ಬೆಂಗಳೂರು
ದಿಟ್ಟತೆಯ ಅನುಭವಗಳನ್ನು ನೀಡಿರುವ ವಚನಕಾರತಿಯರನ್ನು ಪರಿಚಯಿಸುವ “ವಚನ ನವರಾತ್ರಿ” ಸಾಂಸ್ಕೃತಿಕ ಉತ್ಸವವಾಗಿದ್ದು, ಅರಿವಿನ ಆಚರಣೆಯಾಗಿದೆ ಎಂದು ವಚನ ಜ್ಯೋತಿ ಬಳಗದ ಸಹ ಸಂಸ್ಥಾಪಕಿ ಪಾರ್ವತಮ್ಮ ಶಿವಲಿಂಗಯ್ಯ ಪಂಡಿತ್ ಹೇಳಿದರು.
ರಾಜಧಾನಿಯ ಕಲ್ಯಾಣ ಬಡಾವಣೆಯ ಬಸವ ಬೆಳಕು ಸ್ಥಳದಲ್ಲಿ, ವಚನ ಜ್ಯೋತಿ ಬಳಗ ಆಯೋಜಿಸಿರುವ ವಚನ ನವರಾತ್ರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು 900 ವರ್ಷಗಳ ಹಿಂದೆಯೇ ಅತ್ಯಂತ ಸರಳ ಕನ್ನಡದಲ್ಲಿ ತಮ್ಮ ಅನುಭಾವಗಳನ್ನು ಹಂಚಿದ ಬಸವಾದಿ ಪ್ರಮಥರು ಸತ್ಯಶುದ್ಧವಾದ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ವಚನಗಳನ್ನು ನಮಗೆ ನೀಡಿದ್ದಾರೆ. ನಾಲ್ಕು ವಚನಗಳ ನಾಲ್ಕು ಸಾಲುಗಳನ್ನು ನಾವು ಪಾಲಿಸಿದರೆ ಬದುಕು ಹಸನಾಗುತ್ತದೆ ಎಂದು ಬಣ್ಣಿಸಿದರು.
ವಚನ ಜ್ಯೋತಿ ಬಳಗದ ಪಿನಾಕಪಾಣಿ ಮಾತನಾಡಿ, ನವರಾತ್ರಿಯನ್ನು ಇಡೀ ಭಾರತ ದೇಶ ಆಚರಿಸುತ್ತದೆ. ವಿವಿಧ ಭಾಗಗಳಲ್ಲಿ ವಿವಿಧ ಬಗೆಯಲ್ಲಿ ಸಂಭ್ರಮಿಸುತ್ತಾರೆ. ಆದರೆ ವಚನ ಚಳುವಳಿಯ ನಾವು ವಚನ ನವರಾತ್ರಿ ಆಚರಿಸುತ್ತಿದ್ದೇವೆ. 09 ದೇವಿಯರ ಬದಲಾಗಿ, 09 ಧೀರ, ದಿಟ್ಟ ನಿಲುವಿನ ವಚನಕಾರ್ತಿಯರನ್ನು ವಚನ ಕಲಿಕಾ ವಿದ್ಯಾರ್ಥಿಗಳೇ ಪರಿಚಯಿಸಿ ಅವರುಗಳ ಅನುಭಾವದ ವಚನಗಳ ನಿರ್ವಚನ ಪಡೆಯುವ ನವರಾತ್ರಿ ಇದಾಗಿದೆ ಎಂದು ಹೇಳಿದರು.
ಇದೇ ವೇಳೆ ರೇವಾ ವಿಶ್ವವಿದ್ಯಾಲಯದಿಂದ ಪ್ರೌಢ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪುರಸ್ಕೃತರಾದ ನೃತ್ಯಗುರು ದರ್ಶಿನಿ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.
ಪ್ರಧಾನ ಸಂಚಾಲಕ ಪ್ರಸನ್ನ, ಬಳಗದ ಮುಖ್ಯ ಕಾರ್ಯನಿರ್ವಾಹಕ ರಾಜಾ ಗುರುಪ್ರಸಾದ, ಗಾಯಕಿ ಟಿ.ಎಂ. ಜಾನಕಿ, ದಿವ್ಯಾ ಉಮೇಶ, ದಿವಾಕರ, ಚನ್ನಮಲ್ಲಯ್ಯ, ಚಂದ್ರಶೇಖರಯ್ಯ, ಬಸವರಾಜಯ್ಯ ಹಾಗೂ ಬಡಾವಣೆಯ ಶರಣೆಯರು, ಶರಣರು ಉಪಸ್ಥಿತರಿದ್ದರು.