ಚಿತ್ರದುರ್ಗ
ಚಿತ್ರದುರ್ಗ ನಗರದ ರಸ್ತೆಗೆ ಪೂಜ್ಯ ಡಾ. ಮಾತೆ ಮಹಾದೇವಿ ಅವರ ಹೆಸರಿಡಲು ನಗರದ ನಗರಸಭೆ ಪೌರಾಯುಕ್ತರಿಗೆ ರಾಷ್ಟ್ರೀಯ ಬಸವದಳ ಈಚೆಗೆ ಮನವಿ ಪತ್ರ ಸಲ್ಲಿಸಿದೆ.
ನಗರದ ಜಿಲ್ಲಾ ನ್ಯಾಯಾಲಯದ ಎಡಭಾಗದ ರಸ್ತೆಯಲ್ಲಿ ವೃತ್ತ ಅಥವಾ ಮಹೇಂದ್ರ ಹೀರೋ ಶೋರೂಮ್ ಪಕ್ಕದಲ್ಲಿನ ವೃತ್ತಕ್ಕೆ ಪೂಜ್ಯ ಡಾ. ಮಾತೆ ಮಹಾದೇವಿ ಅವರ ಹೆಸರು ಇಡಲು ನಿಯಮಾನುಸಾರ ಸಹಕರಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಜಿಲ್ಲೆಯ ಸಾಸಲಹಟ್ಟಿ ಗ್ರಾಮದಲ್ಲಿ ಜನಿಸಿ ವಿಜ್ಞಾನ ತಂತ್ರಜ್ಞಾನಗಳ ಸ್ನಾತಕೋತ್ತರ ಪದವಿಧರೆಯಾಗಿ, 1966 ರಲ್ಲಿ ಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ ಅವರಿಂದ ಜಂಗಮ ದೀಕ್ಷೆ ಪಡೆದು, ಮಾತೆ ಮಹಾದೇವಿ ಎಂಬ ಅಭಿದಾನ ಹೊಂದಿ 1970ರಲ್ಲಿ ವಿಶ್ವದ ಧಾರ್ಮಿಕ ಕ್ರಾಂತಿಗೆ ನಾಂದಿಯಾದ ಮಹಿಳಾ ಜಗದ್ಗುರು ಪೀಠವನ್ನು ಅಲಂಕರಿಸಿದರು. ಸ್ವಾಮೀಜಿಯವರ ಧರ್ಮ ಪ್ರಚಾರದ ಜೊತೆ ಕೈಜೋಡಿಸಿ ಅವರ ಸಂಕಲ್ಪದ ಜ್ಯೋತಿಗೆ ಪ್ರಣತೆ ಎಣ್ಣೆ ಬತ್ತಿಯೂ ಇವರೇ ಆಗಿ, ಸಮಾಜದ ಕಲ್ಯಾಣಕ್ಕೆ ಬಸವತತ್ವವೇ ಮಾರ್ಗವೆಂದು ನಿರ್ಧರಿಸಿ ನಿರಂತರ ಬಸವತತ್ವ ಪ್ರಚಾರದಲ್ಲಿ ತೊಡಗಿಸಿಕೊಂಡು 1980ರಲ್ಲಿ ರಾಷ್ಟ್ರೀಯ ಬಸವ ದಳ ಧಾರ್ಮಿಕ ಸಂಘಟನೆಯನ್ನು ಕಟ್ಟಿ ಸಾವಿರಾರು ಸಂಖ್ಯೆಯಲ್ಲಿ ಬಸವ ಭಕ್ತರನ್ನು ಬೆಳೆಸಿದ್ದಾರೆ.

ಅಲ್ಲದೇ ತರಂಗಿಣಿ, ಹೆಪ್ಪಿಟ್ಟಹಾಲು, ವಿಶ್ವಧರ್ಮ ಪ್ರವಚನ, ಚುಳುಕಾದ ಚೇತನ, ಬಸವ ಧರ್ಮ ಸಂಸ್ಕಾರಗಳು ಇಂತಹ ನೂರಾರು ಗ್ರಂಥಗಳನ್ನು ರಚಿಸಿ ವಿಶ್ವಕಲ್ಯಾಣ ಗ್ರಂಥ ಮಾಲೆಯನ್ನು ಪ್ರಕಟಿಸಿ, ಸರ್ವಜ್ಞನ ಅಮೃತವಾಣಿಯಂತೆ 1988ರಲ್ಲಿ ಬಸವಧರ್ಮ ಪೀಠವನ್ನು ಸ್ಥಾಪಿಸಿ, ಲಿಂಗಾನಂದ ಶ್ರೀಗಳನ್ನು ಪ್ರಥಮ ಜಗದ್ಗುರುಗಳನ್ನಾಗಿ ಗುರುತಿಸಿದರು.
2019, ಮಾರ್ಚ್ 14ರಂದು ಋನ್ವಯ ಕಾಯವನ್ನು ಕಳಿಚಿದ ದಿನದಿಂದ ಆರನೇ ಲಿಂಗೈಕ್ಯ ಸಂಸ್ಮರಣೆ ಮತ್ತು 79ನೇ ಜನ್ಮದಿನದ ಸಂಕೇತವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳದ ಜಿಲ್ಲಾ ಗೌರವಾಧ್ಯಕ್ಷೆ ಪೂಜ್ಯ ದಾನೇಶ್ವರಿ ಮಾತಾಜಿ, ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಕೆ. ವೀರೇಶಕುಮಾರ, ಜಿಲ್ಲಾಧ್ಯಕ್ಷರಾದ ವೆಂಕಟೇಶ ರೆಡ್ಡಿ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಶಂಕ್ರಪ್ಪ, ಅಕ್ಕ ನಾಗಲಾಂಬಿಕ ಮಹಿಳಾ ಗಣದ ಜಿಲ್ಲಾಧ್ಯಕ್ಷೆ ಅಕ್ಕಮಹಾದೇವಿ, ಬಸವಾತ್ಮಜೆ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ವಿನೋದಮ್ಮ ಮತ್ತಿತರ ಶರಣರು ಉಪಸ್ಥಿತರಿದ್ದರು.