ಎರಡು ಮೂರು ದಿನಗಳಿಂದ ನಿರ್ದೇಶಕ ಗುರುಪ್ರಸಾದ ಗುಂಗು. ಹುಟ್ಟಿದ ಮೇಲೆ ಸಾವು ಬದುಕಿನ ಅನಿವಾರ್ಯ ಅಂತ್ಯ. ಆದರೆ ಅಸಹಜ ಸಾವಾದಾಗ ಮನಸು ಕಳವಳಗೊಳ್ಳುವುದು ಸಹಜ. ಸತ್ತಾಗ ವ್ಯಕ್ತಿ ಭಯಂಕರ ಟ್ರೆಂಡ್ ಆಗೋದು ಇವತ್ತಿನ ಮಿತಿ. YouTube ಈ ಹಿನ್ನೆಲೆಯಲ್ಲಿ ಅದ್ಭುತ ಕೆಲಸ ಮಾಡುತ್ತದೆ. ಹಳೆಯ ನೆನಪುಗಳು ಇಲ್ಲಿ ಉಕ್ಕಿ ಹರಿಯುತ್ತವೆ, ವ್ಯಕ್ತಿ ಅಗಲಿದಾಗ! ಇದೇ ಜಾಡಲಿ ಪ್ರತಿಭಾವಂತ ಓದುಗ, ಬರಹಗಾರ ಕಮ್ ಸೃಜನಶೀಲ ಸಿನೆಮಾ ಮೇಕರ್ ಗುರುಪ್ರಸಾದ ಈಗ ದಂತಕತೆ.
ಅವರ ಅನೇಕ ವಿಡಿಯೋ ತುಣುಕುಗಳನ್ನು ಇಡೀ ರಾತ್ರಿ ನೋಡಿದೆ. ಪ್ರತಿಯೊಬ್ಬ ಸೃಜನಶೀಲ ವ್ಯಕ್ತಿಗಿರುವ ಅತಿಯಾದ ತಿಕ್ಕಲುತನ ಮತ್ತು ಒಂದಿಷ್ಟು ಚಪಲತನದ ಧೋರಣೆ ಕಂಡು ಖುಷಿಯಾಯಿತು. ಅಲ್ಲಿ ಅಪಾರ ಓದನ್ನು ಗುರುತಿಸಿದೆ, ಮುಖ್ಯವಾಗಿ ಸಾಹಿತ್ಯ ಮತ್ತು ಓಶೋ ವಿಚಾರಧಾರೆಗಳು.
ಇಂತಹ ಬೋಲ್ಡ್ ವ್ಯಕ್ತಿ ಸಾವಿಗೆ ಶರಣಾದದ್ದು ವಿಪರ್ಯಾಸ ಕೂಡ. ಅನೇಕ ಮನಃಶಾಸ್ತ್ರಜ್ಞರು, ಜೀವನಶೈಲಿ ಗುರುಗಳು ಈ ರೀತಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ವೈಚಾರಿಕ ಹರವು ಕೂಡ ಸಾವು, ನೋವುಗಳ ಮುಂದೆ ಹರಿದು ಹೋಗುತ್ತದೆ. ಸೂಕ್ಷ್ಮ ಸಂವೇದನೆಯ ನಿರ್ದೇಶಕ ಅಪಾರ ಯಶಸ್ಸನ್ನು ಡೈಜೆಸ್ಟ್ ಮಾಡಿಕೊಳ್ಳಲು ವಿಫಲನಾಗಿರಬಹುದು, ಮುಖ್ಯವಾಗಿ ಮದಿರೆಯ ಮೋಹ ಗುರುಪ್ರಸಾದರ ದೇಹವನ್ನು ನಾಶ ಮಾಡಿದೆ ಎಂಬುದನ್ನು ಒಪ್ಪೋಣ. ವಿಜ್ಞಾನದ ವಿದ್ಯಾರ್ಥಿ ಗುರುಪ್ರಸಾದರಿಗೆ ಅಲ್ಕೋಹಾಲ್ ಅಪಾಯ ಗೊತ್ತಿದ್ದೇ ಇರುತ್ತದೆ. ಆದರೆ ಎಡಿಕ್ಷನ್ ಎಂಬ ಮಾಯೆ, ಅನಗತ್ಯ ತಿಕ್ಕಲುತನ ನಮ್ಮನ್ನು, ಪ್ರತಿಯೊಬ್ಬರನ್ನೂ ನಾಶ ಮಾಡಬಹುದು. ‘ವೃತ್ತಿಯ ವೈಫಲ್ಯ’ ಕೂಡ ಅಹಂಕಾರದಂತೆ ಕಾಣುವ ‘ಕೀಳರಿಮೆ’. ಆದರೆ ಅದು ಆಳವಾದ ಮನೋವೇದನೆ. ಇದನ್ನು ನಾನು ಒಬ್ಬ ಸಾಹಿತ್ಯ ಮತ್ತು ಮಾನವ ಸಂಪನ್ಮೂಲ ವಿದ್ಯಾರ್ಥಿಯಾಗಿ ಅನುಭವಿಸಿ ನರಳಿದ್ದೇನೆ.
ಈ ಹಂತದ ಸಂಕಟದ ಸಂದರ್ಭದಲ್ಲಿ ಗೆಳೆಯರು, ಆಪ್ತರು ತಿರುಗಿ ಬಿದ್ದಾಗ ವ್ಯಕ್ತಿ ತುಂಬಾ ಅಸಹಾಯಕನಾಗಿ ಸಾವಿಗೆ ಶರಣಾಗುತ್ತಾನೆ. ಅವನ ಓದು, ಬರಹ, ಕೀರ್ತಿ, ಹಣ ಯಾವುದು ಅವನ ಉಪಯೋಗಕ್ಕೆ ಬರುವುದಿಲ್ಲ.
ಮನುಷ್ಯ ಎಷ್ಟೇ ಪ್ರತಿಭಾವಂತನಾದರೂ ತನ್ನ ಆರೋಗ್ಯದ ಬಗ್ಗೆ ಕಾನ್ಷಿಯಸ್ ಆಗಿರಬೇಕು. ಮುಖ್ಯವಾಗಿ ಕುಡಿತ ಮತ್ತು ಕೂಳು ಮನುಷ್ಯನ ಚೈತನ್ಯವನ್ನು ನಾಶ ಮಾಡುತ್ತವೆ. ಆಹಾರವ ಕಿರಿದು ಮಾಡಿ ದೇಹಕ್ಕೆ ಅಗತ್ಯವಾದ ವ್ಯಾಯಾಮ ಮತ್ತು ಧ್ಯಾನದ ಮೂಲಕ ನಮ್ಮ ಚಟಗಳನ್ನು ನಿಯಂತ್ರಣ ಮಾಡಲು ಸಾಧ್ಯ. ಮನೋನಿಗ್ರಹದ ಮೊದಲ ಹೆಜ್ಜೆಯೆ ಕೈ ಮತ್ತು ಬಾಯಿ, ಕಚ್ಚೆ ಆಮೇಲೆ. ಮಾನಿನಿ-ಮದಿರೆ ಎಂಬುದು ಪುರುಷ ಸಹಜ ಅಹಮಿಕೆ, ಮಿತಿ ಮತ್ತು ದೌರ್ಬಲ್ಯ. ಹೆಣ್ಣಿನ ಬಗ್ಗೆ ಉದಾರವಾದ ಮಾತುಗಳನ್ನಾಡುತ್ತ ಒಳಗೊಳಗೆ ಕೊಳಕಾಗಿ ಅನುಭವಿಸುವ ಚಪಲವೇ ಪುರುಷ ಅಹಂಕಾರ. ಆದರೆ ಮೇಲ್ನೋಟಕ್ಕೆ ಈ ಕುರಿತ ವಾದ, ವಿವಾದಗಳು ಭಿನ್ನವಾಗಿರುತ್ತವೆ.
ಇದರಾಚೆಯ ಇನ್ನೊಂದು ಅಪಾಯಕಾರಿ ವಸ್ತು ಹಣ ಮತ್ತು ಹಣದ ಕುರಿತ ಅಜ್ಞಾನ. ಫೈನಾನ್ಸಿಯಲ್ ಮಿಸ್ ಮ್ಯಾನೆಜ್‌ಮೆಂಟ್. ಅದು ಅನಗತ್ಯ ಖರ್ಚಿಗಿಂತ ಈಗೀಗ ಬೆಟ್ಟಿಂಗ್, ಆನ್‌ಲೈನ್, ಕ್ಯಾಸಿನೊ ರೂಪದಲ್ಲಿ ನರ್ತನ ಮಾಡಲಾರಂಭಿಸಿದೆ. ‘ಅನಗತ್ಯ ಖರ್ಚನ್ನು’ ನಿಭಾಯಿಸಿ ನಿಯಂತ್ರಿಸಬಹುದು ಆದರೆ ಜೂಜಾಟಗಳನ್ನಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈ ವಾಸ್ತವ ಸಂಗತಿಗಳಿಂದ ದೂರ ಸರಿದಾಗ ಎಲ್ಲಾ ಅಯೋಮಯವಾಗಿ ಸಾವು ಕೈ ಮಾಡಿ ಕರೆಯುತ್ತದೆ.
ಇಂತಹ ಅನೇಕ ಒತ್ತಡಗಳಿಂದ ಗುರುಪ್ರಸಾದ ಹೊರತಾಗಿರಲಿಲ್ಲ ಎಂದು ಭಾವಿಸಿ ಅವರ ಆತ್ಮಕ್ಕೆ ಶಾಂತಿ ಕೋರುವುದು ಸೌಜನ್ಯ. ಆದರೆ ಅವರಿಂದ ಬೆಳಕಿಗೆ ಬಂದ, ಮೌಢ್ಯಗಳ ಮೂಟೆಯಂತಿರುವ ನಟರೊಬ್ಬರು ಅವರ ದೌರ್ಬಲ್ಯ ಮತ್ತು ಅನಾರೋಗ್ಯದ ಕುರಿತು ವಾಂತಿ ಮಾಡಿಕೊಂಡ ರೀತಿ ಮಾತ್ರ ಅಕ್ಷಮ್ಯ. ಬುದ್ಧ ವಿವರಿಸಿದ ಎಚ್ಚರಿಕೆಯ ಸಂದೇಶ ರೋಗ-ಮುಪ್ಪು-ಸಾವು ನಮ್ಮನ್ನೂ ಬಿಡುವುದಿಲ್ಲ ಎಂಬ ಪರಿಜ್ಞಾನ ಇರಬೇಕು.
ಹೋಗಿ ಬನ್ನಿ ಗುರು, ಇಂತಹ ಸಾವು ನಿಮ್ಮ ಆಯ್ಕೆ ಆಗಬಾರದಿತ್ತು. ನಿಮ್ಮ ಕುಟುಂಬದ ಸದಸ್ಯರಿಗೆ ಯಾರ (ಕೊಳಕು) ನೆರವಿಲ್ಲದ ಬದುಕುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುವೆ.
ಸರ್ ಸಾವು ಅವರ ಆಯ್ಕೆಯಲ್ಲ, ಇಂದಿನ ಸಂಚಿತ ವ್ಯವಸ್ಥೆ ಅವರನ್ನು ಅಲ್ಲಿಗೆ ನೂಕಿದೆ.
🥲🙏