ಸಿಂಧನೂರು
ಮನುಷ್ಯನಿಗೆ ಮೌಡ್ಯ ಹುಟ್ಟುವುದೇ ಭಯದಿಂದ. ದೇವರ ಮೇಲೆ ನಮಗೆ ಭಕ್ತಿ ಇರಬೇಕೆ ಹೊರತು ಭಯ ಇರಬಾರದು. ದೇವರು ಬಯಸಿದ್ದನ್ನೆಲ್ಲಾ ಕೊಡುವವನಲ್ಲ, ನಾವು ಬಯಸಿದ್ದನ್ನು ಪಡೆಯುವ ಶ್ರಮಿಕರಾಗಬೇಕು ಎಂದು ಪ್ರಾಚಾರ್ಯರಾದ ಡಾ. ಶಿವರಾಜ ಹೇಳಿದರು.
ಬಸವ ಕೇಂದ್ರ ಹಾಗೂ ಬಸವಪರ ಸಂಘಟನೆಗಳು ಏರ್ಪಡಿಸಿದ ಮೌಢ್ಯಮುಕ್ತ ಬದುಕಿಗಾಗಿ ವಚನ ಶ್ರಾವಣ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ಕಾಯಕತತ್ವ ಮತ್ತು ಆರ್ಥಿಕ ಶಿಸ್ತು’ ವಿಷಯವಾಗಿ ಉಪನ್ಯಾಸ ನೀಡಿದರು.
ಬಸವಣ್ಣನವರು ಶಿಸ್ತುಬದ್ಧ ಬದುಕಿಗೆ ಒತ್ತು ನೀಡಿದ ಮಹಾನುಭಾವರು. ಅವರ ಕಾಯಕತತ್ವ ಮತ್ತು ಆರ್ಥಿಕ ನೀತಿ ಇಂದಿಗೂ ಜಗತ್ತಿಗೆ ಮಾದರಿಯಾಗಿದೆ. ಕಾಯಕದಿಂದಲೇ ದಾರಿದ್ರ ನಿರ್ಮೂಲನೆ, ಕಾಯಕದಿಂದಲೇ ಅಭಿವೃದ್ಧಿ. ಬಸವಣ್ಣನವರು ಶಿಸ್ತುಬದ್ಧ ಆರ್ಥಿಕ ನೀತಿಗೆ ಪ್ರಮುಖ ಐದು ಅಂಶಗಳನ್ನು ಕಂಡುಕೊಂಡಿದ್ದಾರೆ. ಕಾಯಕ, ದಾಸೋಹ, ಸಂಪತ್ತಿನ ವಿತರಣೆ, ವಾಮ ಮಾರ್ಗದಿಂದ ಹಣ ಸಂಗ್ರಹಣೆ ಮಾಡಬಾರದು ಮತ್ತು ಸಕಾಲಕ್ಕೆ ತೆರಿಗೆ ಕಟ್ಟುವುದು.
ನಾವು ಮಾಡುವ ಕಾಯಕ ಗುರುಲಿಂಗ ಜಂಗಮಕ್ಕೆ ಅರ್ಪಿತವಾಗಿರಬೇಕು. ನಮ್ಮ ತ್ರಿವಿಧ ದಾಸೋಹಗಳು ಗುರುವಿಗೆ ತನು ಲಿಂಗಕ್ಕೆ ಮನ ಜಂಗಮಕ್ಕೆ ಧನ ಅರ್ಪಿತವಾಗಿರಬೇಕು. ಸಂಪತ್ತಿನ ವಿತರಣೆ ಸಮಾಜಕ್ಕೆ ಆಗಬೇಕು. ಅತಿಯಾದ ಗಳಿಕೆ ಮಕ್ಕಳನ್ನು ಮೈಗಳ್ಳರನ್ನಾಗಿ ಮಾಡುತ್ತದೆ ಎನ್ನುವುದನ್ನು ಮರೆಯಬಾರದು. ವಾಮ ಮಾರ್ಗದಿಂದ ಹಣ ಸಂಗ್ರಹಣೆ ಮಾಡುವುದು ಅಪರಾಧ. ಪಾಪಿಯ ಧನ ಪ್ರಾಯಶ್ಚಿತಕ್ಕೆ ಎಂದು ಶರಣರು ಹೇಳಿದ್ದಾರೆ.

ಶಿಸ್ತು ಬದ್ಧ ತೆರಿಗೆ ಬಸವಣ್ಣನವರ ಕಾಲದಲ್ಲಿ ಜಾರಿಯಲ್ಲಿತ್ತು, ಇದರಿಂದಾಗಿ ಬಿಜ್ಜಳನ ಭಂಡಾರ ಬಸವಣ್ಣನವರ ಅವಧಿಯಲ್ಲಿ ನೂರುಪಟ್ಟು ಅಧಿಕವಾಗಿತ್ತು. ಎಲ್ಲರೂ ದುಡಿಯುತ್ತಿದ್ದರು ಎಲ್ಲರೂ ಸಕಾಲಕ್ಕೆ ತೆರಿಗೆ ಕಟ್ಟುತ್ತಿದ್ದರು ಎಂದು ಉಪನ್ಯಾಸ ನೀಡಿದರು.
ಶರಣೆ ಸಾವಿತ್ರಮ್ಮ ಬಾದರ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಅನಕ್ಷರತೆ ಮತ್ತು ಅಜ್ಞಾನ ಇದ್ದಲ್ಲಿ ಮೌಡ್ಯತೆ ಅಧಿಕವಾಗಿರುತ್ತದೆ. ಇತ್ತೀಚಿಗೆ ಹೆಚ್ಚು ಹೆಚ್ಚು ಸುಶಿಕ್ಷಿತರು ಕೂಡ ಮೌಢ್ಯತೆಗೆ ಒಳಗಾಗುತ್ತಿದ್ದಾರೆ. ಬಲವಂತವಾಗಿ ಮೌಢ್ಯತೆಯನ್ನು ಪುರುಷರೇ ಮಹಿಳೆಯರ ಮೇಲೆ ಹೇರುತ್ತಿರುವುದನ್ನು ಕಾಣುತ್ತಿದ್ದೇವೆ. ಟಿವಿ ಮಾಧ್ಯಮಗಳಲ್ಲಿ, ಜ್ಯೋತಿಷ್ಯ ಹೇಳುವವರು, ಪಂಚಾಂಗ ಹೇಳುವವರು, ಹೋಮ, ಹವನ ಮಾಡುವವರು ಮೌಢ್ಯವನ್ನು ತುಂಬುವವರು ಬಹತೇಕ ಪುರುಷರೇ ಆಗಿದ್ದಾರೆ. ಮಹಿಳೆ ಅನಿವಾರ್ಯವಾಗಿ ಈ ಪುರುಷ ಪ್ರಧಾನ ಸಮಾಜದಲ್ಲಿ ಅವರು ಹೇಳಿದ್ದನ್ನು ಅನುಸರಿಸಿಕೊಂಡು ಹೋಗುತ್ತಿದ್ದಾಳೆ ಎಂದು ವಿಷಾದಿಸಿದರು.
ಅಂಗೈಯಲ್ಲಿನ ಅದೃಷ್ಟ ರೇಖೆಯನ್ನು ಹುಡುಕುವ ಬದಲು, ದುಡಿಯುವ ದಾರಿಯನ್ನು ಹುಡುಕಬೇಕು. ಇಂದಿನ ಯುವ ಜನಾಂಗ ಸಾಧನೆ ಮಾಡಿದ ಸಾಧಕರನ್ನು, ತಮ್ಮ ತಂದೆ ತಾಯಿಗಳನ್ನು , ಆದರ್ಶ ವ್ಯಕ್ತಿಗಳೆಂದು ಪರಿಗಣಿಸಬೇಕು. ಅದಕ್ಕೆ ಬದಲಾಗಿ ಸಿನಿಮಾ ಹೀರೋಗಳನ್ನು, ಕ್ರಿಕೆಟ್ ಆಟಗಾರರನ್ನು ಆದರ್ಶ ವ್ಯಕ್ತಿಗಳನ್ನಾಗಿ ಇಟ್ಟುಕೊಂಡಿರುವುದು ನೋವಿನ ಸಂಗತಿ ಆಗಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಚಂದ್ರಶೇಖರ ವಕೀಲರು ವಿರುಪಾಪುರ, ಸುಮಂಗಲ ಚಿಂಚರಕಿ, ಬಾಬುಗೌಡ ಬಾದರ್ಲಿ ಮುಂತಾದವರು ಉಪಸಿತರಿದ್ದರು.
ಚಂದ್ರೇಗೌಡ ಹರಟನೂರ ನಿರೂಪಣೆ ಮಾಡಿದರು. ಶರಣಪ್ಪ ತೆಂಗಿನಕಾಯಿ ಶರಣು ಸಮರ್ಪಣೆ ನೆರವೇರಿಸಿದರು. ನೂರಾರು ಶರಣರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.