“ಅದು ತಿನ್ನಬಾರದು ಎಂದು ಹೇಳಲು ನಾವು ಯಾರು? ಅದು ಅವರ ಇಷ್ಟ, ಅವರ ಆಯ್ಕೆ.”
ಬೆಂಗಳೂರು
ಇತ್ತೀಚೆಗೆ ನಟ ಧನಂಜಯ ಅವರು ಮಾಂಸಾಹಾರ ಸೇವಿಸುವ ವಿಡಿಯೋ ವೈರಲ್ ಆಗಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಈ ವಿವಾದದ ಬಗ್ಗೆ ಧನಂಜಯ ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ನಟಿ ಉಮಾಶ್ರೀ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ಧನಂಜಯ ಅವರಿಗೆ ಬೇಕಾಗಿದ್ದು ಅವರು ತಿಂತಾರೆ. ಇದು ತಿನ್ನಬೇಕು, ಅದು ತಿನ್ನಬಾರದು ಎಂದು ಹೇಳಲು ನಾವು ಯಾರು? ಅದು ಅವರ ಇಷ್ಟ, ಅವರ ಆಯ್ಕೆ. ಮಾಂಸಾಹಾರ ತಿನ್ನದವರು ಧನಂಜಯ ಅವರನ್ನು ಇಷ್ಟ ಪಡುವುದಿಲ್ಲ ಅಂದ್ರೆ ಓಕೆ, ಹೋಗೋದೇನಿದೆ” ಎಂದು ಉಮಾಶ್ರೀ ಕೇಳಿದರು.
ಲಿಂಗಾಯತ ಸಮುದಾಯದವರಾಗಿ ಧನಂಜಯ ಮಾಂಸಾಹಾರ ತಿನ್ನಬಹುದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಯಾಗುತ್ತಿದೆ.
“ಧನಂಜಯ ಜಾತಿ ವಿಚಾರಕ್ಕೆ ಅಂಟಿಕೊಂಡಿರುವವನಲ್ಲ. ಯಾರೊಟ್ಟಿಗೂ ಆತ ಆ ರೀತಿ ನಡೆದುಕೊಂಡಿದ್ದು ನಾವು ನೋಡಿಲ್ಲ. ಅದರ ವಾಸನೆ ಕೂಡ ಕಂಡಿಲ್ಲ. ಅವರು ಜಾತಿವಾದಿ ಅಂತ, ಆಹಾರಧರ್ಮದ ಬಗ್ಗೆ ವಿಶಿಷ್ಟವಾದ ಭಾವನೆ ಇಟ್ಟುಕೊಂಡಿದ್ದಾರೆ ಎಂದು ನಮಗೆ ಎಂದೂ ಅನಿಸಿಲ್ಲ,” ಎಂದು ಉಮಾಶ್ರೀ ಹೇಳಿದರು.
ಬಸವತತ್ವದ ಬಗ್ಗೆ ಮಾತನಾಡುವ ಧನಂಜಯ ಮಾಂಸಾಹಾರ ಸೇವಿಸಿದ್ದು ಸರಿಯಾ ಎಂದು ಕೆಲವರು ಕೇಳುತ್ತಿದ್ದಾರೆ.
ಇದಕ್ಕೆ ಉಮಾಶ್ರೀ ಅವರ ಪ್ರತಿಕ್ರಿಯೆ: “ಸಿದ್ದರಾಮಯ್ಯ ಬಸವಣ್ಣನವರ ಬಗ್ಗೆ ಮಾತಾಡ್ತಾರೆ, ಅವರು ನಾನ್ ವೆಜ್ ತಿನ್ನಲ್ವಾ? ನಾನು ಬಸವಣ್ಣನವರ ಬಗ್ಗೆ ಮಾತನಾಡ್ತೀನಿ, ನಾನು ತಿನ್ನಲ್ವಾ? ಬಸವಣ್ಣನವರು ನೀವು ಅದು ತಿನ್ನಿ, ಇದು ತಿನ್ನಿ ಎಂದು ಹೇಳಿಲ್ಲ. ನಿಮ್ಮ ಮನಸ್ಸು, ನಾಲಿಗೆ, ಕೈ ಶುದ್ಧಿ ಆಗಿರಲಿ ಎಂದು ಹೇಳಿದ್ದಾರೆ. ಬಸವಣ್ಣನವರ ತತ್ವಗಳ ಸಾರವನ್ನು ಅಳವಡಿಸಿಕೊಳ್ಳಿ.”
‘ರತ್ನನ್ ಪ್ರಪಂಚ’ ಚಿತ್ರದಲ್ಲಿ ತಾಯಿ ಮಗನಾಗಿ ಉಮಾಶ್ರೀ ಹಾಗೂ ಧನಂಜಯ ನಟಿಸಿದ್ದರು. ಉಮಾಶ್ರೀ ಅವರ ಸಂದರ್ಶನ ಕನ್ನಡ ಫಿಲ್ಮಿ ಬೀಟ್ ನಲ್ಲಿ ಪ್ರಕಟವಾಗಿದೆ.
