಿಪಾದಿಸಿವೆ, ಬಸವಯುಗದ ಚಳುವಳಿ ಕೇವಲ ಭಕ್ತಿ ಚಳುವಳಿ ಅಗಿದೆ ಎಂಬಿತ್ಯಾದಿ ಮಿಥ್ಯ ವಿಚಾರಗಳಿಗೆ ಸತ್ಯವನ್ನು ತಿಳಿಸುವ ಪ್ರಯತ್ನವೇ ಈ ವಚನದರ್ಶನ ಮಿಥ್ಯ ಮತ್ತು ಸತ್ಯ ಪುಸ್ತಕವಾಗಿದೆ. ಆತ್ಮ ಮತ್ತು ಸಮಾಜ ಕಲ್ಯಾಣ ಶರಣರ ಗುರಿಯಾಗಿದೆ. ಹಿಂದುತ್ವಕ್ಕೆ ಶರಣರ ವಚನಗಳು ಹೇಗೆ ವ್ಯತಿರಿಕ್ತವಾಗಿವೆ ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ.

ಹಿಂದೂ ಧರ್ಮದಲ್ಲಿ ಇರುವ ಮಹಿಳೆಯ ಅಸಮಾನತೆ ವಿರುದ್ಧ ಶರಣರ ವಿಚಾರಗಳು ಸಮಾನತೆಯ ಸಾರುತ್ತವೆ. ಲಿಂಗಾಯತ ಧರ್ಮದ ಜಾತಿ, ಮತ, ಗುಡಿ ಗುಂಡಾರ, ಮೌಡ್ಯತೆಯನ್ನು ಮೆಟ್ಟಿನಿಂತ ಧರ್ಮವಾಗಿದೆ ಎಂದು ತಿಳಿಸುವ ಪುಸ್ತಕವಾಗಿದೆ ಎನ್ನುತ್ತಾ ಗ್ರಂಥದ ಕುರಿತು ಪರಿಚಯ ಮಾಡಿದರು.

ಏಕತಾ ಸಮಿತಿ ಅಧ್ಯಕ್ಷ ಜಿ ವಿ ಕೊಂಗವಾಡ ಮಾತನಾಡಿ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಧರ್ಮಗಳಾಗಿ ಹೊರಹೊಮ್ಮಿದವರು. ಆದರೆ ಲಿಂಗಾಯತ ಇವತ್ತು ಧರ್ಮವಾಗಿ ಉಳಿದಿಲ್ಲ. ಕಾರಣ ಇವತ್ತಿಗೂ ಹಿಂದೂ ಧರ್ಮದ ತೆಕ್ಕೆಯಲ್ಲಿ ಉಳಿದಿರುವ ವಿಪರ್ಯಾಸ.

ಕನ್ನಡ ನಾಡಿನಲ್ಲಿ ಉದಯವಾಗಿರುವುದು ಲಿಂಗಾಯತ ಧರ್ಮ ಮಾತ್ರ. ವಚನ ಎರವಲು ತಂದಿದ್ದಲ್ಲ, ಶರಣರು ಅಚ್ಚಗನ್ನಡದ ಬೇಸಾಯಗಾರರು ಎಂದು ಶ್ರೀನಿವಾಸ ಮೂರ್ತಿಯವರ ಬರಹ ನೆನಪಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರೂ ಮೂಲತಃ ಲಿಂಗಾಯತರೇ ಆಗಿದ್ದರು. ಮತ್ತು ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಣೆಯಾದರೆ ಇದರಿಂದ ಯಾವ ಸಮುದಾಯದವರಿಗೂ ಅನ್ಯಾಯ ಆಗುವುದಿಲ್ಲ ಎಂಬುದಂತೂ ಸತ್ಯ ಎಂದು ಹೇಳಿದರು.

ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಗಳು, ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ‌ ಸ್ವಾಮಿಗಳು, ಮುರುಘಾಮಠ ಡಾ. ಮಲ್ಲಿಕಾರ್ಜುನ ಸ್ವಾಮಿಗಳು, ಕವಿವಿ ತತ್ವಶಾಸ್ತ್ರ ವಿಭಾಗದ ಡಾ ಎನ್ ಜಿ ಮಹದೇವಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರೊ. ಜಿ ಬಿ ಹಳ್ಯಾಳ, ಜಿಲ್ಲಾ ಜಿಲ್ಲಾ ಘಟಕದ ಸವಿತಾ ನಡಕಟ್ಟಿ, ಶಶಿಧರ ಕರವೀರಶೆಟ್ಟರ್, ಪ್ರಭಣ್ಣ ನಡಕಟ್ಟಿ, ಜಿಲ್ಲಾ ಯುವಘಟಕದ ಸಿ ಜಿ ಪಾಟೀಲ್, ಬಸವಕೇಂದ್ರದ ಅಧ್ಯಕ್ಷ, ಜೆಎಲ್ಎಮ್ ಜಿಲ್ಲಾಧ್ಯಕ್ಷ ಎಮ್ ವಿ ಗೊಂಗಡಶೆಟ್ಟಿ ಇನ್ನಿತರರು ವೇದಿಕೆ ಮೇಲಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
2 Comments
  • ನಾವುಗಳು ಲಿಂಗಾಯತರು ಪ್ರತ್ತೇಕ ಧರ್ಮವೆಂದು ಅದರ ಮಾನ್ಯತೆಯನ್ನು ಸರಕಾರದಿಂದ ಬೇಗಪಡೆಯಲು ಸತತವಾಗಿ ಪ್ರಯತ್ನಕ್ಕೆ ಹೋರಾಡಬೇಕು. ನಾವೆಲ್ಲರೂ ಒಂದಾಗಿ ಶ್ರಮವಹಿಸಿ ಪ್ರಯತ್ನಿಸಿದರೆ ಸರಕಾರ ಮಾನ್ಯಮಾಡುವುದರಲ್ಲಿ ಹಿಂದೇಟುಹಾಕದು.

Leave a Reply

Your email address will not be published. Required fields are marked *