ನವದೆಹಲಿ
ಇಂದು ನವದೆಹಲಿಯ ಸಂಸತ್ ಭವನದ ಪ್ರೇರಣಾ ಸ್ಥಳದಲ್ಲಿರುವ ಜಗಜ್ಯೋತಿ ಶ್ರೀ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಭಕ್ತಿ ಭಂಡಾರಿ, ಕ್ರಾಂತಿಯೋಗಿ ಬಸವೇಶ್ವರರ 894ನೇ ಜಯಂತಿಯನ್ನು ಆಚರಿಸಲಾಯಿತು.

ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾನತೆಯ ಸಂದೇಶ ಸಾರಿ, ಕಾಯಕ ಸಿದ್ಧಾಂತ ಬೋಧಿಸಿ ದುಡಿಯುವ ಜನರ ಸಮಾಜ ನಿರ್ಮಿಸಲು ಶ್ರಮಿಸಿದರು. ಅಲ್ಲದೇ, ಇಂದಿನ ಪ್ರಜಾಪ್ರಭುತ್ವದ ಹಲವು ತತ್ವಗಳಿಗೆ ತಕ್ಕ ಭೂಮಿಕೆಯನ್ನು 12ನೇ ಶತಮಾನದಲ್ಲೇ ನಿರ್ಮಿಸಿದ್ದರು ಎನ್ನುವುದನ್ನು ನಾವೆಲ್ಲರೂ ಸ್ಮರಿಸಲೇಬೇಕು, ಎಂದು ಕಾರ್ಯಕ್ರಮವನ್ನು ಆಯೋಜಿಸಿದ್ದ ಕೇಂದ್ರ ಸಚಿವ ಸೋಮಣ್ಣ ಮಾಧ್ಯಮಗಳಿಗೆ ಹೇಳಿದರು.
ಈ ಸಮಾರಂಭದಲ್ಲಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳವರು ದಿವ್ಯ ಉಪಸ್ಥಿತಿ ವಹಿಸಿದ್ದರು.

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಕಿರಣ್ ರಿಜುಜು, ಪ್ರಲ್ಹಾದ್ ಜೋಷಿ, ಕೇಂದ್ರದ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ, ರವ್ನೀತ್ ಸಿಂಗ್ ಬಿಟ್ಟು, ರಾಜ್ಭೂಷಣ್ ಚೌಧರಿ, ಸಂಸದರಾದ ಪಿ.ಸಿ ಗದ್ದಿಗೌಡರು, ತೇಜಸ್ವಿ ಸೂರ್ಯ, ರಾಜ್ಯಸಭಾ ಸಂಸದರಾದ ಈರಣ್ಣ ಬಿ. ಕಡಾಡಿ, ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆಯವರು ಹಾಗೂ ಪ್ರಮುಖ ಗಣ್ಯಮಾನ್ಯರು, ಪರಮಪೂಜ್ಯ ಸ್ವಾಮೀಜಿಗಳವರು ಉಪಸ್ಥಿತರಿದ್ದರು.