ಆರೋಗ್ಯಕರ ಸಮಾಜ ಕಟ್ಟಲು ವಚನಗಳ ಪಾಲಿಸಿ: ನ್ಯಾ. ಶಿವಶಂಕರ ಅಮರಣ್ಣನವರ

ಬಸವ ಮೀಡಿಯಾ
ಬಸವ ಮೀಡಿಯಾ

ಉತ್ತಮ ಆಡಳಿತಗಾರರಾಗಲು ವಚನ ಸಾಹಿತ್ಯ ಅಧ್ಯಯನ ಮತ್ತದರ ಪಾಲನೆ ಅಗತ್ಯ

ಬಸವಕಲ್ಯಾಣ:

ವಚನ ಸಾಹಿತ್ಯವನ್ನು ಬೋಧನೆ ಮತ್ತು ಅಧ್ಯಯನಕ್ಕೆ ಮಾತ್ರ ಸಿಮೀತಗೊಳಿಸದೆ ಅದರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಬೆಂಗಳೂರು ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶಿವಶಂಕರ ಅಮರಣ್ಣನವರ ಹೇಳಿದರು.

ಅವರು ನಗರದ ಹರಳಯ್ಯ ಗವಿಯಲ್ಲಿ ನಡೆದ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆದ ಶರಣು ಶರಣಾರ್ಥಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕರ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಉತ್ತಮ ಆಡಳಿತಗಾರರಾಗಲೂ ವಚನ ಸಾಹಿತ್ಯದ ಅಧ್ಯಯನ ಮತ್ತು ಅದರ ಪಾಲನೆಯೂ ಎಂದೆಂದಿಗಿಂತಲೂ ಇಂದು ತುಂಬಾ ಅಗತ್ಯವಾಗಿದೆ ಎಂದರು.

ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಮುಖ್ಯ ಅನುಭಾವ ನೀಡಿ ಶರಣರ ಸಂತರ ಸಂಗದಿಂದ ತನ್ನ ತಾನರಿತು ದೇವನಾಗುವ ಮಾರ್ಗವನ್ನು ಕಂಡುಕೊಳ್ಳಬಹುದು. ಶರಣರ ಸಂಗದಿಂದಲಾನು ಪರಮಸುಖಿ ಎಂದು ಹೇಳಿದ ಅಕ್ಕನ ಮಾತುಗಳಲ್ಲಿ ಶರಣರ ಸಂಗದ ಮಹಿಮೆಯನ್ನು ಕಾಣಬಹುದಾಗಿದೆ.

ತ್ಯಾಗ ಮತ್ತು ಸೇವೆ ಈ ನಾಡಿನ ತಳಹದಿ, ಇದರ ಸ್ವರೂಪವೇ ವಚನ ಸಂಸ್ಕೃತಿ. ಶರಣರ ಸಂಗದಿಂದ ಅಜ್ಞಾನ ಕಳೆದು ಜ್ಞಾನೋದಯ ಲಭಿಸುತ್ತದೆ.  ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಬದುಕನ್ನು ಕಟ್ಟಿಕೊಟ್ಟವರು ಶರಣರು. ಸಮಾಜದಲ್ಲಿ ಅಂತರಂಗ ಬಹಿರಂಗ ಶುದ್ಧವಾಗಿಟ್ಟುಕೊಳ್ಳಲು ಬೇಕಾಗಿರುವುದೆಲ್ಲ ಅವರು ನೀಡಿದ್ದಾರೆ.

ವಚನಗಳ ಮೂಲಕ ನಮ್ಮಲ್ಲಿರುವ ದುರ್ಗುಣಗಳನ್ನು ದೂರ ಮಾಡಿಕೊಂಡು ಬದುಕುವುದೇ ವಚನ ವಿಜಯೋತ್ಸವ ನಮ್ಮಲ್ಲಿರುವ ಅಂತರಂಗದ ಜ್ಯೋತಿ ಆರದಂತೆ ನೋಡಿಕೊಳ್ಳಬೇಕು ಎಂದರು.

ಸಾನಿಧ್ಯ ವಹಿಸಿಕೊಂಡಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಆಶಿರ್ವಚನ ನೀಡಿ, ವಚನಗಳು ಜಗತ್ತಿನ ಶ್ರೇಷ್ಠ ಸಂಪತ್ತು. ವಚನ ಸಾಹಿತ್ಯದ ನಿರಂತರ ಅಧ್ಯಯನದಿಂದ ವ್ಯಕ್ತಿಯ ಮನಸ್ಸಿನ ಮೈಲಿಗೆ ತೊಳೆಯಲು ಸಾಧ್ಯವಾಗುತ್ತದೆ.

ವಚನಗಳ ವೈಭವ ಈ ಜಗತ್ತು ಅರಿಯಬೇಕು. ಶರಣ ಸಂಸ್ಕೃತಿ ನಮಗೆ ಬದುಕಲು ಶಕ್ತಿ ನೀಡುತ್ತದೆ. ನಡೆ-ನುಡಿ ಒಂದಾಗಿರಬೇಕು. ಮಕ್ಕಳಲ್ಲಿ ವಚನಗಳ ಮೌಲ್ಯಗಳನ್ನು ಬಿತ್ತುವುದು ಅವಶ್ಯಕವಾಗಿದೆ ಎಂದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ನಾಗರಾಳೆ ೨೦೨೬ರ ದಿನದರ್ಶಿಕೆ ಬಿಡುಗಡೆ ಮಾಡಿ ವಚನ ಸಾಹಿತ್ಯದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ವಚನಗಳು ಓದಿದ ಮೇಲೆ ಶಕ್ತಿ ಬರುತ್ತದೆ. ಅದರಲ್ಲಿ ನ್ಯಾಯ ಪರವಾದ ಅಂಶಗಳಿವೆ ಎಂದರು.

ಬಿಡಿಪಿಸಿ ನಿರ್ದೇಶಕ ಅನಿಲಕುಮಾರ ರಗಟೆ ಅಧ್ಯಕ್ಷತೆ ವಹಿಸಿದ್ದರು. ಲಲಿತಾ ನಾಗರಾಳೆ ವಚನ ಗಾಯನ ಮಾಡಿದರು.  ಡಾ. ನಿವೇದಿತಾ ನಾಗರಾಳೆ, ಶಾಂತಯ್ಯ ಸ್ವಾಮಿ, ಡಾ. ಶೈಲೆಂದ್ರ ವಾಘ್ಮಾರೆ ಉಪಸ್ಥಿತರಿದ್ದರು.

ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ ಧ್ವಜಾರೋಹಣಗೈದರು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರೆ, ಕವಿತಾ ರಾಜೋಳೆ ಸ್ವಾಗತಿಸಿದರು. ಜಯಶ್ರೀ ಬಿರಾದಾರ ನಿರೂಪಿಸಿದರು. ಶಿಕ್ಷಕ ಶಾಲಿವಾನ ಕಾಕನಾಳೆ ಪ್ರಸಾದ ದಾಸೋಹಗೈದರು.

ವಚನ ವಿಜಯೋತ್ಸವ

ಬೀದರ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಬಸವಗಿರಿಯಲ್ಲಿ ೩೦, ೩೧ ಜನವರಿ ಹಾಗೂ ೦೧ ಫೆಬ್ರವರಿ ೩ ದಿನಗಳ ಕಾಲ ನಡೆಯಲ್ಲಿರುವ ವಚನ ವಿಜಯೋತ್ಸವ ಕಾರ್ಯಕ್ರಮದ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *